Tuesday, December 27, 2011

ಚಳಿಗಾಳಿಯ ನಡುವೆ ರಾಜಕೀಯದ ಮಂಗಾಟ. ದೀರ್ಘ ರಾತ್ರಿಯ ಋತುವಿನಲ್ಲಿ ಬೆಳಕಿಗಾಗಿ ಧ್ಯಾನ...


ಉತ್ತರಾಧಿಕಾರಿ ಯಾರು ? ಈ ಅಪ್ಪುಗೆಯ ಬಿಸಿ ತಟ್ಟುವುದು ಯಾರಿಗೆ ?

ಇಂದು ಬುಧವಾರ. ಬೆಂಗಳೂರಿನಲ್ಲಿ ವರ್ಷಕ್ಕಿಂತ ಹೆಚ್ಚು ಚಳಿ. ಬೆಳಿಗ್ಗೆ ಬೇಗ ಏಳಬೇಕು ಎಂದು ರಾತ್ರಿ ತೆಗೆದುಕೊಂಡ ತೀರ್ಮಾನ ಬೆಳಿಗ್ಗೆ ಅನುಷ್ಠಾನಕ್ಕೆ ಬರುವುದು ಕಷ್ಟ. ಇನ್ನೂ ಸ್ವಲ್ಪ ಹೊತ್ತು ಹಾಸಿಗೆಯಲ್ಲಿ ಉರುಳಾಡಲು ಇಷ್ಟ ಪಡುವ ಮನಸ್ಸು. ಇಂತಹ ಮನಸ್ಸು ಆಗಲೇ ಹಲವು ಸಬೂಬುಗಳನ್ನು ಸೃಷ್ಟಿ ಮಾಡಿಕೊಂಡಿರುತ್ತದೆ. ಇವತ್ತು ಬೇಡ, ತುಂಬಾ ಚಳಿ ಇದೆ, ಈ ಚಳಿಯಲ್ಲಿ ಹೊರಗೆ ವಾಕಿಂಗ್ ಗೆ ಹೋದರೆ, ಸೈನಸ್ ಸಮಸ್ಯೆ ಹೆಚ್ಚಾಗಬಹುದು ಎಂಬುದು ಒಂದು ಸಬೂಬು. ಇಂತಹ ಸಬೂಬು ಸಿಕ್ಕ ತಕ್ಷಣ ದೇಹ ಹಾಗೆ ಚಾದರದ ಒಳಗೆ ನುಸುಳಿದಂತೆ ಮಲಗಿ ಬಿಡುತ್ತದೆ.
ಕೊನೆಗೆ ಅನಿವಾರ್ಯವಾಗಿ ಎದ್ದು ಒಂದು ಕಪ್ ಕಾಫಿ ಹೀರಿ ಪತ್ರಿಕೆಗಳನ್ನು ಮಗುಚಿ ಹಾಕಿದರೆ, ಯಾವುದೂ ಸುದ್ದಿಯಂದೇ ಅನ್ನಿಸುವುದಿಲ್ಲ. ಎಲ್ಲವೂ ನಮಗೆ ಗೊತ್ತಿರುವುದೇ ಎಂದು ಅನ್ನಿಸುತ್ತದೆ. ಯಾವುದೇ ಒಂದು ವರದಿಯನ್ನು ಓದಲು ಮನಸ್ಸಾಗುವುದಿಲ್ಲ. ನಂತರ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲೇ ಟೀವಿ ಹಚ್ಚಿದರೆ, ನಮ್ಮ ಸುದ್ದಿ ವಾಚಕರು ನಿಮ್ಮ ಬಳಿ ಹೆಚ್ಚಿನ ಮಹಿತಿ ಏನಿದೆ ಎಂದು ಅದೇ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಆಗಲೇ ಇವತ್ತಿಗೂ ನಿನ್ನೆಗೂ ಏನೂ ವ್ಯ
ತ್ಯಾಸವಿಲ್ಲ ಎಂದು ಅನ್ನಿಸಲು ಪ್ರಾರಂಭವಾಗುತ್ತದೆ. ಆಗ ಮನಸ್ಸು ಇನ್ನಷ್ಟು ಮುದುಡುತ್ತದೆ. ಇರಲಿ ಬಿಡಿ. ಆದರೂ ಇಂದು ನನ್ನನ್ನು ಯೋಚನೆಗೆ ಹಚ್ಚಿದ್ದು ಎರಡು ಪ್ರಮುಖ ಘಟನೆಗಳು.
ಮುಖ್ಯಮಂತ್ರಿ ಸದಾನಂದಗೌಡ, ಮತ್ತು ರಾಜ್ಯ ಬಿಜೆಪಿ ಅಧ್ಯಕ್ಶ ಈಶ್ವರಪ್ಪ, ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಯಡಿಯೂರಪ್ಪನವರ ಯಡವಟ್ತು ರಾಜಕೀಯದ ವಿವರಣೆ ನೀಡುತ್ತಿದ್ದಾರೆ. ದಯವಿಟ್ಟು ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿ ಎಂದು ಗೋಗರೆಯುತ್ತಿದ್ದಾರೆ. ಇಲ್ಲಿ ಬೆಂಗಳೂರಿನಲ್ಲಿ ಯಡಿಯೂರಪ್ಪನವರು ತಮ್ಮ ಹಿಂಬಾಲಕ ನಾಯಕರ ಸಭೆ ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರ ವಿರುದ್ಧ ಸಡ್ದು ಹೊಡೆದಿರುವ ಅವರು ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡದಿದ್ದರೆ ಹುಷಾರು ಎಂಬ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ.
ಆದರೆ ಬಿಜೆಪಿ ವರಿಷ್ಠರು ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಮಗುವನ್ನು ಚುವುಟಿ, ತೊಟ್ಟಿಲು ತೂಗುವ ಕಾಯಕ ಅವರದು. ಪ್ರಾಯಶಃ ಯಡಿಯೂರಪ್ಪನವರಿಂದ ಪಡೆದುಕೊಂಡಿದ್ದು ನೆನಪಾಗಿ ನೈತಿಕ ಪ್ರಜ್ನೆ ಅವರಿಗೆ ಕಾಡುತ್ತಿರಬಹುದು ! ಒಟ್ಟಿನಲ್ಲಿ ಯಡಿಯೂರಪ್ಪ ಅವರನ್ಮ್ನು ಬಿಡಲು ಸಾಧ್ಯವಾಗದೇ ಅವರನ್ನು ಇಟ್ಟುಕೊಳ್ಳಲೂ ಆಗದೇ ಬಿಜೆಪಿ ವರಿಷ್ಠರು ತೊಳಲಾಡುತ್ತಿದ್ದಾರೆ.
ಯಡೀಯೂರಪ್ಪನವರಿಗೆ ಅಧಿಕಾರವಿಲ್ಲದೇ ಬದುಕುವುದು ಸಾಧ್ಯವಿಲ್ಲ ಎಂದು ಅನ್ನಿಸಿಬಿಟ್ಟಿದೆ. ಅವರ ಹಿಂಬಾಲಕರಿಗೆ ಸದಾನಂದಗೌಡರು ಪ್ರಾಮಾಣಿಕರಾಗಿ ಇರುವುದು ಬೇಕಾಗಿಲ್ಲ. ತಮಗೆ ಮೇಯಲು ಅವಕಾಶವಿಲ್ಲ ಎಂಬ ದುಃಖ ಅವರದು. ಸದಾನಂದ ಗೌಡರು ಎಂದೂ ಬೆನ್ನೆಲುಬು ಇದೆ ಎಂದು ತೋರಿಸಿದವರಲ್ಲ. ಈಗ ಎದ್ದು ನಿಲ್ಲಲು ಬಗ್ಗಿಯೇ ಇದ್ದ ಬೆನ್ನು ಅಡ್ಡಿಯಾಗುತ್ತಿದೆ. ನೆಟ್ಟಗಾಗುವುದಕ್ಕೂ ನೋವು..!
ಈಶ್ವರಪ್ಪ ಎಂಬ ಬಿಜೆಪಿ ರಾಜ್ಯಾಧ್ಯಕ್ಷರದು ಯಾವ ಸಮಯಕ್ಕೆ ಮನಸ್ಸು ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರದು ಚಂಚಲ ಚಿತ್ತ. ಲಾಭವಿದ್ದ ಕಡೆ ಗೊತ್ತಿಲ್ಲದಂತೆ ಜಾರಿ ಬಿಡುವ ಯಡಬಿಡಂಗಿ ಮನಸ್ಸು ಅವರದು. ಅವರನ್ನು ಕಟ್ಟಿಕೊಂಡವರು ಉದ್ಧಾರವಾಗುವುದು ಕಷ್ಟ. ಒಂದು ರೀತಿಯಲ್ಲಿ ಅತೃಪ್ತರು ಮತ್ತು ದುಃಖತಪ್ತರ ಸಮೂಹ ಇದು.
ಇಂದು ಬೆಳಿಗಿನಿಂದ ಇನ್ನೊಂದು ವಿದ್ಯಮಾನ ನಡೆಯುತ್ತಿದೆ. ನಮ್ಮ ಬಹುತೇಕ ಸುದ್ದಿ ವಾಹಿನಿಗಳು ಈ ವಿಚಾರವನ್ನೇ ಇಟ್ಟುಕೊಂಡು ಇಡೀ ದಿನ ಚರ್ಚೆ ಮಾಡಿವೆ. ಅದು ಕುಮಾರ ವರ್ಸಸೆಸ್ ಮಧು. ಇವರಿಬ್ಬರು ಬಂಗಾರಪ್ಪನವರ ಮಕ್ಕಳು. ಅಪ್ಪನ ಅಂತ್ಯ ಸಂಸ್ಕ್ರಾರದಲ್ಲೂ ಉತ್ತರಾಧಿಕಾರದ ಜಗಳ ತಾರಕಕ್ಕೆ ಏರಿದೆ. ಒಬ್ಬರು ಬರುವುದಕ್ಕಿಂತ ಮೊದಲು ಇನ್ನೊಬ್ಬರು ತಲೆ ಬೋಳಿಸಿಕೊಂಡು ಬಂದು ನಿಂತ ದೃಶ್ಯ. ಮಧ್ಯೆ ನಮ್ಮ ಧಾರಾವಹಿ ಸಿನಿಮಾಗಳನ್ನು ಹೆದರಿಸುವಂತೆ ಹರಿಯುವ ಕಣ್ಣೀರ ಧಾರೆ. ಅಗಲಿದ ನಾಯಕನ ಮುಂದೆ ಇವರು ಮಾಡುತ್ತಿರುವುದನ್ನು ನೋಡಿದರೆ ಇದಕ್ಕಾಗಿಯೇ ಇವರೆಲ್ಲ ಕಾಯುತ್ತಿದ್ದರೇನೋ ಎಂದು ಅನ್ನಿಸುತ್ತದೆ.
ನಾಯಕತ್ವ ಎನ್ನುವುದು ಅಪ್ಪನಿಂದ ಮಗನಿಗೆ ಬರುವ ಪಿತ್ರಾರ್ಜಿತ ಆಸ್ತಿಯಲ್ಲ. ಒಬ್ಬ ನಾಯಕ ಜನರ ನಡುವೆ ಹುಟ್ಟಿ ಬೆಳೆಯುತ್ತಾನೆ. ನಾಯಕ ಸ್ವಯಂ ಘೋಷಣೆಯಿಂದ ಆವಿರ್ಭವಿಸುವುದಿಲ್ಲ. ಇಂತಹ ಸಾಮಾನ್ಯ ಜ್ನಾನ ಕೂಡ ಇವರಿಗೆ ಇಲ್ಲ.
ಡಿಸೆಂಬರ್ ತಿಂಗಳ ಚಳಿಯ ನಡುವೆ ಇಂತಹ ಮೂರ್ಖರು ಅಯೋಗ್ಯರು ವಿಜೃಂಭಿಸುವುದು ಕಾಣುತ್ತಿದೆ. ಇವರಿಗೆ ಬದುಕನ್ನು ಅನುಭವಿಸುವುದಕ್ಕೂ ಬರುವುದಿಲ್ಲ. ಅಧಿಕಾರವನ್ನು ಹೇಗೆ ಪಡೆಯಬೇಕು ಎಂಬುದು ಗೊತ್ತಿಲ್ಲ. ನಾಯಕರಾಗುವುದು ಹೇಗೆ ಎಂಬ ಸಾಮಾನ್ಯ ಜ್ನಾನ ಕೂಡ ಇವರಿಗಿಲ್ಲ..
ಸಾಕು ಚಳಿ ಹೆಚ್ಚುತ್ತಿದೆ. ಬೆಚ್ಚನೆಯ ಚಾದರದೊಳಗೆ ಹೊಕ್ಕು ಕುಳಿತು ಕನಸು ಕಾಣುವ ಸುಖವೇ ಬೇರೆ. ದೀರ್ಘ ರಾತ್ರಿಯ ಈ ದಿನಗಳಲ್ಲಿ ಹಗಲಿಗಾಗಿ ಕಾಯುತ್ತ ಕನಸು ಕಾಣುವುದೇ ಹೆಚ್ಚು ಸಂತೋಷದಾಯಕ.

No comments: