Saturday, January 28, 2017

ನೀ ಮತ್ತೆ ಬಂದೆಯಲ್ಲ ಮಾರಾಯ...!

ನೀ ಮತ್ತೆ ಬಂದೆಯಲ್ಲ ಮಾರಾಯ...!


ನೀ ಮತ್ತೆ ಪ್ರತ್ಯಕ್ಷನಾಗಿ ಬಿಟ್ಟೆಯಲ್ಲ ಮಾರಾಯಾ,,,
ಹಾಗೆ ನೋಡಿದರೆ ನೀ ಬಂದೇ ಬರುತ್ತೀಯಾ ಎಂಬುದು ನನಗೆ ಗೊತ್ತಿತ್ತು.
ಯಾಕೆಂದರೆ ನೀ ಭಕ್ತ ಪರಾಧೀನ. ಭಕ್ತರ ಕೈಗೊಂಬೆ.
ಬಾ ಎಂದರೆ ಬರುತ್ತೀಯಾ, ಹೋಗು ಎಂದರೆ ಹೋಗುತ್ತೀಯಾ ?
ಇದೆಲ್ಲ ಏನು ಮಾರಾಯಾ ?

ನೀ ದೇವರು, ನಿನ್ನನ್ನ ಕಾಯುವವರು ಯಾರು ?
ನೀ ಸರ್ವಾಂತರ್ಯಾಮಿ, ನೀ ಎಲ್ಲೆಡೆಗೂ ಇದ್ದೀಯಾ.
ಈ ವಿಶ್ವವೇ ನಿನ್ನ ಮನೆಯಾದರೆ, ನಿನಗೆ ಭಕ್ತರು ಕಟ್ಟುವ ಮನೆಯಾದರೂ ಯಾಕೆ ಬೇಕು..?
ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನನ್ನ ಮನೆ ಎಂದು ನಿನಗೆ ಅನ್ನಿಸಲೇ ಇಲ್ಲವಾ ?

ನೀನು ಅಪ್ಪ ಹೇಳಿದ್ದಕ್ಕೆ ಕಾಡಿಗೆ ಹೋದೆ.
ಯಾರೋ ಹೇಳಿದರೆಂದು ಹೆಂಡತಿಯನ್ನೆ ಬೆಂಕಿಗೆ ಹಾಕಿದೆ.
ಇದು ಕೊಲೆಯೇ ಆತ್ಮಹತ್ಯೆ ನೀ ಯೋಚಿಸಲೇ ಇಲ್ಲ.
 ನೀನಗೆ ಕೇಳಲಿಲ್ಲವೆ, ಆ ಹೆಣ್ಣಿನ ಧ್ವನಿ ?
ಅದು ಸೀತೆಯ ಅರ್ತನಾದವೆ ? ಶೂರ್ಪನಖಿಯ
ವಿರಹ ಗಾನವೆ ? ಲಕ್ಷ್ನಣನ ಒಂಟಿತನ ಪಿಸು ಧ್ವನಿಯೆ ?
ಅದು ಅಯೋಧ್ಯೆಯ ನೂರಾರು ಹೆಣ್ನು ಮಕ್ಕಳ
ಬಿಡುಗಡೆಯ ಕೂಗೆ ?
ಒಮ್ಮೆ ಕೇಳಿಸಿ ಕೋ ಆ ನೊಂದ ಬೆಂದ ಆತ್ಮಗಳ ಧ್ವನಿಯನ್ನು.

ನಿನ್ನ ಕೈಗಳು ರಕ್ತ ಸಿಕ್ತವಾಗಿವೆ.
ನೀ ಬಂದಲ್ಲಿ ಹೋದಲ್ಲಿ ರಕ್ತ ಹರಿದಿದೆ.
ರಕ್ತ ಹರಿಸಿ, ರಾಜ್ಯವನ್ನು ಕಟ್ಟಿದೆ. ಯಾರು ಯಾರನ್ನೋ ಮೆಟ್ಟಿದೆ.
ಇನ್ಯಾರದೋ ಬೆನ್ನು ತಟ್ಟಿದೆ. ಈಗ ಪ್ರತ್ಯಕ್ಷನಾದೆಯಲ್ಲ ನೀನು ?
ಈಗಲಾದರೂ ಸುಮ್ಮನಿರಲು ಏನು ಕೊಡಬೇಕು ಹೇಳು ?

ಬಂದಿದ್ದೀಯಲ್ಲ ಇರಲಿ ಬಿಡು. ನಿನ್ನ, ನಾಶವಾದ ದೇಶವನ್ನಾದರೂ ನೋಡು.
ಇಲ್ಲಿ ಮನಸ್ಸುಗಳು ಸತ್ತಿವೆ. ಆತ್ಮಗಳು ನಾಶವಾಗಿವೆ.
ಮಸೀದಿಗಳ ಅಡಿಯಲ್ಲಿ ದೇವಾಲಯಗಳ ಅವಶೇಷಗಳು.
ದೇವಾಲಯಗಳ ಅಡಿಯಲ್ಲಿ ಜೈನ ಬಸದಿಗಳು. ಬುದ್ಧ ಸ್ತೂಪಗಳು.
ಇದೆಲ್ಲವನ್ನು ಒಮ್ಮೆ ನೋಡಿ ಬಿಡು.

ನಿನ್ನ ಭಕ್ತರಿಗೆ ಬುದ್ದಿ ಮಾತು ಹೇಳಿ ಬಿಡು.
ಭಕ್ತ ಪರಾಧೀನನಾಗ ಬೇಡ ನೀನು.
ಸ್ವಂತ ವ್ಯಕ್ತಿತ್ವ ಇಲ್ಲದನು ಹೇಗೆ ಆದಾನು ದೇವರು..?

Friday, January 27, 2017

ನಾನು ಯಾರು ಗೊತ್ತೆ ? ವಿಶ್ವರೂಪಿ ನಾನು !

ಇವತ್ತಿನ ಸಂದರ್ಭದಲ್ಲಿ ಮನುಷ್ಯ ಎದುರಿಸುತ್ತಿರುವ ಸಮಸ್ಯೆಗಳು ಯಾವವು ? ಊಟ ವಸತಿ ಆತನ ಸಮಸ್ಯೆಯೆ ? ಶಾಂತಿ ಮತ್ತು ಸಮೃದ್ಧಿಯ ಬದುಕು ಆತನ ಸಮಸ್ಯೆಯೆ ?  ನಿಜ ಇವೆಲ್ಲ ಆತನ ಸಮಸ್ಯೆಗಳು.  ಆದರೆ ಇವಿಷ್ಟೇ ಅಲ್ಲ. ನಾನು ನೋಡಿದ ಹಾಗೆ ಸಮಸ್ಯೆ ಇಲ್ಲದ ಮನುಷ್ಯ ಇಲ್ಲವೇ ಇಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಸಮಸ್ಯೆಗಳು. ಒಟ್ಟಿನಲ್ಲಿ ಶಾಂತಿಯುತ ಬದುಕು ಆತನಿಗೆ ಮರೀಚಿಕೆ. ನನ್ನ ಬದುಕಿನಲ್ಲಿ ಇದುವರೆಗೆ ಸಂಪರ್ಕಕ್ಕೆ ಬಂದ ಯಾರೂ ಸಹ ನನಗೆ ಸಮಸ್ಯೆ ಇಲ್ಲ, ನನ್ನ ಬದುಕು ಸುಂದರವಾಗಿದೆ ಎಂದು ಹೇಳಿದವರು ಯಾರೂ ಇಲ್ಲ. ಎಲ್ಲರೂ ಒಂದಲ್ಲ ಒಂದು ಸಮಸ್ಯೆಯ ನಡುವೆಯೇ ಬದುಕುತ್ತಿರುತ್ತಾರೆ. ಆದರೆ ಸಮಸ್ಯೆಗಳ ನಡುವೆ ಬದುಕುತ್ತಿರುವವರು ಬೇರೆಯವರಿಗೆ ಸಮಸ್ಯೆಯಾಗುವುದು ಮಾತ್ರ ತಪ್ಪುವುದಿಲ್ಲ.
ವೇದಾಂತದಲ್ಲಿ ಬಹುಮುಖ್ಯ ಪ್ರಶ್ನೆ ಎಂದರೆ ನಾನು ಯಾರು ಎಂಬುದೇ. ನಾನು ಯಾರು ಎಂಬ ಪ್ರಶ್ನೆಗಳಿಗೆ  ಬೇರೆ ಬೇರೆ ವೇದಾಂತಿಗಳು ಬೇರೆ ಬೇರೆ ಉತ್ತರ ನೀಡಿದ್ದಾರೆ.  ಆದರೆ ಇಂದಿನ ಸಾಮಾನ್ಯ ಮನುಷ್ಯನಿಗೆ ಈ ಪ್ರಶ್ನೆ ಕೇಳಿದರೆ, ಆತ ತನ್ನ ಹೆಸರನ್ನು ಹೆಳಬಹುದು. ತನ್ನ ಕುಲ ಗೋತ್ರವನ್ನು ಹೇಳಿ ತನ್ನನ್ನು ಪರಿಚಯ ಮಾಡಿಕೊಡಲು ಯತ್ನ ನಡೆಸಬಹುದು. ಹೆಸರು ಮತ್ತು ಕುಲ ಗೋತ್ರಗಳು ನಾನು ಯಾರು ಎಂಬ ಪ್ರಶ್ನೆಗೆ ಸಮಾಜ ಎನೆಂದು ಗುರುತಿಸುತ್ತದೆ ಎಂಬುದೇ ಉತ್ತರ ವಾಗಿರುತ್ತದೆ. ಆದರೆ ಸಮಾಜವನ್ನು ಪ್ರತ್ಯೇಕಿಸಿ ನಮಗೆ ನಾವೇ ಈ ಪ್ರಶ್ನೆ ಕೇಳಿಕೊಂಡರೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ. ಸಮಾಜ ನಮ್ಮನ್ನು ಗುರುತಿಸುವಿಕೆಯಲ್ಲೂ ಏಕರೂಪತೆ ಇಲ್ಲ. ಅದು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆಯಾಗಿರುತ್ತದೆ. ಆಯಾ ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸುವಾಗ ಕೇವಲ ಅವರ ಕುಲ ಮತ್ತು ಗೋತ್ರಗಳಿಗೆ ಮಾತ್ರ ಸಿಮಿತವಾಗಿರುವುದಿಲ್ಲ. ಇದನ್ನೂ ಮೀರಿ ತಾವು ಗೃಹಿಸಿದ ವ್ಯಕ್ತಿ ವಿಶೇಷಗಳನ್ನು ಅದಕ್ಕೆ ಸೇರಿಸಿ ಬಿಡುತ್ತಾರೆ. ಉದಾಹರಣೆಗೆ ನನ್ನನ್ನು ಕೇವಲ ಶಶಿಧರ್ ಭಟ್ಟ ಎಂಬ ಹೆಸರಿಗೋ ನಾನು ಹೊಂದಿರುವ ಹುದ್ದೆಗೂ ಸೀಮಿತವಾಗಿ ಗುರುತಿಸುವುದಿಲ್ಲ. ನನ್ನ ಹೆಸರಿನ ಜೊತೆಗೆ ಅವರು ನನ್ನನ್ನು ಹೇಗೆ ಗೃಹಿಸಿದ್ದಾರೆ ಎಂಬುದನ್ನು ಅದಕ್ಕೆ ಸೇರಿಸುತ್ತಾರೆ. ಹೀಗಾಗಿ ಇಂದು ಅರ್ಥದಲ್ಲಿ ಒಬ್ಬ ವ್ಯಕ್ತಿ ವಿಶ್ವರೂಪಿ. ಆತನಿಗೆ ಒಂದೆ ರೂಪ ಗುಣವಿಲ್ಲ. ಆತನಿಗೆ ಪರಿಚಯವಿರುವ, ಆತನ ಪರಿಚಯ ಇಲ್ಲದಿದ್ದರೆ ಅವನನ್ನು ಹುದ್ದೆ ಮತ್ತು ಹೆಸರಿನ ಮೂಲಕ ತಿಳಿದುಕೊಂಡವರೂ ಒಂದು ಪುನರ್ ಸೃಷ್ಟಿ ಮಾಡಿಬಿಡುತ್ತಾರೆ. ಹೀಗಾಗಿ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಹಲವು ರೂಪಗಳನ್ನು, ಅವತಾರಗಳನ್ನು ಹೊಂದಿದ ವ್ಯಕ್ತಿಯಾಗಿ ಬಿಡುತ್ತಾನೆ. ನಾನು ಹಾಗೆ ಒಂದು ರೀತಿಯಲ್ಲಿ ವಿಶ್ವರೂಪಿ.
ನನಗೂ ಒಂದು ದಿನ ನಾನು ಯಾರು ಎಂಬ ಪ್ರಶ್ನೆ ಕಾಡತೊಡಗಿತು. ನಾನು ಈ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡೆ. ಆದರೆ ಈ ಪ್ರಶ್ನೆಗೆ ಉತ್ತರ ಸರಳವಾಗಿ ದೊರಕಲಿಲ್ಲ. ನನ್ನನ್ನೇ ಈ ಪ್ರಶ್ನೆಯನ್ನು ಕೇಳಿಕೊಂಡಾಗ ನನಗೆ ದೊರಕಿದ ಉತ್ತರ ನಾನು ಎಂಬುದೇ ಇಲ್ಲ ಎಂಬ ಉತ್ತರವಾಗಿತ್ತು. ಹೀಗಾಗಿ ಸಮಾಜ ನನ್ನನ್ನು ಹೇಗೆ ಗುರುತಿಸುತ್ತದೆ ಎಂಬುದರ ಮೇಲೆ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಬೇಕು ಎಂದು ನನಗೆ ಅನ್ನಿಸತೊಡಗಿತು. ಹೀಗಾಗಿ ನನ್ನನ್ನು ಬಲ್ಲವರು, ನನ್ನನ್ನು ಹತ್ತಿರದಿಂದ ನೋಡಿದವರು ನನ್ನನ್ನು ಏನೆಂದು ಗುರುತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ. ಮೊದಲು ನನ್ನ ಅಮ್ಮ ಮತ್ತು ಸಹೋದರ ನನ್ನ ಬಗ್ಗೆ ಏನೆಂದುಕೊಂಡಿದ್ದಾರೆ ಮತ್ತು ಅವರು ನನ್ನನ್ನು ಹೇಗೆ ಗೃಹಿಸುತ್ತಾರೆ ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂದುಕೊಳ್ಳಲು ಯತ್ನ ನಡೆಸಿದೆ. ಈ ಪ್ರಶ್ನೆಗೆ  ತುಂಬಾ ಸರಳವಾದ ಉತ್ತರ ದೊರಕಿತು. ನನ್ನ ಅಮ್ಮನ ಪ್ರಕಾರ ನನ್ನಂಥ ಮಗ ಬೇರೆ ಯಾರೂ ಇಲ್ಲ. ನಾನು ಮಹಾನ್ ಸಾಧಕ. ಕಷ್ಟದಿಂದ ಮೇಲೆ ಬಂದವನು. ಒಳ್ಳೆಯ ಗುಣಗಳ ಗಣಿ. ನನ್ನ ತಮ್ಮನ ಅಭಿಪ್ರಾಯ ಇದಕ್ಕಿಂತ ಬೇರೆ ಇರಲಿಲ್ಲ. ಈ ಬಗ್ಗೆ ನನಗೆ ನಗು ಬಂತು. ನಾನು ಅಮ್ಮ ತಮ್ಮ ಅಂದುಕೊಂಡಷ್ಟು ಒಳ್ಳೆಯವನಲ್ಲ...!
ಇನ್ನು ನನ್ನ ಕುಟುಂಬದವರು ನನ್ನ ಬಗ್ಗೆ ಏನು ಅಂದುಕೊಂಡಿರಬಹುದು ? ಅವರ ಪ್ರಕಾರ ನನ್ನ ರೂಪ ಯಾವುದು ?  ವಯಸ್ಸಿಗೆ ಬಂದ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮತ್ತು ಗೌರವವಿದ್ದರೂ ಜಗತ್ತಿನಲ್ಲಿ ಅತಿ ದಡ್ಡರೆಂದರೆ ನನ್ನ ಅಪ್ಪ ಅಮ್ಮ ಎಂದು ಅನ್ನಿಸುತ್ತಿರುತ್ತದೆ. ಈ ಭಾವನೆಗೆ ಕಾರಣ ಜನರೇಷನ್ ಗ್ಯಾಪ್.. ಮಹಾನ್ ಬೇಜವಾಬ್ದಾರಿ, ಕುಟುಂಬದ ಬಗ್ಗೆ ಪ್ರೀತಿ ಗೌರವ ಇಲ್ಲದವನು. ವೈಯಕ್ತಿಕ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳದವನು. ನನ್ನ ಬದುಕು ಸೆಟಲ್ ಆಗಲು ಕೆಲಸ ಮಾಡದವನು.. ಹೀಗೆ ಆರೋಪ ಪಟ್ಟಿ ದೊಡ್ದದಾಗುತ್ತದೆ. ಈ ಗೃಹಿಕೆಯಲ್ಲಿ ಸ್ವಲ್ಪ ಸತ್ಯವೂ ಮಿಥ್ಯೆಯೂ ಎರಡು ಸೇರಿಕೊಂಡಿದೆ ಎಂದು ನನಗೆ ಅನ್ನಿಸ್ತು. ಅವರು ಅಂದುಕೊಂಡಷ್ಟು ನಾನು ಕೆಟ್ಟವನಿರಲಿಕ್ಕಿಲ್ಲ, ಮತ್ತು ಬೇಜವಾಬ್ದಾರಿಯ ಮನುಷ್ಯ ಆಗಿರಲಿಕ್ಕಲ್ಲ ಎಂದುಕೊಂಡೆ.
ಇನ್ನು ನನಗಿರುವ ಸ್ನೇಹಿತೆಯರು ಸ್ನೇಹಿತರು ಎನೆಂದುಕೊಂಡಿರಬಹುದು. ಅವರ ಪ್ರಕಾರ ನನ್ನ ರೂಪ ಯಾವುದು ? ನಾನು ಯೋಗ್ಯನೆ ಅಯೋಗ್ಯನೆ ಎಂಬ ಪ್ರಶ್ನೆ. ನನಗೆ ಸ್ನೇಹಿತರ ಸಂಖ್ಯ ಕಡಿಮೆ. ಆದರೆ ಸ್ನೇಹಿತಿಯರಿದ್ದಾರೆ.. ನನಗೆ ಯಾವೊದೋ ಒಬ್ಬ ಕಳ್ಲ ಜ್ಯೋತಿಷಿ ಯಾವಾಗಲೋ ಹೇಳಿದ ಮಾತು ನೆನಪಾಗುತ್ತದೆ. ಜ್ಯೋತಿಷಿ ಕಳ್ಳನಾದರೂ ಆತ ಹೇಳಿದ ಮಾತು ನಿಜವೇನೋ ಎಂದು ಹಲವು ಬಾರಿ ಅಂದುಕೊಂಡಿದ್ದಿದೆ. ಆತ ಹೇಳಿದ್ದ; ನಿಮ್ಮ ಉನ್ನತಿಗೆ ಮತ್ತು ನಾಶಕ್ಕೆ ಹೆಣ್ಣೇ ಕಾರಣವಾಗುತ್ತಾಳೆ...! ನನ್ನ ಹಲವಾರು ಸ್ನೇಹಿತೆಯರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಾಗ ಕೆಲವರು ಇಲ್ಲ ಸಲ್ಲದ ಆರೋಪ ಮಾಡಿದಾಗ  ಈ ಮಾತು ನನಗೆ ನೆನಪಾಗುತ್ತದೆ. ಆದರೆ ಗಂಡಸರಿಗಿಂತ ಹೆಂಗಸರ ಜೊತೆ ಹೆಚ್ಚು ಸೇಫ್ ಎಂದುಕೊಳ್ಳುವ ನಾನು ನನ್ನ ಉನ್ನತಿ ಹೆಣ್ಣಿನಿಂದಲೇ ಎಂಬುದನ್ನು ಯಾವುದೇ ಮುಜುಗರವಿಲ್ಲದೇ ಒಪ್ಪಿಕೊಳ್ಳುತ್ತೇನೆ. ಆದರೆ ನಾಶ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಹಲವು ಸ್ನೇಹಿತೆಯರಿಂದ ನಾನು ತೊಂದರೆ ಅನುಭವಿಸಿದ್ದು ಮಾತ್ರ ನಿಜ. ನನಗೆ ಅನ್ನಿಸುವ ಹಾಗೆ ನನ್ನ ಸ್ನೇಹಿತೆಯರು ನನ್ನನ್ನು ವಿಭಿನ್ನವಾಗಿ ಗೃಹಿಸಿದ್ದಾರೆ. ಕೆಲವರ ಪ್ರಕಾರ ನಾನು ಸಾಧು ಮತ್ತು ಬೋಳೇ ಶಂಕರ. ನನಗೆ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬುದೇ ತಿಳಿಯುವುದಿಲ್ಲ. ಎಲ್ಲರನ್ನು ನಂಬಿ ಮೋಸ ಹೋಗುತ್ತೇನೆ. ಇನ್ನೂ ಕೆಲವರ ಪ್ರಕಾರ ನಾನು ಶ್ರೀ ಕೃಷ್ಣ, ಶ್ರೀ ರಾಮಚಂದ್ರ ಅಲ್ಲ. ಗೋಪಿಕಾ ಸ್ತ್ರೀಯರ ನಡುವೆ ಇರುವುದಕ್ಕೆ ಇಷ್ಟ ಪಡುತ್ತೇನೆ. ಈ ಮಾತು ಸಂಪೂರ್ಣ ಸುಳ್ಳಲ್ಲ.
ಆದರೆ ಸ್ನೇಹಿತೆಯರಾಗಲೀ, ನನ್ನನ್ನು ಬಲ್ಲ ಮಹಿಳೆಯರಾಗಲೀ ನನ್ನನ್ನು ಕಳ್ಳ ಸುಳ್ಳ, ಮೋಸಗಾರ ಎಂಬುದನ್ನು ಹೇಳುವುದಿಲ್ಲ. ನಾನು ವ್ಯಾಮೋಹಿಯಾದರೂ ಮೋಸಗಾರ ಎಂದು ಹೇಳುವುದಿಲ್ಲ.
ನನ್ನ ಜೊತೆಗೆ ಕೆಲಸ ಮಾಡಿದವರು ನನ್ನನ್ನು ಹೇಗೆ ಗುರುತಿಸುತ್ತಾರೆ ? ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ನಾನು ತೀವ್ರ ಯತ್ನ ನಡೆಸಿದೆ. ಇದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಮಾಧ್ಯಮದಲ್ಲಿ ಕೆಲಸ ಮಾಡುವವರು ಎಲ್ಲವನ್ನು ಕರಗತ ಮಾಡಿಕೊಂಡಿರುತ್ತಾರೆ. ಆದರೆ ಅವರು ಆಗಾಗ ನನ್ನ ಎದುರಿಗೆ ಆಡುವ ಮಾತುಗಳು, ನನ್ನ ಬಗ್ಗೆ ಬೇರೆಯವರ ಜೊತೆ ಆಡುವ ಮಾತುಗಳನ್ನೆಲ್ಲ ಸೇರಿಸಿ ಅವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಿದೆ. ನನ್ನ ಜೊತೆಗೆ ಬಹಳ ವರ್ಷ ಕೆಲಸ ಮಾಡಿದ ವ್ಯಕ್ತಿಯೊಬ್ಬನನ್ನು ಈ ಬಗ್ಗೆ ಕೇಳಿದೆ. ಆತ ಹೇಳಿದ್ದು ನನಗೆ ನಗು ಭರಿಸಿತು. ಆತ ಒಬ್ಬರ ಹೆಸರು ಹೇಳಿದ. ನಿಮಗೆ ಅವರಿಗೆ ಸಂಬಂಧವಿದೆಯಂತೆ ಎಂದು ಯಾವುದು ಗುಟ್ಟು ಹೇಳುವಂತೆ ಹೇಳಿದ. ಎಲ್ಲರೂ ಹಾಗೆ ಮಾತನಾಡಿಕೊಳ್ಳುತ್ತಾರೆ ಅಂದ. ನನಗೆ ನಗು ಬಂತು. ಹೌದಾ ? ನಿಮ್ಮ ಜೊತೆ ನನಗೆ ಸಂಬಂಧವಿಲ್ಲವಾ ಎಂದು ಕೇಳಿದೆ. ಆತ ತಡಬಡಾಯಿಸಿದ. ಹಾಗಲ್ಲ ಸಾರ್ ಅವರನ್ನು ನೀವು ದೂರವಿಡುವುದು ಒಳ್ಳೆಯದು ಎಂಬ ಬಿಟ್ಟಿ ಸಲಹೆಯನ್ನು ನೀಡಿದ. ನನಗೆ ಯಾರ ಜೊತೆಗೋ ಸಂಬಂಧವಿದ್ದರೆ ನಿಮಗೇನಾದರೂ ಸಮಸ್ಯೆಯಾಗುತ್ತದೆಯೆ ಎಂದು ಪ್ರಶ್ನಿಸಿದೆ. ಆತ ಉತ್ತರ ನೀಡಲಿಲ್ಲ. ಹಾಗೆ ನನ್ನ ಜೊತೆಗೆ ಕೆಲಸ ಮಾಡಿ ಈಗ ಬೇರೆಡೆ ಇರುವವರು ನನ್ನ ಬಗ್ಗೆ ಏನು ಅಂದುಕೊಂಡಿರಬಹುದು ಎಂಬ ಕುತೂಹಲವನ್ನು ನಾನು ತಣಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಕೆಲವು ಸ್ನೇಹಿತೆಯರನ್ನು ಈ ಬಗ್ಗೆ ವಿಚಾರಿಸಿದೆ. ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನರಿಗೆ ನನ್ನ ಬಗ್ಗೆ ಸದಾಭಿಪ್ರಾಯ ಇರಲಿಲ್ಲ. ಕೆಲವರಿಗೆ ವೃತ್ತಿ ಮಾತ್ಸರ್ಯವಿತ್ತು. ಇನ್ನು ಕೆಲವರಿಗೆ ನನ್ನ ಬಗ್ಗೆ ಕೆಲವರು ಆಡುವ ಒಳ್ಳೆಯ ಮಾತುಗಳು ಈರ್ಷ್ಯೆಯನ್ನು ಉಂಟು ಮಾಡಿತ್ತು. ಇನ್ನು ಕೆಲವರಿಗೆ ನಾನು ಭಹಿರಂಗವಾಗಿ ಆಡುವ ಮಾತುಗಳು, ಮಾಡುವ ಟೀಕೆಯಿಂದ ಸಿಟ್ಟು ಬಂದಿತ್ತು. ಇವರೆಲ್ಲ ನನ್ನನ್ನು ವ್ಯಯಕ್ತಿಕ ಕಾರಣಗಳಿಗಾಗಿ ಟೀಕಿಸುತ್ತಿರುವುದು ಧ್ವೇಷಿಸುತ್ತಿರುವುದನ್ನು ಗಮನಕ್ಕೆ ಬಂತು. ಇವರೂ ಸಹ ನನ್ನ  ವೈಯಕ್ತಿಕ ನಡುವಳಿಗಳನ್ನು ಟೀಕಿಸಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಿದ್ದರು. ಇವರಿಗೂ ನಾನು ಯಾರೂ ಇಷ್ಟ ಪಡದ ವ್ಯಕ್ತಿ ನಾನು. ಇವರ ಗೃಹಿಕೆಯೂ ಸಂಪೂರ್ಣ ಸತ್ಯವಲ್ಲ. ನಾನು ಎಲ್ಲರೂ ಸಾಮೂಹಿಕವಾಗಿ ತಿರಸ್ಕರಿಸಬೇಕಾದ ವ್ಯಕ್ತಿ ಅಲ್ಲ ಅಂದುಕೊಂಡೆ. ಆದರೆ ಅದೂ ಸಹ ಅವರ ಗೃಹಿಕೆಯ ನನ್ನ ರೂಪವಾಗಿತ್ತು.
ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನನ್ನು ಟೀಕಿಸುವ ಬೈಯುವವರ ಸಂಖ್ಯೆ ದೊಡ್ದದಿದೆ. ಅದಕ್ಕೆ ಬಹುಮುಖ್ಯ ಕಾರಣ ನಾನು ಬಲಪಂಥೀಯರನ್ನು ಕೋಮುವಾದಿಗಳನ್ನು ಸತತವಾಗಿ ಟೀಕಿಸುತ್ತಿರುವುದು ಕಾರಣ. ಇತ್ತೀಚೆಗೆ ನನ್ನ ಪ್ರೈಂ ಟೈ ನ್ಯೂಸ್ ನಲ್ಲಿ ಬಿಜೆಪಿ ನಾಯಕ ಡಾ. ವಾಮನಾಚಾರ್ಯ ಪಾಕಿಸ್ಥಾನಕ್ಕೆ ಹೋಗಿ ಎಂದು ನನಗೆ ಫರ್ಮಾನು ಹೊರಡಿಸಿಬಿಟ್ಟಿದ್ದರು. ನಾನು ಒಂದು ಕಾಲದಲ್ಲಿ ಎಡಪಂಥೀಯ ವಿಚಾರ ಧಾರೆಯನ್ನು ಒಪ್ಪಿಕೊಂಡಿದ್ದರೂ ಈಗ ಎಡಪಂಥೀಯನಲ್ಲ. ನಾನು ಬಲಪಂಥೀಯ ವಿರೋಧಿ. ಕೋಮುವಾದ, ಜಾತಿಯತೆಯ ವಿರೋಧಿ. ಹೀಗಾಗಿ ಈ ಜನರ ಪಾಲಿಗೆ ನಾನು ದೊಡ್ದ ವಿಲನ್. ದೇಶ ಧ್ರೋಹಿ. ಹಿಂದೂ ವಿರೋಧಿ. ಇದೂ ಕೂಡ ಅವರ ಗ್ರಹಿಕೆ.
ಇದನ್ನೆಲ್ಲ ನೋಡಿದ ಮೇಲೂ ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಲೇ ಇಲ್ಲ. ನಾನು ಇವರೆಲ್ಲ ಹೇಳಿದಂತೆ ಇರುವ ವ್ಯಕ್ತಿಯಾಗಿರಬಹುದು, ಆಗದೆಯೂ ಇರಬಹುದು. ಇವರೆಲ್ಲ ನನ್ನನ್ನು ಗ್ರಹಿಸಿದ್ದರಲ್ಲಿ ಕೆಲವು ಅಂಶಗಳು ಸೇರಿ ಇನ್ನೊಂದು ವ್ಯಕ್ತಿತ್ವ ನಾನಾಗಿರಬಹುದು. ಇದಕ್ಕೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಆದರೆ ನನಗೆ ಒಂದು ವಿಷಯದಲ್ಲಿ ಸಂ ತೋಷವಿದೆ. ಅದೆಂದರೆ ನನ್ನ ವಿಶ್ವರೂಪ; ನಾನು ವಿಶ್ವರೂಪಿ.
ಈ ಲೇಖನವನ್ನು ಓದಿದವರು ನನಗೆ ಇನ್ನೂ ಕೆಲವು ರೂಪಗಳನ್ನು ಕೊಡಬಹುದು, ಮಾತನಾಡಬಹುದು. ತಮ್ಮ ಈ ಹಿಂದಿನ ಗೃಹಿಕೆ ಸರಿಯಾದುದು ಎಂಬುದು ಈ ಲೇಖನದಿಂದ ಸಾಬೀತಾಗಿದೆ ಎಂದು ಸಂತೋಷಪಡಬಹುದು. ಹಾಗೆ ತಮ್ಮ ಗೃಹಿಕೆಯನ್ನು ಬದಲಿಸಿಕೊಳ್ಳಬಹುದು. ಆದರೆ ನನಗೆ ಒಂದು ರೂಪವಿಲ್ಲ, ನಾನು ಬಹುರೂಪಿ ಎಂಬುದು ಸಾಬೀತಾಗುತ್ತದೆ. ಇದಾದ ಮೇಲೂ ನನಗಿರುವ ಕುತೂಹಲ ಕಡಿಮೆಯಾಗಿಲ್ಲ. ಇವರೆಲ್ಲ ನನ್ನನ್ನು ಗೃಹಿಸಿರುವ ಬಗ್ಗೆ ನನಗೆ ಅನುಮಾನ ಹಾಗೆಯೇ ಮುಂದುವರಿದಿದೆ.ನಾನು ಇವರೆಲ್ಲ ಅಂದುಕೊಂಡಷ್ಟು ಕೆಟ್ಟವನಲ್ಲದಿರಬಹುದು ಎಂದು ನನಗೆ ಅನ್ನಿಸುತ್ತದೆ,  ಹಾಗೆ ತುಂಬಾ ಒಳ್ಳೆಯವನೂ ಅಲ್ಲ ಎಂದು ಆಗಾಗ ಅನ್ನಿಸುವುದಿದೆ. ಏನೇ ಅನ್ನಿಸಲಿ, ನಾನು ಬದುಕನ್ನು ಪ್ರೀತಿಸುತ್ತೇನೆ. ಮನುಷ್ಯರನ್ನು ಪ್ರೀತಿಸುತ್ತೇನೆ. ಬದುಕಿನ ಬಗ್ಗೆ ಪ್ರೀತಿಯ ಬಗ್ಗೆ ನಾನು ವ್ಯಾಮೋಹಿ.. ಹೀಗಾಗಿ ಪ್ರತಿದಿನ ನನಗೆ ಹೊಸದು. ಅದೇ ನನ್ನನ್ನು ಜೀವಂತವಾಗಿ ಇರಿಸಿದೆ. ನನ್ನ ಅಮ್ಮ, ನನ್ನನ್ನು ಪ್ರೀತಿಸಿದ ಗೆಳತಿಯರು, ನನ್ನ ಬೆನ್ನು ತಟ್ಟಿದ ಸ್ನೇಹಿತೆಯರು, ನನ್ನನು ಬದುಕಿಸಿದ್ದಾರೆ. ಬದುಕಿಸುತ್ತಿದ್ದಾರೆ. ಆದ್ದರಿಂದ ನಾನು ಯಾರು ಎಂಬ ಪ್ರಶ್ನೆಗೆ ಕೊನೆಯದಾಗಿ ಕಂಡುಕೊಂಡ ಉತ್ತರ ನಾನು ಎಂದರೆ ಪ್ರೀತಿ, ಧ್ವೇಷವಲ್ಲ.

Friday, January 6, 2017

ಅವಳು


ಕೆಂಪು ರವಿಕೆಯ ಒಳಗೆ ಬಚ್ಚಿಟ್ಟುಕೊಂಡವಳು
ಅತ್ತಾಗ, ರಚ್ಚೆ ಹಿಡಿದಾಗ ಬಚ್ಚಿಟ್ಟಿಕೊಂಡಿದ್ದನ್ನು ಬಿಚ್ಚಿಟ್ಟು ಕೊಟ್ಟವಳು
ಪುಟ್ಟ ಕೆನ್ನೆಯ ಸವರಿ, ಲೊಚ ಲೊಚನೆ ಮುತ್ತುಕೊಟ್ಟವಳು.
ಹಠ ಹಿಡಿದು ಬಿದ್ದು ಹೊರಳಿದಾಗ ಮತ್ತೆ ಬಿಗಿದಪ್ಪಿಕೊಂಡವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ರಸ್ತೆ ಅಂಚಿನಲ್ಲಿ ಕದ್ದು ನಿಂತು ನೋಡುವಾಗ ಹಾಗೆ ತಲೆ ತಗ್ಗಿಸಿ ನಡೆದವಳು
ಅರ್ಧ ತಿಂದ ಮಾವಿನ ಕಾಯಿ, ಪೇರಲೆ ಹಣ್ಣು ಪಡೆದು
ಕೆಂಪು ಲಂಗದ ಒಳಗೆ ಬಚ್ಚಿಟ್ಟುಕೊಂಡವಳು
ಮುಖದ ಹತ್ತಿರ ಮುಖ ಒಯ್ದಾಗ ನಾಚಿ ನೀರಾದವಳು.
ಅದೊಂದು ದಿನ ಯಾರದೂ ಕೈ ಹಿಡಿದು ಹೋರಟು ಬಿಟ್ಟವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ಹಾಗೆ ಅಚಾನಕ್ ಆಗಿ ಬಂದು ಹುಡುಕುತ್ತಿರುವದನ್ನು
ಕೊಡುವಂತೆ ಮುಂದೆ ಬಂದು ನಿಂತವಳು.
ಕೈ ಬೆರಳುಗಳ ನಡುವೆ ಬೆರಳು ಸಿಕ್ಕಿಸಿ
ಮುಂದೆ ನಡೆಯಲು ಹೆಜ್ಜೆ ಇಟ್ಟವಳು.
ದಾರಿ ಸವೆಸುವಾಗ, ಹಾಗೆ ಕಾಣದಾದವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ಅರ್ಧ ಸವೆಸಿದ ಹಾದಿ. ಬಾನ ತುಂಬಾ ಕಾರ್ಮೋಡ.
ಅಲ್ಲಲ್ಲಿ ಸುಳಿ ಮಿಂಚು ಕಣ್ಣು ಮುಚ್ಚುವ ಬೆಳಕು.
ದಾರಿ ತುಂಬಾ ಕತ್ತಲೆಯಲ್ಲೂ ಕಾಣುವ ನೆರಳುಗಳು.
ಅದ್ಯಾವ ಪ್ರತಿಮೆ ? ಅದ್ಯಾವ ದಿವ್ಯ ಪ್ರಭೆ ?
ನೆರಳುಗಳ ಹಿಂದೆ ನಿಂತಿರುವ ದಿವ್ಯಾತ್ಮ ಯಾವುದು ?
ಆಗಲ್ಲಿ ನಾನು ಹುಡುಕುತ್ತಿರುವುದಾದರೂ ಏನನ್ನು ?

ಅವಳು ಅವಳೇ ಇರಬೇಕು.ಇಲ್ಲ ಇವಳು ಅವಳಾಗಿರಬೇಕು.
ಇವಳು ಅವಳಾಗುವುದೆಂದರೆ, ಅವಳು ಇವಳಾಗುವುದೇ ಅಲ್ಲವೆ ?
ಇವಳು ಅವಳಾಗುವ, ಅವಳು ಇವಳಾಗುವ ನಡುವೆ.
ನಾನು ಹುಡುಕುತ್ತಿರುವುದಾದರೂ ಯಾರನ್ನು 

Wednesday, August 17, 2016

ಪಾಕಿಸ್ಥಾನವೆಂಬ ವಿಫಲ ಪ್ರಭುತ್ವ ಮತ್ತು ನಾವು ಕಲಿಯಬೇಕಾದ ಪಾಠ; ಭಾರತ ಮಾತೆ ಗೋಡೆಯ ಕ್ಯಾಲೆಂಡರ್ ಆಗದಿರಲಿ...

ವಿಭಜನೆಯ ನೋವು 
೧೯೪೭ರ ಸ್ವಾತಂತ್ರ್ಯ ಭಾರತದ ಉಪಖಂಡದಲ್ಲಿ ಹೊಸ ರಾಜಕೀಯ ಶಕೆಗೆ ನಾಂದಿ ಹಾಡಿತ್ತು. ಒಂದೇ ಸಂಸ್ಕೃತಿ ಮತ್ತು ಪರಂಪರೆಯ ಜನ ಎರಡು ದೇಶವಾಗಿ ಭಾಗವಾಗಿದ್ದರು. ವಿಭಜನೆ ರಕ್ತ ಚೆಲ್ಲಾಡುವಂತೆ ಮಾಡಿತು. ಎಲ್ಲೆಡೆ ಸಾವು ನೋವು.. ಪಾಕಿಸ್ಥಾನದ ಭಾಗದಲ್ಲಿರುವ ಹಿಂದೂಗಳು ಭಾರತಕ್ಕೆ ಬಂದರು, ಉತ್ತರ ಭಾರತದ ಮುಸ್ಲಿಂ ಕುಟುಂಬಗಳು ಪಾಕಿಸ್ಥಾನಕ್ಕೆ ವಲಸೆ ಹೋದವು. ಆದರೆ ಈ ವಿಭಜನೆ ಎರಡೂ ದೇಶಗಳಗಳ ಜನರಿಗೆ ಶಾಂತಿಯನ್ನು ತಂದುಕೊಡಲಿಲ್ಲ. ಇದರೊಂದಿಗೆ ವಿಭಜನೆಯ ಮೂಲ ಉದ್ದೇಶ ಈಡೇರಲಿಲ್ಲ. ಬದಲಾಗಿ ಭಯೋತ್ಪಾದನೆ, ಯುದ್ಧೋನ್ಮಾದ ಹೆಚ್ಚಿತು. ಅಪನಂಬಿಕೆಯ ಹೊಸ ಪರ್ವ ಪ್ರಾರಂಭವಾಯಿತು.
ಶಾಂತಿಯ ಪ್ರತಿಪಾದಕ ಮಹಾತ್ಮಾ ಗಾಂಧಿ ಹಿಂಸೆಗೆ ಬಲಿಯಾದರು. ತನ್ನೊಳಗೆ ಹಿಂಸೆಯನ್ನು ತುಂಬಿಕೊಂಡಿದ್ದ ಜಿನ್ನಾ ಶಾಂತವಾಗಿ ಅಸು ನೀಗಿದರು. ಆದರೆ ಈ ಭೂಕಂಡದ ಜನರಿಗೆ ಮಾತ್ರ ಶಾಂತಿ ದಕ್ಕಲೇ ಇಲ್ಲ.
ಪಾಕಿಸ್ಥಾನದ ಪಿತಾಮಹ ಜಿನ್ನಾ ಹಿಂದೂ ಮತ್ತು ಮುಸ್ಲೀಂ ರು ಪ್ರತ್ಯೇಕ ದೇಶವಾಗಿ ಬದುಕುವುದೊಂದೇ ಪರಿಹಾರ ಎಂದು ನಂಬಿದ್ದರು. ಹಿಂದೂ ಮತ್ತು ಮುಸ್ಲಿಂ ರು ಪ್ರತ್ಯೇಕ ದೇಶವಾದರೆ ಮುಸ್ಲಿಂ ರಿಗೆ ಶಾಂತಿ ಮತ್ತು ಅಭಿವೃದ್ಧಿ ದಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಆದರೆ ಜಿನ್ನಾ ನಂಬಿಕೆ ಹುಸಿಯಾಯಿತು. ಯಾಕೆಂದರೆ ಅವರ ನಂಬಿಕೆಯ ಹಿಂದೆ ಮನುಷ್ಯರನ್ನು ಬೇರ್ಪಡಿಸುವ ಹುನ್ನಾರವಿತ್ತು. ಅವರ ಮನಸ್ಸಿನಲ್ಲಿ ಹಿಂಸೆ ಇತ್ತು.
ಗಾಂಧಿ ಮತ್ತು ಜಿನ್ನಾ
 ಗಾಂಧಿ ಅವರ ನಂಬಿಕೆ ಇದಕ್ಕೆ ವಿರುದ್ಧವಾಗಿತ್ತು. ಗಾಂಧಿ ಹಿಂದೂ ಮತ್ತು ಮುಸ್ಲೀಮರ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಶಾಂತಿ ಮತ್ತು ಸಹಬಾಳ್ವೆಯ ಪ್ರತಿಪಾದಕರಾಗಿದ್ದ ಗಾಂಧಿ ಸೋಲಬೇಕಾಯಿತು. ಆದರೆ ಗಾಂಧಿ ನಂಬಿದ್ದ ಸಹೋದರತ್ವಸ ಮತ್ತು ಸಹಬಾಳ್ವೆ ಇಂದು ಹೆಚ್ಚು ಪ್ರಸ್ತುತ ಎಂದು ಅನ್ನಿಸುತ್ತದೆ. ಹಿಂಸೆಯಲ್ಲಿ ಅಸು ನೀಗಿದ ಗಾಂಧಿ ಬಿಟ್ಟು ಹೋದ ಶಾಂತಿಯ ಬದುಕಿನ ಕನಸು ಇಂದಿನ ಅಗತ್ಯ ಕೂಡ ಆಗಿದೆ.
ಏನೇ ಇರಲಿ ಜಿನ್ನಾ ಮುಸ್ಲೀಮರಿಗಾಗಿ ಹೊಸ ದೇಶವನ್ನು ಹುಟ್ಟು ಹಾಕುವುದರಲ್ಲಿ ಯಶಸ್ವಿಯಾದರು.  ಆದರೆ ಧರ್ಮ ಆಧಾರಿತವಾದ ರಾಜಕೀಯ ಪ್ರಭುತ್ವ ಯಶಸ್ವಿಯಾಗಲಾರದು ಎಂಬ ಸತ್ಯ ಈಗ ಮತ್ತಷ್ಟು ಗಟ್ಟಿಯಾಗಿದೆ, ಜಿನ್ನಾ ಸೋತಿದ್ದೆಲ್ಲಿ ಎಂಬುದು ಈಗ ಗೊತ್ತಾಗುತ್ತಲಿದೆ.
ಈ ಎರಡೂ ದೇಶಗಳು ದೇಶ ವಿಭಜನೆಯ ನಂತರ ಎದುರಿಸಿದ ಸಮಸ್ಯೆ ಸಾಮಾನ್ಯ ಸಮಸ್ಯೆ ಆಗಿರಲಿಲ್ಲ. ಬ್ರಿಟೀಷ್ ಇಂಡಿಯಾದಲ್ಲಿದ್ದ ಹಲವಾರು ರಾಜ್ಯಗಳಿಗೆ ಸ್ವಯಂ ನಿರ್ಣಯದ ಹಕ್ಕನ್ನು ಬ್ರಿಟೀಷರು ನೀಡಿದ್ದರು. ಈ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ಥಾನದ ಜೊತೆ ಸೇರುವ ಅಧಿಕಾರವನ್ನು ನೀಡಲಾಗಿತ್ತು. ಈ ಸ್ಥಿತಿಯಲ್ಲಿ ಭಾರತ ಎದುರಿಸಿದ ಮೊದಲ ಸಮಸ್ಯೆ ಹೈದರಾಬಾದಿನ ನಿಜಾಮರಿಂದ ಬಂದಿತ್ತು. ಹೈದರಾಬಾದ್ ನಿಜಾಮರು ತಮ್ಮ ರಾಜ್ಯವನ್ನು ಭಾರತಕ್ಕೆ ಸೇರಿಸಲು ಸಿದ್ದರಿರಲಿಲ್ಲ. ಆಗ ಗೃಹ ಸಚಿವರಾಗಿದ್ದ ವಲ್ಲಭ ಬಾಯಿ ಪಟೇಲರು ಸೈನ್ಯ ಕಾರ್ಯಾಚಾರಣೆ ನಡೆಸಬೇಕಾಯಿತು. ಸೈನ್ಯ ಬಲದ ಮೂಲಕ ಹೈದರಾಬಾದ್ ಅನ್ನು ಭಾರತಕ್ಕೆ ಸೇರಿಸಲಾಯಿತು.
ಆದರೆ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಮಾತ್ರ ಭಿನ್ನವಾಗಿತ್ತು. ಈ ರಾಜ್ಯದ ಜನ ಪಾಕಿಸ್ಥಾನವನ್ನು ಸೇರಬೇಕೋ ಅಥವಾ ಭಾರತವನ್ನು ಸೇರಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರೀಸಿಂಗ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ ಅಷ್ಟರಲ್ಲಿ ಬುಡಕಟ್ಟು ಜನಾಂಗದ ಹೆಸರಿನಲ್ಲಿ ಪಾಕಿಸ್ಥಾನದ ಸೈನ್ಯ ಜಮ್ಮು ಮತ್ತು ಕಾಶ್ಮೀರ ಪ್ರವೇಶ ಮಾಡಿತ್ತು. ಈ ಬಗ್ಗೆ ಭಾರತ ತಲೆ ಕೆಡಿಸಿಕೊಳ್ಳುವುದಕ್ಕಿಂತ ಹೆಚ್ಚಿನ ತಲೆ ಕೆಡಿಸಿಕೊಂಡವರು ಮಹಾರಜ ಹರೀಸಿಂಗ್. ತಮ್ಮ ರಾಜ್ಯವನ್ನು ಅವರು ಉಳಿಸಿಕೊಳ್ಳಲು ಭಾರತದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಭಾರತದ ಸೈನ್ಯ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗೆ ಮುಂದಾಯಿತು. ಈ ರಾಜ್ಯದ ಒಂದು ಭಾಗ ಭಾರತದಲ್ಲಿ ಸೇರ್ಪಡೆಯಾಯಿತು. ಇನ್ನೊಂದು ಭಾಗ ಪಾಕಿಸ್ಥಾನಕ್ಕೆ ಸೇರಿಕೊಂಡಿತು. ಈ ಹಂತದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ವಿಚಾರವನ್ನು ವಿಶ್ವ ಸಂಸ್ಥೆಗೆ ಒಯ್ದರು. ವಿಶ್ವ ಸಂಸ್ಥೆ ಈ ವಿವಾದದ ಬಗ್ಗೆ ಮೂರು ಪ್ರಮುಖ ನಿರ್ಣಯವನ್ನು ಕೈಗೊಂಡಿತು.
ಪಾಕಿಸ್ಥಾನ ಕಾಶ್ಮೀರದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಪಡೆಯಬೇಕು. ನಂತರ ಅಲ್ಲಿ  ಜನಮತ ಗಣನೆ ನಡೆಯಬೇಕು ಎಂಬುದು ವಿಶ್ವ ಸಂಸ್ಥೆಯ ಪ್ರಮುಖ ನಿರ್ಣಯವಾಗಿತ್ತು. ಆದರೆ ಪಾಕಿಸ್ಥಾನ ವಿಶ್ವ ಸಂಸ್ಥೆಯ ನಿರ್ಣಯದ ಮೊದಲ ಅಂಶವನ್ನೇ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ತನ್ನ ಸೈನ್ಯವನ್ನು ವಾಪಸು ಪಡೆಯಲೇ ಇಲ್ಲ. ಹಾಗೆ ಕಾಶ್ಮೀರದ ಜನ ಏನನ್ನೂ ಬಯಸುತ್ತಾರೆ ಎಂಬುದು ನೇಪಥ್ಯಕ್ಕೆ ಸರಿದು, ಈ ಭಾಗಕ್ಕಾಗಿ ಭಾರತ ಮತ್ತು ಪಾಕಿಸ್ಥಾನ ಯುದ್ಧ ನಡೆಸುವ ಸ್ಥಿತಿ ನಿರ್ಮಾಣವಾಯಿತು.
ಹಲವು ಧರ್ಮ ಸಂಸ್ಕೃತಿ ಪರಂಪರೆಗಳ ಭಾರತದ ವಿಭಜನೆಯ ನಂತರ ವಿಚಿತ್ರ ಸಂಕಟಕ್ಕೆ ಒಳಗಾಯಿತು. ಭಾರತಕ್ಕಿಂತ ಪಾಕಿಸ್ಥಾನದ ಸಮಸ್ಯೆ ಸಾವಿರ ಪಟ್ಟು ಹೆಚ್ಚಿತ್ತು. ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರದ ಮೇಲೆ ಧಾಳಿ ನಡೆಸಿ ಭೂ ಭಾಗವನ್ನು ಕಬಳಿಸಿದ ಮೇಲೆ ಅದರ ಕಣ್ಣು ಬಿದ್ದುದು ಬಲೂಚಿಸ್ಥಾನದ ಮೇಲೆ ಅಲ್ಲಿಯೂ ಸೈನ್ಯ ಕಳಿಸಿ, ೧೯೪೮ ರಲ್ಲಿ ಆ ಪ್ರದೇಶವನ್ನು ಪಾಕಿಸ್ಥಾನಕ್ಕೆ ಸೇರಿಸಿಕೊಂಡಿತು. ಬಲೂಚಿಗಳಿಗೆ ಪಾಕಿಸ್ಥಾನಕ್ಕೆ ಸೇರಿಸುವುದಕ್ಕೆ ಇಷ್ಟ ಇರಲಿಲ್ಲ.  ಪಾಕಿಸ್ಥಾನ ಎಂಬ ಈ ದೇಶ ಒಂದು ಒಕ್ಕೂಟದಂತೆ ಇರಬೇಕಾದ ಪ್ರದೇಶ. ಯಾಕೆಂದರೆ ಅಲ್ಲಿ ಒಂದು ಭಾಷೆ ಮತ್ತು ಸಂಸ್ಕೃತಿ ಇರಲಿಲ್ಲ. ಬಲೂಚಿಸ್ಥಾನ, ಸಿಂದ್, ಪಂಜಾಬ್, ಬಂಗಾಲ, ಪಶ್ತೂನ್, ಹೀಗೆ ಸಂಪೂರ್ಣವಾದ ಭಿನ್ನ ಸಂಸ್ಕೃತಿ ಮತ್ತು ಪರಂಪರೆಯ ಜನ ಪಾಕಿಸ್ಥಾನ ಎಂಬ ದೇಶದ ಒಳಗೆ ಬಂದಿದ್ದರು. ಇವರೆಲ್ಲ ಏಕ ಸಂಸ್ಕೃತಿ ಮತ್ತು ಪರಂಪರೆಗೆ ಒಳ ಪಟ್ಟವರಾಗಿರಲಿಲ್ಲ. ಆದರೆ ಪಾಕಿಸ್ಥಾನದ ದೇಶ ಭಕ್ತರು ಈ ವಿಭಿನ್ನತೆಯನ್ನು ಒಪ್ಪಿಕೊಳ್ಳಲೇ ಇಲ್ಲ. ಅವರು ಇಸ್ಲಾಂ ಎಂಬ ಧರ್ಮದ ಅಡಿಯಲ್ಲಿ ದೇಶ ಒಂದಾಗಿರುತ್ತದೆ ಎಂಬ ಭ್ರಮೆಗೆ ಒಳಗಾಗಿದ್ದರು. ವಿಭಿನ್ನ ಸಂಸ್ಕೃತಿ ಮತ್ತು ಭಾಷೆಯ ಜನ ಕೇವಲ ಧರ್ಮದ ಕಾರಣದಿಂದ ಒಂದಾಗುವುದಿಲ್ಲ ಎಂಬುದು ಪಾಕಿಸ್ಥಾನದ ದೇಶ ಭಕ್ತರಿಗೆ ಅರ್ಥವಾಗಲೇ ಇಲ್ಲ.  ಈ ನಡುವೆ ಕರಾಚಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದ ಉತ್ತರ ಭಾರತದಿಂದ ವಲಸೆ ಹೋದ ಮುಸ್ಲೀಮ್ ರಿಗೆ ಅಲ್ಲ ಸಮಾನ ಅಧಿಕಾರ ದೊರಕಲೇ ಇಲ್ಲ. ಅವರು ಎರಡನೆ ದರ್ಜೆಯ ಪ್ರಜೆಗಳಾಗಿ ಮೊಹಜರ್ ಗಳು ಎನ್ನಿಸಿಕೊಳ್ಳಬೇಕಾಯಿತು. ಆದರೆ ಹೊಸ ದಾಗಿ ಹುಟ್ಟಿದ ಈ ಮುಸ್ಲಿಂ ರಾಷ್ಟದ ನಾಯಕರು ಕೇವಲ ಧರ್ಮವನ್ನು ಮಾತ್ರ ಇಟ್ಟುಕೊಂಡು ದೇಶವನ್ನು ಕಟ್ಟಲು ಹೊರಟಿದ್ದರು..ಅವರಿಗೆ ಸಂಸ್ಕೃತಿ ಭಾಷೆ ಮತ್ತು ಪರಂಪರೆಯ ಮಹತ್ವ ತಿಳಿಯಲೇ ಇಲ್ಲ.
ವಿಭಜನೆ; ಬದುಕು ಹುಡುಕಿಕೊಂಡು ಹೊರಟವರು...
ಈ ನೀತಿಯಿಂದಾಗಿ ಬಲೂಚಿಸ್ಥಾನದಲ್ಲಿ ೧೯೪೮ ರಲ್ಲೇ ಪಾಕಿಸ್ಥಾನಿ ವಿರೋಧಿ ಚಳವಳಿ ಪ್ರಾರಂಭವಾಯಿತು. ಈ ಚಳವಳಿಯನ್ನು ಹತ್ತಿಕ್ಕಲು ಪಾಕಿಸ್ಥಾನ ಬೇರೆ ಬೇರೆ ಮಾರ್ಗವನ್ನು ಬಳಸತೊಡಗಿತು. ಈ ಪ್ರದೇಶದವನ್ನು ಸೈನ್ಯದ ಆಡಳಿತಕ್ಕೆ ಒಳಪಡಿಸಲಾಯಿತು. ಬಲೂಚಿ ಹೋರಾಟಗಾರರನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಮನೆ ಮನೆಗಳಿಗೆ ನುಗ್ಗಿ ಹೆಂಗಸರು ಮತ್ತು ಮಕ್ಕಳನ್ನು ಎಳೆ ತಂದು ಜೈಲಿಗೆ ದಬ್ಬಲಾಯಿತು. ಅಲ್ಲಿ ಹತ್ಯೆ ದಿನ ನಿತ್ಯದ ವ್ಯವಹಾರ ಎನ್ನುವಂತಾಯಿತು. ಹಲವಾರು ಬಲೂಚಿ ನಾಯಕರು ದೇಶ ತೊರೆದು ಹೊರಟು ಹೋದರು. ವಿದೇಶಿ ನೆಲದಲ್ಲಿ ನೆಲೆ ನಿಂತು ಅಲ್ಲಿಂದಲೇ ತಮ್ಮ ಹೋರಾಟವನ್ನು ಮುಂದುವರಿಸಿದರು.. ಇದರಿಂದಾಗಿ ಬಲೂಚಿ ಲಿಬರೇಶನ್ ಫ್ರಂಟ್ ನಂತಹ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಂಡವು. ರಕ್ತದ ಹೊಳೆ ಹರಿಯತೊಡಗಿತು..
ಇತ್ತ ಬಂಗಾಲದಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತಲ್ಲ ? ಬಂಗಾಲಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳದ ಪಾಕಿಸ್ಥಾನ ಬಂಗಾಲಿ ಭಾಷೆಯನ್ನು ಹತ್ತಿಕ್ಕಿತು. ಬಲವಂತವಾಗಿ ಉರ್ದು ಭಾಷೆಯನ್ನು ಅಲ್ಲಿ ಹೇರಲಾಯಿತು. ಶೇಖ್ ಮುಜಬೀರ್ ರೆಹಮಾನ್ ನೇತೃತ್ವದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಪ್ರಾರಂಭವಾದಾಗ ಇದನ್ನು ಕಡೆಗಣಿಸಿದ ಪಾಕಿಸ್ಥಾನ ಮುಸ್ಲಿಂ ಧರ್ಮ ದೇಶದ ಏಕತೆಯನ್ನು ಕಾಪಾಡುತ್ತದೆ ಎಂದು ನಂಬಿಕೊಂಡಿತ್ತು. ಕೊನೆಗೆ ಬಂಗಾಲ ಪ್ರದೇಶ ಬಾಂಗ್ಲಾ ದೇಶವಾಗಿದ್ದು ಇತಿಹಾಸ.
ಈ ತಪ್ಪಿನ ನಂತರವೂ ಪಾಕಿಸ್ಥಾನ ಪಾಠ ಕಲಿಯಲಿಲ್ಲ. ಉರ್ದು ಮಾತನಾಡುವ ಪಾಕಿಸ್ಥಾನಿಯರೇ ಅಲ್ಲಿ ಸಾರ್ವಭೌಮರಾದರು. ಉಳಿದ ಜನ ಸಂಸ್ಕೃತಿಯನ್ನು ಸೈನ್ಯ ಬಲದ ಮೂಲಕ ಹತ್ತಿಕ್ಕಲಾಯಿತು. ಪಂಜಾಬಿ ಭಾಷೆ ಮರೆಯಾಗತೊಡಗಿತು. ವಿಭಜನೆಯ ಸಂದರ್ಭದಲ್ಲಿ ಪ್ರತಿ ಶತ ೧೪ ರಷ್ಟಿದ್ದ ಹಿಂದೂಗಳ ಸಂಖ್ಯೆ ಪ್ರತಿ ಶತ ೨ ಕ್ಕೆ ಇಳಿಯಿತು. ಸಿಂದ್ ನಲ್ಲಿದ್ದ ಉರ್ದು ಏತರ ಪತ್ರಿಕೆಗಳು ಬಾಗಿಲು ಮುಚ್ಚಿದವು. ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಪಾಕಿಸ್ಥಾನ ಸುಳ್ಳನ್ನೇ ಸತ್ಯ ಎಂದು ವಿದ್ಯಾರ್ಥಿಗಳಿಗೆ ಕಲಿಸತೊಡಗಿತು. ಇಡೀ ದೇಶ ಧರ್ಮ ಮತ್ತು ಸುಳ್ಳಿನ ಮೇಲೆ ನಿಂತು ಬಿಟ್ಟಿತು. ಧರ್ಮ ಪಾಕಿಸ್ಥಾನಿಯರನ್ನು ಒಂದು ಮಾಡುವುದಕ್ಕೆ ಬದಲಾಗಿ ಒಡೆಯತೊಡಗಿತು. ಸುನ್ನಿ ಮುಸ್ಲಿಂ ರ ಪ್ರಾಭಲ್ಯ ಇರುವ ಪಾಕಿಸ್ಥಾನದಲ್ಲಿ ಅಹಮದೀಯರು ಮತ್ತು ಶಿಯಾ ಮುಸ್ಲಿಂ ರ ಅತಂತ್ರರಾದರು.
ಈಗ ಪಾಕಿಸ್ಥಾನ ಪೇಲ್ಡ್ ಸ್ಟೇಟ್. ಇದನ್ನು ಕನ್ನಡದಲ್ಲಿ ಸೋತ ಪ್ರಭುತ್ವ ಎಂದು ಹೇಳಬಹುದೇನೋ. ಪಾಕಿಸ್ಥಾನ ಈ ರೀತಿ ಅವನತಿಯ ಹಂತಕ್ಕೆ ಬಂದು ನಿಂತಿರುವುದಕ್ಕೆ ಏಕ ಸಂಸ್ಕೃತಿ ಮತ್ತು ಧರ್ಮ ಸ್ಥಾಪನೆಗೆ ನಡೆಸಿದ ನಡೆಸುತ್ತಿರುವ ಯತ್ನವೇ ಕಾರಣವಾಗಿದೆ.
ಇದನ್ನೆಲ್ಲ ನೋಡಿದ ಮೇಲೆ ನನಗೆ ಭಾರತದ ಬಗ್ಗೆ ಆತಂಕ ಪ್ರಾರಂಭವಾಗಿದೆ. ಪಾಕಿಸ್ಥಾನದಲ್ಲಿ ಪ್ರಯೋಗ ಮಾಡಿ ಆ ದೇಶವನ್ನು ನಾಶಪಡಿಸಿದ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಏಕಮುಖಿ ಸಂಸ್ಕೃತಿಯ ತಾತ್ವಿಕತೆಯನ್ನು ನಮ್ಮಲ್ಲಿಯೂ ಅನುಷ್ಠಾನಕ್ಕೆ ತರಲು ಸಂಘ ಪರಿವಾರ ಯತ್ನ ನಡೆಸುತ್ತಿದೆ. ನಾವೆಲ್ಲ ಹಿಂದೂ ಎಂದು ಹೇಳುವ ಮೂಲಕ ಹಿಂದೂ ಅಲ್ಲದವರು ನಮ್ಮವರಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಹಾಗೆ ಇಂಡಿಯಾದ ಬಹುಮುಖಿ ಸಂಸ್ಕೃತಿಯನ್ನು ನಾಶಪಡಿಸಲಾಗುತ್ತಿದೆ. ಸಂಘ ಪರಿವಾರದವರ ಆಹಾರ ಪದ್ಧತಿ ಮಾತ್ರ ಈ ದೇಶದಲ್ಲಿ ಇರಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಆಹಾರ, ನಂಬಿಕೆ,, ನಡವಳಿಕೆ ಎಲ್ಲದರಲ್ಲಿಯೂ ಏಕರೂಪತೆ ತರಲು ಹೊರಟವರು ಪಾಕಿಸ್ಥಾನವನ್ನು ನಾಶಪಡಿಸಿದವರಿಗಿಂತ ಭಿನ್ನವಾಗಿ ನನಗೆ ಕಾಣುವುದಿಲ್ಲ.

ಈಗ ನಮ್ಮ ದೇಶವನ್ನು ಉಳಿಸಿಕೊಳ್ಳುವ ತುರ್ತು ನಮ್ಮ ಮುಂದಿದೆ. ಹೀಗೆ ಹೇಳುವಾಗ ದೇಶ ಎಂದರೇನು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಬೇಕು. ದೇಶ ಎಂದರೆ ಅದು ಕೇವಲ ಭೂ ಭಾಗವಲ್ಲ.  ದೇಶ ಎಂದರೆ ಭೂ ಭಾಗದದ ಜೊತೆಗೆ ಅಲ್ಲಿನ ಜನ, ಅವರ ಸಂಸ್ಕೃತಿ ನಂಬಿಕೆ, ಪರಂಪರೆ ಎಲ್ಲವೂ ಆಗಿದೆ. ಇದೆಲ್ಲವೂ ಸೇರಿ ಅಗಿರುವ ಒಟ್ಟೂ ಮೊತ್ತವೇ ದೇಶ.  ಇಲ್ಲಿನ ವಿಭಿನ್ನ ಪರಂಪರೆ, ನಂಬಿಕೆ, ಆಹಾರ ಪದ್ಧತಿ ಎಲ್ಲವನ್ನೂ ಉಳಿಸಿಕೊಂಡರೆ ಮಾತ್ರ ದೇಶ ಉಳಿಯುತ್ತದೆ.  ಇಲ್ಲದಿದ್ದರೆ ದೇಶ ಉಳಿಯಲಾರದು. ಕೇವಲ ಜನರೇ ಇಲ್ಲದೆ ಭೂ ಭಾಗ ಮಾತ್ರ ಉಳಿಯಬಹುದು. ಹೀಗೆ ಉಳಿದ ಭೂ ಭಾಗವನ್ನು ಭಾರತ ಮಾತೆ ಎಂದು ಪೂಜೆ ಮಾಡಬಹುದು. ಹೀಗೆ ಪೂಜೆ ಮಾಡುವ ಭೂಪಟ ಮನೆಯ ಗೋಡೆಯ ಮೇಲೆ ಹಾಕುವ ಕ್ಯಾಲೆಂಡರ್ ಆಗಿ ಮಾತ್ರ ಉಳಿಯುತ್ತದೆ.  ಅದು ದೇಶವಾಗಲಾರದು. ಈಗ ದೇಶ ಭಕ್ತರು ಮಾಡುತ್ತಿರುವ ಕೆಲಸ ಇದೇ. ಅವರು ಈ ದೇಶದಲ್ಲಿ ಆಂತರಿಕ ಶಕ್ತಿ ಸೌಂದರ್ಯವನ್ನು ನಾಶಪಡಿಸಿ ಅದನ್ನು ಗೋಡೆಯ ಮೇಲಿನ ಪಟವನ್ನಾಗಿ ಮಾಡುತ್ತಿದ್ದಾರೆ. ಅದಕ್ಕೆ ಊದು ಬತ್ತಿ ಹಚ್ಚಿ ಮಂಗಳಾರತಿ ಮಾಡುತ್ತಿದ್ದಾರೆ..


Wednesday, August 10, 2016

ಜ್ಯೋತಿ ಲಕ್ಷ್ಮಿ; ನೀನು ನನಗೆ ಏನಾಗಿದ್ದೆ ?

ಇದೆಲ್ಲ ಹೇಗೆ ಪ್ರಾರಂಭಿಸಬೇಕು ಗೊತ್ತಿಲ್ಲ. ಆದರೆ ಒಂದಂತೂ ನಿಜ.
ನನ್ನ ತಲೆ ಮಾರಿನ ಬಹಳಷ್ಟು ಯುವಕರಿಗೆ, ನಮಗೆ ಯೌವನ ಬಂದಿದೆ ಎಂಬ ಅರಿವು ಮೂಡಿದ್ದೇ ಆಕೆಯಿಂದ. ಅವಳ ನರ್ತನದಲ್ಲಿನ ಮಾದಕತೆ ನಾವು ಯುವಕರಾಗುತ್ತಿದ್ದೇವೆ ಎಂದು ಅನ್ನಿಸುವುದಕ್ಕೆ ಕಾರಣವಾಗಿತ್ತಲ್ಲ. ಎಂದೂ ಹೆಣ್ಣಿನ ಬತ್ತಲೆಯ ಮೈಯನ್ನು ನೋಡದ ನನ್ನಂಥವರಿಗೆ ಆಕೆ ಹೆಣ್ಣಿನ ನಿಗೂಢತೆಯನ್ನು ನಮ್ಮೆದುರು ಕಳಚಿಡುವ ಹಾಗೆ  ಕಾಣುತ್ತಿತ್ತಲ್ಲ ?
ಅವಳು ಬೇರೆ ಯಾರೂ ಅಲ್ಲ. ನಿನ್ನೆ ಅಸು ನೀಗಿದ ಜ್ಯೋತಿ ಲಕ್ಷ್ಮಿ. ಆಕೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲೂ ನಟಿಸಿದ ನಟಿ. ಕ್ಯಾಬರೆ ನರ್ತನ ಮಾಡುತ್ತಿದ್ದವಳು. ಇಷ್ಟೇ ಹೇಳಿದರೆ ಜ್ಯೋತಿ ಲಕ್ಷ್ಮಿ ಬಗ್ಗೆ ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಅವಳು ನಮ್ಮ ಎದೆಯನ್ನು ಹುಟ್ಟಿ ಹಾಕುತ್ತಿದ್ದ ಪ್ರೀತಿ ಪ್ರೇಮ ಮತ್ತು  ಕಾಮದ ಕಿಚ್ಚು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಆಕೆ ಯುವಕರ ಪಾಲಿಗೆ ಎಲ್ಲವೂ ಆಗಿದ್ದಳು. ಆಕೆಯ ನೃತ್ಯವನ್ನು ನೋಡುವುದಕ್ಕೆ ಬಹಳಷ್ಟು ಯುವಕರು ಸಿನಿಮಾ ಹಾಲ್ ಗೆ ಹೋಗುತ್ತಿದ್ದರು. 
ಜ್ಯೋತಿ ಲಕ್ಷ್ಮಿಯ ಕ್ಯಾಬರೆ ಡ್ಯಾನ್ಸ್ ಮಾಡುವಾಗ ಆಕೆಯ ನೃತ್ಯಕ್ಕ್ಎ ಹಿನ್ನೆಲೆ ಗಾಯನ ಮಾಡುತ್ತಿದ್ದವರು ಎಲ್. ಆರ್. ಈಶ್ವರಿ.  ಜ್ಯೋತಿ ಲಕ್ಷಿಯ ದೇಹದ ಚಲನೆ ಮತ್ತು ಎಲ್. ಆರ್. ಈಶ್ವರಿಯ ಧ್ವನಿಯ ನಡುವೆ ಯಾವ ರೀತಿಯ ಹೊಂದಾಣಿಕೆ ಇತ್ತೆಂದರೆ ಹಾಡುವವರು ಮತ್ತು ನೃತ್ಯ ಮಾಡುವವರು ಬೇರೆ ಬೇರೆ ಎಂದು ಅನ್ನಿಸುತ್ತಲೇ ಇರಲಿಲ್ಲ.  ಅಂತಹ ಹೊಂದಾಣಿಕೆ ಅದು.  ಎಲ್. ಆರ್ ಈಶ್ವರಿ ಕಣ್ಣು ಕತ್ತಿಯ ಅಂಚು ಎಂದು ಹಾಡಿದರೆ ಜ್ಯೋತಿ ಲಕ್ಷಿಯ ಕಣ್ಣುಗಳು ಕತ್ತಿಯ ಹಾಗೆ ಬಂದು ಯುವಕರ ಹೃದಯವನ್ನೇ ಇರಿದು ಬಿಡುತ್ತಿದ್ದವು.. ಈಶ್ವರಿಯ ಹಾಡಿನಲ್ಲಿದ್ದ ಮಾದಕತೆ ಜ್ಯೋತಿ ಲಕ್ಷ್ಮಿಯ ನರ್ತನದಲ್ಲಿ ಪುನರ್ ಹುಟ್ಟು ಪಡೆದ ಭಾವ ಪರವಶತೆಯನ್ನು ಮೂಡಿಸಿ ಬಿಡುತ್ತಿತ್ತು..
ಆ ಕಾಲ ಹಾಗಿತ್ತು. ಈಗಿನಂತೆ ಹೆಣ್ಣು ಗಂಡಿನ ಸಂಬಂಧವನ್ನು ಬಿಚ್ಚಿಡುವ ಸಾಹಿತ್ಯ ಸಮೃದ್ಧವಾಗಿ ಸಿಗುತ್ತಿರಲಿಲ್ಲ. ಹಾಗೆ ಸಿನಿಮಾಗಳಲ್ಲೂ ರಸಿಕರ ಮನಸ್ಸು ತೃಪ್ತಿ ಪಡಿಸುವುದಕ್ಕಾಗಿಯೇ ಕ್ಯಾಬರೆ ಡ್ಯಾನ್ಸರ್ ಇರುತ್ತಿದ್ದರು. ಚಿತ್ರದ ನಾಯಕ ಯಾವುದೋ ಕಳ್ಳನನ್ನೋ ಗೂಂಡಾನನ್ನೋ ಬಡಿಯುವುದಕ್ಕಾಗಿ ಬಾರ್ ಗೆ ಹೋದಾಗ ಅಲ್ಲಿ ಒಂದು ಕ್ಯಾಬರೆ ಡ್ಯಾನ್ಸ್ ಇರುತ್ತಿದ್ದುದು ಮಾಮೂಲು. ಡ್ಯಾನ್ಸ್ ಮುಗಿದ ಮೇಲೆ ನಾಯಕನ ಫೈಟ್. ಹೀಗೆ ಕೆಲವೇ ನಿಮಿಷಗಳಲ್ಲಿ ಕ್ಯಾಬರೆ ಡ್ಯಾನ್ಸರ್ ಗಳ ಕೆಲಸ ಮುಗಿದು ಹೋಗುತ್ತಿತ್ತು. ಜ್ಯೋತಿ ಲಕ್ಷ್ಮಿ ಯಂತಹ ಕ್ಯಾಬರೆ ಡ್ಯಾನ್ಸರ್ ಚಿತ್ರ ಕಥೆಯ ಒಂದು ಭಾಗವಾಗಿ ಇರುತ್ತಿದ್ದ ಸಂದರ್ಭ ತುಂಬಾ ಕಡಿಮೆ. ಉಳಿದಂತೇ ಕೆಲವೇ ನಿಮಿಷಗಳಲ್ಲಿ ತಮ್ಮ ನರ್ತನವನ್ನು ಪ್ರದರ್ಶಿಸಿ ಅವರು ಮರೆಯಾಗುತ್ತಿದ್ದರು. ಅವರಿಗೆ ಆಗ ಸಿಗುತ್ತಿದ್ದ ಸಂಭಾವನೆ ಸಾವಿರಕ್ಕೆ ಹತ್ತಿರ ಅಷ್ಟೇ. ಆದರೆ ಕ್ಯಾಬರೆ ಡ್ಯಾನ್ಸ್ ಅನ್ನು ಬಿಟ್ಟು ಚಿತ್ರವನ್ನು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
ಕ್ಯಾಬರೆ ಡ್ಯಾನ್ಸರ್ ಗಳಿಗೆ ಅಂತಹ ಗೌರವ ಕೂಡ ಇರಲಿಲ್ಲ. ಅವರನ್ನು ಚಿತ್ರ ರಂಗ ಮತ್ತು ಚಿತ್ರ ರಸಿಕರು ನೋಡುತ್ತಿದ್ದ ರೀತಿ ಕೂಡ ಬೇರೆಯಾಗಿತ್ತು. ಸುಮಾರು ಎರಡು ಮೂರು ದಶಕಗಳ ಕಾಲ ಭಾರತೀಯ ಚಿತ್ರ ರಂಗದಲ್ಲಿ ಕ್ಯಾಬರೆ ನರ್ತಕಿಯರು ಮಿಂಚಿದರು. ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಯತ್ನ ನಡೆಸಿದರು. ಆದರೆ ಕಾಲ ಕ್ರಮದಲ್ಲಿ ಎಲ್ಲವೂ ಬದಲಾಗತೊಡಗಿತು. ಅರವತ್ತು ಎಪ್ಪತ್ತರ ದಶಕಗಳಲ್ಲಿ ನಾಯಕಿ ಭಾರತೀಯ ಮಹಿಳೆಯ ಪ್ರತಿ ರೂಪದಂತೆ ಇದ್ದಳು. ಆಕೆ ಎಂದೂ ತಲೆ ಎತ್ತಿ ನೋಡುತ್ತಿರಲಿಲ್ಲ.  ನಾಯಕ ಪ್ರೇಮ ನಿವೇದನೆ ಮಾಡಿದಾಗ ನಾಯಕಿ ತನ್ನ ಕಾಲ ಬೆರಳಿನಿಂದ ನೆಲ ಕೆರದಳೆಂದರೆ ಆಕೆಗೆ ಪ್ರೀತಿಯ ಬಗ್ಗೆ ಒಲವು ಇದೆ ಎಂದೇ ಆರ್ಥ. ಸಾಧಾರಣವಾಗಿ ಎಲ್ಲ ಚಿತ್ರ ನಿರ್ದೇಶಕರು ನಾಯಕ ನಟಿ ನೆಲ ಕೆರೆಯುವ ಕ್ಲೋಸ್ ಅಪ್ ಶಾಟ್ ಹಾಕುತ್ತಿದ್ದರು. ಅಂದಿನ ನಾಯಕಿ ಹೀಗೆ ಇರಬೇಕು ಎನ್ನುವ ನಂಬಿಕೆಯ ಕಾಲದಲ್ಲಿ ಹೆಣ್ಣಿನ ಮೈಯಂದವನ್ನು ತೋರಿಸುವುದಕ್ಕೆ ಕ್ಯಾಬರೆ ಡ್ಯಾನ್ಸರ್ ಗಳು ಬೇಕಾಗಿದ್ದರು. ಆದರೆ ಎಂಬತ್ತರ ದಶಕದ ಮಧ್ಯ ಭಾಗದ ಹೊತ್ತಿಗೆ ಇದೆಲ್ಲ ಬದಲಾಯಿತು. ಸೀರೆ ಉಟ್ಟು ನೆಲ ಕೆರೆಯುತ್ತಿದ್ದ ನಾಯಕಿಯರು ಸಾವಕಾಶ ಸೀರೆಯಿಂದ ತುಂಡು ಸ್ಕರ್ಟ್ ವರೆಗೆ ಬಂದು ನಿಂತಿದ್ದರು. ಇದನ್ನೂ ಜ್ಯೂಲಿ ಹಿಂದಿ ಸಿನಿಮಾದಲ್ಲಿ ನಾವು ಗಮನಿಸಬಹುದು, ಜ್ಯೂಲಿಯ ನಾಯಕಿಯಾಗಿದ್ದ ಚಟ್ಟಕ್ಕಾರಿ ಲಕ್ಷ್ಮಿ ತನ್ನ ಸುಂದರ ತೊಡೆಗಳನ್ನು ಪ್ರದರ್ಶಿಸಿದಳು. ಸಾವಕಾಶವಾಗಿ ನಟಿಯರೇ ಕ್ಯಾಬರೆ ಡ್ಯಾನ್ಸರ್ ಕೆಲಸವನ್ನೂ ಮಾಡಲು ಪ್ರಾರಂಭಿಸಿದರು. ಕಾಲಕ್ರಮೇಣ ಕ್ಯಾಬರೆ ನರ್ತಕಿಯರ ಬೇಡಿಕೆ ಕಡಿಮೆಯಾಯಿತು. ಅವರೆಲ್ಲ ಸಾವಕಾಶವಾಗಿ ಮರೆಯಾಗತೊಡಗಿದರು;  ಸಿನಿಮಾಗಳಲ್ಲಿ ಐಟಂ ಸಾಂಗ್ಸ್ ಬಂದ ಮೇಲೆ ಕ್ಯಾಬರೆ ಡ್ಯಾನ್ಸರ್ ಮತ್ತು ನಾಯಕಿಯರ ನಡುವಿನ ವ್ಯತ್ಯಾಸವೇ ಉಳಿಯಲೇ ಇಲ್ಲ.;
ಜ್ಯೋತಿ ಲಕ್ಷ್ಮಿ, ಜಯಮಾಲಿನಿ. ಹಲಂ ಮೊದಲಾದ ಕ್ಯಾಬರೆ ಡ್ಯಾನ್ಸರ್ ಗಳಿಗೆ ಬದುಕುವುದಕ್ಕೆ ಬೇರೆ ಮಾರ್ಗವೇ  ಉಳಿಯಲಿಲ್ಲ. ಅವರೆಲ್ಲರ ಬದುಕು ದುರಂತದಲ್ಲಿ ನೋವಿನಲ್ಲಿ, ಅಸಹಾಯಕತೆಯಲ್ಲಿ ಕಳೆದು ಹೋಗುವಂತಾಯಿತು.  ಅವರೆಲ್ಲ ಅನಾರೋಗ್ಯ ಪೀಡಿತರಾಗಿ ಖರ್ಚಿಗೆ ಹಣ ಇಲ್ಲದೇ ತಮ್ಮ ಬದುಕನ್ನು ದೂಡುವಂತಾಯಿತು. ಹೊಸ ತಲೆಮಾರಿನವರಿಗೆ ಇವರೆಲ್ಲ ಯಾರು ಎಂಬುದು ತಿಳಿಯದಿದ್ದಾಗ ಇವರೆಲ್ಲ ಇನ್ನಷ್ಟು ಹತಾಶೆಯನ್ನು ಅನುಭವಿಸುವಂತಾಯಿತು. ಇಂತಹ ಮನಸ್ಥಿತಿಯಲ್ಲೇ ಜ್ಯೋತಿ ಲಕ್ಷ್ಮಿಯೂ ಇಹಲೋಕ ಯಾತ್ರೆಯನ್ನು ಮುಗಿಸಿದಳು. ಆಕೆಗೆ ಸಾಯುವ ವಯಸ್ಸು ಆಗಿರಲಿಲ್ಲ.
ನನ್ನ ತಲೆ ಮಾರಿನವರಿಗೆ ಜ್ಯೋತಿ ಲಕ್ಷ್ಮಿ ಕಾಡಲೇ ಬೇಕು. ಇಲ್ಲ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ. ಯಾಕೆ ಗೊತ್ತಾ ? ಗಂಡಸರಿಗೆಲ್ಲ ಒಂದು ಅಬ್ಸೆಷನ್ ಇರುತ್ತದೆ. ಅದು ತಾವು ಕಣ್ಣು ಬಿಟ್ಟಾಗ ಮೊದಲು ಏನನ್ನು ನೋಡುತ್ತಾರೆಯೋ ಅದರ ಅಬ್ಸೆಷನ್.  ಮಗು ಕಣ್ಣು ಬಿಟ್ಟಾಗ ಮೊದಲು ನೋಡುವುದು ಅಮ್ಮನ ಎದೆಯನ್ನು. ಅಮ್ಮನ ಹಾಲು ಕುಡಿಯುವ ಸುಮಾರು ಒಂದು ವರ್ಷದ ಕಾಲ ಮಗು ತಾಯಿಯ ಎದೆಗೆ ಅಂಟಿಕೊಂಡಿರುತ್ತದೆ. ಅದು ಆ ಮಗುವಿನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದು ಬಿಡುತ್ತದೆ. ಬದುಕಿನ ಕೊನೆಯ ಉಸಿರು ಬಿಡುವ ವರೆಗೂ ಗಂಡಸರಿಗೆ ಅದು ಕಾಡುತ್ತಲೇ ಇರುತ್ತದೆ. ಹೆಣ್ಣು ಮಗುವಿಗೆ ಹೇಗೆ ಎನ್ನುವುದು ನನಗೆ ತಿಳಿಯದು.
ನಾವೆಲ್ಲ ಶಾಲಾ ಮತ್ತು ಹೈಸ್ಕೂಲ್ ದಿನಗಳಲ್ಲಿ ನೋಡುತ್ತಿದ್ದ ಸಿನಿಮಾಗಳಲ್ಲಿ ಜ್ಯೋತಿ ಲಕ್ಷ್ಮಿ ಇದ್ದೇ ಇರುತ್ತಿದ್ದಳು. ಅವಳು ನರ್ತನ ಮತ್ತು ಅಂಗಾಂಗ ಪ್ರದರ್ಶನ ನಮ್ಮ ಮನಸ್ಸುಗಳಲ್ಲಿ ಬಾಲ್ಯದ ಅನುಭವವನ್ನು ಮತ್ತೆ ಚಿಗುರಿಸುತ್ತಿತ್ತು. ಸೆಳೆತ ಹೆಚ್ಚುತ್ತಿತ್ತು.; ನಮಗೆಲ್ಲ ನಿಗೂಡವಾಗಿದ್ದ ಸೃಷ್ಟಿ ಕ್ರಿಯೆಯ ಮೂಲವಾಗಿದ್ದ ಹೆಣ್ಣು  ಕಾಡುವ ರೀತಿಯ ಅನುಭವ ಬಂದಿದ್ದು ಜ್ಯೋತಿ ಲಕ್ಷ್ಮಿ  ಇಂದಲೇ ಎಂದೂ ನನಗೆ ಅನ್ನಿಸುತ್ತದೆ.  ನಮಗೆ ಅಮ್ಮನಾಗಿ ಹೆಂಡತಿಯಾಗಿ, ಗೆಳತಿಯಾಗಿ ಅಜ್ಜಿಯಾಗಿ,  ಇನ್ನೂ ಏನೇನೂ ಆಗಿ ಕಾಡುವ ಹೆಣ್ಣು ಜೀವ ಪಡೆದುಕೊಳ್ಳುವ ವಿವಿಧ ರೂಪಗಳು ಆಕೃತಿಗಳು ನಮ್ಮೆಲ್ಲ ಕ್ರಿಯಾಶೀಲತೆಗೆ ಮೂಲವಾಗಿರಬಹುದೆ ? ಆಕೆ ಇಲ್ಲದಿದ್ದರೆ ಎಲ್ಲ ಗಂಡು ಜೀವಿಗಳ ಕ್ರಿಯಾಶೀಲತೆ ನಾಶವಾಗಿ  ಹೋಗುತ್ತಿತ್ತೆ ? ಇರಬಹುದು. 
ನನಗೆ ಯಾರೋ ಹೇಳಿದೆ ಮಾತು ನೆನಪಾಗುತ್ತದೆ. ಆತ ಒಬ್ಬ ಜ್ಯೊತಿಷಿಯೋ ಅಲ್ಲ, ಒಬ್ಬ ಮಾನಸಿಕ ತಜ್ನನೋ ಯಾರೋ ಇರಬೇಕು. ಆತ ಹೇಳಿದ್ದು, ನಿನ್ನ ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೆಣ್ಣು. ಈ ಮಾತು ನನಗೆ ನಿಜ ಅನ್ನಿಸುತ್ತದೆ. ನನಗೆ ತುಂಬಾ ಬೇಸರವಾದಾಗ  ಅಥವಾ ಅನಾಥ ಅನ್ನಿಸಿದಾಗ ನಾನು ನನ್ನ ಅಮ್ಮನಿಗೆ ದೂರವಾಣಿ ಕರೆ ಮಾಡುತ್ತೇನೆ. ಆಥವಾ ನನ್ನದೆಲ್ಲವನ್ನೂ ನಾನು ಹಂಚಿಕೊಳ್ಳುವುದು ಹೆಣ್ಣು ಜೀವಗಳ ಜೊತೆ ಮಾತ್ರ,  ನನಗೆ ಹೆಣ್ಣು ಜೀವಗಳ ಜೊತೆ ಇದ್ದಾಗ ಮಾತ್ರ ಸೇಪ್ ಎಂದು ಅನ್ನಿಸುತ್ತದೆ. ಅದು ಅಮ್ಮ ನನಗೆ ನೀಡಿದ ಸುರಕ್ಷತೆಯ ಭಾವದಿಂದ ಪ್ರೇರಿತವಾಗಿದ್ದರೂ ಇರಬಹುದು. ನಾನು ಎಲ್ಲ ಹೆಣ್ಣು ಮಕ್ಕಳಲ್ಲಿ ಅಮ್ಮನನ್ನು ಹುಡುಕುತ್ತೇನೆ. ಗೆಳತಿಯನ್ನು ಹುಡುಕುತ್ತೇನೆ.. ಅಮ್ಮನ ಬಿಸಿ ಅಪ್ಪುಗೆ ಮತ್ತು ಸಾಂತ್ವನ ನನ್ನನ್ನು ಇದು ವರೆಗೆ ಉಳಿಸಿಕೊಂಡು ಬಂದಿದೆ.
ನನಗೆ ಜ್ಯೋತಿ ಲಕ್ಷ್ಮಿಯ ನರ್ತನ  ಮಾದಕ ಪ್ರಪಂಚದ  ಪರಿಚಯ ಮಾಡಿಕೊಟ್ಟಿತು. ಹಾಗೆ ನಾನು ಯುವಕ ಎಂಬುದು ಗೊತ್ತಾಗಿದ್ದು ಆಕೆಯ ನರ್ತನದ ಮೂಲಕವೇ.  ನನ್ನ ಒಳಗೆ ಇದ್ದ ಕಾಮ ಜಾಗ್ರತವಾಗಿದ್ದೂ ಇದೇ ಜ್ಯೋತಿ ಲಕ್ಷ್ಮಿಯ ಡಾನ್ಸ್ ನೋಡಿಯೇ. ಹೀಗಾಗಿ ಆಕೆ ಸತ್ತಾಗ ನನ್ನಲ್ಲಿ ಮೂಡಿದ್ದು ಇದೇ ವಿಚಿತ್ರ ಭಾವ. ಆಕೆ ಮತ್ತು ನನ್ನ ನಡುವಿನ ಸಂಬಂಧ ಎಂಥಹದು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಕೆ ತಾಯಿಯಾಗಿದ್ದಳೇ, ನನ್ನನ್ನು ಕಾಮ ಮೂಡಲು ಆಕೆಯೇ ಪ್ರೇರಣಯೇ ನನಗೆ ಗೊತ್ತಿಲ್ಲ.

ಆದರ‍ೇ ಆಕೆಯ ಸಾವಿನ ಸುದ್ದಿ ನನನಗೆ ಬೇಸರವನ್ನು ಉಂಟು ಮಾಡಿದ್ದು ನಿಜ. ಆಕೆ ಸಾಯಬಾರದಿತ್ತು.

Tuesday, July 19, 2016

ಗಣಪತಿ ಆತ್ಮಹತ್ಯೆಯ ಸುತ್ತ ಮುತ್ತ: ಸಾವಿನಿಂದಲೂ ಲಾಭ ಪಡೆದವರು ಯಾರು ?

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಡಿ ವೈ ಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಅಂಕ ಮುಗಿದಿದೆ. ಜಾರ್ಜ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳು ತಾವು ನಡೆಸುತ್ತಿದ್ದ ಹೋರಾಟಕ್ಕೆ ಜಯ ಲಭಿಸಿತು ಎಂದು ಬೀಗಬಹುದಾಗಿದೆ. ಹಾಗೆ ಜಾರ್ಜ್ ರಾಜೀನಾಮೆಗೆ ಎಸ್. ಎಮ್. ಎಸ್ ಮತ್ತು ಪೋನ್ ಆಂದೋಲನ ನಡೆಸಿದ್ದ ಮಾಧ್ಯಮಗಳು ಇದು ತಮಗೆ ಲಭಿಸಿದ ಜಯ ಎಂದು ಹೆಮ್ಮೆ ಪಡಬಹುದು. ಹಾಗೆ ನಾವೇ ಜಾರ್ಜ್ ಅವರ ರಾಜೀನಾಮೆ ಕೊಡಿಸಿದ್ದು ಎಂದು ಹೇಳಿಕೊಳ್ಳಬಹುದು. ಅದನ್ನೇ ಇನ್ನು ನಾಲ್ಕಾರು ದಿನ ತಮ್ಮ ಮಾಧ್ಯಮದಲ್ಲಿ ಪ್ರಚಾರ ಮಾಡಿಕೊಳ್ಳಬಹುದು. ಒಂದು ಆತ್ಮಹತ್ಯೆ ಎಂಬ ಸ್ವಯಂ ತಂದುಕೊಂಡ ಸಾವು ಯಾರು ಯಾರಿಗೋ ಲಾಭವನ್ನು ತಂದುಕೊಡಬಹುದು.
D ವೈ ಎಸ್ ಪಿ ಗಣಪತಿ ಮಡಿಕೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಈ ಪ್ರಕರಣ ಭಾವನಾತ್ಮಕ ತಿರುವು ಪಡೆದುಕೊಂಡಿತು. ನಂತರದ ದಿನಗಳಲ್ಲಿ ಸಾರ್ವಜನಿಕರ ಭಾವನೆ ಗಣಪತಿ ಅವರ ಪರವಾಗಿ ರೂಪಗೊಂಡಿತು. ಇದರಲ್ಲಿ ಮಾಧ್ಯಮ ಪ್ರಮುಖ ಪಾತ್ರ ಒಹಿಸಿತು. ಆದರೆ ಇಡೀ ಪ್ರಕರಣದಲ್ಲಿ ತನಿಖೆ ನಡೆಯುವುದಕ್ಕೆ ಬದಲಾಗಿ ತೀರ್ಮಾನಗಳು ಹೊರಬಂದವು. ಮಾಧ್ಯಮಗಳು ನೀಡಿದ ತೀರ್ಪನ್ನು ಸಾರ್ವಜನಿಕರು ಒಪ್ಪಿಕೊಂಡರು. ಆದರೆ ಗಣಪತಿ ನೀಡಿದ ಹೇಳಿಕೆ, ಆ ಹೇಳಿಕೆಯ ಬಗ್ಗೆ ಇರಬೇಕಾದ ಸಂಶಯ ಯಾವುದೂ ಹೊರಕ್ಕೆ ಬರಲೇ ಇಲ್ಲ. ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡ ಪ್ರತಿ ಪಕ್ಷಗಳಾಗಲೀ, ಈ ಬಗ್ಗೆ ಭಾವನಾತ್ಮಕ ತೀರ್ಪು ನೀಡಿದ ಮಾಧ್ಯಮವಾಗಲೀ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗಲೇ ಇಲ್ಲ. ಎಲ್ಲರೂ ಗಣಪತಿ ಅವರ ಹೇಳಿಕೆಯನ್ನೇ ಸತ್ಯ ಎಂದುಕೊಂಡು ತೀರ್ಪು ನೀಡಿದ ಮೇಲೆ ಆರೋಪ ಹೊತ್ತವರು ಹೊಣೆ ಹೊತ್ತುಕೊಳ್ಳದೇ ಬೇರೆ ದಾರಿ ಉಳಿಯಲೇ ಇಲ್ಲ.
ಈಗ ಗಣಪತಿ ಅವರು ಆತ್ಮಹತ್ಯೆಗೆ ಮೊದಲು ನೀಡಿದ ಹೇಳಿಕೆಯನ್ನೇ  ನೋಡೋಣ. ಇಂತಹ ಹೇಳಿಕೆಯೊಂದನ್ನು ಮಾಧ್ಯಮದ ಮುಂದೆ ಯಾವುದೇ ವ್ಯಕ್ತಿ ನೀಡಿದಾಗ ಆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ ವಿವರ ಪಡೆಯಬೇಕಾದ್ದು ಮಾಧ್ಯಮದ ಕರ್ತವ್ಯ. ಯಾವಾಗ ಗಣಪತಿ ನನಗೇ ಏನಾದರೂ ಆದರೆ ಅದಕ್ಕೆ ಈ ಮೂವರೇ ಕಾರಣ ಎಂದಾಗ ಮಾಧ್ಯಮದವರಾದ ನಾವು ಕೇಳಬೇಕಾದ ಪ್ರಶ್ನೆ ನಿಮ್ಮ ಜನರಲ್ ಆದ ಈ ಹೇಳಿಕೆಗೆ ಇರುವ ಸಾಕ್ಶ್ಯ ಯಾವುದು ? ಎಂದು.  ನಿಮಗೆ ಈ ಮೂವರು ನೀಡಿದ ಕಿರುಕುಳದ ಬಗ್ಗೆ ವಿವರಣೆ ನೀಡಿ. ಯಾವಾಗ ಯಾವ ಪ್ರಕರಣದಲ್ಲಿ ನಿಮಗೆ ಕಿರುಕುಳ ನೀಡಲಾಯಿತು ? ಎಲ್ಲಿ ಕಿರುಕುಳ ನೀಡಲಾಯಿತು ? ನಿಮಗೆ ನಾನ್ ಎಕ್ಸಿಕ್ಯೂಟಿವ್ ಹುದ್ದೆ ನೀಡಿದ್ದೇ ಕಿರುಕುಳವೆ ?  ಈ ಬಗ್ಗೆ ಈ ಮೊದಲು ಮೇಲಾಧಿಕಾರಿಗಳಾಗಲೀ, ಸರ್ಕಾರಕ್ಕಾಗಲಿ ದೂರು ನೀಡಿದ್ದೀರಾ ? ದೂರು ನೀಡದಿದ್ದರೆ ಯಾಕೆ ನೀಡಿಲ್ಲ ? ಅದಕ್ಕಿರುವ ಕಾರಣಗಳಾವವು ?
ಈ ರೀತಿಯ ಯಾವ ಪ್ರಶ್ನೆಗಳನ್ನು ನಾವು ಕೇಳಲಿಲ್ಲ. ಅವರು ಹೇಳಿದ್ದನ್ನು ಕೇಳಿಸಿಕೊಂಡು ಗಣಪತಿ ಆತ್ಮಹತ್ಯೆ ಮಾಡಿಕೊಂಡ ಮೇಳೆ ಪ್ರಸಾರ ಮಾಡಿದವು. ಜೊತೆಗೆ ಇದು ಡಾಯಿಂಗ್ ಡಿಕ್ಲರೇಷನ್ ಹೌದೇ ಅಲ್ಲವೇ ಎನ್ನುವ ಬಗ್ಗೆಯೂ ನಾವು ಚರ್ಚೆ ಮಾಡಲಿಲ್ಲ. ಗಣಪತಿ ಅವರ ಪೂರ್ವಾಪರದ ಬಗ್ಗೆ ಯೋಚಿಸಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರೊಬ್ಬ ಪ್ರಾಮಾಣಿಕ ಅಧಿಕಾರಿ ಎಂದು ಸರ್ಟಿಫಿಕೆಟ್ ನೀಡಿಬಿಟ್ಟೆವು. ಕಿರುಕುಳ ತಾಳಲಾರದೇ ಪ್ರಾಮಾಣಿಕ ಅಧಿಕಾರಿಯ ಆತ್ಮಹತ್ಯೆ ಎಂದು ಜನರ ಭಾವನೆಗಳ ಕೆರಳಿಸಿಬಿಟ್ಟೆವು. ದಿನದಿಂದ ದಿನಕ್ಕೆ ಭಾವನೆಯ ಮಹಾಪೂರ ಹೊಳೆಯಾಗಿ ಹರಿಯಿತು. ಅಲ್ಲಿ ಒಬ್ಬ ತನಿಖಾ ಪತ್ರಿಕೋದ್ಯಮಿಗೆ ಇರಬೇಕಾದ ಸತ್ಯ ನಿಷ್ಟೆ ಎಲ್ಲೂ ಕಾಣಲಿಲ್ಲ. ತನಿಖೆ ಇಲ್ಲಿದೇ ತೀರ್ಪು ನೀಡುವ ಒಬ್ಬ ನ್ಯಾಯಾಧೀಶರಂತೆ ನಾವು ವರ್ತಿಸಿದೆವು.
ಸಾಧಾರಣವಾಗಿ ನನಗೇ ಏನಾದರೂ ಆದರೆ ಎಂದರೆ ಏನರ್ಥ ? ನನಗೆ ಬೇರೆಯವರಿಂದ ಏನಾದರೂ ಆದರೆ ಎಂದಲ್ಲವೆ ? ಗಣಪತಿ ನನಗೆ ಏನಾದರೂ ಆದರೆ ಎಂದು ಹೇಳಿದಾಗ ಬೇರೆಯವರಿಂದ ಸಾವು ಸಂಭವಿಸಿದರೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವರ ಕೊನೆಯ ಹೇಳಿಕೆಯಲ್ಲಿ ತಾವು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಈ ಮೂವರು ಕಾರಣ ಎಂದು ಗಣಪತಿ ಹೇಳಿಲ್ಲ.  ತಮಗೆ ಏನಾದರೂ ಸಂಭವಿಸಿದರೆ ಎಂದರೆ ಕೊಲೆ ಮಾಡಿದರೆ, ಅದಕ್ಕೆ ಇವರು ಕಾರಣ ಎಂದು ಅವರ ಮಾತು ಧ್ವನಿಸುತ್ತದೆ. ಆತ್ಮಹತ್ಯೆಯ ಬಗ್ಗೆ ಏನೂ ಹೇಳದೇ ಆತ್ಮಹತ್ಯೆ ಮಾಡಿಕೊಂಡಿರುವಾಗ ಇದನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸುವುದು ಸಾಧ್ಯವೆ ?
 ಆದರೆ ಮೊದಲು ನಾವು ಕೇಳಬೇಕಾದ ಪ್ರಶ್ನೆ ಯಾವುದು ಡೈಯಿಂಗ್ ದಿಕ್ಲರೇಷನ್ ಎಂಬದು. ಕಾನೂನು ಡಾಯಿಂಗ್ ಡಿಕ್ಲಲರೇಷನ್ ಬಗ್ಗೆ ಹೀಗೆ ಹೇಳುತ್ತದೆ.
In common law, a "dying declaration" must have been a statement made by a deceased person who would otherwise have been a credible witness to their own death by murder or manslaughter, and was of "settled hopeless expectation of death".
ಕಾನೂನಿನ ಪ್ರಕಾರ ಡೈಯಿಂಗ್ ಡಿಕ್ಲರೇಷನ್ ಎಂದರೇನು ಎಂಬ ಬಗ್ಗೆ ಸ್ಪಷ್ಟ ವಿವರಣೆ ಇದೆ. ಯಾವುದೇ ವ್ಯಕ್ತಿ ನನಗೆ ಇಂಥವರಿಂದ ಅಪಾಯವಿದೆ ಎಂದು ಸಾಕ್ಷ್ಯಾಧಾರಗಳ ಮೂಲಕ ಮೊದಲೇ ಹೇಳಿಕೆ ನೀಡಿರಬೇಕು. ಆತ ಹೀಗೆ ಹೇಳಿಕೆ ನೀಡುವಾಗ ಕನಿಷ್ಟ ಒಬ್ಬ ಸಾಕ್ಶಿಯಾದರೂ ಬಳಿ ಇರಬೇಕು. ಇನ್ನು ಭಾರತೀಯ ಎವಿಡೆನ್ಸ್ ಎಕ್ಟ್ ನ ೩೨ [೧] ಡೈಯಿಂಗ್ ಡಿಕ್ಲರೇಷನ್ ಎಂದರೇನು ಎಂಬ ಬಗ್ಗೆ ಸಂಪೂರ್ಣ ವಿವರಣೆ ನೀಡಿದೆ. ಯಾವುದನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬೇಕು ಎಂಬ ಬಗ್ಗೆ ನಿಖರವಾಗಿ ಹೇಳಲಾಗಿದೆ. ಈ ಕಾನೂನಿನಲ್ಲಿ ಯಾವುದೇ ವ್ಯಕ್ತಿ ಸಾಯುವುದಕ್ಕಿಂತ ಮೊದಲು ನನಗೆ ಇಂಥವರಿಂದ ಜೀವಕ್ಕೆ ಅಪಾಯವಿದೆ, ನನಗೆ ಸಾವು ಸಂಭವಿಸಿದರೆ ಅದಕ್ಕೆ ಇವರೇ ಕಾರಣ ಎಂದು ಸ್ಪಷ್ಟವಾಗಿ ಹೇಳಿರಬೇಕು. ಹೀಗೆ ಹೇಳಿಕೆ ನೀಡುವುದಕ್ಕೂ ಕೆಲವೊಂದು ನಿಯಮಗಳಿವೆ.
A statement by a person who is conscious and knows that death is imminent concerning what he or she believes to be the cause or circumstances of death that can be introduced into evidence during a trial in certain cases.
ಯಾವುದೇ ವ್ಯಕ್ತಿ ಡೈಯಿಂಗ್ ಡಿಕ್ಲರೇಷನ್ ನೀಡುವಾಗ ಆತ ಪ್ರಜ್ನೆಯನ್ನು ಕಳೆದುಕೊಂಡಿರಬಾರದು. ಅಂದರೆ ಆತ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢನಾಗಿರಬೇಕು. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಆತನ ಹೇಳಿಕೆಯನ್ನು ಡಾಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಲು ಸಾಧ್ಯವಿಲ್ಲ.  ಈ ಕಾರಣದಿಂದ ಗಣಪತಿ ನೀಡಿದ ಕೊನೆಯ ಹೇಳಿಕೆ ಡೈಯಿಂಗ್ ಡಿಕ್ಲರೇಷನ್ ಹೌದೋ ಅಲ್ಲವೋ ಎಂಬುದು ನಿರ್ಧಾರವಾಗುವ ಮೊದಲು ಇದು ಡೈಯಿಂಗ್ ಡಿಕ್ಲರೇಷನ್ ಎಂದೇ ಮಾಧ್ಯಮದವಾರದ ನಾವು ತೀರ್ಮಾನಿಸಿ ಬಿಟ್ಟೆವು. ಕನಿಷ್ಟ ಈ ಬಗ್ಗೆ ನಾವು ಚರ್ಚೆಯನ್ನೂ ಮಾಡಲಿಲ್ಲ.
ಇನ್ನೊಂದು ಪ್ರಮುಖ ಅಂಶ ಎಂದರೆ ಒಬ್ಬ ವ್ಯಕ್ತಿ ಇಂಥವರಿಂದ ತನ್ನ ಜೀವಕ್ಕೆ ಅಪಾಯವಿದೆ, ನನಗೆ ಸಾವು ಸಂಭವಿಸಿದರೆ ಇಂಥವರೇ ಕಾರಣ ಎಂದು ಸೂಕ್ತ ಸಾಕ್ಷಾಧಾರ ಮತ್ತು ಸೂಕ್ತ ನಿಯಮಗಳ ಪ್ರಕಾರ ಹೇಳಿಕೆ ನೀಡಿದರೆ ಅದು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿತವಾಗುತ್ತದೆ.  ಆದರೆ ಕಾನೂನಿನಲ್ಲಿ ಸಾವು ಸಂಭವಿಸಿದರೆ ಎಂದು ಹೇಳಲಾಗಿದೆಯೇ ಹೊರತೂ  ಆತ್ಮಹತ್ಯೆ ಮಾಡಿಕೊಂಡರೆ ಏನು ಎಂಬ ಬಗ್ಗೆ ನಿಖರವಾದ ವಿವರಣೆಗಳಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಹಲವು ತೀರ್ಪುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಬರೆದು ಇಟ್ಟ ನೋಟ್ ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬಹುದು ಎಂದು ಹೇಳಿದೆ. ಹೀಗಾಗಿ, ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳ ಕಾರಣದಿಂದ ಗಣಪತಿ ನೀಡಿರುವ ಹೇಳಿಕೆಯನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬಹುದು.  ಈ ಬಗ್ಗೆ ಕೂಡ ಚರ್ಚೆ ನಡೆಯುವ ಅಗತ್ಯವಿತ್ತು. ಆದರೆ ನಾವು ಚರ್ಚೆ ಮಾಡಲಿಲ್ಲ.
ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಪ್ರತಿ ಪಕ್ಷಗಳೂ ಕೂಡ ಇಂತಹ ಯಾವ ಚರ್ಚೆಯನ್ನೂ ಮಾಡದೇ ರಾಜಕೀಯ ಕಾರಣವನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡಿದವು.  ಗಣಪತಿ ಅವರಿಗೆ ಖಿನ್ನತೆ ಇತ್ತು ಎಂದು ಸರ್ಕಾರ ಹೇಳಿದ್ದನ್ನು ಮೆಂಟಲ್ ಎಂದು ಅರ್ಥೈಸಿ ಗಣಪತಿ ಅವರು ಮೆಂಟಲ್ ಅಲ್ಲ ಎಂದು ವಾದಿಸಿದವು.  ಆದರೆ ಖಿನ್ನತೆ ಬೇರೆ ಮೆಂಟಲ್ ಆಗುವುದು ಬೇರೆ ಎಂಬ ಸಾಮಾನ್ಯ ಜ್ನಾನ ಕೂಡ ಬಿಜೆಪಿ ನಾಯಕರಿಗೆ ಇರಲಿಲ್ಲ.  ಜೊತೆಗೆ ಖಿನ್ನತೆಯಿಂದ ಬಳಲುವವರು ಒಂದೇ ರೀತಿ ಇರುವುದಿಲ್ಲ. ಒಂದು ದಿನ ಅವರು ಎಲ್ಲರಂತೆ ಇರಬಹುದು. ಮರು ದಿನ ಖಿನ್ನತೆ ಹೆಚ್ಚಬಹುದು.   ಈ ಬಗ್ಗೆ ಕೂಡ  ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಜ್ನಾನ ಇರಲಿಲ್ಲ.
ಜೊತೆಗೆ ಇನ್ನೊಂದು ಆಶ್ಚರ್ಯದ ವಿಷಯ ಎಂದರೆ ಗಣಪತಿ ಅವರ ಆತ್ಮಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಿ ಪಕ್ಷಗಳು ಕಲ್ಲಪ್ಪ ಹುಂಡಿಬಾಗ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.  ಯಾಕೆ ? ಡಿ ವೈ ಎಸ್ ಪಿ ಕಲ್ಲಪ್ಪ ಅವರ ಪ್ರಕರಣದಲ್ಲಿ ಭಜರಂಗದಳದ ಕಾರ್ಯಕರ್ತರ ಹೆಸರುಗಳಿವೆ ಎಂಬ ಕಾರಣಕ್ಕೆ ಇವರು ಮಾತನಾಡುತ್ತಿಲ್ಲವೆ ? ಗೊತ್ತಿಲ್ಲ. ಇದೇ ರಾಜಕೀಯ ನೋಡಿ. ಈ ತಿಂಗಳ ೩೦ ರ ವರೆಗೆ ನಡೆಯಬೇಕಿದ್ದ ವಿಧಾನ ಮಂಡಲ ಅಧಿವೇಶನ ಈ ಗಲಾಟೆಯಲ್ಲಿ ಮುಳುಗಿ ಮುಗಿದೇ ಹೋಯಿತು. ಶಾಸನ ರಚನೆಯ ಕೆಲಸ ಮಾಡಬೇಕಿದ್ದ ಸದನದಲ್ಲಿ ತರಾತುರಿಯಲ್ಲಿ ವಿಧೇಯಕಗಳ ಮಂಡನೆಯಾಗಿ ಅಂಗೀಕಾರವಾಯಿತು.
ಇಂತಹ ವಿಚಾರಗಳಲ್ಲಿ ನಮಗೆಲ್ಲ ಇರುವ ನೋವು ಒಬ್ಬ ವ್ಯಕ್ತಿ ತಾನೇ ಸಾವನ್ನು ಅಪ್ಪಿಕೊಂಡನಲ್ಲ ಎಂಬುದಕ್ಕಾಗಿ. ಇದನ್ನು ಬಿಟ್ಟರೆ ಬೇರೆ ಕಾರಣಗಳಿಗೆ ಗಣಪತಿಗೆ ಸಹಾನುಭೂತಿ ವ್ಯಕ್ತಪಡಿಸಲು ಕಾರಣಗಳೇ ಕಾಣುತ್ತಿಲ್ಲ.  ಒಬ್ಬ  ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವನಿಗೆ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇರಬೇಕು. ಇಲ್ಲದಿದ್ದರೆ ಆತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಅರ್ಹನಲ್ಲ. ಜೊತೆಗೆ ಇಲಾಖೆ ಎಲ್ಲಿ ಕೆಲಸ ಮಾಡು ಎಂದು ಸೂಚಿಸುತ್ತದೆಯೋ ಅಲ್ಲಿ ಕೆಲಸ ಮಾಡಬೇಕು. ನಾನು ಕೆಲಸ ಮಾಡುವುದಿಲ್ಲ ಎನ್ನುವುದಾಗಲೀ ನನಗೆ ಇದೇ ಹುದ್ದೆ ಬೇಕು ಎನ್ನುವುದಾಗಲಿ ಆತನನ್ನು ಈ ಇಲಾಖೆಯಲ್ಲಿ ಕೆಲಸ ಮಾಡುವುದಕ್ಕೆ ಅನರ್ಹನನ್ನಾಗಿ ಮಾಡುತ್ತದೆ.
ಹಾಗೆ ತಮ್ಮ ಪದೋನ್ನತಿಗಾಗಿ ಗಣಪತಿ ಎಲ್ಲ ರೀತಿಯಲ್ಲೂ ಯತ್ನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಬಹಿರಂಗವಾದ ದೂರವಾಣಿ ಮಾತುಕತೆಯ ಆಡಿಯೋ ನಿಜವಾಗಿದ್ದರೆ ಅದು ಅವರ ಬಗ್ಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತದೆ. ಆ ಆಡಿಯೋದಲ್ಲಿ ಗಣಪತಿ ತಮಗೆ ಪ್ರಮೋಷನ್  ಕೊಡಿಸುವಂತೆ ಯಾವುದೋ ಜ್ಯೋತಿಷಿಗೆ ಮನವಿ ಮಾಡುತ್ತಾರೆ. ಬಾಸ್ ಜೊತೆ ಮಾತನಾಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಅಂದರೆ ನೀವು ನಿಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಇಲಾಖೆಗೆ ಸಂಬಂಧವೇ ಇಲ್ಲದ ಜ್ಯೋತಿಷಿಯೊಬ್ಬರ ಮೂಲಕ ಒತ್ತಡ ಹಾಕಿಸುತ್ತೀರಿ ಎಂದಾದರೆ ನಿಮ್ಮನ್ನು ಪ್ರಾಮಾಣಿಕ ಅಧಿಕಾರಿ ಎಂದು ನಾವು ಹೇಳುವುದು ಸಾಧ್ಯವೇ ? ಗಣಪತಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿದ್ದರು ಎಂಬುದು ಆಘಾತಕಾರಿ ಅಲ್ಲವೆ ?
ಈ ಲೇಖನ ಬರೆಯುತ್ತಿರುವಾಗ ಯಾವುದೋ ಒಬ್ಬ ಅಧಿಕಾರಿ ತಮ್ಮ ಮೇಲಾಧಿಕಾರಿ ನೀಡುತ್ತಿರುವ ಕಿರುಕುಳದ ಬಗ್ಗೆ ಮಾತನಾಡಿದ ವರದಿ ಸುದ್ದಿ ವಾಹಿನಿಯೊಂದರಲ್ಲಿ ಬರುತ್ತಿತ್ತು. ಅವರೂ ಸಹ ತಾವು ಮತ್ತು ತಮ್ಮ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದರು. ಇನ್ನು ಹಲವಾರು ಅಧಿಕಾರಿಗಳು ಸರ್ಕಾರಿ ನೌಕರರು ಇದೇ ರೀತಿಯ ಬೆದರಿಕೆ ಒಡ್ಡಬಹುದು. ಹಾಗೆ ಗಣಪತಿ ಅವರ ಹೆಂಡತಿ ಕೂಡ ತಮಗೆ ನ್ಯಾಯ ಸಿಗದಿದ್ದರೆ ತಾವು ಗಂಡನ ದಾರಿ ಹಿಡಿಯುವುದಾಗಿ ಬೆದರಿಕೆ ಒಡ್ಡಿದ್ದಾರೆ.  ಆತ್ಮ್ಸಹತ್ಯೆ ಮಾಡಿಕೊಳ್ಳುವುದು ಮತ್ತು ಬೆದರಿಗೆ ಒಡ್ಡುವುದು ಸಮೂಹ ಸನ್ನಿಯ ರೂಪ ಪಡೆದುಕೊಳ್ಳುವ ಅಪಾಯ ಕಂಡುಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.
ಸಾವು ಒಂದು ಸಹಜ ಕ್ರಿಯೆ. ಆದರೆ ಸಾವನ್ನು ಆತ್ಮಹತ್ಯೆ ಮೂಲಕ ವಿಜೃಂಭಿಸುವುದು ಅಪಾಯಕಾರಿ. ಆತ್ಮಹತ್ಯೆಯ ವೈಭವೀಕರಣ ಬೇರೆಯವರನ್ನು ಆತ್ಮಹತ್ಯೆಗೆ ಪ್ರೇರೇಪಿಸಬಹುದು. ಯಾರು ಯಾರೋ ಡೆತ್ ನೋಟ್ ಬರೆದಿಟ್ಟು  ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಂಥಹ ಒಂದು ಅಪಾಯಕಾರಿ ಸ್ಥಿತಿಗೆ ನಾವು ತಲುಪಿ ಬಿಟ್ಟಿದ್ದೇವೆ.
ಕೊನೆಯ ಮಾತು: ಗಣಪತಿ ಅವರ ಆತ್ಮಹತ್ಯೆ ಯಾರು ಯಾರಿಗೆ ಲಾಭದಾಯಕ ವಾಯಿತು ? ಯಾರು ಯಾರು ಸಾವಿನಿಂದ ಲಾಭ ಪಡೆಯಲು ಯತ್ನ ನಡೆಸಿದರು ? ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಪ್ರಕರಣ ಸಂಪೂರ್ಣವಾಗಿ ಬಯಲಾಗುತ್ತದೆ.






Friday, July 8, 2016

ಗಣಪತಿ ಆತ್ಮಹತ್ಯೆ: ಅವರ ಹೇಳಿಕೆಯ ಬಗ್ಗೆಯೂ ಸಣ್ಣ ಸಂಶಯ ನಮಗೆಲ್ಲ ಇರಬೇಕಿತ್ತು ಅಲ್ಲವಾ ?

ಅವರು ಹೀಗೆ ಮಾಡಿಕೊಳ್ಳಬಾರದಿತ್ತು. ಬದುಕಿಗೆ ಬೆನ್ನು ತೋರಿಸಿಹೋಗಬಾರದಿತ್ತು. ಆದರೂ ಹೋಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲರಿಗೂ ಅನ್ನಿಸುವ ಹಾಗೆ ಅವರಿಗೆ ಬದುಕು ಸಾಕು ಅನ್ನಿಸಿರಬೇಕು. ಹೀಗಾಗಿ ಅವರು ಈ ತೀರ್ಮಾನ ಕೈಗೊಂಡಿರಬೇಕು.
ಆತ್ಮಹತ್ಯೆ ಮಾಡಿಕೊಳ್ಳುವವರು ದುರ್ಬಲ ಮನಸ್ಸಿನವರಾಗಿರುತ್ತಾರೆ, ಒಂದು ಕ್ಷಣ ಈ ಬದುಕು ಸಾಕು ಅನ್ನಿಸಿದಾಗ ಬದುಕಿನ ಪುಟಗಳ ಕೊನೆಯ ಹಾಳೆಯನ್ನು ಮುಗಿಚಿಹಾಕಿಬಿಡುತ್ತಾರೆ. ಅದು ಭಾವುಕತೆಯ ಅತ್ಯುಂಗ ಸ್ಥಿತಿ. ಅದಾದ ಮೇಲೆ ಎಲ್ಲವೂ ಮುಗಿಯಿತು. ಆದರೆ ಬದುಕು ಭಾವುಕತೆಯನ್ನು ಮೀರಿದ್ದು. ಭಾವುಕತೆಯೊಂದೇ ಬದುಕನ್ನು ಕಟ್ಟಿಕೊಡುವುದಿಲ್ಲ. ಭಾವುಕತೆಯನ್ನು ಮೀರುವುದು ಹೇಗೆ ?
ನನ್ನನ್ನು ಎಂದಿನಿಂದಲೂ ಕಾಡುತ್ತಿರುವ ಕೆ. ರಾಮಯ್ಯನವರು ಒಂದು ಸಣ್ಣ ಕವನ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ.
ನಾನು ಆತ್ಮಹತ್ಯೆಗೆ ಕೊಟ್ಟುಕೊಳ್ಳುವ ಕಾರಣಗಳು,
ಕಾರಣಗಳೇ ಅಲ್ಲ ಎಂಬ ಸಂಶಯ ನನ್ನನ್ನು
ಬದುಕಿ ಉಳಿಸಿದೆ.
ರಾಮಯ್ಯ ಹೇಳುವಂತೆ ಆತ್ಮಹತ್ಯೆಗೆ ಕೊಡುವ ಕಾರಣಗಳು ಕಾರಣಗಳೇ ಅಲ್ಲದಿರಬಹುದು ಎಂಬ ಸಂಶಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರಿಗೆ ಮೂಡಬೇಕು. ಆಗ ಬದುಕಿನ ಬಾಗಿಲು ಮತ್ತೆ ತೆರದುಕೊಳ್ಳುತ್ತದೆ. ಆದರೆ ಅತಿಯಾದ ಭಾವುಕತೆ ಸಂಶಯ ಪಡುವುದಕ್ಕೆ ಅವಕಾಶ ನೀಡುವುದಿಲ್ಲ. ಆಗ ಅವರೇ ತಮ್ಮ ಬದುಕಿನ ಬಾಗಿಲನ್ನು ಮುಚ್ಚಿಕೊಂಡು ಬಿಡುತ್ತಾರೆ. ಮಂಗಳೂರಿನ ಡಿ ವೈ ಎಸ್ ಪಿ ಗಣಪತಿ ಅವರಿಗೆ ಅವರ ಭಾವುಕತೆಯನ್ನು ಮೀರಿದ ಇಂತಹ ಒಂದು ಸಂಶಯ ಮೂಡಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಜಲಪಾತದಂತೆ ಭೋರ್ಗರೆದ ಭಾವುಕತೆ ಇದಕ್ಕೆ ಅವಕಾಶ ನೀಡಲೇ ಇಲ್ಲ.
 ಸಾವು, ಅದು ಅತ್ಮಹತ್ಯೆ ಇರಲಿ, ಅಥವಾ ನೈಜ ಸಾವು ಇರಲಿ ನಮ್ಮನ್ನೆಲ್ಲ ಭಾವುಕರನ್ನಾಗಿ ಮಾಡುತ್ತದೆ. ಇದು ಸಹಜ. ಆದರೆ ಸಾವಿನ ಕಾರಣವನ್ನು ಹುಡುಕುವಾಗ  ಭಾವುಕರಾಗಬಾರದು. ಆತ್ಮಹತ್ಯೆಯ ಕಾರಣವನ್ನು ಹುಡುಕುವಾಗ ಭಾವುಕರಾಗಬಾರದು. ಹಾಗಾದರೆ ಸತ್ಯದ ಕೊಲೆ ಆಗಿಬಿಡುತ್ತದೆ.ಮಾಧ್ಯಮ ಭಾವುಕತೆಯಿಂದ ಹೊರಕ್ಕೆ ಬರಬೇಕು. ಒಂದು ಸಣ್ಣ ಸಂಶಯ ಮಾಧ್ಯಮದವರಿಗೆ ಇರಬೇಕು. ಸಂಶಯವೇ ಮಾಧ್ಯಮದ ಮೂಲ ದೃವ್ಯ. ಅದೇ ಸತ್ಯದೆಡೆಗೆ ತೆರಳುವ ದಾರಿ. ಆದರೆ ಇಂದು ಮಾಧ್ಯಮ ಕೂಡ ಭಾವುಕವಾಗುತ್ತಿದೆ. ಹೀಗಾಗಿ ಮಾಧ್ಯಮಕ್ಕೆ ಸಂಶಯವೇ ಇಲ್ಲ. ಇದು ಮಾಧ್ಯಮವನ್ನು ಸಂಶಯ ರಹಿತವನ್ನಾಗಿ ಮಾಡಿ ಬಿಟ್ಟಿದೆ. ಅಳುವುದು ಮತ್ತು ಅಳಿಸುವುದೇ ಮಾಧ್ಯಮದ ಕಾಯಕವಾಗಿದೆ ಎಂಬ ಅನುಮಾನವೂ ನನಗೆ ಮೂಡುತ್ತಿದೆ.
ಮೊನ್ನೆ ಮಂಗಳೂರು ಡಿ ವೈ ಎಸ್ ಪಿ ಗಣಪತಿ ಆತ್ಮ ಹತ್ಯೆ ಮಾಡಿಕೊಳ್ಳುವಾಗ ಅವರಿಗೆ ಎಲ್ಲವೂ ಸಾಕು ಅನ್ನಿಸಿರಬಹುದು. ಹಾಗಿದ್ದರೆ ಅವರಿಗೆ ಎಲ್ಲವೂ ಸಾಕು ಎಂದು ಯಾಕೆ ಅನ್ನಿಸಿರಬಹುದು ? ಎಲ್ಲವನ್ನು ಮುಗಿಸಿ ಕೈಚೆಲ್ಲುವ ಹಂತಕ್ಕೆ ಅವರು ಹೋಗಿದ್ದು ಯಾಕೆ ? ಇಂಥ ತೀರ್ಮಾನಕ್ಕೆ ತೆಗೆದುಕೊಳ್ಳುವುದಕ್ಕೆ ಇರಬಹುದಾದ ಕಾರಣಗಳು ಯಾವವು ? ಅದು ಕೇವಲ ವೃತ್ತಿಯ ಕಾರಣವಾ ಅಥವಾ ಕೌಟುಂಬಿಕ ಕಾರಣಗಳು ಸೇರಿಕೊಂಡಿದ್ದವೆ ? ಅಥವಾ ಎಲ್ಲ ಕಾರಣಗಳೂ ಸೇರಿ ಅವರು ಈ ಸ್ಥಿತಿಗೆ ತಲುಪಿದ್ದರಾ ? ತಾವು ಆತ್ಮಹತ್ಯೆಗೆ ಕಂಡುಕೊಂಡ ಕಾರಣಗಳು ಕಾರಣಗಳೇ ಅಲ್ಲ ಎಂಬ ಸಂಶಯ ಅವರಿಗೆ ಮೂಡಲೇ ಇಲ್ಲವೆ ? ಇಲ್ಲ ಅನ್ನಿಸುತ್ತದೆ. ಇಂತಹ ಒಂದು ಸಣ್ಣ ಸಂಶಯ ಅವರಿಗೆ ಮೂಡಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ನಮಗೆ ಅಂದರೆ ಮಾಧ್ಯಮದವರಿಗೆ ಇಂಥಹ ಸಣ್ಣ ಸಂಶಯ ಮೂಡಿದ್ದರೆ ಈ ಘಟನೆಯನ್ನು  ಭಾವುಕತೆಯ ಪರಾಕಾಷ್ಟೆಗೆ ಒಯ್ಯುವ ಸ್ಥಿತಿ ಬರುತ್ತಿರಲಿಲ್ಲ.
ನಿನ್ನೆ ಅವರು ಮಡಿಕೇರಿಗೆ ಬರುತ್ತಾರೆ. ಹೋಟೆಲ್ ಒಂದರಲ್ಲಿ ರೂಂ ಮಾಡಿಕೊಂಡು ಮಾಧ್ಯಮಗಳ ಬಳಿ ಹೋಗುತ್ತಾರೆ. ಅಲ್ಲಿ ತಮ್ಮ ವೃತ್ತಿಯ ಬಗ್ಗೆ ಮಾತನಾಡುತ್ತಾರೆ. ತಮಗೆ ಇಲಾಖೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸುತ್ತಾರೆ. ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಹಿಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ವಿರುದ್ಧ ಆರೋಪ ಮಾಡುತ್ತಾರೆ. ತಮಗೆ ಮುಂದೆ ಏನಾದರೂ ಆದರೆ ಅದಕ್ಕೆ ಈ ಮೂವರೆ ಕಾರಣ ಎಂದು ಹೇಳುತ್ತಾರೆ. ಆಗ ಅವರು ಮಾತನಾಡುತ್ತಿದ್ದುದನ್ನು ನೋಡಿದರೆ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ಸಂಶಯಕ್ಕೆ ಎಡೆಯೇ ಇರಲಿಲ್ಲ.
ಅವರು ಈ ಆರೋಪ ಮಾಡಿದ ತಕ್ಷಣ ಮಾಧ್ಯಮದವರಾಗಿ ನಮಗೆ ಬರುವ ಮುಂದಿನ ಪ್ರಶ್ನೆ ಎಂದರೆ ಕಿರುಕುಳ ನೀಡಿದರು ಎಂದರೆ ಹೇಗೆ ಕಿರುಕುಳ ನೀಡಿದರು ಎಂಬುದು. ಕಿರಿಕುಳ ನೀಡಿದ್ದಕ್ಕೆ ಸಾಕ್ಷಾಧಾರಗಳು ಇವೆಯೆ ಎಂಬುದು ಮತ್ತೊಂದು ಪ್ರಶ್ನೆ..ವರ್ಗಾವಣೆ ಮಾಡಿದ್ದನ್ನು ಕಿರುಕುಳ ಎನ್ನಬಹುದೆ ? ಅಥವಾ ನಾನ್ ಎಕ್ಸಿಕ್ಯೂಟೀವ್ ಪೋಸ್ಟ್ ಗೆ ಹಾಕಿದ್ದನ್ನು ಕಿರುಕುಳ ಎಂದು ಭಾವಿಸಬಹುದೆ ? ಯಾಕೆಂದರೆ ಒಂದು ಸರ್ಕಾರಿ ಇಲಾಖೆಯಲ್ಲಿ ವರ್ಗಾವಣೆ ಎಂಬುದು ತುಂಬಾ ಸಹಜವಾದದ್ದು. ಸರ್ಕಾರಿ ಕೆಲಸ ಮಾಡುವವನು ವರ್ಗಾವಣೆಯನ್ನು ಒಪ್ಪಿಕೊಳ್ಳದೇ ಇರುವಂತಿಲ್ಲ. ಹಾಗೆ ನಾನ್ ಎಕ್ಸಿಕ್ಯೂಟೀವ್ ಹುದ್ದೆಗೆ ಹಾಕುವುದು ಕಿರಿಕುಳ ಎಂದಾಗುವುದೆ ? ಪೊಲೀಸ್ ಮ್ಯಾನುವಲ್ ಪ್ರಕಾರ ಒಬ್ಬ ಅಧಿಕಾರಿಯನ್ನು ಎಷ್ಟು ಕಾಲ ಎಕ್ಸಿಕ್ಯುಟೀವ್ ಮತ್ತು ಎಷ್ಟು ಕಾಲ ನಾನ್ ಎಕ್ಸಿಕ್ಯುಟೀವ್ ಹುದ್ದೆಗೆ ಹಾಕಬೇಕು ಎಂಬ ಬಗ್ಗೆ ನಿಯಮವೇನಾದರೂ ಇದೆಯೇ ?
ಈ ಪ್ರಶ್ನೆಗಳಿಗೆ ಅವರ ಸಂದರ್ಶನದಲ್ಲಿ ಉತ್ತರವಿಲ್ಲ. ಯಾಕೆಂದರೆ ಅವರು ಕೇವಲ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ತಾತ್ವಿಕವಾಗಿ ಮಾತನಾಡಿಲಿಲ್ಲ. ಕಾನೂನನ್ನು ಉಲ್ಲೇಖಿಸಿ ಮಾತನಾಡಿಲ್ಲ.  ಯಾಕೆಂದರೆ ಆಗಲೇ ಅವರು ತಮ್ಮ ಆತ್ಮಹತ್ಯೆಯ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡಾಗಿತ್ತು. ಹೀಗಾಗಿ ತಮ್ಮ ಸಾವಿಗೆ ಯಾರು ಯಾರು ಕಾರಣ ಎಂದು ದಾಖಲಿಸುವ ಕೆಲಸಕ್ಕಾಗಿ ಮಾತ್ರ ಅವರು ಮಾಧ್ಯಮದ ಎದುರು ಬಂದಿದ್ದರು.
ಅವರು ಮಾಧ್ಯಮದ ಜೊತೆ ಮಾತನಾಡುವಾಗ ಕೊನೆಯ ಮಾತೊಂದನ್ನು ಹೇಳುತ್ತಾರೆ. ಈ ಸರ್ಕಾರ ಇರುವವರೆಗೆ ಅನ್ಯಾಯ ಮುಂದುವರಿಯುತ್ತದೆ. ಈ ಸರ್ಕಾರ ಹೋಗಬೇಕು..! ಜೊತೆಗೆ ನನಗಾದ ಅನ್ಯಾಯ ಬೇರೆಯವರಿಗೆ ಆಗಬಾರದು ಇದೇ ನನ್ನ ಉದ್ದೇಶ ಎಂದು ಅವರು ಹೇಳುತ್ತಾರೆ.
ತಮ್ಮ ಸೇವಾವಧಿಯಲ್ಲಿ ತಮಗೆ ಆದ ಅನ್ಯಾಯ ಮತ್ತು ಕಿರುಕುಳದ ಬಗ್ಗೆ ಆರೋಪಿಸುವ ಗಣಪತಿ ತಮ್ಮ ಮಾತಿನ ಕೊನೆಯಲ್ಲಿ ರಾಜಕೀಯ ಉದ್ದೇಶವನ್ನು ಹೊರಗೆ ಹಾಕುತ್ತಾರೆ. ಅದು ಈ ಸರ್ಕಾರ ಹೋಗಬೇಕು ಎಂಬುದು. ಈ ಮಾತಿನ ಹಿಂದಿನ ಉದ್ದೇಶ ರಾಜಕೀಯ ಬದಲಾವಣೆ ಮತ್ತು ಸರ್ಕಾರದ ಬದಲಾವಣೆ..
ಅವರ ಮಾತಿನಿಂದ ಇನ್ನಷ್ಟು ಪ್ರಶ್ನೆಗಳು ಉದ್ಭವವಾಗುತ್ತದೆ. ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಗಣಪತಿ ಅವರಿಗೆ ಕಿರುಕುಳ ನೀಡಿದರು ಎಂದಾದರೆ ಅದಕ್ಕೆ ಇರುವ ಕಾರಣಗಳೇನು ? ಜಾರ್ಜ್ ಅವರಿಗೆ ಯಾಕೆ ಗಣಪತಿ ಅವರಿಗೆ ಕಿರುಕುಳ ನೀಡುವಷ್ಟು ಸಿಟ್ಟು ? ಈ ಪ್ರಶ್ನೆಗಳಿಗೆ ಅವರ ಮಾತುಗಳಲ್ಲಿ ಉತ್ತರವಿಲ್ಲ.
ಈ ಬಗ್ಗೆ ಕೆ.ಜೆ.ಜಾರ್ಜ್ ಹೇಳುವುದು ನನಗೆ ಗಣಪತಿ ಯಾರು ಎಂಬುದು ಗೊತ್ತಿಲ್ಲ. ಅವರು ಒಮ್ಮೆ ಮಾತ್ರ ನನ್ನನ್ನು ಭೇಟಿ ಮಾಡಿದ್ದರು. ಆಗ ತಮ್ಮನ್ನು ಎಕ್ಸಿಕ್ಯುಟೀವ್ ಹುದ್ದೆಗೆ ಹಾಕಬೇಕು ಎಂದು ಮನವಿ ಮಾಡಿದ್ದರು.. ಆಗ ನಾನು ಇದು ಆಡಳಿತಾತ್ಮಕ ವಿಚಾರ. ನಾನು ಇದರಲ್ಲಿ ತಲೆ ಹಾಕಲಾರೆ ಎಂದು ಹೇಳಿದ್ದೆ..
ಇವರಿಬ್ಬರ ಮಾತುಗಳನ್ನು ಇಟ್ಟುಕೊಂಡು ಇನ್ನಷ್ಟು ಆಳವಾಗಿ ನೋಡೋಣ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇರುವ ಇನಸ್ಪೆಕ್ಟರ್ ಗಳ ಸಂಖ್ಯೆ ಎಷ್ಟು ? ಈ ಎಲ್ಲ ಇನಸ್ಪೆಕ್ಟರ್ ಗಳ ಬಗ್ಗೆ ಸಚಿವರಾದವರಿಗೆ ಗೊತ್ತಿರುತ್ತದೆಯೆ ? ಹೀಗೆ ಎಲ್ಲರಿಗೂ ಕಿರುಕುಳ ನೀಡುವುದು ಅವರ ಕೆಲಸವೇ ? ಒಂದೊಮ್ಮೆ ಯಾರೋ ಒಬ್ಬ ಇನಸ್ಪೆಕ್ಟರ್ ಗೆ ಕಿರುಕುಳ ನೀಡುತ್ತಾರೆ ಎಂದರೆ ಅದಕ್ಕೆ ಬಲವಾದ ಕಾರಣಗಳು ಇರಬೇಕು. ಹಾಗಿದ್ದರೆ ಗಣಪತಿ ಅವರ ಪ್ರಕರಣದಲ್ಲಿ ಅಂತಹ ಕಾರಣ ಯಾವುದು ? ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಗಣಪತಿ ಇಂತಹ ಮಾಹಿತಿಯನ್ನು ಒದಗಿಸಿಲ್ಲ..
ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಆರೋಪ ಮಾಡುವ ಹಕ್ಕು ಎಲ್ಲರಿಗೂ ಇದೆ. ಗಣಪತಿ ಅವರಿಗೂ ಸಹ. ಹಾಗೆ ಕಿರುಕುಳದ ಆರೋಪ ಮಾಡುವುದು ಸುಲಭ. ಈಗ ಗಣಪತಿ ಅವರ ಬಗ್ಗೆ ಸಿಂಪಥಿಯಿಂದ ಮಾತನಾಡುವ ಮಾಧ್ಯಮಗಳ ಕಚೇರಿಯಲ್ಲೂ ಕಿರುಕುಳ ಇದೆ ಎಂದು ಯಾರೋ ಒಬ್ಬ ಸಿಬ್ಬಂದಿ ಮಾತನಾಡಬಹುದು, ಆರೋಪ ಮಾಡಬಹುದು. ಶಶಿಧರ ಭಟ್ ಕಿರುಕುಳ ನೀಡುತ್ತಾರೆ ಎಂದು ನನ್ನ ಸಹೋದ್ಯೋಗಿ ನನ್ನನ್ನು ದೂರಬಹುದು. ಹಾಗೆ ಕಿರುಕುಳದ ಆರೋಪ ಮಾಡಿದಾಗ ಮಾಡಿದವರ ಫೂರ್ವಾಪರಗಳನ್ನು ತಿಳಿದುಕೊಳ್ಳಬೇಕು. ಅವರ ಉದ್ದೇಶ ಏನಿರಬಹುದು ಎಂದು ತಿಳಿದುಕೊಳ್ಳಲು ಯತ್ನ ಮಾಡಬೇಕು. ಯಾಕೆಂದರೆ ಕಿರುಕುಳದ ಆರೋಪ ಮಾಡುವುದು ತುಂಬಾ ಸುಲಭ. ಮಾಧ್ಯಮ ಸಂಶಯದಿಂದ ಕೆಲಸ ಮಾಡಿದರೆ ಈ ಪ್ರಶ್ನೆಗಳು ಮೂಡುತ್ತವೆ. ಇಲ್ಲದಿದ್ದರೆ ಭಾವುಕತೆ ಎಂಬ ಬೆಂಕಿಗೆ ತುಪ್ಪ ಸುರಿದಂತೆ..
ಗಣಪತಿ ಅವರು ಅಪ್ಪಟ ಪ್ರಾಮಾಣಿಕ ಎಂಬ ತೀರ್ಪನ್ನು ಮಾಧ್ಯಮದವರಾದ ನಾವು ನೀಡಿ ಬಿಟ್ಟಿದ್ದೇವೆ. ಕೆಲಸ ವಾಹಿನಿಗಳು ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿಯೂ ಅಗಿದೆ. ಸಚಿವ ಜಾರ್ಜ್ ಅವರ ರಾಜೀನಾಮೆಗೂ ಕೆಲವು ಮಾಧ್ಯಮಗಳು ಒತ್ತಾಯಿಸಿವೆ. ಹಾಗಿದ್ದರೆ ಗಣಪತಿ ಅವರು ಪ್ರಾಮಾಣಿಕರೆ ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಬೇಕು. ಆದರೆ ಇಲ್ಲಿ ಅವರ ಪ್ರಾಮಾಣಿಕತೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಒಂದು ಕೋಟಿ ಕಳವಿನ ಪ್ರಕರಣದಲ್ಲಿ ಅವರತ್ತ ಸಂಶಯದ ಮುಳ್ಳು ನೆಟ್ಟಿದೆ. ಮಂಗಳೂರು ಚರ್ಚ್ ಮೇಲಿನ ಧಾಳಿ ಪ್ರಕರಣದಲ್ಲಿ ಅವರ ಸಂಘ ಪರಿವಾರದ ಸದಸ್ಯರಂತೆ ನಡೆದುಕೊಂಡರು ಎಂಬ ಆರೋಪಗಳಿವೆ. ಹೀಗಾಗಿ ಅವರು ಪ್ರಶ್ನಾತೀತ ಅಧಿಕಾರಿ ಅಲ್ಲ ಎಂಬುದು ಸ್ಪಷ್ಟ. ಹಾಗಿದ್ದರೆ ಅವರು ಪ್ರಾಮಾಣಿಕರು ಎಂಬ ಬಗ್ಗೆಯೇ ಭಿನ್ನಾಭಿಪ್ರಾಯ ಇರುವಾಗ ಅವರ ಮಾತುಗಳೆಲ್ಲ ಪ್ರಾಮಾಣಿಕ ಎಂದು ನಂಬುವುದು ಹೇಗೆ ?
ಅವರು ಸಾಯುವುದಕ್ಕೆ ಮೊದಲು ನೀಡಿದ ಹೇಳಿಕೆ ಸಂಪೂರ್ಣ ಸತ್ಯ ಎಂದು ನಾವು ಮಾಧ್ಯಮದವರು ನಂಬುವುದು ಹೇಗೆ ?
ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಾಧ್ಯಮದವರಾದ ನಾವು ಯೋಚಿಸಬೇಕಿತ್ತು. ಆದರೆ ಅವರ ಆತ್ಮಹತ್ಯೆ ಸುದ್ದಿ ಬಂದ ತಕ್ಷಣ ನಾವು ಅವರನ್ನು ನಾಯಕರನ್ನಾಗಿ ಸೃಷ್ಟಿಸಲು ಹೊರಟು ಬಿಟ್ಟೆವು, ಪ್ರಾಮಾಣಿಕ ಅಧಿಕಾರಿ ಎಂಬ ಬಿರುದು ನೀಡಿದೆವು. ಸಚಿವರ ರಾಜೀನಾಮೆಗೆ ಒತ್ತಾಯಿಸಿದೆವು. ಅವರ ತಂದೆ ನೀಡಿದ ದೂರಿನ ಬಗ್ಗೆಯಾಗಲೀ ಅಧಿಕಾರಿಗಳು ನೀಡಿದ ಹೇಳಿಕೆಯನ್ನಾಗಲಿ ಗಂಭೀರವಾಗಿ ತೆಗೆದುಕೊಳ್ಳಲು ಮುಂದಾಗಲೇ ಇಲ್ಲ. ಯಾಕೆಂದರೆ ಮಾಧ್ಯಮ ಆಗಲೇ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಕಿರುಕುಳದದಿಂದ ನಡೆದ ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿ ಆಗಿತ್ತು. ಡಿ. ಕೆ. ರವಿ ಪ್ರಕರಣದ ನಂತರ ಇನ್ನೊಂದು ನಾಯಕನ್ನು ಸೃಷ್ಟಿಸಲು ವೇದಿಕೆಯನ್ನು ಸಿದ್ಧಪಡಿಸಿ ಆಗಿತ್ತು.
ಗಣಪತಿ ಅವರಿಗೆ ಮಾನಸಿಕ ಖಿನ್ನತೆ ಇತ್ತು ಎಂಬುದನ್ನಾಗಲೀ, ಅವರು ಸತತವಾಗಿ ಔಷಧವನ್ನು ಸೇವಿಸುತ್ತಿದ್ದರು ಎಂಬುದನ್ನಾಗಲಿ ನಂಬಲು ಮಾಧ್ಯಮ ಸಿದ್ಧ ವಿರಲಿಲ್ಲ. ಯಾಕೆಂದರೆ ಹಾಗೆ ನಂಬಿದ ತಕ್ಷಣ ಈ ಅಧಿಕಾರಿಯ ಆತ್ಮಹತ್ಯೆ ಪ್ರಕರಣ ಅದರ ಮಹತ್ವವನ್ನು ಕಳೆದುಕೊಂಡು ಬಿಡುತ್ತದೆ. ಅದು ಮಾಧ್ಯಮಕ್ಕೆ ಬೇಕಾಗಿಲ್ಲ.
ಡಿ. ಕೆ. ರವಿ ಅವರನ್ನು ಇದೆ ರೀತಿ ನಾಯಕನ್ನಾಗಿ ಸೃಷ್ಟಿಸಿದ ನಂತರ ಏನಾಯಿತು ಗಮನಿಸಿ. ಈ ಪ್ರಕರಣವನ್ನು ಸಿ ಬಿ ಐ ತನಿಖೆ ನಡೆಸಿ ಇದು ಆತ್ಮಹತ್ಯೆ ಪ್ರಕರಣ ಎಂದು ವರದಿ ನೀಡಿದರೂ ಯಾರೂ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಾಮಾನ್ಯ ಜನ ಕೂಡ ಇದು ಕೊಲೆ ಪ್ರಕರಣವೇ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಮಾಧ್ಯಮ ಕೂಡ ಹಾಗೆ ಹೇಳುತ್ತದೆ. ಇನ್ನು ಈ ಪ್ರಕರಣದ ತನಿಖೆಯನ್ನು ಯಾವುದೂ ವಿದೇಶಿ ತನಿಖಾ ಸಂಸ್ಥೆಗೆ ನೀಡಿ ಅವರು ಆತ್ಮಹತ್ಯೆ ಎಂದು ವರದಿ ನೀಡಿದರೂ ಜನ ಒಪ್ಪಿಕೊಳ್ಳಲಾರರು. ಯಾಕೆಂದರೆ ಇದೊಂದು ನಿಗೂಢ ಕೊಲೆ ಎಂದು ಮಾಧ್ಯಮಗಳು ತೀರ್ಮಾನಕ್ಕೆ ಬಂದಾಗಿದೆ. ಅದೇ ರೀತಿ ಪ್ರಚಾರ ಮಾಡಿ ಆಗಿದೆ. ಮಹಾನ್ ನಾಯಕನ ಸೃಷ್ಟಿ ಆದ ಮೇಲೆ ಅವನು ನಾಯಕನಲ್ಲ ಎಂದು ಹೇಳಿದರೆ ಯಾರೂ ನಂಬುವುದಿಲ್ಲ.
ನಾವು ಕೆಲವೇ ದಿನಗಳ ಹಿಂದೆ ಅನುಪಮಾ ಶೆಣೈ ಎಂಬ ಡಿ ವೈ ಎಸ್ ಪಿ ರಾಜೀನಾಮೆ ಪ್ರಕರಣವನ್ನು ನೋಡಿದ್ದೇವೆ. ಇವರು ತುಂಬಾ ಪ್ರಾಮಾಣಿಕ ಅಧಿಕಾರಿ ಇರಬಹುದು. ಅವರಿಗೂ ಕಿರುಕುಳ ಆಗಿರಬಹುದು. ಆದರೆ ಆಕೆ ರಾಜೀನಾಮೆ ನೀಡಿದ ಮೇಲೆ ದಕ್ಷಿಣ ಕನ್ನಡ ಪ್ರಮುಖ ಆರ್ ಎಸ್ ಎಸ್ ನಾಯಕರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುತ್ತಾರೆ. ರಾಜಕಾರಣಿಯಂತೆ ಮಾತನಾಡುತ್ತಾರೆ. ಆಕೆಯನ್ನು ಪ್ರಾಮಾಣಿಕ ಅಧಿಕಾರಿ ಪಟ್ಟಕ್ಕೆ ಏರಿಸಿದ ನಾವು ಈ ಬಗ್ಗೆ ಯೋಚಿಸುವುದಿಲ್ಲ. ಅವರಿಗೂ ಆರ್ ಎಸ್ ಎಸ್ ಸಂಘಟನೆಗೂ ಇರುವ ಸಂಬಂಧದ ಬಗ್ಗೆ ಸಣ್ಣ ಸಂಶಯವೂ ನಮಗೆ ಬರುವುದಿಲ್ಲ. ಇವರ ರಾಜೀನಾಮೆ ಪ್ರಕರಣದ ಹಿಂದೆ ಆರ್ ಎಸ್ ಎಸ್ ಕೈವಾಡ ಇರಬಹುದೇ ಎಂಬ ಸಂಶಯ ಮಾಧ್ಯಮಕ್ಕೆ ಬರುವುದಿಲ್ಲ. ಹಾಗೆ ಒಂದು ಸಣ್ಣ ಅನುಮಾನ ಮೂಡಿದ್ದರೆ ಇಡೀ ಸ್ಟೋರಿ ಬೇರೆ ರೂಪ ಪಡೆಯುತ್ತಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ನಾವೇ ಸೃಷ್ಟಿಸಿದ ನಾಯಕಿಯನ್ನು ಖಳನಾಯಕಿಯನ್ನಾಗಿ ಮಾಡುವುದಕ್ಕೆ ನಮಗೆ ಇಷ್ಟ ಇಲ್ಲ.
ಬೆಳಿಗ್ಗೆ ದಿನ ಪತ್ರಿಕೆಯೊಂದನ್ನು ನೋಡುತ್ತಿದ್ದೆ. ಆ ಪತ್ರಿಕೆಯಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಇನ್ನೊಬ್ಬ ಅಧಿಕಾರಿಯ ಸ್ಟೋರಿ ಬ್ಯಾನರ್ ಹೆಡ್ ಲೈನ್ ಆಗಿ ಬಂದಿದೆ. ಅವರೂ ಆತ್ಮಹತ್ಯೆಗೆ ಮಾಡಿಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ವರದಿಯಲ್ಲಿ ನೀಡಲಾಗಿದೆ...!

ಇದೇ ಒಂದು ಸಮೂಹ ಸನ್ನಿಯಾಗಬಹುದು. ಇನ್ನೂ ನೂರಾರು ಅಧಿಕಾರಿಗಳು ಕಿರುಕುಳದ ಆರೋಪ ಮಾಡಬಹುದು. ಮಾಧ್ಯಮ ಇಂತಹ ಹಲವಾರು ಕಥೆಗಳನ್ನು ಎತ್ತಿ ಪ್ರಕಟಿಸಬಹುದು. ಇದೆಲ್ಲ ಏನು ? ನಾವು ಏನು ಮಾಡಲು ಹೊರಟಿದ್ದೇವೆ. ನಾನು ಮತ್ತೆ ಸಂಶಯದ ವಿಚಾರಕ್ಕೆ ಬರುತ್ತೇನೆ. ನನಗೆ ಏನನ್ನೂ ನಂಬಲು ಸಾಧ್ಯವಾಗುತ್ತಿಲ್ಲ ನನಗೆ ಎಲ್ಲದರ ಮೇಲೆ ಎಲ್ಲರ ಮೇಲೆ ಸಂಶಯ. ನನ್ನ ಮೇಲೆ ಸಹ ನನಗೆ ಸಂಶಯ ಇದೆ. ನಾನು ಯೋಗ್ಯನೋ ಅಯೋಗ್ಯನೋ ಎಂಬ ಪ್ರಶ್ನೆಗೆ ಉತ್ತರ ದೊರಕದೇ ಒದ್ದಾಡುತ್ತಿದ್ದೇನೆ. ನಾನು ಆಯೋಗ್ಯನಿರಬಹುದು ಎಂಬ ಸಣ್ಣ ಸಂಶಯ ನನಗೆ ಯಾವಾಗಲೂ ಇರುತ್ತದೆ. ಹೀಗಾಗಿ ನಾನು ಯೋಗ್ಯನಾಗಲು ಪ್ರಯತ್ನಿಸಲು ಸಾಧ್ಯವಾಗಿದೆ. ಇಂತಹ ಸಂಶಯ ಮಾಧ್ಯಮಕ್ಕೂ ಇರಬೇಕು ಅಲ್ಲವಾ ?

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...