Saturday, January 14, 2012

ಕ್ರಿಕೆಟ್ ರಾಜಕಾರಣ; ಕ್ರಿಕೆಟ್ ಇತಿಹಾಸದ ಕಪ್ಪು ದಿನ.....!


ಇಂದಿರಾ ಗಾಂಧಿ ಜೊತೆ ಬೇಡಿ


ನಾನು ಮೆಚ್ಚುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಆಂಗ್ಲರ ಆಟವಾದರೂ ಅದರ ಬಗ್ಗೆ ನನಗೆ ವಿಚಿತ್ರ ಮೋಹ. ನನ್ನ ಕಾಲೇಜು ದಿನಗಳಲ್ಲಿ ನಾನೊಬ್ಬ ಕ್ರಿಕೆಟ್ ಆಟಗಾರ. ಎಡಗೈಯಲ್ಲಿ ಬಾಲಿಂಗ್ ಮಾಡುತ್ತಿದ್ದ ನಾನು ಲೆಗ್ ಸ್ಪಿನ್ನರ್. ಆಗಿನ ದಿನಗಳಲ್ಲಿ ನನ್ನ ಮೇಲೆ ಆಪಾರವಾದ ಪ್ರಭಾವ ಬೀರಿದ ಕ್ರಿಕೆಟಿಗರೆಂದರೆ, ಬೆ. ಎಸ್. ಚಂದ್ರಶೇಖರ್, ಜಿ. ಅರ್. ವಿಶ್ವನಾಥ್, ಬಿಷನ್ ಸಿಂಗ್ ಬೇಡಿ ಮತ್ತು ಸುನಿಲ್ ಗಾವಾಸ್ಕರ್.
ಆಗ ಈಗಿನಂತೆ ಟೀವಿಗಳು ಇರಲಿಲ್ಲ. ನಾವೆಲ್ಲ ಸಣ್ಣ ಟ್ರಾನಿಸ್ಟರ್ ಹಿಡಿದುಕೊಂಡು ರನ್ನಿಂಗ್ ಕಾಮೇಂಟರಿ ಕೇಳುತ್ತಿದ್ದೆವು. ಸುರೇಶ್ ಸರೈಯಾ ಎಂಬ ಕಾಮೆಂಟರಿಗಾರ ಭಾರತ ಸೋಲಿನ ದವಡೆಯಲ್ಲಿ ಇರುವಾಗಲೆಲ್ಲ ಕಣ್ಣೀರು ಹಾಕುವಂತೆ ಕಾಮೆಂಟರಿ ಹೇಳುತ್ತಿದ್ದರು.
ಅದು ವೆಸ್ಟ್ ಇಂಡೀಸ್ ವಿರುದ್ಧ ಮುಂಭೈ ಟೆಸ್ಟ್. ಆಗಿನ ವೆಸ್ಟ್ ಇಂಡೀಸ್ ತಂಡ ವಿಶ್ವದಲ್ಲೇ ಅಗ್ರಮಾನ್ಯ ತಂಡವಾಗಿತ್ತು. ಕ್ಲೈವ್ ಲಾಯ್ಡ್, ವಿವಿಯನ್ ರಿಚರ್ಡ್ಸ್, ಅಲ್ವಿನ್ ಕಾಲೀಚರಣ್, ಡೆರಿಕ್ ಮರ್ರೆ, ಮಾಲ್ಕಮ್ ಮಾರ್ಷಲ್, ಒಬ್ಬರಿಗಿಂತ ಒಬ್ಬರು ಪ್ರತಿಭಾನ್ವಿತ ಆಟಗಾರರು. ಅವರನ್ನು ನೋಡಿಯೇ ಕ್ರಿಕೆಟ್ ದಾಂಡಿಗರು ಎಂಬ ಶಬ್ದದ ಬಳಕೆ ಪ್ರಾರಂಭವಾದದ್ದು. ಇವರಲ್ಲಿ ವಿವಿಯನ್ ರಿಚರ್ಡ್ಸ್ ಬ್ಯಾಟು ಎತ್ತಿದರೆ ಸಾಕು ಎಂತಹ ಬೌಲರ್ ಅದರೂ ಅವರ ತೊಡೆ ನಡುಗುತ್ತಿತ್ತು. ಅವರ ಹೊಡೆತದಲ್ಲಿ ವಿಶ್ವನಾಥ್ ಅವರ ಬ್ಯಾಟಿಂಗ್ ನಲ್ಲಿ ಇರುವ ಕಲಾತ್ಮಕತೆ ಇರಲಿಲ್ಲ. ಆದರೆ ಅವರು ವಿರೋಧಿ ತಂಡದ ಬೌಲರುಗಳನ್ನು ಯಾವ ರೀತಿ ದಂಡಿಸುತ್ತಿದ್ದರೆಂದು, ಆ ಹೊಡೆತಗಳಿಂದ ಚೆತರಿಸಿಕೊಳ್ಳುವುದೇ ಸಾಧ್ಯವಗುತ್ತಿರಲಿಲ್ಲ.
ಮುಂಬೈ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ದಾಂಡಿಗರ ಹೊಡೆತವನ್ನು ನೋಡಲೆಂದೇ ವಿಕ್ಷಕರು ಸ್ಟೇಡಿಯಂ ನಲ್ಲಿ ತುಂಬಿಕೊಂಡಿದ್ದರು. ಬಿ.ಎಸ್. ಚಂದ್ರಶೇಖರ್ ಮೊದಲ ಬೌಲಿಂಗ್ ಬದಲಾವಣೆಯಲ್ಲಿ ಬೌಲ್ ಮಾಡಲು ಬಂದರು. ಎದುರಿಗಿದ್ದವರು ರಿಚರ್ಡ್ಸ್. ಮೊದಲ ಓವರ್ ನ ಎರಡು ಎಸೆತಗಳು ಬೌಂಡರಿ ಗೆರೆಯನ್ನು ದಾಟಿದೆವು. ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಮುಂದೇನು ಎಂಬ ಆತಂಕದಲ್ಲಿದ್ದರು. ಆದರೆ ಚಂದ್ರಶೇಖರ್ ಮಾತ್ರ ಸಾವಧಾನವಾಗಿಯೇ ಇದ್ದರು. ಮೂರನೆಯ ಎಸೆತ...! ಅದು ರಿಚರ್ಡ್ಸ್ ಅವರ ಬ್ಯಾಟು ಮತ್ತು ಪ್ಯಾಡಿನ ಮದ್ದೆ ನುಸುಳಿ ಸ್ಟಂಪ್ ಉರುಳಿಸಿಯೇ ಬಿಟ್ಟಿತು. ರಿಚರ್ಡ್ಸ್ ಮುಖ ಕೆಳಗೆ ಹಾಕಿಕೊಂಡು ಪೆವಿಲಿಯನ್ ಗೆ ಹಿಂತಿರುಗಿದರು.
ಇಡೀ ವಾಖಂಡೆ ಸ್ಟೇಡಿಯಂನಲ್ಲಿ ಕರತಾಡನ. ನಂತರ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ನಡೆದ ಹಲವಾರು ಟೆಸ್ಟ್ ಪಂದ್ಯಗಳಲ್ಲಿ ಎಂದೂ ರಿಚರ್ಡ್ಸ್ ಎಂಬ ದಾಂಡಿಗ ಚಂದ್ರಶೇಖರ್ ಅವರ ಗೂಗ್ಲಿ ಬೌಲಿಂಗ್ ಅನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಚಂದ್ರಶೇಖರ್ ಬೌಲಿಂಗ್ ಎದುರಿಸಲು ಅವರಿಗೆ ಎಂದೂ ಸಾಧ್ಯವಾಗಲೇ ಇಲ್ಲ.
ಇದೆಲ್ಲ ಇಂದು ನೆನಪಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು ನೋಡುವಾಗ ಬೇಸರವಾಗುತ್ತಿದೆ. ಸಚಿನ್ ತೆಂಡೂಲ್ಕರ್, ರಾಹುಲ್ ಡ್ರಾವಿಡ್, ವಿ. ವಿ. ಎಸ್ ಲಕ್ಷ್ಮಣ್ ಅವರಿಗೆ ವಯಸ್ಸಾದಂತೆ ಕಾಣುತ್ತಿದೆ. ಇವರೆಲ್ಲರ ಟೈಮಿಂಗ್ ಮಾಯವಾಗಿದೆ. ಬ್ಯಾಟು ಎತ್ತವುದಕ್ಕೆ ಇವರಿಗೆ ಬೇಸರವಾದಂತೆ ಕಾಣುತ್ತಿದೆ. ಫೂಟ್ ವರ್ಕ್ ಕೂಡ ಕಳೆಗುಂದಿದೆ.
ಭಾರತದ ಯಶಸ್ವಿ ನಾಯಕರೆಂದೇ ಪರಿಗಣಿಸಲ್ಪಟ್ಟಿರುವ ಮಹೇಂದ್ರ ಸಿಂಗ್ ದೋನಿ ಮುಖದಲ್ಲಿ ವಿಷಾಧದ ನೆರಳು. ಕೂಲ್ ಕ್ಯಾಪ್ಟನ್ ಮನಸ್ಸು ಆತಂಕದಲ್ಲಿ ತೊಳಲಾಡುತ್ತಿರುವಂತಿದೆ. ಎಂದೂ ಗುಂಪುಗಾರಿಕೆ ಮಾಡದೇ ಆಟವನ್ನು ಧ್ಯಾನದಂತೆ ಸ್ವೀಕರಿಸಿ ಆಡುತ್ತಿದ್ದ ಧೋನಿ ಈಗ ತಂಡದ ರಾಜಕೀಯಕ್ಕೆ ಬಲಿಯಾಗುವ ಲಕ್ಷಣಗಳೂ ಗೋಚರವಾಗುತ್ತಿದೆ. ವಿರೇಂದ್ರ ಸೆಹ್ವಾಗ್ ನೇತೃತ್ವದ ದೆಹಲಿ ಆಟಗಾರರ ಗುಂಪು ದೋನಿಯನ್ನು ಮನೆಗೆ ಕಳುಹಿಸಲು ಷದ್ಯಂತ್ರವನ್ನು ರೂಪಿಸಿರುವುದು ಈಗ ಬೆಳಕಿಗೆ ಬರುತ್ತಿದೆ. ಇವರ ಈ ರಾಜಕಾರಣದಲ್ಲಿ ಕ್ರಿಕೆಟ್ ಸೋಲುತ್ತಿದೆ. ಕ್ರಿಕೆಟ್ ಅನ್ನು ದೇಶಾಭಿಮಾನದ ಸಂಕೇತವಾಗಿ ಭಾವಿಸಿರುವ ದೇಶದ ಕ್ರಿಕೆಟ್ ಪ್ರೇಮಿಗಳು ಬೇಸರದಿಂದ ತಲೆ ತಗ್ಗಿಸುವಂತಾಗಿದೆ.
ಹಾಗೆ ನೋಡಿದರೆ ಭಾರತದ ಕ್ರಿಕೆಟ್ ರಾಜಕಾರಣಕ್ಕೆ ಸುದೀರ್ಘ ಇತಿಹಾಸವಿದೆ. ಈಗ ಕ್ರಿಕೆಟ್ ಕಾಮೇಂಟರಿ ಹೇಳುತ್ತ ಹಣ ಗಳಿಸುವುದರ ಜೊತೆಗೆ, ಆಟಗಾರರಿಗೆ ಬುದ್ದಿವಾದ ಹೇಳುತ್ತಿರುವ ಗವಾಸ್ಕರ್ ಅತಿ ದೊಡ್ದ ಕ್ರಿಕೆಟ್ ರಾಜಕಾರಣಿ ಆಗಿದ್ದರು,. ಅವರ ಜೊತೆಗಿರುವ ರವೀ ಶಾಸ್ತ್ರಿ ಕೂಡ ಮಹಾನ್ ರಾಜಕಾರಣಿ. ಇವರೆಲ್ಲ ದೇಶಕ್ಕಾಗಿ ಅಡಿದ್ದಕ್ಕಿಂತ ಸ್ವಂತಕ್ಕಾಗಿ ಆಡಿದ್ದೇ ಹೆಚು.
ಇನ್ನ್ನು ಬಿಷನ್ ಸಿಂಗ್ ಬೇಡಿ. ಒಂದು ಕಾಲದಲ್ಲಿ ತಮ್ಮ ಆತ್ಮೀಯ ಸ್ನೇಹಿತನಾಗಿದ್ದ ಇ ಎ ಎಸ್ ಪ್ರಸನ್ನ ಅವರ ವಿರುದ್ಧವೇ ರಾಜಕಾರಣ ಮಾಡಿದವರು ಇವರು. ಕೊನೆಗೆ ತುಂಬು ಬೇಸರದಲ್ಲಿ ಪ್ರಸನ್ನ ಕ್ರಿಕೆಟ್ ಗೆ ವಿದಾಯ ಹೇಳಬೇಕಾಯಿತು. ಬಿಷನ್ ಸಿಂಗ್ ಬೇಡಿಯ ರಾಜಕಾರಣವನ್ನು ಈಗ ವಿರೇಂದ್ರ ಸೆಹ್ವಾಗ್ ಮುಂದುವರಿಸುತ್ತಿದ್ದಾರೆ ಅಷ್ಟೇ.
ಭಾರತ ಕಂಡ ಉತ್ತಮ ಸ್ಪಿನ್ ಬೌಲರುಗಳಲ್ಲಿ ಒಬ್ಬರಾದ ವೆಂಕಟರಾಘವನ್ ಇಂಥಹ ಕ್ರಿಕೆಟ್ ರಾಜಕಾರಣದ ಫಲಾನುಭವಿ. ಅವರು ಸತತ ಸೋಲನ್ನು ಉಣ್ಣುತ್ತಿದ್ದರೂ ಭಾರತದ ತಂಡದ ನಾಯಕನ ಪಟ್ಟ ಅವರಿಗೆ ಒಲಿದು ಬಂದಿತ್ತು. ಅವರು ಫಾರ್ಮ್ ನಲ್ಲಿ ಇರದಿದ್ದರೂ ಭಾರತ ತಂಡದಲ್ಲಿ ಅವರಿಗಾಗಿ ಸ್ಥಾನವನ್ನು ಕಾಯ್ದಿರಿಸಲಾಗಿತ್ತು. ಈ ರಾಜಕಾರಣದಿಂದಾಗಿ ಅತ್ಯುತ್ತಮ ಸ್ಪಿನ್ ಬೌಲರ್ ಆಗಿದ್ದ ಶಿವಾಲ್ಪರ್ ಅವರಿಗೆ ಟೆಸ್ಟ್ ಆಡುವ ಅವಕಾಶವೇ ದೊರಕಲಿಲ್ಲ. ಇದೇ ಸಾಲಿಗೆ ಸೇರುವ ಇನ್ನೊಬ್ಬ ವ್ಯಕ್ತಿ ಕರ್ನಾಟಕದ ಸುಧಾಕರ್ ರಾವ್.
ಸುಧಾಕರ್ ರಾವ್ ವಿಶ್ವನಾಥ್ ಅವರಂತೆ ಕುಳ್ಳನೆಯ ವ್ಯಕ್ತಿ. ಅವರ ಬ್ಯಾಟಿಂಗ್ ಶೈಲಿ ಕೂಡ ಜಿ.ಎಸ್. ವಿಶ್ವನಾಥ್ ಅವರಂತೆ ಇತ್ತು. ಆದರೆ ಅವರು ಕ್ರಿಕೆಟ್ ರಾಜಕಾರಣದಿಂದಾಗಿ ಅವಕಾಶ ವಂಚಿತರಾದರು.
ಭಾರತ ತಂಡದಲ್ಲಿ ಮೊದಲು ಮುಂಬೈ ಆಟಗಾರರದೇ ಕರಾಮತ್ತು. ನಂತರದ ದಿನಗಳಲ್ಲಿ ದೆಹಲಿ ಆಟಗಾರರ ಪ್ರಾಭಲ್ಯ. ದಕ್ಷಿಣಕ್ಕೆ ಬಂದರೆ ಮದ್ರಾಸಿಗಳ ಕಾರುಬಾರು. ಭಾರತ ತಂಡ ಎಂದರೆ ಇಷ್ಟೆ. ಕಪಿಲ್ ದೇವ್ ಭಾರತ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದರೂ ಅವರ ವಿರುದ್ಧ ನಡೆದಿದ್ದು ಬಹುದೊಡ್ದ ರಾಜಕೀಯ. ಈ ರಾಜಕೀಯದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಮುಖ ಸದಸ್ಯರೂ ಪಲುದಾರರಾಗಿದ್ದರು.
ಈಗ ಇತಿಹಾಸ ಮರುಕಳಿಸುತ್ತಿದೆ. ಮತ್ತೆ ಕ್ರಿಕೆಟ್ ರಾಜಕಾರಣ ಕ್ರಿಕೆಟ್ ಎಂಬ ಅದ್ಭುತ್ ಆಟವನ್ನು ನಾಶಪಡಿಸುತ್ತಿದೆ. ಜೊತೆಗೆ ಕ್ರಿಕೆಟ್ ಆಟದ ಕಲಾತ್ಮಕತೆ ಮಾಯವಾಗುತ್ತಿದೆ. ವಿಶ್ವನಾಥ್ ಹೊಡೆಯುತ್ತಿದ್ದ ಸ್ಕ್ವಾರ್ ಕಟ್ ನೋಡಲು ಸಿಗುವುದಿಲ್ಲ. ಮೀನಿನ ನಡೆಯಂತೆ ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಮುಂದಕ್ಕೆ ಇಟ್ಟು ಚಂಡನ್ನು ಕಣ್ಣು ಮುಚ್ಚಿ ನೋಡುವುದರ ಒಳಗೆ ಬೌಂಡರಿ ಲೈನ್ ಗೆ ಹೊಡೆಯುವುದು ಕಾಣುತ್ತಿಲ್ಲ. ಈಗಿನ ಕ್ರಿಕೆಟ್ ನೋಡಿದಾಗ ಚಿನ್ನಿ ದಾಂಡು ಆಟ ನೋದಿದಂತೆ ಕಾಣುತ್ತಿದೆ. ಕ್ರಿಕೆಟ್ ನಲ್ಲಿದ್ದ ನವಿರು ಆಟ ಮಾಯವಾಗಿ ಬಡಿಯುವುದು, ಹೊಡೆಯುವುದು ಹೆಚ್ಚಾಗುತ್ತಿದೆ. ಕೆಲವರು ಬ್ಯಾಟು ಬೀಸುವುದನ್ನು ನೋಡಿದರೆ, ಬ್ಯಾಟೇ ಮುರಿದು ಹಾರಿ ಹೋಗಬಹುದು ಎಂಬ ಭಯ ಕಾಡತೊಡಗುತ್ತಿದೆ.
ಇಂದು ಕ್ರಿಕೆಟ್ ಬಹುದೊಡ್ದ ಉದ್ಯಮವಾಗಿ ಬೆಳದಿದೆ. ಕ್ರಿಕೆಟ್ ಆಟಗಾರರು ಮೊದಲಿನಂತೆ, ಕಿಟ್ ಕೊಳ್ಳುವುದಕ್ಕೆ ಪರಿಪಾಟಲು ಪಡಬೇಕಾಗಿಲ್ಲ. ಕ್ರಿಕೆಟ್ ಆಟಕ್ಕಿಂತ ಜಾಹಿರಾತಿನಿಂದ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಹಲವು ಟೆಸ್ಟ್ ಗಳಲ್ಲಿ ವಿಫಲರಾದರೂ ಜಾಹೀರಾತಿನಿನಿಂದ ಬರುವ ಹಣ ನಿಲ್ಲುವುದಿಲ್ಲ.
ನಿಜ, ಇಂದು ಭಾರತದ ಕ್ರಿಕೆಟ್ ನ ಕರಾಳ ದಿನ. ಭಾರತ ಅವಮಾನಕರವಾಗಿ ಸೋತಿದೆ. ಇದೆನ್ನೆಲ್ಲ ನೋಡಿದರೆ ಅನ್ನಿಸುವುದೆಂದರೆ ನಮ್ಮ ಸ್ಟಾರ್ ಕ್ರಿಕೆಟ್ ಆಟಗಾರರು ಕ್ರಿಕೆಟ್ ಬಿಡುವುದು ಒಳ್ಳೆಯದು. ಬಿಡದಿದ್ದರೆ ರಾಜಕಾರಣ ಮಾಡುತ್ತಿರುವ ಈ ಆಟಗಾರರನ್ನು ಮನೆಗೆ ಕಳುಹಿಸುವ ಕೆಲಸವನ್ನು ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಡಬೇಕು. ಕ್ರಿಕೆಟ್ ನ ಮರ್ಯಾದೆಯನ್ನು ಉಳಿಸುವ ಕೆಲಸ ಆಗಬೇಕು.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...