Friday, January 27, 2012

ನಡೆಯುವುದು ಸುಲಭವಲ್ಲ.......!


ಒಳಗೆ ನಡೆಯುವುದು ಅಷ್ಟು ಸುಲಭವಲ್ಲ,
ಗುಪ್ತ ದಾರಿಯಲಿ ನೂರೆಂಟು ಕೊರಕಲು
ಕೆಳಗೆ ಬಿದ್ದರೆ ಪ್ರಪಾತ. ಆದರೂ ನಡೆಯಲೇ ಬೇಕು.
ಒಳಗಿನ ಗಮ್ಯ ತೆರೆದುಕೊಂಡರೆ, ಹೊರ ದಾರಿ ಸಲೀಸು.

ಒಳಗೆ ನಡೆಯುವುದು ಅಷ್ಟು ಸುಲಭವಲ್ಲ,
ಒಳಗೆ ನಡೆಯಲು ಹೊರಗಿನ ಸೆಳೆತ. ಎಳೆತ
ಅಲ್ಲಲ್ಲಿ ಕತ್ತಲು, ದೀಪ ಹಚ್ಚಲೇ ಬೇಕು, ನಡೆಯಲೇ ಬೇಕು
ಅಲ್ಲಿ ನಡೆಯದಿದ್ದರೆ ಇಲ್ಲಿ ಚಲನೆಯಿಲ್ಲ, ಅಲ್ಲಿ ಕಾಣದಿದ್ದರೆ
. ಮುಸುಕಿದ ಮಂಜು, ಮನಸ್ಸಿನ ನಂಜು. ಹೇಗೆ ಕಂಡೀತು ಹಾದಿ ?

ಎದ್ದು ನಿಂತ ಹಿಮಾಲಯ, ಪಕ್ಕದಲ್ಲೇ ವಿಂದ್ಯ, ಮಧ್ಯ ಭಾರತ
ಹರಿಯುತ್ತಿರುವ ನದಿ, ಕಾಣದಿರುವ ಜಲಪಾತ.
ಉರುಳಿದರೆ ಅತಳ ಸುತಳ ಪಾತಾಳ.
ಒಳ ಕಣಿವೆಯಲಿ, ನೂರೆಂಟೂ ದಾರಿಗಳು.
ಯಾರಿಗೆ ಗೊತ್ತು, ಅವರವರ ದಾರಿಯ ಗಮ್ಮತ್ತು ?
ನಡೆಯುವವನಿಗೆ ಅವನೇ ಮಾಧರಿ.
ದಾರಿಹೋಕನಿಗೆ ನಡೆದಿದ್ದೇ ದಾರಿ.
ಸುಮ್ಮನೆ ನೋಡು ಒಳಗಿನ ಪ್ರಪಾತವನ್ನು. ನಿನ್ನೊಳಗೆ ಬೀಡು ಬಿಟ್ಟ ಗಿರಿ ಕಂದರವನ್ನು
ಹೆದರಬೇಡ ನೀನು ನಡೆಯಲೇ ಬೇಕು, ನೀ ಗುಪ್ತ ಗಾಮಿನಿ.
ಇಲ್ಲಿ ದಾರಿ ಮಾಡಿಟ್ಟವರು ಯಾರೂ ಇಲ್ಲ. ನಿನ್ನ ದಾರಿಯ ಹುಡುಕಾಟ ಸುಲಭವಲ್ಲ.
ಆದರೂ ನಡೆಯಲೇಬೇಕು.
ನಡೆಯುವುದು ಅಷ್ಟು ಸುಲಭವಲ್ಲ.

ನೆನಪಿಡು, ಒಳಗೆ ನಡೆಯದವನು ಹೊರಗೆ ನಡೆಯಲಾರ.
ಒಳಗೆ ಕಾಣದ್ದನ್ನು ಹೊರಗೆ ಪಡೆಯಲಾರ.
ಇಡು ಇಡು ಅಂಬೇಗಾಲು, ಕಾಣಲಿ, ಕಾಣದಿರಲಿ,
ನಡೆದೇಬಿಡು ಒಳಗಿನ ಕಾಣದ ದಾರಿಯಲ್ಲಿ.

ಒಳಗಿನ ಹಾದಿಯಲ್ಲಿ ಅಲ್ಲಲ್ಲಿ ಮೈಲುಗಲ್ಲು.
ಆದರೂ ದೂರ ಬಹುದೂರ, ಗುರಿ ಮಾತ್ರ ಅಗೋಚರ.
ಒಳಗೆ ನಡೆವಾಗ ಹೊರಗೂ ಕಾಣಬಹುದು. ಕಣ್ಣಿದ್ದರೆ,
ಒಳಗೇ ಕಾಣಬಹುದು, ಕಾಣದ ಕನಕನ ಕಿಂಡಿ.

ಒಳಗೆ ನೋಡು ನಿನೇ ಸೃಷ್ಟಿಸಿಕೊಂಡ ಜಗತ್ತನ್ನು.
ಅಲ್ಲಿ ಏನಿದೆ ಏನಿಲ್ಲ ? ತಂದು ತುಂಬಿದ್ದೀಯಾ, ಕಸದ ಕೊಪ್ಪರಿಗೆಯನ್ನು.
ಸ್ವಲ್ಪ ಶುಚಿ ಮಾಡು. ತೆಗೆದಿಡು ಕಲ್ಲು ಬಂಡೆಗಳನ್ನು.
ಈಗ ಎಲ್ಲವೂ ಸಲೀಸು, ಕಂಡೀತೆ ಹೊರಗಿನ ಹಾಸು ?
ಇನ್ಯಾಕೆ ತಡ, ನಡೆದು ಬಿಡು, ಹಾಗೆ ಸುಮ್ಮನೆ.

1 comment:

Sheila Bhat said...

intaha kavanagalannu ittichige odiralilla. Adbhuta Adbhuta! Kavi KSN mattu DVG avara sammilandantide nimma kavanagalu.....

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...