ನದಿಯ ದಂಡೆಯ ಮೇಲೆ ಕುಳಿತ ಅವರಿಗೆ ನದಿ ಕಾಣುತ್ತಿರಲಿಲ್ಲ.
ಅದರೂ ಕೇಳುತ್ತಿತ್ತು, ಝುಳು ಝುಳು. ಕಲ್ಲು ಬಂಡೆಗಳನ್ನು ಬಡಿಯುವ ಗೈರತ್ತು.
ಯಾರಿಗೆ ಗೊತ್ತು ಒಂದೆಲ್ಲ ಒಂದು ದಿನ ಬಂಡೆ ಸವೆಯಲು ಬಹುದು,
ನೀರು ಸರಾಗವಾಗಿ ಹರಿಯಲು ಬಹುದು.
ಆದರೆ, ನದಿಗೆ ಎರಡೂ ಒಂದೆ,
ದಾರಿ ಬಿಟ್ಟರೆ ಎಲ್ಲವೂ ಸರಾಗ, ಬಿಡದಿದ್ದರೆ, ಬಳಸಿ ಸಾಗುವುದು ಅದಕೆ ಗೊತ್ತು.
ನದಿಯ ದಂಡೆಯ ಮೇಲೆ ಕುಳಿತವರಿಗೆ ನದಿ ಕಾಣುತ್ತಿರಲಿಲ್ಲ.
ಅದು ಅವರಿಗೆ ಬೇಕೂ ಇರಲಿಲ್ಲ.
ಅವರಿಗೆ ಅವರದೇ ಆದ ಪ್ರಪಂಚವಿತ್ತು.
ಹುಡುಗ, ಹುಡುಗಿಯ ಕಿವಿಯಲ್ಲಿ ಉಸುರಿದ, ಆಕೆ ಗೊತ್ತಿದ್ದರೂ ಗೊತ್ತಿಲ್ಲದಂತೆ ನಕ್ಕಳು.
ನದಿ ಆಗಲೂ ಹರಿಯುತ್ತಿತ್ತು, ನನಗೇಕೆ ನಿಮ್ಮ ಉಸಾಪರಿ ಎನ್ನುವ ಹಾಗೆ.
ನದಿ ಒಮ್ಮೆ ನಿಂತು ನೋಡಿ ನಕ್ಕಿತು,
ನಾ ಹರಿಯದಿದ್ದರೆ, ಎಲ್ಲಿದೆ ನಿಮ್ಮ ಪ್ರೀತಿಯ ಜಗತ್ತು ?
ಹುಡುಗ, ಹುಡುಗಿಯನ್ನು ಬಳೆಸಿದ, ನದಿ ಕಲ್ಲು ಬಂಡೆಗಳನ್ನು ಬಳಸಿದ ಹಾಗೆ,
ಅವಳು ನಾಚಿ ನಕ್ಕಳು, ಅವನಿಗೆ ಅರ್ಥವಾಗದ ಹಾಗೆ.
ನದಿ ಆಗಲೂ ಹರಿಯುತ್ತಿತ್ತು, ಎಲ್ಲವೂ ಗೊತ್ತಿದ್ದರೂ ಏನು ಗೊತ್ತಿಲ್ಲದ ಹಾಗೆ.
ದಂಡೆಯಲ್ಲಿ ಕುಳಿತವರಿಗೆ ನದಿ ಕಾಣುತ್ತಿರಲಿಲ್ಲ, ಪ್ರೀತಿಯ ಜಗತ್ತಿನಲ್ಲಿ ಇರುವವರಿಗೆ ಹಾಗೆ.
ದಂಡೆ, ಹರಿಯುವ ನದಿಗೆ ಸಾಕ್ಷಿ ಮಾತ್ರ. ಅದಕಿಲ್ಲ ಹರಿಯುವ ಸಂಪತ್ತು.
ದಂಡೆ ನಿರ್ಜೀವ, ನೀರ್ಭಾವ, ಅಲ್ಲಿಲ್ಲ ಹರಿಯುವ ವೈಭವದ ಗತ್ತು.
ಆಕೆ ಕೇಳಿದಳು; ನದಿಗೆ ಇಳಿಯೋಣವಾ ?
ಆತ ಉತ್ತರಿಸಿದ ಅದೆಲ್ಲ ಯಾಕೆ ಬೇಕು ?
ನನಗೆ ಹರಿಯುವುದು ಇಷ್ಟ, ನಿನಗೆ ಇಳಿಯುವುದು ಕಷ್ಟ.
ಆತ ದಂಡೆಯ ಮೇಲೆ ಕುಳಿತಿದ್ದ.
ಆಕೆ ನಕ್ಕಳು ಹಾಗೆ ಇಳಿದೇ ಬಿಟ್ಟಳು, ಎಲ್ಲ ಹುಡುಗಿಯರೂ ಹಾಗೆ.
ನದಿ ಮಾತ್ರ ಮುಸಿ ಮುಸಿ ನಗುತ್ತ ಹರಿಯುತ್ತಲೇ ಇತ್ತು.
ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದ ಹಾಗೆ.....!
ಆತ ಮಾತ್ರ ದಂಡೆಯ ಮೇಲಿದ್ದ, ನಿರ್ಜೀವ ದಂಡೆಯ ಹಾಗೆ.
1 comment:
ನದಿಯ ಸ್ವಾತಂತ್ಯತೆಯನ್ನು ಚೆನ್ನಾಗಿ ಮನದಟ್ಟು ಮಾಡಿಸಿದ್ದೀರ ಸಾರ್.
ನದಿ ದಂಡೆಯಲ್ಲಿ ಕುಳಿತವರಿಗೆ ನದಿ ಕಾಣುತ್ತಿಲ್ಲ ಎನ್ನುವುವುದು ಮೇಲೆ ಕುಳಿತವರ ಸ್ವಾರ್ಥತೆಯ ಸಂಕೇತ. ಬಳಸಿಕೊಳ್ಳುವುದು ಆನಂತರ ಮರೆತೇ ಬಿಡುವುದು ದುರುಳರ ಮನಸ್ಥಿತಿ.
ಅವ:ಳು ನೀರಿಗಿಳಿದದ್ದು ಮತ್ತು ಅವನ ನಿರ್ಲಕ್ಷ್ಯ ನದಿಯ ನಿರ್ಲಿಪ್ತತೆ ಮನ ಮುಟ್ಟಿತು.
ಉತ್ತಮ ಬರಹಗಾರರಾದ ನೀವು ಉತ್ತಮ ಕವಿ ಎನ್ನುವುದು ಈಗಷ್ಟೇ ನನಗೂ ತಿಳಿಯಿತು ಸಾರ್. ತುಂಬಾ ಇಷ್ಟವಾಯಿತು.
ನನ್ನ ಬ್ಲಾಗಿಗೂ ನಿಮಗೆ ಸ್ವಾಗತ, ಅಲ್ಲಿಯೂ ಒಂದು ಹೊಸ ನದಿಯ ಕವನವಿದೆ.
Post a Comment