ಪ್ರೀತಿಯ ಸತ್ಯ ಮತ್ತು ಲಂಕೇಶ್
ಮೊನ್ನೆ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿದ್ದರು. ಸಾರ್ ಈಗ ನೀವು ಏನು ಮಾಡುತ್ತಿದ್ದೀರಿ ಎಂಬುದು ಅವರ ಮೊದಲ ಪ್ರಶ್ನೆ. ಈ ಪ್ರಶ್ನೆಯನ್ನು ಅವರೊಬ್ಬರೇ ಅಲ್ಲ ಹಲವರು ಕೇಳುತ್ತಿದ್ದಾರೆ. ಆದರೆ ಇದಕ್ಕೆ ಉತ್ತರ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಮೇಲ್ನೋಟಕ್ಕೆ ನಾನು ಇದನ್ನೇ ಮಾಡುತ್ತಿದ್ದೇನೆ ಎಂದು ಹೇಳಲು ನನ್ನ ಬಳಿ ಏನೂ ಇಲ್ಲ. ಒಂದು ಅರ್ಥದಲ್ಲಿ ನಾನು ಏನನ್ನೂ ಮಾಡುತ್ತಿಲ್ಲ. ಆದರೆ ಬದುಕಿನ ಸವಾಲುಗಳು ಎದುರಿಗೆ ಬಂದು ನಿಂತಾಗ ಸುಮ್ಮನೆ ಇರಲೂ ಆಗುವುದಿಲ್ಲ. ಏನನ್ನಾದರೂ ಮಾಡಲೇಬೇಕು. ಮಾಡಬೇಕು ಎನ್ನ್ವುವುದು ಮಾಡಲು ಸಾಧ್ಯವಾಗುತ್ತದೆ ಎಂದೇನೂ ಅಲ್ಲ. ಆದರೆ ಬದುಕಿಗೆ ಬೆನ್ನು ತಿರುಗಿಸಿ ಓಡಿಹೋಗುವುದು ನನ್ನ ಸ್ವಭಾವವಲ್ಲ. ಹೀಗಾಗಿ ಏನಾದರೂ ಮಾಡುತಿರು ತಮ್ಮಾ ಎನ್ನುವಂತೆ ಏನಾದರೂ ಮಾಡಲು ಯತ್ನ ನಡೆಸುವುದು ನನ್ನ ಜಾಯಮಾನ.
ನನಗೆ ದೂರವಾಣಿ ಕರೆ ಮಾಡಿದ ಸ್ನೇಹಿತರು ಇನ್ನು ಒಂದು ಅದ್ಬುತವಾದ ಸಲಹೆ ನೀಡಿದರು.
ನೀವು ಯಾವುದಾದರೂ ಅಕಾಡೆಮಿಗೆ ಟ್ರಾಯ್ ಮಾಡಬಹುದಿತ್ತಲ್ಲ, ಕೊನೆ ಪಕ್ಷ ರಾಜ್ಯೋತ್ಸವ, ಅಥವಾ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಾದರೂ ಯತ್ನ ಮಾಡಬಹುದಿತ್ತು ಎಂದರು ಅವರು. ಅವರು ಹೇಳಿದ ಮಾತಿನಲ್ಲಿ ವ್ಯಂಗ್ಯವಾಗಲೀ, ಧೂರ್ತತನವಾಗಲಿ ಇರಲಿಲ್ಲ. ತುಂಬಾ ಸಹಜವಾಗಿ ಅವರು ಈ ಮಾತುಗಳನ್ನು ಹೇಳುತ್ತಿದ್ದರು.
ಆದರೆ ಈ ಮಾತಿನಿಂದ ನನ್ನ ಅರಿವಿಗೆ ಬಂದ ಅಂಶಗಳು ಹಲವು. ಮೊದಲನೆಯದಾಗಿ ನಿರುದ್ಯೋಗಿಗಳಾದವರು. ಯಾವುದಾದರೂ ಪ್ರಶಸ್ತಿಗಳಿಗಾಗಿ ಯತ್ನ ನಡೆಸಬೇಕು, ಅದರಿಂದ ನಿರುದ್ಯೋಗದ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಬಗೆಹರಿಯುತ್ತದೆ...!
ಎರಡನೆಯದಾಗಿ ಅಕಾಡೆಮಿಗೂ ಯತ್ನ ನಡೆಸಬಹುದು. ಅದೂ ಸಹ ನಿರುದ್ಯೊಗ ಸಮಸ್ಯೆಗೆ ಇನ್ನೊಂದು ಪರಿಹಾರ...!!
ಇದರ ಜೊತೆಗೆ ನನ್ನ ಮನಸ್ಸಿಗೆ ಬಂದ ಮತ್ತೊಂದು ಅಂಶ ಎಂದರೆ, ಸರ್ಕಾರದ ಪ್ರಶಸ್ತಿಗಳು ಮತ್ತು ಅಕಾಡೆಮಿಯಲ್ಲಿ ಸ್ಥಾನಮಾನಗಳು ಪ್ರಯತ್ನ ಮಾಡದೇ ದೊರಕುವುದಿಲ್ಲ ಎಂಬುದು.
ನಾನು ಅವರಿಗೆ ಹೇಳಿದೆ.
ನಾನು ತುಂಬಾ ಮೆಚ್ಚುವ ಹಲವು ಪತ್ರಕರ್ತರಿದ್ದಾರೆ. ಅವರಲ್ಲಿ ಕೆಲವರನ್ನು ನಾನು ಗುರುಗಳು ಎಂದು ಗೌರವಿಸುತ್ತೇನೆ. ಅವರು ಯಾವ ಸಂದರ್ಭದಲ್ಲಿಯೂ ಪ್ರಶಸ್ತಿಗಳಿಗಾಗಿ ಆಸೆ ಪಟ್ಟವರಲ್ಲ. ಅವರು ನನಗೆ ಕಲಿಸಿದ್ದು ಇದನ್ನೇ. ನಾನು ಗೌರವಿಸುವ ಇಬ್ಬರು ಪತ್ರಕರ್ತರೆಂದರೆ ಪಿ. ಲಂಕೇಶ್ ಮತ್ತು ಕನ್ನಡ ಪ್ರಭದ ಸತ್ಯನಾರಾಯಣ. ಅವರಿಬ್ಬರೂ ಎಂದು ಪ್ರಶಸ್ತಿಗಾಗಿ ಆಸೆ ಪಟ್ಟವರಲ್ಲ, ಲಾಬಿ ನಡೆಸಿದವರಲ್ಲ.
ವಿಚಿತ್ರ ಮೋಹಿಯಾಗಿದ್ದ ಲಂಕೇಶ್ ಪ್ರಶಸ್ತಿಗಳನ್ನು ಅಪಾಯದ ಸಂಕೇತ ಎಂದೇ ಭಾವಿಸಿದ್ದರು. ಜೊತೆಗೆ ಪತ್ರಕರ್ತನಾದವನು ಎಲ್ಲರಿಂದ ದೂರ ನಿಂತು ನಿರ್ಮೋಹಿಯಾಗಿ ನೋಡಬೇಕು ಎಂದು ಹೇಳುತ್ತಿದ್ದವರು. ಸತ್ಯ ಅವರು ಒಂದು ರೀತಿಯಲ್ಲಿ ನಿರ್ಮೋಹಿಯೇ. ಕರ್ನಾಟಕದ ರಾಜಕಾರಣವನ್ನು ಸುಮಾರು ಐವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ ಅವರು ಮುಖ್ಯಮಂತ್ರಿಗಳನ್ನು, ಇತರ ರಾಜಕಾರಣಿಗಳನ್ನು ತಮ್ಮ ಬರೆಹಗಳಿಂಡ ನಡುಗಿಸಬಲ್ಲವರು. ಅವರ ಒಂದು ಇಶಾರೆಗೆ ಅವರ ಬಯಕೆಯನ್ನು ಈಡೇರಿಸಲು ರಾಜಕಾರಣಿಗಳು ತುದಿಗಾಲ ಮೇಲೆ ನಿಂತಿರುತ್ತಿದ್ದರು. ಅವರು ಪತ್ರಿಕಾಗೋಷ್ಠಿಗೆ ಬಂದರೆ, ರಾಜಕಾರಣಿಗಳಿಗೆ ತೊಡೆ ನಡುಕ ಪ್ರಾರಂಭವಾಗುತ್ತಿತ್ತು. ಆದರೆ ಅವರೆಂದೂ ರಾಜಕಾರಣಿಗಳ ಮನೆ ಬಾಗಿಲಿಗೆ ಹೋದವರಲ್ಲ. ಇಂದಿಗೂ ಬಸ್ಸು ಮತ್ತು ಅಟೋದಲ್ಲಿ ಓಡಾಡುವ ಅವರು ನನ್ನಂಥವರ ಪಾಲಿಗೆ ಒಂದು ವಿಸ್ಮಯ.
ಕನ್ನಡ ಪ್ರಭ ಕಚೇರಿಯ ಪಕ್ಕದಲ್ಲಿದ್ದ ಶಾಂ ಪ್ರಕಾಶ್ ಹೋಟೆಲು ಅವರ ಅಡ್ಡಾ. ಅಲ್ಲಿಯೇ ಕುಳಿತು ರಾಜಕೀಯ ಆಗು ಹೋಗುಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದ ಅವರು ಬರೆಯಲು ಕುಳಿತರೆ ಕೆಲವೇ ನಿಮಿಷಗಳಲ್ಲಿ ಅವರ ಬರೆಹ ಸಿದ್ಧವಾಗುತ್ತಿತ್ತು. ಬಸ್ ಸ್ಟಾಪಿನಲ್ಲೋ, ಯಾವುದೋ ಹೋಟೆಲಿನಲ್ಲೋ ಕುಳಿತ ರಾಜಕಾರಣವನ್ನೇ ಧ್ಯಾನಿಸುವ ಸತ್ಯ ರಾಜಕಾರಣಿಗಳನ್ನು ಸದಾ ಸಂಶಯದಿಂದಲೇ ನೋಡುತ್ತ ಬಂದಿದ್ದಾರೆ. ಪತ್ರ ಕರ್ತನಾದವನಿಗೆ ಒಂದು ಸಣ್ಣ ಸಂಶಯ ಇರಬೇಕು. ನಮ್ಮ ಎದುರು ಮಾತನಾಡುತ್ತಿರುವವನು ಸುಳ್ಳು ಹೇಳುತ್ತಿರಬೇಕು ಎಂಬ ಅಪ ನಂಬಿಕೆ ಇರಬೇಕು. ಈ ಅಪನಂಬಿಕೆ ನಮ್ಮಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಪ್ರಶ್ನೆಗಳನ್ನು ಕೇಳುತ್ತಲೇ ಹೋದರೆ ಸತ್ಯದ ಅನಾವರಣವಾಗುತ್ತದೆ ಎಂಬ ಮಾತುಗಳಿಗೆ ಜೀವಂತ ಉದಾಹರಣೆ ಸತ್ಯ.
ಖಾದ್ರಿ ಶಾಮಣ್ಣ ಅವರು ಸಂಪಾದಕರಗಿದ್ದಾಗ ಅವರ ಜೊತೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಸತ್ಯ ಹೊಂದಿದ್ದರು. ಕನ್ನಡ ಪ್ರಭ ಹೆಗಡೆ ಅವರ ತುತ್ತೂರಿಯಾಗುತ್ತಿದೆ ಎಂದು ಹಲವು ಬಾರಿ ಖಾದ್ರಿಯವರಿಗೆ ಎಚ್ಚರಿಕೆ ನೀಡಲು ಅವರು ಹಿಂದೆ ಮುಂದೆ ನೋಡಲಿಲ್ಲ. ಖಾದ್ರಿಯವರಿಗೂ ಸತ್ಯ ಅವರ ಬಗ್ಗೆ ಭಯ ಮಿಶ್ರಿತವಾದ ಗೌರವ ಇತ್ತು. ಸತ್ಯ ಮಾತನಾಡಿದರೆ ಖಾದ್ರಿ ಸುಮ್ಮನಾಗುತ್ತಿದ್ದರು.
ಹೀಗೆ ದೂರವಾಣಿ ಕರೆ ಮಾಡಿದ ಸ್ನೇಹಿತರಿಗೆ ಕೆಲವು ಮಾತುಗಳನ್ನು ಹೇಳಿದೆ. ನನ್ನಂತಹ ಪತ್ರಕರ್ತರು ವಿಚಿತ್ರ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ತಾತ್ವಿಕ ಕಾರಣಗಳಿಗಾಗಿ ಹಲವರ ವಿರೋಧವನ್ನು ಕಟ್ಟಿಕೊಳ್ಳುತ್ತೇವೆ. ಈ ತಾತ್ವಿಕ ವಿರೋಧವನ್ನು ಬಹಳಷ್ಟು ಜನ ವೈಯಕ್ತಿಕ ವಿರೋಧವನ್ನಾಗಿ ಪರಿಗಣಿಸಿಬಿಡುತ್ತಾರೆ. ವೈಯಕ್ತಿಕ ವಿರೋಧಕ್ಕೆ ತಾತ್ವಿಕ ಅಂತ್ಯವನ್ನು ನಿಡಲು ಮುಂದಾಗುತ್ತಾರೆ. ಆ ಸಂದರ್ಭಗಳಲ್ಲಿ ತಾತ್ವಿಕ ವಿರೋಧ ಮಾಡಿದವರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಇದನ್ನೆಲ್ಲ ನಾನು ಪ್ರಶಸ್ತಿಯ ಕಾರಣದಿಂದ ಹೇಳುತ್ತಿಲ್ಲ.
ತಾತ್ವಿಕತೆ ಎನ್ನುವುದು ಮರೆಯಾಗುತ್ತಿರುವ ಹೊಂದಾಣಿಕೆ ಎನ್ನುವುದೇ ಬಹಳ ಮುಖ್ಯವಾಗಿರುವ ಕಾಲ ಘಟ್ಟ ಇದು. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವವರು ವಿಜೄಂಭಿಸುತ್ತಿರುವುದನ್ನು ನಾವು ನೋಡುತ್ತಿರುವಾಗ ಇದರಿಂದ ಎದೆಗುಂದಬೇಕಾಗಿಲ್ಲ ಎಂದೇ ನಾನು ನಂಬಿದ್ದೇನೆ. ಕನ್ನಡ ಪತ್ರಿಕೋದ್ಯಮದ ಹೆಜ್ಜೆ ಗುರುತುಗಳನ್ನು ನೋಡುವ ಕಣ್ಣುಗಳು ನಮಗಿದ್ದರೆ, ವರ್ತಮಾನ ಮತ್ತು ಭವಿಷ್ಯದ ದಾರಿ ನಮಗೆ ಸ್ಪಷ್ಟವಾಗುತ್ತದೆ. ದಾರಿಯೊಂದನ್ನು ಆರಿಸಿಕೊಂಡ ಮೇಲೆ ನಾವು ಹಿಂತಿರುಗಿ ನೋಡಬೇಕಾದ ಅಗತ್ಯ ಇರುವುದಿಲ್ಲ.
ಇನ್ನೊಬ್ಬ ಸ್ನೇಹಿತರು ಹೇಳಿದರು
ನೀವು ಪತ್ರಿಕಾ ಮಾಧ್ಯಮಕ್ಕೆ ಹಿಂತಿರುಗಿ ಬಿಡಿ. ಯಾಕೆ ಸುಮ್ಮನೆ ಈ ಟೀವಿಗಳ ಉಸಾಪರಿ ?
ಈ ಪ್ರಶ್ನೆಯನ್ನು ಕೇಳಿದವರೂ ಸಹ ನನ್ನ ಬಗ್ಗೆ ಪ್ರಾಮಾಣಿಕವಾದ ಕಳಕಳಿ ಇಟ್ಟುಕೊಂಡವರೇ. ಅವರಿಗೆ ನಾನು ಉತ್ತರ ನೀಡಿದ್ದು ಹೀಗೆ;
ಒಂದು ಬಾಗಿಲು ಮುಚ್ಚಿಕೊಂಡರೆ, ಇನ್ನೊಂದು ಬಾಗಿಲು ಯಾವಾಗ ಬೇಕಾದರೂ ತೆರೆಯಬಹುದು. ತೆರೆಯುವ ಬಾಗಿಲಿಗೆ ನಾವು ಕಾಯಬೇಕು. ಬಾಗಿಲು ತೆರೆದಿಲ್ಲ ಎಂದು ಜಾಸ್ತಿ ಬಾಗಿಲು ಬಡಿದರೆ, ಶಬ್ದ ಮಾಲಿನ್ಯ ಉಂಟಾಗುತ್ತದೆ. ತೆರೆಯುವ ಬಾಗಿಲಿಗೆ ಕಾಯುವುದು ಬದುಕಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ......!
1 comment:
ಬದುಕಿನ ಸತ್ಯಗಳನ್ನು ತೆರೆದಿಟ್ಟ ಲೇಖನ
Post a Comment