Saturday, April 13, 2019

ಮೋದಿ ಚೌಕಿದಾರರೆ ? ಮೋದಿ ಮೋಡಿಗಾರರೆ ? ಮೋದಿ ಕಣ್ಣು ಕಟ್ಟು ವಿದ್ಯೆ ನಿಪುಣರೆ ?

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರವಾಸ ಮಾಡುತ್ತ ದಣಿವರಿಯದೇ ಮತ್ತೆ ಮೋದಿ ಎಂದು ತಾವೇ ಹೇಳಿಕೊಳ್ಳುತ್ತಿದ್ದಾರೆ. ಹಾಗೆ ಸೇರಿದ ಜನ ಸಮೂಹ ಮೋದಿ ಮೋದಿ ಎಂದು ಘೋಷಣೆ ಮಾಡುವಂತೆ ನೋದಿಕೊಂಡಿದ್ದಾರೆ. ಈ ದೃಷ್ಟಿಯಿಂದ ಮೋದಿಯವರು ಒಬ್ಬ ಯಶಸ್ವಿ ಪ್ರಚಾರಕ. ಆರ್ ಎಸ್ ಎಸ್ ಪ್ರಚಾರಕರಾಗಿದ್ದ ಅವರು ಈಗ್ ಬಿಜೆಪಿಯ ಪ್ರಚಾರಕರಾಗಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಅವರು ತಮಗೆ ತಾವೇ ಪ್ರಚಾರಕರಾಗಿದ್ದಾರೆ. ತಮ್ಮನ್ನೇ ತಾವು ಮಾರಾಟಕ್ಕೆ ಇಟ್ಟುಕೊಂಡತೆ.
ಅದೇನೇ ಇರಲಿ ನರೇಂದ್ರ ಮೋದಿಯವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಅಂಶಗಳನ್ನು ಸಾಬೀತು ಪಡಿಸಿದ್ದಾರೆ. ಅದರಲ್ಲಿ ಬಹುಮುಖ್ಯ ಎಂದರೆ ಪಕ್ಷಕ್ಕಿಂತ ಅವರು ದೊಡ್ಡದಾಗಿ  ಬೆಳೆದಿರುವುದು. ಹೌದು ಈಗ ಮೋದಿ ಭಾರತೀಯ ಜನತಾ ಪಾರ್ಟಿಗಿಂತ ದೊಡ್ದವರು.ಆ ಪಕ್ಷದಲ್ಲಿ ಎಲ್ಲ ಜನತಾಂತ್ರಿಕ ಮೌಲ್ಯಗಳನ್ನು ನಾಶಪಡಿಸಿ ವ್ಯಕ್ತಿ ಪೂಜೆ ಮತ್ತು ಭಟ್ಟಂಗಿ ರಾಜಕಾರಣವನ್ನು ಪ್ರಾರಂಭಿಸಿಬಿಟ್ಟಿದ್ದಾರೆ. ಅಲ್ಲಿ ಮೋದಿ ಮತ್ತು ಅಮಿತ್ ಷಾ ಅವರನ್ನು ಪ್ರಶ್ನಿಸಿಲಾಗದ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದ ಇಂದಿರಾ ಗಾಂಧಿ ನರೇಂದ್ರ ಮೋದಿ ಅವರ ಮೈಮೇಲೆ ಬಂದಂತಿದೆ.
ದಕ್ಷಿಣ ಭಾರತದ ತಮಿಳು ನಾಡಿನಲ್ಲಿ ವಿಶೇಷವಾಗಿ ಮೋದಿ ಅವರನ್ನು ಮೋಡಿ ಎಂದು ಕರೆಯುವುದು ಸಾಮಾನ್ಯ. ಹಾಗೆ ಇಂಗ್ಲೀಷ್ ಭಾಷೆಯನ್ನೇ ಮಾತೃ ಭಾಷೆಯನ್ನಾಗಿ ಮಾಡಿಕೊಂಡವರೂ ಸಹ ಮೋದಿ ಅವರನ್ನು ಮೋಡಿ ಎಂದೇ ಕರೆಯುತ್ತಾರೆ. ನಿಜ ನರೇಂದ್ರ ದಾಮೋದರ ಮೋದಿ ಈಗ ಭಾರತದ ಬಹುಸಂಖ್ಯಾತರ ಪಾಲಿಗೆ ಮೋಡಿಯೇ, ಅವರು ೨೦೧೪ ರಲ್ಲಿ ಮೋಡಿ ಮಾಡಿಯೇ ಅಧಿಕಾರಕ್ಕೆ ಬಂದರು. ಈ ಭಾರಿಯೂ ಮೋಡಿ ಮಾಡಲು ಅವರು ಸನ್ನದ್ಧರಾಗಿದ್ದಾರೆ.
ಮೋಡಿ ಕರ್ನಾಟಕ ಆಂಧ್ರ ಗಡಿ ಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಒಂದು ಕಲೆ. ಇದನ್ನು ಇಂದ್ರಜಾಲ ಮಹೇಂದ್ರ ಜಾಲ ಎಂದೂ ಕರೆಯಬಹುದು. ಜಾದೂ ಎಂದೂ ಹೇಳಬಹುದು. ಮೋಡಿ ಆಟದ ಸಂದರ್ಭದಲ್ಲಿ ಆಟದ ಅಂಗಳದಲ್ಲಿ ಹಾವುಗಳು ಚೇಳುಗಳು ಪ್ರತ್ಯಕ್ಷವಾಗುತ್ತವೆ/ ಒಬ್ಬರ ಹಿಂಭಾಗ ಇನ್ನೊಬ್ಬರ ಹಿಂಬಾಗಕ್ಕೆ ಅಂಟಿಕೊಳ್ಳುತ್ತದೆ. ಒಬ್ಬ ಕೈ ಬೀಸಿದರೆ ಮತ್ತೊಬ್ಬನ ಮೈ ಮೇಲೆ ಬಾಸುಂಡೆಯ ಗುರುತುಗಳು ಮೂಡುತ್ತವೆ. ಇದು ಒಂದು ರೀತಿಯ ಭ್ರಮಾತ್ಮಕ ಜಗತ್ತು. ಮೋಡಿಗಾರ ಇಂತಹ ಭ್ರಮೆಯೊಂದನ್ನು ಸೃಷ್ಟಿಸಿಬಿಡುತ್ತಾನೆ. ಆಟ ನೋಡುಲು ಸೇರಿದ ಸಾವಿರಾರ ಜನ ಈ ಭ್ರಮೆಯನ್ನೇ ನಿಜ ಎಂದುಕೊಂಡು ಸಂತೋಷ ಪಡುತ್ತಾರೆ. ಇದನ್ನು ಗ್ರಾಮಾಂತರ ಪ್ರದೇಶದ ಭಾಷೆಯಲ್ಲಿ ಕಣ್ಣು ಕಟ್ಟು ಎಂದು ಕರೆಯುತ್ತಾರೆ. ಹೌದು ಅದು ಕಣ್ಣು ಕಟ್ಟು ವಿದ್ಯೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೋಡಿ ಎಂದು ಕರೆಯುವಾಗ ಮೋಡಿ ವಿದ್ಯೆ ನನಗೆ ನೆನಪಾಗುತ್ತದೆ. ಮೋದಿಯವರು ಮೋಡಿ ಎಂಬ ಹೆಸರನ್ನು ಅನ್ವರ್ಥ ನಾಮವಾಗಿ ಪಡೆದಿರುವುದು ಕಾಕತಾಳಿಯ ಎಂದು ನನಗೆ ಅನ್ನಿಸುವುದಿಲ್ಲ. ಅವರು ಮೋಡಿಗಾರರೇ. ಬಂಗಾಳಿ ವಿದ್ಯೆಯಲ್ಲಿ ಪಾರಂಗತರು. ಗೋಬಲ್ಲನ ತತ್ವವನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತಂದವರೂ ನರೇಂದ್ರ ಮೋದಿಯವರೇ. ಅದನ್ನು ಅವರು ಪ್ರತಿದಿನ ಸಾಬೀತು ಮಾಡುತ್ತಲೇ ಇದ್ದಾರೆ. ಸಾಮಾನ್ಯ ಜನರ ಮುಗ್ದತೆಯನ್ನು ಬಳಸಿಕೊಂಡು ಮೋಡಿ ವಿದ್ಯೆಯ ಪ್ರದರ್ಶನ ಮಾಡುತ್ತಲೇ ಇದ್ದಾರೆ. ಆದರೆ ಈ ದೇಶದ ಮುಗ್ದ ಮತದಾರ ಈ ಮೋಡಿ ಆಟವನ್ನು ನೋಡಿ ಸಂತೋಷಪಡುತ್ತಿದ್ದಾನೆ.
ಮೋಡಿಯ ಅಂಗಳದಲ್ಲಿ ಮೋದಿ ಹಲವು ಕೃತಕ ಮತ್ತು ಭ್ರಮಾತ್ಮಕವಾದ ಹಾವು ಚೇಳುಗಳನ್ನು ಬಿಟ್ಟಿದ್ದಾರೆ. ಈ ಹಾವು ಚೇಳುಗಳು ಆಟ ನೋಡುವವರನ್ನು ಭಯದಲ್ಲಿ ಮುಳುಗಿಸುತ್ತಿವೆ.ಅವರು ರಕ್ಷಣೆಗಾಗಿ ಮೋಡಿ ಮಾಡುವವನ ಬಳಿಗೆ ಓಡಬೇಕು. ಅವನಿಗೆ ಶರಣಾಗಬೇಕು. ಹಿಟ್ಲರ್ ಇದೇ ಕೆಲಸ ಮಾಡಿದ್ದ.ಆತ ದೇಶ ಭಕ್ತಿಯ ಮಾತನಾಡುತ್ತ ಜನರನ್ನು ಭಾವನಾತ್ಮಕವಾಗಿ ಸೆರೆ ಹಿಡಿಯುತ್ತಿದ್ದ. ಅವರನ್ನು ವಶಪಡಿಸಿಕೊಳ್ಳುತ್ತಿದ್ದ. ಹಿಟ್ಲರ್ ಸಭೆಗಳಲ್ಲಿ ಅವನ ಪರವಾದ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಆತ ಸಮಾನಾಂತರವಾಗಿ ಕೈ ಎತ್ತಿದಾಗ ಸೇರಿದ ಲಕ್ಷಾಂತರ ಜನ ಕೈ ಎತ್ತಿ ಜೈಕಾರ ಕೂಗುತ್ತಿದ್ದರು.
  ಮೋದಿ ಅವರು ಇಂದು ಕರ್ನಾಟಕದ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾಡಿದ ಭಾಷಣವನ್ನು ಕೇಳಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರು ತಮ್ಮ ಭಾಷಣವನ್ನು ಪ್ರಾರಂಭಿಸುವುದು ಭಾರತ ಮಾತಾಕಿ ಜೈ ಎಂಬ ಘೋಷಣೆಯನ್ನು ಕೂಗುವುದರ ಮೂಲಕ. ಇದೇ ಅವರ ಭಾಷಣದ ಕೇಂದ್ರ ಭಿಂದು. ಮುಂದೆ ಭಾಷಣದ ಉದ್ದಕ್ಕೂ ಬೇರೆ ಬೇರೆ ರೀತಿಯಲ್ಲಿ ಭಾರತ ಮಾತೆಯ ಬಗ್ಗೆಯೇ ಮಾತನಾಡುತ್ತಾರೆ. ಮಾತೆಯ ರಕ್ಷಣೆಗೆ ನಿಂತ ತಾವು ಚೌಕೀದಾರ ಎಂದು ಪದೇ ಪದೇ ಉಚ್ಚರಿಸುತ್ತ ಕೇಳುಗರ ಮನಸ್ಸಿನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಬಿಡುತ್ತಾರೆ.
ಚೌಕೀದಾರ ಎಂದರೆ ಕಾವಲುಗಾರ. ನಮಗೆ ಕಾವಲುಗಾರ ಯಾಕೆ ಬೇಕು ಎಂದರೆ ನಮಗೆ ಕಳ್ಳತನದ ಭಯವಿದ್ದಾಗ ಮಾತ್ರ. ಕಳ್ಳರ ಬಗ್ಗೆ ಭಯವಿದ್ದಾಗ ಮಾತ್ರ. ಇಲ್ಲಿ ಕಳ್ಳರು ಇದ್ದಾರೆ ಮತ್ತು ಕಳ್ಳತನ ನಡೆಯುತ್ತದೆ ಎಂದು ಹೆದರಿಸಿದಾಗ ಮಾತ್ರ ಜನ ಚೌಕೀದಾರರನ್ನು ಹುಡುಕಿಕೊಂಡು ಹೋಗುತ್ತಾರೆ. ಇದು ಮೋದಿಯವರಿಗೆ ಗೊತ್ತು. ಹೀಗಾಗಿ ತಾವೇ ಚೌಕೀದಾರ ಎಂದು ಜನರನ್ನು ನಂಬಿಸುವ ಅವರು ಕಳ್ಳರು ಮತ್ತು ಕಳ್ಳತನ ಮಾಡುವವರು ಕಾಂಗ್ರೆಸ್ ಮತ್ತು ಮತ್ತು ಪ್ರತಿಪಕ್ಷದವರು ಎಂದು ಜನರನ್ನು ನಂಬಿಸಲು ಹೊರಡುವುದು ಎರಡನೆ ಹಂತ.
ಅವರು ಇದಕ್ಕೂ ಮೊದಲು ಚೌಕೀದಾರನ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಾರೆ. ಅದಕ್ಕೆ ಅವರು ಬಳಸಿಕೊಳ್ಳುವುದು ದೇಶದ ರಕ್ಷಣೆ, ಭಯೋತ್ಪಾದನೆ, ದೇಶಭಕ್ತಿ ಮೊದಲಾದ ಭಾವನಾತ್ಮಕ ವಿಚಾರಗಳನ್ನು.
ಈ ಕೆಲಸಕ್ಕೆ ಅವರು ದೇಶದ ಸೈನ್ಯವನ್ನು ವಿಜ್ನಾನಿಗಳನ್ನು ಅವರ ಸಾಧನೆಯನ್ನು ಬಳಸಿಕೊಳ್ಳುತ್ತಾರೆ. ಗಡಿ ಕಾಯುವ ಸೈನಿಕರನ್ನು ಹೊಗಳುತ್ತ ತಮ್ಮ ಸಾಧನೆಯನ್ನು ವೈಭವೀಕರಿಸಲು ಪ್ರಾರಂಭಿಸುತ್ತಾರೆ. ಪಾಕಿಸ್ಥಾನದ ಮೇಲೆ ನಡೆಸಿದ ವೈಮಾನಿಕ ಧಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ನ್ನು ಪ್ರಸ್ತಾಪಿಸುತ್ತ  ತಮ್ಮ ತಮ್ಮ ಬೆನ್ನನ್ನೇ ತಾವು ತಟ್ಟಿಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವಾಗಲೂ ಅವರಿಗೆ ಒಂದು ನಿಮಿಷ ಇದು ಆತ್ಮ ವಂಚನೆ ಎಂದು ಅನ್ನಿಸುವುದಿಲ್ಲ. ಇಸ್ರೋ ವಿಜ್ನಾನಿಗಳ ಸಾಧನೆಯ ಕಿರೀಟವನ್ನು ತಮ್ಮದೇ ಎಂದು ತಲೆಯ ಮೇಲೆ ಧರಿಸಿ ನಗತೊಡಗುತ್ತಾರೆ ಮೋದಿ.
ತಾವು  ಮಾಡಿದ ವೈಮಾನಿಕ ಧಾಳಿ  ಎಂದು ಹೇಳುತ್ತ ಇದನ್ನೇ ಮಾಡುವ ಧೈರ್ಯ ಕಾಂಗ್ರೆಸ್ ಗೆ ಯಾಕೆ ಬಂದಿರಲಿಲ್ಲ ಅವರಿದ್ದಾಗ ಯಾಕೆ ಉಪಗ್ರಹ ವಿಧ್ವಂಸಕ ತಂತ್ರಜ್ನಾನ ಉಪಯೋಗವಾಗಿಲ್ಲ ಎಂದು ಪ್ರಶ್ನಿಸುತ್ತ ತಾವೇ ಈ ದೇಶದನ್ನು ಉಳಿಸುವ ಕಾವಲುಗಾರ ಎಂದು ಸಾಬೀತು ಪಡಿಸಲು ಹೊರಡುತ್ತಾರೆ. ಜೊತೆಗೆ ಕಾಶ್ಮೀರ ನೀತಿಯನ್ನು ತಾವು ವಿಫಲವಾದ ಬಗ್ಗೆ ಅವರು ಮಾತನಾಡುವುದಿಲ್ಲ. ಮುಂದೇನು ಎಂಬ ಪ್ರಶ್ನೆಗೆ ಅವರು ಉತ್ತರ ನೀಡುವುದಿಲ್ಲ. ಇದಕ್ಕೆ ಬದಲಾಗಿ ಕಾಶ್ಮೀರ ಸಮಸ್ಯೆ ಬಗೆ ಹರಿಸಲು ಪ್ರತ್ಯೇಕತವಾದಿಗಳ ಜೊತೆ ಮಾತುಕತೆಗೆ ಸಿದ್ಧ ಎಂಬ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾದ ಅಂಶಗಳನ್ನು ಎತ್ತಿ ಆಡಲು ಪ್ರಾರಂಭಿಸುತ್ತಾರೆ. ಹಾಗೆ ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ದೇಶಪ್ರೇಮವನ್ನು ಅವರು ಲೇವಡಿ ಮಾಡುತ್ತಾರೆ. ಆದರೆ ಕಾಶ್ಮೀರ ಸಮಸ್ಯೆಗೆ ತಮ್ಮ ಬಳಿ ಇರುವ ಪರಿಹಾರ ಏನು ಎಂಬುದನ್ನು ಮಾತ್ರ ಅವರು ಹೇಳುವುದಿಲ್ಲ.
ಭಾರತಮಾತಾಕಿ ಜೈ ಎಂದು ತಮ್ಮ ಭಾಷಣವನ್ನು ಪ್ರಾರಂಭಿಸುವ ಮೋದಿ ಅಲ್ಲಿಯೇ ಗಿರಕಿ ಹೊಡೆಯುತ್ತಾರೆ.
ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ದೇಶದ ಅಭಿವೃದ್ಧಿಯ ಪ್ರಶ್ನೆಯನ್ನು ಅವರು ಪ್ರಮುಖ ವಿಚಾರವಾಗಿ ಪ್ರಸ್ತಾಪಿಸುವುದಿಲ್ಲ. ದೇಶ ಎದುರಿಸುತ್ತಿರುವ ಬಡತನ, ಅಸಮಾನತೆ, ಕೋಮುವಾದ ಜಾತೀಯತೆ, ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕುಸಿಯುತ್ತಿರುವ ಗ್ರಾಮೀಣ ಆರ್ಥಿಕತೆ ವಿಚಾರಗಳಿಗೆ ಅವರ ಭಾಷಣದಲ್ಲಿ ಸ್ಥಾನವೇ ಇಲ್ಲ. ಇದನ್ನೆಲ್ಲ ನೋಡಿದಾಗ ಅನ್ನಿಸುವುದು ಇವರೊಬ್ಬ ಗಂಭೀರ ರಾಜಕಾರಣಿ ಅಲ್ಲ. ದೇಶದ ಬಗ್ಗೆ ಕನಸಿರುವ ರಾಜನೀತಿಜ್ನರೂ ಅಲ್ಲ. ಮೋದಿ ಒಬ್ಬ ಮೋಡಿಗಾರ. ಬಂಗಾಲಿ ಜಾದೂ ಅನ್ನು ನಂಬಿರುವವರು. ಕಣ್ಣು ಕಟ್ಟು ವಿದ್ಯೆಯಲ್ಲಿ ನಿಪುಣರು..
ಈ ವಿದ್ಯೆ ಅವರನ್ನು ಇನ್ನೊಮ್ಮೆ ಅಧಿಕಾರಕ್ಕೂ ತರಬಹುದು.. ಆದರೆ ಕಣ್ಣಿನ ಪೊರೆ ಕಳಚಲೇ ಬೇಕು. ಭ್ರಮೆ ಅಳಿಯಲೇ ಬೇಕು. ಅದು ಯಾವಾಗ ಎಂದು ಹೇಳುವುದು ಕಷ್ಟ.



No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...