Saturday, January 14, 2012

ಗೆಳೆಯರ ಮಾತು


ಅವರಿಗೆ ಇವರು ಸ್ನೇಹಿತ, ಇವರಿಗೆ ಅವರು ಸ್ನೇಹಿತ
ಸ್ನೇಹಿತರ ಕೈಯಲ್ಲೇ ಅಯುಧ
ಎಲ್ಲಿ ಇರಿಯಲಿ ?, ತೆಗೆಯಲೇ ತಲೆ ? ಬಗೆಯಲೇ ಹೊಟ್ಟೆ ?
ಇಡಲೇ ಕುಂಡೆಯ ಮೇಲೆ ಒಂದು ಬರೆ ?
ನೋವಾಗುತ್ತಿದೆಯೆ ? ಆಯುಧ ಅಂತಹ ಹರಿತವೇನಿಲ್ಲ
ಸ್ವಲ್ಪ ಹಳೆಯದಾದರೂ ಮಾಡುತ್ತದೆ ತನ್ನ ಕೆಲಸ
ಯಾರಿಗೂ ತಿಳಿಯದ ಹಾಗೆ

ಎಲ್ಲವೂ ಸಿದ್ಧವಾಗಿದೆ, ಉರಿಯುತ್ತಿದೆ ಬೆಂಕಿ, ಮೇಲೆ ಬಾಣಲೆ
ಬೆಂಕಿಯಲ್ಲಾದರೂ ಹಾಕಬೇಕು, ಬಾಣಲೆಯಲ್ಲಾದರೂ ಕುದಿಸಬೇಕು
ಮನಸು ಕುದಿದ ಮೇಲೆ ಕೊಡಲೇ ಬೇಕು ಬಲಿ
ಸಾರಿ, ನಾನೇನು ಮಾಡಲಿ ?

ಎಲ್ಲವೂ ಪ್ರಾರಂಭವಾಗಿತ್ತು ನೀನು ನೋಡಿದ ಕೂಡಲೆ.
ಮಾತು ಪ್ರಾರಂಭಿಸಿದಾಗಲೆ.
ಅಲ್ಲಿದ್ದ ಒಂದೇ ಒಂದು ಪೀಠದ ಮೇಲೆ ನೀನು ಕುಳಿತಾಗಲೆ,
ಆಗಲೇ ಸಿದ್ಧವಾಗಿತ್ತು, ಅಗ್ನಿ ಕುಂಡ,
ನೀ ಏನನ್ನೂ ಬಿಟ್ತು ಕೊಡದ ಭಂಡ, ಜಗಮೊಂಡ,
ಸಾರಿ ನಾನೇನು ಮಾಡಲಿ ?

ಹೀಗಿದ್ದರೂ, ಅಲ್ಲಿ ನಡೆದಿತ್ತು ಮಾತು ಬರೀ ಮಾತು
ಇರಿಯುವುದಿದ್ದರೆ ಇರಿ, ಬಗೆಯುವುದಿದ್ದರೆ ಬಗಿ,
ಹಾಕುವುದಿದ್ದರೆ ಹಾಕು ಬರೆ
ಆದರೆ,
ಶಬ್ದಗಳನ್ನು ಉದಿರಸಬೇಡ, ಶಬ್ದಗಳು ಸತ್ತಹೋದ
ಈ ಘಳಿಗೆಯಲ್ಲಿ.
ಮಾತನ್ನು ಮಥಿಸಿ, ಅರ್ಥವನ್ನು ಭಜಿಸಿ ಸುಮ್ಮನೆ ಕುಳಿತು ಬಿಡು
ಎಲ್ಲವೂ ನಿನ್ನೊಳಗೆ ಇರುವ ಹಾಗೆ.

ಮಾತಿಗೆ ಅರ್ಥ ತುಂಬುವುದೇ ಭಾವ, ಅರ್ಥಕ್ಕೆ ನಿನ್ನೊಳಗಿನದೇ ಮೋಹ
ಶಬ್ದಕ್ಕೆ ಉಣಬಡಿಸು, ನಿನ್ನ ಎದೆಯ ಉರಿಯನ್ನು
ಬಗೆದು ಬಿಡು, ತುಂಬಿ ಬಿಡು, ನುಂಗಿ ಬಿಡು ಎಲ್ಲವನ್ನೂ.

ತುಂಬು ಜೀವಜಲ, ಎದ್ದು ನಿಲ್ಲಲಿ ಶಬ್ದಗಳು, ಮಾಡಲಿ, ಆಡಲಿ ಶಿವತಾಂಡವ
ತೆಗೆದುಕೋ ಶಸ್ತ್ರ ಸನ್ಯಾಸ, ಇಳಿಸಿ ಬಿಡು ಬೆಂಕಿ ಮೇಲಿನ ಬಾಣಲೆಯನ್ನು
ಹಾಕು ಉರಿವ ಬೆಂಕಿಗೆ ನೀರು, ಹೇಗಿದ್ದರೂ ಇದೆಲ್ಲ ನಿನ್ನದೇ ಕಾರು ಬಾರು.
ಸುಮ್ಮನೆ ಮಾತನಾಡಬೇಡ, ಎತ್ತಿ ಒಗೆಯಬೇಡ, ಶಬ್ದ ಸಮೂಹವನ್ನು

ಹೃದಯ ಬಸಿದರೆ ಮಾತ್ರ ಹುಟ್ಟೀತು ಮಾತು, ಇಲ್ಲದಿದ್ದರೆ,
ಮಾತು ಆದೀತು ವ್ಯರ್ಥ, ಎಲ್ಲವೂ ಅನರ್ಥ
ಈಗ ಆಗುತ್ತಿರುವ ಹಾಗೆ.


2 comments:

Sheila Bhat said...

Enta adbhutavada kavana....

ರವಿ ಮೂರ್ನಾಡು said...

ಪ್ರತಿಮೆ ಚೆನ್ನಾಗಿ ಬೆಳೆದು , ಅ೦ತ್ಯಕ್ಕೆರಡು ಕಣ್ಣು ಬಿಟ್ಟಾಗ ಎಷ್ಟು ಚೆಂದದ ಕಾವ್ಯ ಝರಿ ಅಂತ ಖುಷಿ ಪಡುವಂತಹದ್ದು. ಸಾಲು ಸಾಲುಗಳಲ್ಲಿ ಬೆಕ್ಕಸ ಬೆರಗಾಗುವ ಸುಂದರತೆ ಎದ್ದು ಕುಣಿಯುತ್ತದೆ. ಕಾವ್ಯಕ್ಕೆ ಕಾಲಿಡುವ ಸಾಹಿತ್ಯಾಸಕ್ತರು ಇಂತಹ ಕವಿತೆಗಳನ್ನು ಗಮನವಿಟ್ಟು ಆಸ್ವಾಧಿಸಬೇಕು ಎಂಬ ಪ್ರಾರ್ಥನೆ.ನೋಡಿ ಪದ ಪದಗಳಲ್ಲಿ ಪ್ರತಿಮೆ, ಅದಕ್ಕೊಪ್ಪುವ ಭಾವ, ಭಾವಾರ್ಥ,ಅಲ್ಲಿ ತೆರೆದುಕೊಂಡ ಜಗತ್ತು ಹೃದ್ಯವಾಯಿತು. ಅಂತ್ಯವಂತೂ ಕವಿತೆಗೆ ಕಿರೀಟ ತೊಡಿಸಿತು. ಸುಂದರ ಕವಿತೆಯ ಆಸ್ವಾಧನೆಗೆ ಅವಕಾಶ ಕಲ್ಪಿಸಿದ ನಿಮಗೆ ಶುಭವಾಗಲಿ.

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...