Sunday, March 28, 2010

ಡಾ. ರಾಜ್ ಮತ್ತು ಬಂಗಾರದ ಮನುಷ್ಯ
ಇಂದು ಭಾನುವಾರ. ನಾನು ಡಾ. ರಾಜಕುಮಾರ್ ಅವರ ಯಶಸ್ವಿ ಸಿನೆಮಾಗಳಲ್ಲಿ ಒಂದಾದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ ಸಿನೆಮಾ ಇದು. ಆಗ ಒಂದಕ್ಕಿಂತ ಹೆಚ್ಚು ಬಾರಿ ಈ ಚಿತ್ರವನ್ನು ನೋಡಿದ್ದೆ. ಆಗ ನನಗೆ ತುಂಬಾ ಇಷ್ಟವಾದ ಈ ಸಿನೆಮಾ ಇಂದು ನನ್ನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುತೂಹಲ ನನಗೇ ಇತ್ತು.


ಜೊತೆಗೆ ಡಾ. ರಾಜ್ ಜೊತೆ ನಾನು ಒಂದೆರಡು ಬಾರಿ ನಡೆಸಿದ ಸಂದರ್ಶನ ಕೂಡ ನೆನಪಿಗೆ ಬಂತು. ನಾನು ಸಿನೆಮಾ ಪತ್ರಿಕೋದ್ಯಮವನ್ನು ಮಾಡುತ್ತಿದ್ದ ಕಾಲವದು. ನಾನು ಆಗ ಕೆಲಸ ಮಾಡುತ್ತಿದ್ದುದು ಸುದ್ದಿ ಸಂಗಾತಿ ಎಂಬ ವಾರ ಪತ್ರಿಕೆಯಲ್ಲಿ. ಸಂಪಾದಕರಾಗಿದ್ದ ಇಂದೂಧರ ಹೊನ್ನಾಪುರ,ಎನ್. ಎಸ್. ಶಂಕರ್ ಮತ್ತು ಕೆ. ರಾಮಯ್ಯ, ವಿಶೇಷ ಸಂಚಿಕೆಗೆ ಡಾ. ರಾಜಕುಮಾರ್ ಅವರ ಸಂದರ್ಶನ ಮಾಡುವ ಹೊಣೆಗಾರಿಕೆಯನ್ನು ನನಗೆ ಒಪ್ಪಿಸಿದರು. ಡಾ. ರಾಜ್ ಅವರ ಸಿನೆಮಾಗಳನ್ನು ನೋಡುತ್ತಲೇ ಸಿನಿಮಾ ಹುಚ್ಚು ಬೆಳಸಿಕೊಂಡ ನನಗೆ ಇದೊಂದು ಅಪೂರ್ವ ಅವಕಾಶ.
ಸದಾಶಿವನಗರದ ಅವರ ಮನೆಯಲ್ಲಿ ನಡೆದ ಸಂದರ್ಶನ ಅದು.
"ನಿಮಗೆ ಗೊತ್ತಾ ? ನಾನು ಶಾಲೆಗೆ ಹೋಗುವಾಗ ಕೋಟ್ ಹಾಕಿಕೊಂಡು ಹೋಗುತ್ತಿದ್ದೆ. ಕೋಟಿನ ಒಳಗೆ ಅಂಗಿಯೇ ಇರುತ್ತಿರಲಿಲ್ಲ. ಯಾಕೆಂದರೆ ನನ್ನ ಬಳಿ ಅಂಗಿ ಇರಲಿಲ್ಲ. "
ಡಾ. ರಾಜಕುಮಾರ್ ಅವರ ನೆನಪಿನ ಬುತ್ತಿ ಹೀಗೆ ಬಿಚ್ಚಿಕೊಳ್ಳತೊಡಗಿತ್ತು.
ನೀವು ಮೊದಲಿನಿಂದ ಯೋಗ, ವ್ಯಾಯಾಮ ಮಾಡುತ್ತಿದ್ದಿರಾ ?
"ಎಲ್ಲಿಯ ಯೋಗ ? ಎಲ್ಲಿಯ ವ್ಯಾಯಾಮ ? ನನಗೆ ತಿನ್ನುವುದಕ್ಕೆ ಸರಿಯಾಗಿ ಇಲ್ಲದ ಕಾಲ ಅದು. ನಾನು ಯೋಗವನ್ನು ಪ್ರಾರಂಭಿಸಿದ್ದು ೫೦ ವರ್ಷ ಆದ ಮೇಲೆ."
ಕೀರ್ತಿ ಹಣ ಯಾವುದೂ ಅವರನ್ನು ಬದಲಿಸಿರಲಿಲ್ಲ. ಅವರು ಹೇಳಿದ ಇನ್ನೊಂದು ಮಾತು;
ನನಗೆ ಒಬ್ಬನೇ ರಸ್ತೆಗಳಲ್ಲಿ ಸುತ್ತಬೇಕು ಅನ್ನಿಸುತ್ತದೆ. ಆದರೆ ಅದು ಸಾಧ್ಯವಿಲ್ಲ. ಹಾಗೆ ನನ್ನ ಕಿಸೆಯಲ್ಲಿ ಹಣವೇ ಇರುವುದಿಲ್ಲ. ಯಾಕೆಂದರೆ ನನಗೆ ಹಣದ ಅವಶ್ಯಕತೆ ಇಲ್ಲ
ಅವರ ಮಾತು ಹೀಗೆ ಸಾಗಿತ್ತು. ನನಗೆ ಡಾ. ರಾಜಕುಮಾರ್ ಅವರ ಸಂಪರ್ಕ್ ಬಂದಿದ್ದು ನಾನು ಮುಂಜಾನೆ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ. ಈ ಪತ್ರಿಕೆ ನಿಂತ ಮೇಲೆ, ಇಂದೂಧರ್ ಹೊನ್ನಾಪುರ ಸಂಪಾದಕತ್ವದಲ್ಲಿ ಪ್ರಾರಂಭವಾದ ಸುದ್ದಿ ಸಂಗಾತಿಯನ್ನು ನಾನು ಸೇರಿದ್ದೆ. ಅಲ್ಲಿ ಸಿನೆಮಾ, ರಾಜಕೀಯ ಮತ್ತು ವಿಶೇಷ ವರದಿಗಳನ್ನು ಬರೆಯುತ್ತಿದ್ದೆ. ನಾನು ಬಹಳ ಕಾಲದ ನಂತರ, ಸಂದರ್ಶನಕ್ಕೆ ಡಾ. ರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಅದೇ ಮಾತು.
"ನಿಮ್ಮ ಮುಂಜಾನೆ ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ."
ನಾನು ಆ ಪತ್ರಿಕೆ ನಿಂತು ಎರಡು ವರ್ಷವಾಗಿದೆ ಎಂಬುದನ್ನು ಅವರ ಗಮನಕ್ಕೆ ತಂದೆ. ಅವರಿಗೆ ಮುಂಜಾನೆ ನಿಂತಿದ್ದು ಗೊತ್ತಿರಲೇ ಇಲ್ಲ ! ಅಂತಹ ಮುಗ್ದತೆ.
ನಾನು ಡಾ. ರಾಜ್ ಅವರನ್ನು ಇನ್ನೊಮ್ಮೆ ನೋಡಿದ್ದು ಅವರ ಪುತ್ರ ಶಿವರಾಜ್ ಕುಮಾರ್ ಅವರ ಮೊದಲ ಚಿತ್ರ ಆನಂದ ಬಿಡುಗಡೆಯ ಔತಣಕೂಟದಲ್ಲಿ. ಆನಂದ್ ಸಿನೆಮಾ ಹೇಗಿದೆ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಆಗ ನಾನು ಹೇಳಿದ್ದು;ನಿಮ್ಮ ಅತಿ ದೊಡ್ದ ಶಕ್ತಿ ಎಂದರೆ ಡೈಲಾಗ್ ಪ್ರಸೆಂಟೇಷನ್. ಅಂತಹ ಸ್ಪಷ್ಟತೆ ಕನ್ನಡದಲ್ಲಿ ಇನ್ಯಾರಿಗೂ ಇಲ್ಲ. ಆದರೆ ಶಿವರಾಜಕುಮಾರ್ ಅವರು ಸಂಭಾಷಣೆಯನ್ನು ಹೇಳುವ ರೀತಿಯಲ್ಲಿ ಶಕ್ತಿಯೇ ಇಲ್ಲ. ಯಾವುದೋ ಭಾಷೆಯನ್ನು ಕೇಳಿದಂತೆ ಆಗುತ್ತದೆ.
ಡಾ. ರಾಜ್ ನಾನು ಹೇಳಿದ ಮಾತಿಗೆ ಸಹಮತ ವ್ಯಕ್ತಪಡಿಸಿದರು. ನಾಟಕ ಕಂಪೆನಿಗಳಲ್ಲಿ ತಮಗೆ ದೊರಕಿದ ಅನುಭವವೇ ಇದಕ್ಕೆ ಕಾರಣ ಎಂದರು. ಹಾಗೆ ಶಿವರಾಜಕುಮಾರ್ ವಿದ್ಯಾರ್ಥಿ ಜೀವನವನ್ನು ಮದ್ರಾಸಿನಲ್ಲಿ ಕಳೆದಿದ್ದು ಇದಕ್ಕೆ ಕಾರಣ ಎಂದರು.ಇದೆಲ್ಲ ಬಂಗಾರದ ಮನುಷ್ಯ ನೋಡಿದಾಗ ನೆನಪಾಯಿತು.

ಬಂಗಾರದ ಮನುಷ್ಯ ಸಿನೆಮಾ ಒಂದು ನೀಟ್ ಆದ ಸಿನೆಮಾ. ಜೊತೆಗೆ ಅಲ್ಲಿ ತ್ಯಾಗವಿದೆ. ಒಕ್ಕಲುತನದ ವೈಭವೀಕರಣವಿದೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯ ಪರವಾದ ಧ್ವನಿಯಿದೆ. ಅಂದಿನ ಕಾಲಘಟ್ಟದಲ್ಲಿ ಎಲ್ಲರೂ ಒಪ್ಪಿ, ಅಪ್ಪಿಕೊಳ್ಳುವ ಸಿನೆಮಾ ಅದು. ಆದರೆ ಇಂದು ನಿಂತು ನೋಡಿದರೆ ಈ ಸಿನೆಮಾ ನಮ್ಮ ಮೇಲೆ ಬೀರುವ ಪರಿಣಾಮವೇ ಬೇರೆ. ಅಂದು ನಮಗೆ ಈ ಸಿನೆಮಾ ಇಷ್ಟವಾದಷ್ಟು ಇಂದು ಇಷ್ಟವಾಗುವುದಿಲ್ಲ. ಯಾಕೆಂದರೆ ಈ ಸಿನೆಮಾ ಹೇಳಲು ಹೊರಟಿರುವ ವಸ್ತು, ಇಂದು ವಸ್ತು ಅಲ್ಲ. ಇಂದು ನಮ್ಮ ಮುಂದಿರುವ ಸವಾಲುಗಳೇ ಬೇರೆ. ನಮ್ಮನ್ನು ಕಾಡುವ ವಿಚಾರಗಳೇ ಬೇರೆ. ನಗರ ಮತ್ತು ಗ್ರಾಮೀಣ ಬದುಕಿನ ಆಯ್ಕೆಯ ನಡುವಿನ ಸಂಘರ್ಷ ಇಂದು ಬೇರೆ ರೂಪವನ್ನು ಪಡೆದಿದೆ. ಅದು ಬಂಗಾರದ ಮನುಷ್ಯ ಸಿನೆಮಾ ಹೇಳುವಷ್ಟು ಸರಳವಾಗಿಲ್ಲ. ಜೊತೆಗೆ ತ್ಯಾಗ, ಇಂದು ಬದುಕಿನ ಮೌಲ್ಯವಾಗಿ ಉಳಿದಿಲ್ಲ.

ಒಂದು ಸಾರ್ವಕಾಲಿಕ ಉತ್ತಮ ಸಿನೆಮಾ ಮತ್ತು ಒಂದು ಕಾಲಘಟ್ಟದ ಉತ್ತಮ ಸಿನೆಮಾದ ನಡುವಿನ ವ್ಯತ್ಯಾಸ ಇದೇ. ಒಂದು ಸಿನೆಮಾ ಯಾವಾಗ ಸಾರ್ವಕಾಲಿಕ ಸಿನೆಮಾ ಆಗುತ್ತದೆ ಎಂದರೆ, ಅದು ಕಾಲವನ್ನು ಮೀರಿ ಮನುಷ್ಯನ ಅನುಭವಗಳ ಮೇಲಿನ ಭಾಷ್ಯವಾಗಬೇಕು. ಕಾಲವನ್ನು ಮೀರಿ ನಿಲ್ಲುವ ಸಿನೆಮಾವೇ ಅತ್ಯುತ್ತಮ ಸಿನೆಮಾ ಎಂದು ನಾನು ನಂಬಿದ್ದೇನೆ.

ಬಂಗಾರದ ಮನುಷ್ಯ ಕಾಲವನ್ನು ಮೀರಿದ ಅತ್ಯುತ್ತಮ ಸಿನೆಮಾ ಆಗದಿದ್ದರೂ ಅದು ನಮ್ಮನ್ನು ಭೂತಕಾಲಕ್ಕೆ ಕರೆದೊಯ್ಯುತ್ತದೆ. ಅಂದಿನ ಸಿನೆಮಾಗಳ ವ್ಯಾಕರಣ, ಬದುಕಿನ ದೃಷ್ಟಿ ಎಲ್ಲವನ್ನೂ ನೆನಪು ಮಾಡಿಕೊಡುತ್ತದೆ. ಇದಕ್ಕಾದರೂ ಈ ಸಿನೆಮಾವನ್ನು ಇನ್ನೊಮ್ಮೆ ನೋಡಬೇಕು.

No comments: