Friday, January 20, 2012

ಭಿನ್ನ ಧ್ವನಿ, ಪ್ರತಿಭಟನೆ; ಅದರ ಸ್ವರೂಪ ಮತ್ತು ಕೆಲವು ತಾತ್ವಿಕ ಪ್ರಶ್ನೆಗಳು





ಇತ್ತೀಚೆಗೆ ನಡೆಯುತ್ತಿರುವ ಕೆಲವು ಪ್ರತಿಭಟನೆಗಳು, ಚಳವಳಿ, ಪ್ರತಿರೋಧ ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಪ್ರತಿಭಟನೆ ಯಾಕೆ ಬೇಕು ಎಂಬ ಪ್ರಶ್ನೆಯ ಜೊತೆಗೆ ಪ್ರತಿಭಟನೆಯ ಉದ್ದೇಶ, ಅದರ ಸ್ವರೂಪ ಮತ್ತು ಪ್ರತಿಭಟನೆ ಮಾಡುವವರ ಪ್ರಾಮಾಣಿಕತೆ ಕೂಡ ಬಹಳ ಮುಖ್ಯವಾಗಿದೆ. ಪ್ರತಿಭಟನೆ ಮತ್ತು ಅದರ ಚಳವಳಿಯ ಸ್ವರೂಪ, ಯಾವ ರೀತಿಯದ್ದು, ಮತ್ತು ತಮ್ಮ ಭಿನ್ನ ಧ್ವನಿಯನ್ನು ದಾಖಲಿಸಲು ಅದಕ್ಕೆ ಅವರು ಹಿಡಿದ ದಾರಿಯಾವುದು ಎಂಬ ಪ್ರಶ್ನೆಗಳೂ ಸಹ ಹೆಚ್ಚು ಪ್ರಸ್ತುತವಾಗಿವೆ, ಪ್ರತಿರೋಧ ಎನ್ನುವುದು ಒಂದು ಭಿನ್ನ ಧ್ವನಿ. ಈ ಭಿನ್ನ ಧ್ವನಿಯನ್ನು ವ್ಯಕ್ತಪಡಿಸುವುದು, ಪ್ರತಿಭಟನೆ ಮತ್ತು ಚಳವಳಿಯ ಮೂಲಕ ಎಂಬುದು ತುಂಬಾ ಸರಳೀಕೃತವಾದ ಒಂದು ವ್ಯಾಖ್ಯೆ. ಜನತಂತ್ರ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗೆ ಮತ್ತು ಅದನ್ನು ವ್ಯಕ್ತಪಡಿಸುವ ಯಾವುದೇ ರೀತಿಯ ವಿಧಾನಗಳಿರಲೀ ಅದಕ್ಕೆ ಅವಕಾಶವಿದೆ ಮತ್ತು ಅವಕಾಶ ಇರಲೇಬೇಕು..
ಪ್ರಾಯಶ; ಕಳೆದ ಒಂದೆರಡು ದಶಕಗಳಿಗೆ ಹೋಲಿಸಿದರೆ ಈಗ ಪ್ರತಿಭಟನೆಯ ಕಾವು ಕಡಿಮೆಯಾಗಿದೆ. ಸಾಮಾನ್ಯ ಜನ ವ್ಯವಸ್ಥೆಗೆ ಹೊಂದಿಕೊಂಡು ಬದುಕುವುದನ್ನು ಕಲಿತಿದ್ದಾರೆ. ವ್ಯವಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಸುಲಭ ಎಂಬ ಜ್ನಾನೋದಯ ಜನರಿಗೆ ಆಗುತ್ತಿದೆ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಸಮಾಜದ ಅಂತಸತ್ವವನ್ನು ಕಾಪಾಡುತ್ತದೆ. ಪ್ರತಿಭಟನೆ ವ್ಯವಸ್ಥೆಯ ಅರೋಗ್ಯಕ್ಕೆ ಬೇಕಾದ ಒಂದು ದಿವ್ಯ ಔಷಧಿ.
ಇಂದು ಪ್ರತಿಭಟನೆಯೇ ಇಲ್ಲ ಎಂಬುದು ನನ್ನ ವಾದವಲ್ಲ. ಪ್ರತಿ ಭಟನೆ ಮತ್ತು ಹೋರಾಟಗಳಿಗೆ ಬೇಕಾದ ಅಂತಸತ್ವ, ಪ್ರಾಮಾಣಿಕತೆ ಬದ್ಧತೆ ಇಂದು ಮರೆಯಾಗುತ್ತಿರುವುದು ಇದಕ್ಕೆ ಬಹುಮುಖ್ಯವಾದ ಕಾರಣ. ಹೀಗಾಗಿ ಯಾವುದೇ ಹೋರಾಟ ಯಶಸ್ವಿಯಾಗುತ್ತಿಲ್ಲ. ಹೋರಾಟಗಳನ್ನು ಅಪನಂಬಿಕೆಯಿಂದ ನೋದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ಎಂಬತ್ತರ ದಶಕದಲ್ಲಿ ಕಂಡ ಮೂರು ಜನಪರ ಚಳವಳಿಗಳು ತಮ್ಮ ಭಾರಕ್ಕೆ ತಾವು ಕುಸಿದು ಹೋದವು. ಆ ಕಾಲ ಘಟ್ಟದಲ್ಲಿ ಈ ಚಳವಳಿಗಳ ಮಹತ್ವವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲದಿದ್ದರೂ ಚಳವಳಿಯ ಒಳಗೆ ಇದ್ದ ವೈರುದ್ಧ್ಯಗಳು, ಚಳವಳಿಯ ನಾಯಕತ್ವದ ಅಪ್ರಾಮಾಣಿಕತೆ ಚಳವಳಿಯನ್ನೇ ಬಲಿ ತೆಗೆದುಕೊಂಡವು. ಹಾಗೆ ನೋಡಿದರೆ ಎಂಬತ್ತರ ದಶಕದಲ್ಲಿ ಯಾವ ಕಾರಣಕ್ಕಾಗಿ ಈ ಚಳವಳಿಗಳು ಹುಟ್ಟಿದವೋ ಆ ಕಾರಣಗಳೂ ಇಂದೂ ಇವೆ. ಆದರೆ ಚಳವಳಿಗೆ ನಾಯಕತ್ವವೇ ಇಲ್ಲ. ಇದ್ದ ನಾಯಕತ್ವ ರೋಗಗ್ರಸ್ತವಾಗಿದೆ.
ಕನ್ನಡ ಚಳವಳಿಯನ್ನೇ ತೆಗೆದುಕೊಳ್ಳಿ.. ಈ ಚಳವಳಿ ಕನ್ನಡ ಮತ್ತು ಕನ್ನಡ ಪ್ರಜ್ನೆಯನ್ನು ಮುಂದಿಟ್ಟುಕೊಂಡು ಪ್ರಾರಂಭವಾದ ಚಳವಳಿ. ಮ. ರಾಮಮೂರ್ತಿ ಅವರಂತಹ ಕ್ರಾಂತಿಕಾರಿಗಳು ಈ ಚಳವಳಿಗೆ ಬುನಾದಿಯನ್ನು ಹಾಕಿಕೊಟ್ಟರೂ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿ ಬಹುಮುಖ್ಯ ಪ್ರಶ್ನೆಯಾಗಿ ಉಳಿದಿಲ್ಲ ಅಥವಾ ಇದೊಂದು ಬಹುಮುಖ್ಯ ಪ್ರಶ್ನೆ ಎಂದು ಯಾರೂ ಪರಿಗಣಿಸುತ್ತಿಲ್ಲ. ಗೋಕಾಕ ಚಳವಳಿ ಸಂಸ್ಕೃತ ವಿರೋಧಿ ಚಳವಳಿಯಂತೆ ಕಂಡರೂ ಅದರ ಹಿಂದಿನ ಆಶಯ ಮತ್ತು ಅದಕ್ಕೆ ದೊರೆತ ಸಾಮುದಾಯಿಕ ಬೆಂಬಲ ಐತಿಹಾಸಿಕವೇ. ಆದರೆ ಇಂದು ಆ ಚಳವಳಿ ಕೆಲವರು ನವೆಂಬರ್ ತಿಂಗಳಿನಲ್ಲಿ ಚಂದಾ ಎತ್ತುವುದಕ್ಕಾಗಿ ನಡೆಸುವ ಚಳವಳಿಯಾಗಿದೆ. ಇದಕ್ಕೂ ಮೀರಿ ಭಾಷೆ ಮತ್ತು ಸಂಸ್ಕೃತಿಯ ಪ್ರಶ್ನೆಯನ್ನು ವಿಸ್ತ್ರತ ಕ್ಯಾನವಾಸಿನ ಮೇಲೆ ನೋಡಿ ಅದಕ್ಕೊಂದು ಚಳವಳಿಯ ರೂಪ ಕೊಡುವ ಯತ್ನ ನಡದೇ ಇಲ್ಲ. ಭಾಷೆ ಮತ್ತು ಸಂಸ್ಕೃತಿಯ ಪ್ರಶ್ನೆ ಯಾವುದೇ ಒಂದು ಕಾಲ ಘಟ್ಟದಲ್ಲಿ ಪ್ರತ್ಯಕ್ಷವಾಗಿ ನಂತರ ಮರೆಯಾಗುವಂತಹುದಲ್ಲ. ಹಾಗೆ ನೋಡಿದರೆ ಇವತ್ತು ಭಾಷೆ ಮತ್ತು ಸಂಸ್ಕೃತಿಯ ಪ್ರಶ್ನೆ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ. ಭಾಷೆ ಎಂದೂ ಸಾಯುವುದಿಲ್ಲ ಎಂಬುದು ನಿಜವಾದರೂ, ದೇಶೀಯ ಭಾಷೆಗಳು ಎದುರಿಸುತ್ತಿರುವ ಸವಾಲುಗಳು ಭಾಷೆಯ ಪ್ರಶ್ನೆಗೆ ಇನ್ನಷ್ಟು ಪ್ರಸ್ತುತತೆಯನ್ನು ನೀಡಿವೆ.. ಇಂತಹ ಸಂದರ್ಭದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಎಲ್ಲ ದೇಶೀಯ ಭಾಷೆಗಳು ಸಿದ್ಧವಾಗಬೇಕಿದೆ.
ಇನ್ನು ಸಂಸ್ಕೃತಿಯ ಪ್ರಶ್ನೆ. ಪ್ರಾಯಶಃ ಸಂಸ್ಕೃತಿಯಷ್ಟು ಅಪವ್ಯಾಖ್ಯೆಗೆ ಒಳಗಾದ ಇನ್ನೊಂದು ಶಬ್ದ ಬೇರೆ ಇರಲಿಕ್ಕಿಲ್ಲ. ಸಂಸ್ಕೃತಿ ಶಬ್ದವನ್ನು ಎಲ್ಲರೂ ತಮಗೆ ಬೇಕಾದ ಹಾಗೆ ಬೇಕಾದ ಅರ್ಥದಲ್ಲಿ ಬಳಸುತ್ತಿದ್ದಾರೆ. ಬಟ್ಟೆಯನ್ನು ಎತ್ತಿ ಎತ್ತಿ ಒಗೆಯುವಂತೆ ಈ ಶಬ್ದವನ್ನು ಎತ್ತಿ ಎತ್ತಿ ಒಗೆಯಲಾಗುತ್ತಿದೆ. ರಾಜಕೀಯ ಪಕ್ಷಗಳಿಗೆ ಸಂಸ್ಕೃತಿ ಎಂಬುದು ತುಂಬಾ ಪ್ರಿಯವಾದ ಶಬ್ದ. ನಮ್ಮ ಸಂಸ್ಕೃತಿ ನಾಶವಾಯಿತು, ನಾಶವಾಗುತ್ತಿದೆ ಎಂದು ಮಾತನಾಡುವುದು ಸುಲಭ. ಭಾವನಾತ್ಮಕವಾಗಿ ಈ ಶಬ್ದ ಜನಪ್ರಿಯತೆಯನ್ನು ದೊರಕಿಸಿಕೊಡುತ್ತದೆ ಎಂಬುದು ನಿಜ.
ಸಂಸ್ಕೃತಿ ಎಂಬುದು ಒಂದು ರೀತಿಯಲ್ಲಿ ಬದುಕುವ ವಿಧಾನ. ನಾವು ಹೇಗೆ ಬದುಕಿದ್ದೇವೆ ಮತ್ತು ಹೇಗೆ ಬದುಕುತ್ತಿದ್ದೇವೆ ಎಂಬುದು ನಿಕಷಕ್ಕೆ ಒಳಗಾದಾದ ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಬದುಕುವ ವಿಧಾನ ಎಂಬುದು ಕೂಡ ಸರಳವಾದುದಲ್ಲ. ಬದುಕು ಎಂದು ತಕ್ಷಣ ಅಲ್ಲಿ ನಂಬಿಕೆ ಪ್ರತ್ಯಕ್ಷವಾಗುತ್ತದೆ. ಜನಪದ, ಕಾವ್ಯ, ನಾಟಕ, ಯಕ್ಷಗಾನ, ಸಂಗೀತ ಎಲ್ಲವೂ ಪ್ರವೇಶಿಸುತ್ತವೆ. ನಮ್ಮ ನಡವಳಿಕೆ, ಮಾತನಾಡುವ ರೀತಿ, ಅತಿಥಿ ಸತ್ಕಾರದ ಬಗೆ, ಬೇರೆ ಬೇರೆ ರೀತಿಯ ಅಡುಗೆಗಳು, ನಮ್ಮಲ್ಲಿ ಬೇರೆ ಬೇರೆ ಪ್ರದೇಶದಲ್ಲಿರುವ ಅಡುಗೆ ಪದ್ಧತಿಗಳು, ನಾವು ಹುಟ್ಟಿದಾಗ, ಸತ್ತಾಗ ಮಾಡುವ ಬೇರೆ ಬೇರೆ ರೀತಿಯ ಆಚರಣೆಗಳು, ಎಲ್ಲವೂ ನಮ್ಮ ಸಂಸ್ಕೃತಿಯ ಭಾಗಗಳೇ. ಇದೆಲ್ಲ ಒಟ್ಟಾರೆಯಾಗಿ ಗ್ರಹಿಸಿದಾದ ಅದು ಕನ್ನಡ ಸಂಸ್ಕೃತಿಯಾಗುತ್ತದೆ. ಹಾಗಾಗಿ ಕನ್ನಡ ಸಂಸ್ಕೃತಿ ಎಂಬುದು ಕೇವಲ ಒಂದು ಶಬ್ದವಲ್ಲ. ಅದು ಕನ್ನಡಿಗರ ಒಟ್ಟಾರೆ ಬದುಕುವ ವಿಧಾನ. ಬದುಕಿ ಬಂದ ರೀತಿ. ಈ ಬದುಕುವ ವಿಧಾನದಲ್ಲಿ ಯಾವುದು ನಮಗೆ ಬೇಕು ಮತ್ತು ಯಾವುದು ನಮಗೆ ಬೇಡ ಎಂಬುದೇ ಈಗ ನಮ್ಮ ಮುಂದಿರುವ ಬಹುದೊಡ್ದ ಸವಾಲು. ಅದನ್ನೇ ನಾನು ಸಂಸ್ಕೃತಿಯ ಪ್ರಶ್ನೆಯನ್ನಾಗಿ ಪರಿಗಣಿಸಿದ್ದೇನೆ. ಇದನ್ನು ಸಾಂಸ್ಕೃತಿಕ ಸವಾಲು ಎಂದೂ ಹೇಳಬಹುದು.
ಈಗ ನಾನು ಒಂದು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿ ಈ ಸಂಸ್ಕೃತಿಯ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುತ್ತೇನೆ.
ಪ್ರಜಾವಾಣಿಯ ಸಹಸಂಪಾದಕರಾದ ದಿನೇಶ್ ಅಮೀನಮಟ್ಟು ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ತಮ್ಮ ಅಂಕಣದಲ್ಲಿ ಬರೆದ ಲೇಖನ ಹಲವರ ವಿರೋಧಕ್ಕೆ ಕಾರಣವಾಯಿತು. ಅವರು ತಮ್ಮ ಲೇಖನದಲ್ಲಿ ವಿವೇಕಾನಂದರ ಬದುಕಿನ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದರು. ಅವರು ಪ್ರಸ್ತಾಪಿಸಿರುವ ವಿಚಾರಗಳು ಸಾಮಾನ್ಯ ಜನರಿಗೆ ಗೊತ್ತಿಲ್ಲದ ವಿಚಾರಗಳಾಗಿದ್ದವು. ಹಾಗೇ ವಿವೇಕಾನಂದ ಎಂಬ ಹೆಸರು ನಮ್ಮ ಚಿತ್ತಭಿತ್ತಿಯಲ್ಲಿ ಮೂಡುವ ರೀತಿಗೆ ಬೇರೆಯದಾದ ಚಿತ್ರವೊಂದನ್ನು ಅದು ರೂಪಿಸುವಂತೆ ಇತ್ತು. ಇದು ವಿವೇಕಾನಂದರ ಬಗ್ಗೆ ಪ್ರಚಲಿತವಿರುವ ನಂಬಿಕೆಗೆ ವ್ಯತಿರಿಕ್ತವಾದುದು. ಇದೊಂದು ಭಿನ್ನ ಧ್ವನಿ.
ಇದನ್ನು ನಾನು ಮೂರ್ತಿಭಂಜನೆ ಎಂದು ಕರೆಯುತ್ತೇನೆ. ನಾವು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಆಗಾಗ ಮೂರ್ತಿ ಭಂಜನೆ ನಡೆಯಲೇಬೇಕು. ಅಂದರೆ ನಮ್ಮ ಈಗಿನ ನಂಬಿಕೆಗಳು ಸಂಪೂರ್ಣ ಸತ್ಯವಲ್ಲ ಎಂದು ಅರಿತುಕೊಳ್ಳುವ ಮೂಲಕ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಯತ್ನ ಇದು. ಆದರೆ ಇಲ್ಲಿರುವ ಸಮಸ್ಯೆ ಎಂದರೆ ಸಾಮಾನ್ಯರು ಒಂದು ರೀತಿಯಲ್ಲಿ ಮೂರ್ತಿ ಪೂಜಕರು. ಅವರು ತಮ್ಮ ತಮ್ಮ ಮನಸ್ಸುಗಳಲ್ಲಿ ಮೂರ್ತಿಯೊಂದರ ಪ್ರತಿಷ್ಠಾಪನೆ ಮಾಡಿಕೊಂಡಿರುತ್ತಾರೆ. ಅದಕ್ಕಿಂತ ಭಿನ್ನವಾದ ಮೂರ್ತಿಯ ಕಲ್ಪನೆ ಕೂಡ ಅವರಿಗೆ ಸಾಧ್ಯವಿಲ್ಲ. ಹೀಗಾಗಿ ವಿವೇಕಾನಂದರು ಹಲವಾರು ರೋಗಗಳಿಂದ ಬಳಲುತ್ತಿದ್ದರು ಎಂಬುದು ಮೂರ್ತಿ ಪ್ರತಿಷ್ಠಾಪಕರಿಗೆ ಸುಲಭವಾಗಿ ಒಪ್ಪಿಕೊಳ್ಳುವ ವಿಚಾರವಲ್ಲ. ಅವರಿಗೆ ಸ್ವಾಮಿ ವಿವೇಕಾನಂದ, ಸದೃಡ ಕಾಯದ ಆರೋಗ್ಯಪೂರ್ಣ ವ್ಯಕ್ತಿ. ಅವರು ಸೂರ್ಯನ ಚಲನೆಯನ್ನು ನಿಲ್ಲಿಸಬಲ್ಲವರಾಗಿದ್ದರು. ಅವರು ತಮ್ಮ ವೀರ್ಯವನ್ನು ಬ್ರಹ್ಮರಂದ್ರದ ವರೆಗೆ ಮೇಲಕ್ಕೆ ಚಲಿಸುವಂತೆ ಮಾಡಬಲ್ಲವರಾಗಿದ್ದರು.
. ವಿವೇಕಾನಂದರು ಎಂದ ತಕ್ಷಣ ಬರುವ ಕಲ್ಪನೆ ಎಂದರೆ ಅವರು ವೀರ ಸನ್ಯಾಸಿ. ಅವರು ಕಟ್ಟಾ ಬ್ರಹ್ಮಚಾರಿಯಾಗಿದ್ದರು. ಯುವಕರನ್ನು ಎದ್ದೇಳಿಸಲು ಅವರು ನೀಡಿದ ಕರೆ ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುವಂತೆ ನಮ್ಮೆಲ್ಲರ ಮನಸ್ಸುಗಳನ್ನು ಸಿದ್ಧಪಡಿಸಲಾಗಿದೆ. ಮನಸ್ಸು ಈ ರೀತಿ ಸಿದ್ಧಗೊಂಡಿರುವಾಗ ಇದು ಹೀಗಲ್ಲ ಎಂಬುದು ಆಘಾತವನ್ನು ಉಂಟು ಮಾಡುತ್ತದೆ. ಜೊತೆಗೆ ಹೊಸದಲ್ಲಿ ಒಪ್ಪಿಕೊಳ್ಳದೇ ಪ್ರತಿಭಟಿಸುತ್ತದೆ. ಆದ್ದರಿಂದ ಅವರು ವೈಯಕ್ತಿಕವಾಗಿ ರೋಗಗ್ರಸ್ತರಾಗಿದ್ದರು ಮತ್ತು ಮಾಂಸಾಹಾರ ಪ್ರಿಯರಾಗಿದ್ದರು ಎಂಬುದು ತಮ್ಮ ತಮ್ಮ ಮನಸ್ಸುಗಳಲ್ಲಿ ಪ್ರತಿಮೆಯೊಂದನ್ನು ಪ್ರತಿಷ್ಠಾಪನೆ ಮಾಡಿಕೊಂಡವರಿಗೆ ಸುಲಭ ಗ್ರಾಹ್ಯವಲ್ಲ.
ಇದಕ್ಕೆ ಬಹು ಮುಖ್ಯವಾದ ಕಾರಣ ಇತಿಹಾಸ ಮತ್ತು ಪುರಾಣಗಳನ್ನು ಗ್ರಹಿಸುವಲ್ಲಿ ಅಗುತ್ತಿರುವ ತಪ್ಪುಗಳು. ದಿನೇಶ್ ಅಮೀನಮಟ್ಟು ಅವರ ವಿರುದ್ಧ ಹೋರಾಟ ಪ್ರತಿಭಟನೆ ಮಾಡಲು ಮುಂದಾಗಿರುವುದು ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ತು. ವಿವೇಕಾನಂದರೇ ಅವರಿಗೆ ಆದರ್ಶ. ಈ ಆದರ್ಶ ಮತ್ತು ಈ ಸಂಘಟನೆ ವಿವೇಕಾನಂದರನ್ನು ಪ್ರತಿಬಿಂಬಿಸುವ ರೀತಿಗೆ ಈ ಮೂರ್ತಿ ಭಂಜನೆಯನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಅಮೀನಮಟ್ಟು ಅವರು ಪ್ರಸ್ತಾಪಿಸಿರುವ ವಿಚಾರಗಳು ಇಂತಹ ಮೂರ್ತಿ ಪೂಜಕರ ಬುಡವನ್ನು ಅಲಗಾಡಿಸಿಬಿಡುತ್ತದೆ. ಅವರ ಆದರ್ಶ ಕೊಚ್ಚಿ ಹೋಗುತ್ತದೆ. ಬುಡ ಅಲಗುತ್ತದೆ. ಹೀಗಾಗಿ ಅವರಿಗೆ ಉಳಿದ ದಾರಿ ಎಂದರೆ ಪ್ರತಿಭಟನೆ ಹೋರಾಟ ಮಾತ್ರ. ಯಾಕೆಂದರೆ ಸತ್ಯವನ್ನು ಎದುರಿಸುವುದು ಮತ್ತು ಸತ್ಯವನ್ನು ಸಂಶೋಧಿಸುವಾಗ ನಮ್ಮ ನಮ್ಮ ಮನಸ್ಸುಗಳಲ್ಲಿ ನಾವು ಪ್ರತಿಷ್ಠಾಪಿಸಿಕೊಂಡ ಮೂರ್ತಿಯನ್ನು ಒಡೆಯಲೇ ಬೇಕಾಗುತ್ತದೆ. ಹಳೆಯ ಮೂರ್ತಿಯನ್ನು ಒಡೆದಾಗ ಮಾತ್ರ ಹೊಸ ಮೂರ್ತಿಯ ಪ್ರತಿಷ್ಠಾಪನೆ ಸಾಧ್ಯ,
ಆದರೆ ಇದು ಅಷ್ಟು ಸುಲಭವಾದುದಲ್ಲ. ನಾವು ನಮ್ಮ ಅಪ್ಪ ಅಜ್ಜ ಮುತ್ತಜ್ಜರಿಂದ ನಾವು ಓದಿದ ಪುಸ್ತಕಗಳಿಂದ ರೂಪಗೊಂಡ ಪ್ರತಿಮೆಯನ್ನು ಅಷ್ಟು ಬೇಗ ಅಳಿಸಿ ಹಾಕುವುದು ಸಾಧ್ಯವಿಲ್ಲ. ಯಾರು ಏನೇ ಹೇಳಿದರೂ ವಿವೇಕಾನಂದರು ರೋಗಪೀಡಿತರಾಗಿದ್ದರೂ ಎಂಬುದು ಸತ್ಯವಾಗಿದ್ದರೂ ಅದು ಸತ್ಯ ಎಂದು ತಿಳಿದಿದ್ದರೂ ಅದನ್ನು ಒಪ್ಪಿಕೊಳ್ಳುವುದು ಕಷ್ಟವೇ. ಆಗ ನಾವು ಯಾವುದನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲವೋ ಅದನ್ನು ಮೊದಲ ರೂಪದಲ್ಲಿ ಒಳಿಸಿಕೊಳ್ಳಲು ಯತ್ನ ನಡೆಸುತ್ತೇವೆ.
ಇಲ್ಲಿ ನಮ್ಮೆಲ್ಲರ ಸಂಪ್ರದಾಯವಾದಿ ಮನಸ್ಸು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸಂಪ್ರದಾಯವಾದಿ ಮನಸ್ಸು ಸಂಸ್ಕೃತಿಯ ಪ್ರಶ್ನೆಯನ್ನು ಮುಂದಿಡುತ್ತಲೇ ಈಗಿರುವ ನಂಬಿಕೆಯನ್ನೇ ಮುಂದುವರಿಸಲು ಯತ್ನ ನಡೆಸುತ್ತದೆ.
ಇದರಿಂದ ನಮಗೆ ಅರ್ಥವಾಗುವ ಅಂಶ ಎಂದರೆ ಸಂಸ್ಕೃತಿ ಮತ್ತು ನಂಬಿಕೆಗಳು ಆಯಾ ಕಾಲ ಘಟ್ಟದಲ್ಲಿ ವಾಸ್ತವದ ಜೊತೆ ಮುಖಾಮುಖಿಯಾಗಬೇಕಾಗುತ್ತದೆ. ಹೀಗೆ ಮುಖಾಮುಖಿಯಾಗುತ್ತ ಹೊಸ ರೂಪ ಮತ್ತು ಪ್ರತಿಮೆಗಳು ಸೃಷ್ಟಿಯಾಗುತ್ತವೆ. ಹೀಗೆ ಮಾಡುವಾಗ ಮೂರ್ತಿ ಭಂಜನೆ ಒಮ್ಮೆಲೆ ನಡೆಯುವ ಕ್ರಿಯೆಯಲ್ಲ ಎಂಬ ಅರಿವು ಬಹುಮುಖ್ಯ. ಅದಿಲ್ಲದಿದ್ದರೆ ಒಮ್ಮೆಲೆ ಮೂರ್ತಿ ಭಂಜನೆ ಮಾಡಲು ಹೋಗಿ ನಾವು ಸಂಕಷ್ಟಕ್ಕೆ ಸಿಲುಕಿಕೊಂಡು ಬಿಡುತ್ತೇವೆ. ಮೂರ್ತಿ ಪೂಜಕರು ಮತ್ತು ಮೂರ್ತಿ ಭಂಜಕರು ಸಮಾಜದ ಭಾಗವೇ ಆಗಿರುವುದರಿಂದ ಇವರಿಬ್ಬರ ನಡುವಿನ ಸಂಘರ್ಷ ಒಮ್ಮೆಲೆ ನಡೆದು ಮುಗಿದು ಬಿಡುವಂತಹುದಲ್ಲ. ಈ ಕಾರಣಗಳಿಂದ ಮೂರ್ತಿ ಪೂಜಕರಿಗಿಂತ ಮೂರ್ತಿ ಭಂಜಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಕನ್ನಡ ಸಂಸ್ಕೃತಿಯ ಪ್ರಶ್ನೆಯನ್ನು ಎತ್ತಿಕೊಂಡು ನಾನು ಈ ಮೇಲಿನ ಮಾತುಗಳನ್ನು ಹೇಳಿದ್ದೇನೆ. ಜೊತೆಗೆ ಸಂಸ್ಕೃತಿ ಮತ್ತು ನಂಬಿಕೆಯ ಮೂಲಕವೇ ಸೃಷ್ಟಿಯಾದ ನಮ್ಮ ಕನ್ನಡದ ಮನಸ್ಸು ಇದೆಯಲ್ಲ ಅದು ಯಾವ ರೀತಿಯದು ? ಕನ್ನಡ ಮನಸ್ಸು ಎಂಬುದು ರೂಪಗೊಳ್ಳುವ ಬಗೆಯಾವುದು ? ಈ ಕುರಿತು ನಾವು ಆಲೋಚಿಸಬೇಕಾಗಿದೆ. ಜೊತೆಗೆ ಪ್ರತಿಭಟನೆ ಮತ್ತು ವಿರೋಧಕ್ಕೆ ತಾತ್ವಿಕತೆಯ ಮೆರಗು ಇರಬೇಕು. ಅದರ ಉದ್ದೇಶ ಸಂಸ್ಕೃತಿಯ ಜೊತೆಗೆ ತಳಕು ಹಾಕಿಕೊಂಡಿರಬೇಕು. ಆದರೆ ಇಂದಿನ ಬಹುತೇಕ ಚಳವಳಿ ಮತ್ತು ಪ್ರತಿಭಟನೆಗಳು ಅರ್ಥವಿಲ್ಲದ ಕೂಗಾಟವಾಗಿದೆ. ಜೊತೆಗೆ ಈಗಿನ ಹೋರಾಟಗಳಿಗೆ ತಾತ್ವಿಕತೆಯ ಮೆರಗೂ ಇಲ್ಲ.

ಶಶಿಧರ‍್ ಭಟ್

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...