Thursday, April 11, 2019

ಕಾಂಗ್ರೆಸ್ ಪಕ್ಷದ ಐತಿಹಾಸಿಕ ತಪ್ಪುಗಳು’ ಬಿಜೆಪಿಗೆ ವರದಾನವಾಯಿತೆ ?




ಕಾಂಗ್ರೆಸ್ ಒಂದು ಪುರಾತನ ಪಕ್ಷ, ಭಾರತೀಯ್ ರಾಜಕಾರಣದ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಮಾತನಾಡಲು ಸಾಧ್ಯವಾಗುವುದೇ ಇಲ್ಲ. ಭಾರತೀಯ ರಾಜಕಾರಣದ ಅವಿಭಾಜ್ಯ ಅಂಗ ಕಾಂಗ್ರೆಸ್. ಆದ್ದರಿಂದ ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಘೋಷಣೆಗೆ ಯಾವ ಅರ್ಥವೂ ಇಲ್ಲ. ಅಂತಹ ಮಾತುಗಳು ಇತಿಹಾಸವನ್ನು ನಿರಾಕರಿಸುವ ಮತ್ತು ವರ್ತಮಾನದಲ್ಲಿ ಇತಿಹಾಸವನ್ನು ಬದಲಿಸುವ ಮನಸ್ಥಿತಿಯ ಪ್ರತೀಕ. ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಕೇಳುವುದು ತಪ್ಪಲ್ಲ. ಆದರೆ ಈ ಪ್ರಶ್ನೆ ಕೇಳುವಾಗ ಒಂದು ನಿಷ್ಕಲ್ಮಷ ಮನೋಭಾವನೆ ಬೇಕು. ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುವುದಾಗಲೀ ಭಾರಿ ಸಾಧನೆ ಮಾಡಿದೆ ಎನ್ನುವುದಾಗಲೀ ಸತ್ಯದ ಒರೆಗಲ್ಲಿಗೆ ಹಚ್ಚಬೇಕಾದ ವಿಚಾರಗಳು.
ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ದೋಣಿಯಲ್ಲಿ ಸಾಗುತ್ತಿರುವ ಪಕ್ಷಗಳು. ಇವುಗಳ ನಡುವೆ ನನಗೆ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಕಾಂಗ್ರೆಸ್ ಗತ ವೈಭವದ ಮೇಲೆ ವರ್ತಮಾನವನ್ನು ಕಟ್ಟುವ ಯತ್ನ ನಡೆಸುತ್ತಿದೆ. ಬಿಜೆಪಿ ಭೂತಕಾಲದ ಎಲ್ಲ ಕುರುಹುಗಳನ್ನು ನಾಶಪಡಿಸಿ ವರ್ತಮಾನದ ಯಶಸ್ಸಿನ್ ಗೋಪುರ ನಿರ್ಮಾಣದಲ್ಲಿ ತೊಡಗಿದೆ. ಯಾಕೆಂದರೆ ಬಿಜೆಪಿಗೆ ಭೂತಕಾಲ ಅಪಾಯಕಾರಿ. ಭೂತಕಾಲದ ಸಾಧನೆಗಳ ಬಗ್ಗೆ ಆ ಪಕ್ಷಕ್ಕೆ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ. ಬಿಜೆಪಿಯ ನಿಯಂತ್ರಣ ಕೊಠಡಿಯಾದ ಆರ್ ಎಸ್ ಎಸ್ ಮತ್ತು ಸಂಘ ಪರಿವಾರ ಸ್ವಾತಂತ್ರ ಸಂಗ್ರಾಮ ಮತ್ತು ನಂತರದ ದಿನಗಳಲ್ಲಿ ಭಾರತದ ಇತಿಹಾಸದ ಬಗ್ಗೆ ಮಾತನಾಡುತ್ತಲೇ ಈ ದೇಶದ ಮೂಲವನ್ನು ನಾಶಪಡಿಸುವ ಕೆಲಸವನ್ನೇ ಮಾಡಿವೆ. ಹೀಗಾಗಿ ಅವರಿಗೆ ಇತಿಹಾಸ ಬೇದ. ಅವರಿಗೆ ಬೇಕಾದ್ದು ವರ್ತಮಾನದಲ್ಲಿ ವಿಕೃತಗೊಳಿಸಿದ ಇತಿಹಾಸವೇ.
ಮೋದಿ ಮತ್ತು ಅವರ ಬಿಜೆಪಿ ಪಕ್ಷ ಸತತವಾಗಿ ವರ್ತಮಾನದಲ್ಲಿ ಭೂತಕಾಲವನ್ನು ಬದಲಿಸುವ ಯತ್ನವನ್ನು ನಡೆಸುತ್ತಲೇ ಬಂದಿವೆ. ಬಾಬ್ರಿ ಮಸೀದಿಯ ಧ್ವಂಸದಿಂದ ಭಾರತೀಯ ಪ್ರಮುಖ ನಗರಗಳ ಹೆಸರುಗಳನ್ನು ಬದಲಿಸುವ ವರೆಗೆ ಇದು ಮುಂದುವರಿದಿದೆ. ಕೇವಲ ಹೆಸರು ಬದಲಿಸುವುದರಿಂದ ಪೂಜಾ ಸ್ಥಾನಗಳನ್ನು ನಾಶಪಡಿಸುವುದರಿಂದ ದೇಶದ ಇತಿಹಾಸವನ್ನು ಬದಲಿಸಲಾಗದು. ಇತಿಹಾಸವನ್ನು ಇತಿಹಾಸವಾಗಿ ಸ್ವೀಕರಿಸುತ್ತಲೇ ವರ್ತಮಾನವನ್ನು ಭವಿಷ್ಯವನ್ನು ರೂಪಿಸಬೇಕಾದ್ದು ಅತ್ಯಗತ್ಯ. ಆದರೆ ಬಿಜೆಪಿ ಮತ್ತು ಸಂಘ ಪರಿವಾರದ ಗುಪ್ತ ಅಜೆಂಡಾ ಬೇರೆಯದ್ದೇ ಆಗಿದೆ.
ಇಂತಹ ಬಿಜೆಪಿಯನ್ನು ಎದುರಿಸುವುದು ಹೇಗೆ ? ಅದಕ್ಕೆ ಬಳಸಬೇಕಾದ ಶಸ್ತ್ರಾಸ್ತ್ರಗಳು ಯಾವುದು ಎಂಬುದು ಕಾಂಗ್ರೆಸ್ ಗೆ ತಿಳಿದಿಲ್ಲ. ಕಾಂಗ್ರೆಸ್ ಎಂದೂ ಇತಿಹಾಸದಿಂದ ಪಾಠ ಕಲಿತೇ ಇಲ್ಲ.
ನಿನ್ನೆ ನಾನೂ ಸಲೂನ್ ಒಂದಕ್ಕೆ ಹೋಗಿದ್ದೆ. ಟಿವಿಯಲ್ಲಿ ನನ್ನನ್ನು ನೋಡಿದ್ದ ಸಲೂನ್ ಮಾಲೀಕ ನನ್ನ ಜೊತೆ ರಾಜಕೀಯ ಮಾತನಾಡಲು ಪ್ರಾರಂಭಿಸಿದ.
ಸಾರ್ ಯಾರಿಗೆ ಮತ ಹಾಕಬೇಕು ಎಂದು ಗೊತ್ತಾಗದೇ ಗೊಂದಲದಲ್ಲಿದ್ದೇನೆ ಎಂದ ಆತ.
ಯಾಕೆ ಎಂದು ನಾನು ಪ್ರಶ್ನಿಸಿದೆ.
ಸಾರ್ ಮೋದಿ ನಾಟಕ ಸಾಕು. ಕಾಂಗ್ರೆಸ್ ಗೆ ಓಟು ಹಾಕಬೇಕು ಎಂದು ಕೊಂಡಿದ್ದೆ. ಆದರೆ ಕಾಂಗ್ರೆಸ್ ಪ್ರಣಾಳಿಕೆ ನೋಡಿದ ಮೇಲೆ ಯಾಕೋ ಕಾಂಗ್ರೆಸ್ ಗಿಂತ ಮೋದಿ ಬೆಟರ್ ಎಂದು ಅನ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ದೇಶಧ್ರೋಹದ ಕಾನೂನು ತೆಗೆದು ಹಾಕುವುದಾಗಿ ಹೇಳಲಾಗಿದೆ. ಇದೇನು ಸಾರ್ ? ಕೊನೆ ಪಕ್ಷ ಮೋದಿ ಸುಳ್ಳು ಹೇಳಿದರೂ ದೇಶದ ರಕ್ಷಣೆ ಮಾಡ್ತಾರೆ. ಪಾಕಿಸ್ಥಾನಕ್ಕೆ ಬುದ್ದಿ ಕಲಿಸ್ತಾರೆ ಎಂದ ಆತ.
ಇದು ಒಂದು ಪ್ರಾತಿನಿಧಿಕ ಹೇಳಿಕೆ ಮಾತ್ರ. ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಯಾವ ರೀತಿಯ ರಾಜಕಾರಣ ಮಾಡುತ್ತಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ. ದೇಶ ಭಕ್ತಿ ಎಂಬುದನ್ನು ಸುಳ್ಳುಗಳ ಮೇಲೆ ಹೇಗೆ ಕಟ್ಟಲಾಗಿದೆ. ಈ ಸುಳ್ಳಿನ ಮೇಲೆ ಕಟ್ಟಲಾದ ದೇಶ ಭಕ್ತಿಯ ಭ್ರಮೆಯಿಂದ ಜನರನ್ನು ಹೊರತರಲು ಕಾಂಗ್ರೆಸ್ ಪಕ್ಷಕ್ಕೆ ಸಾಢ್ಯವಾಗುತ್ತಿಲ್ಲ. ಯಾಕೆಂದರೆ ದೇಶಭಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟತೆ ಇಲ್ಲ. ಯಾಕೆಂದರೆ ದೇಶ ಭಕ್ತಿ ಪರಿಕಲ್ಪನೆ ಹೊಸ ರೂಪದಲ್ಲಿ ಹೊಸ ಅವತಾರದಲ್ಲಿ ನಮ್ಮ ಮುಂದೆ ಪ್ರತ್ಯಕ್ಷವಾಗಿದೆ.
ಹಾಗೇ ನೋಡಿದರೆ ಕಾಂಗ್ರೆಸ್ ಪಕ್ಷ ಜನ್ಮ ತಾಳಿದ್ದೇ ದೇಶ ಭಕ್ತಿಯ ಆಧಾರದ ಮೇಲೆ. ಆದರೆ ಕಾಂಗ್ರೆಸ್ ಹುಟ್ಟಿದ ಸಂದರ್ಭದಲ್ಲಿ ದೇಶ ಭಕ್ತಿಯ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಬ್ರಿಟೀಷರ ವಿರುದ್ಧದ ಹೋರಾಟ, ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಳ್ಳುವುದು ಪರಕೀಯರ ಗುಲಾಮಗಿರಿಯಿಂದ ಹೊರಕ್ಕೆ ಬರುವುದು ಹೀಗೆ ಎಲ್ಲವೂ ಸರಳ ಮತ್ತು ನೇರವಾಗಿದ್ದವು. ಕಾಂಗ್ರೆಸ್ ದೇಶವನ್ನು ಪ್ರತಿನಿಧಿಸುವ ಏಕಮೇವ ಪಕ್ಷವಾದ್ದರಿಂದ ಅದನ್ನು ಪ್ರಶ್ನಿಸುವ ಪರಿಸ್ಥಿತಿಯೂ ಇರಲಿಲ್ಲ. ದೇಶೀಯತೆ ಎನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಗುಣಧರ್ಮವೇ ಆಗಿದ್ದರಿಂದ ಸಂಘ ಪರಿವಾರದ ದೇಶೀಯತೆಗೆ ಯಾರು ಪುರಸ್ಕಾರ ನೀಡುವ ಸ್ಥಿತಿ ಕೂಡ ಇರಲಿಲ್ಲ. ಜೊತೆಗೆ ಉಗ್ರ ಹಿಂದುತ್ವವಾದ ಸಮಾಜದ ಮುಂದೆ ಬಹುಮುಖ್ಯವಾದ ಪ್ರಶ್ನೆ ಆಗಿರಲಿಲ್ಲ. ಕಾಂಗ್ರೆಸ್ ಪ್ರತಿಪಾದಿಸುತ್ತಿದ್ದ ದೇಶೀಯತೆಯೆ ಒಳಗೆ ಸಾಫ್ಟ್ ಹಿಂದುತ್ವವೂ ಅಡಕವಾದ್ದರಿಂದ ಹಿಂದುತ್ವ ಭಹುಮುಖ್ಯ ಪ್ರಶ್ನೆಯಾಗಿ ಮುನ್ನೆಲೆಗೆ ಬರಲು ಅವಕಾಶವಾಗಲೇ ಇಲ್ಲ.
ಈ ಸಂದರ್ಭದಲ್ಲಿ ಉಗ್ರ ಹಿಂದುತ್ವವಾದಿಗಳು ಸಂಘ ಪರಿವಾರ ಕೇಂದ್ರಿತವಾಗಿ ಬಲಗೊಳ್ಳಲು ಹುನ್ನಾರ ನಡೆಸುತ್ತಲೇ ಇದ್ದರು. ಗಾಂಧಿಯನ್ನು ವಿರೋಧಿಸುವ ಮೂಲಕ ಈ ದೇಶದ ಧರ್ಮ ನಿರಪೇಕ್ಷ ಗುಣಧರ್ಮವನ್ನು ನಾಶಪಡಿಸುವ ಕೆಲಸವನ್ನು ಅವರು ಪ್ರಾರಂಭಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬರುವುದು ಈ ಸಂಘ ಪರಿವಾರದ ಜನರಿಗೆ ಬೇಕಾಗಿರಲಿಲ್ಲ. ಅವರಿಗೆ ದಾಸ್ಯದಿಂದ ಹೊರಕ್ಕೆ ಬರುವುದಕ್ಕಿಂತ ಅವರ ವೈದಿಕ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದು ಹೆಚ್ಚು ಮುಖ್ಯವಾಗಿತ್ತು. ಇವರು ತಮ್ಮ ಎಜೆಂಡಾವನ್ನು ಜಾರಿಗೊಳಿಸುವುದಕ್ಕೆ ಮೊದಲು ಬಳಸಿಕೊಂಡಿದ್ದು ದೇಶದ ವಿಭಜನೆಯನ್ನು. ದೇಶದ ವಿಭಜನೆ ಮತ್ತು ಆ ಸಂದರ್ಭದಲ್ಲಿ ರಕ್ತಪಾತ ಮತ್ತು ಮಾರಣ ಹೋಮವನ್ನು ಗಾಂಧೀಜಿಯವರ ವಿರುದ್ಧ ಎತ್ತಿಕಟ್ಟುವುದಕ್ಕೆ ಈ ಜನ ಬಳಸಿಕೊಂಡರು. ಗಾಂಧಿಜಿ ಇರುವ ತನಕ ಈ ದೇಶದ ಧರ್ಮ ಸಹಿಷ್ಣತೆಯ ಗುಣ ಧರ್ಮವನ್ನು ವೈದಿಕ ಗುಣಧರ್ಮವಾಗಿ ಬದಲಿಸುವುದು ಸಾಧ್ಯವಿಲ್ಲ ಎಂಬುದು ಸಂಘದ ಸ್ಪಷ್ಟ ಅಭಿಪ್ರಾಯವಾಗಿತ್ತು. ಗಾಂಧೀಜಿಯವರನ್ನು ದೈಹಿಕವಾಗಿ ಮುಗಿಸುವುದರ ಜೊತೆಗೆ ಗಾಂಧಿಯವರ ಮಹಾತ್ಮ ಮತ್ತು ರಾಷ್ಟ್ರಪಿತ ಇಮೇಜ್ ಅನ್ನು ಹತ್ಯೆ ಮಾಡುವುದು ಅತ್ಯಗತ್ಯ ಎಂಬುದನ್ನು ಸಂಘ ಮನವರಿಕೆ ಮಾಡಿಕೊಂಡಿತ್ತು. ಮಹಾತ್ಮಾ ಗಾಂಧಿ ಈ ದೇಶದ ಆದರ್ಶ ಆಗಿರುವ ವರೆಗೆ ತಮ್ಮ ಅಜೆಂಡಾವನ್ನು ಜಾರಿಗೆ ತರುವುದು ಸಾಧ್ಯವಿಲ್ಲ ಎನ್ನುವುದು ಅವರ ಅರಿವಿಗೆ ಬಂದಿತ್ತು..ಹೀಗಾಗಿ ಮಹಾತ್ಮಾ ಗಾಂಧಿ ಅವರನ್ನು ದೈಹಿಕವಾಗಿ ಮತ್ತು ಚಿಂತನೆಯಾಗಿ ಹತ್ಯೆ ಮಾಡಲು ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ ಸಂಘದ ರಾಜಕೀಯವಾದ ಮುಖವಾದ ಜನಸಂಘಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಅನ್ನು ಎದುರಿಸುವ ಶಕ್ತಿ ಇರಲಿಲ್ಲ. ಅದು ಪೇಟೆ ಪಟ್ಟಣಗಳ ವ್ಯಾಪಾರಿಗಳ ಪಕ್ಷವಾಗಿ ಮಾತ್ರ ಉಳಿದುಕೊಂಡಿತ್ತು. ಆದರೆ ಶ್ರೀಮತಿ ಇಂದಿರಾ ಗಾಂಧಿ ಅವರು ಮಾಡಿದ ಐತಿಹಾಸಿಕ ಪ್ರಮಾಧ ಸಂಘ ಪರಿವಾರಕ್ಕೆ ಹೊಸ ಅವಕಾಶವನ್ನು ಸೃಷ್ಟಿಸಿಬಿಟ್ಟಿತು. ಅದು ತುರ್ತು ಪರಿಸ್ಥಿತಿಯ ಹೇರಿಕೆ.೭೦ ದಶಕದ ಆ ಅವಧಿಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಿ ಬೆಳೆಯಲು ಪ್ರಾರಂಭಿಸಿಬಿಟ್ಟಿದ್ದರು. ದೇಶಕ್ಕಿಂತ ತಾವು ದೊಡ್ಡವರು ಎಂಬ ಭ್ರಮೆ ಅವರನ್ನು ಆವರಿಸಿಬಿಟ್ಟಿತ್ತು. ಅಲಹಾಬಾದ್ ನ್ಯಾಯಾಲಯದ ತೀರ್ಪು ಬರುವ ಹೊತ್ತಿಗೆ ಅವರು ನ್ಯಾಯಾಲಯಗಳೂ ತಮ್ಮ ಅಡಿಯಾಳಾಗಿರಬೇಕು ಎಂಬ ಸರ್ವಾಧಿಕಾರಿ ಮನೋವೄತ್ತಿಯನ್ನು ಬಹಿರಂಗವಾಗಿ ಪ್ರಕಟಿಸುವ ಹಂತ ತಲುಪಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟ ಮತ್ತು ನಂತರ ಜನತಾ ಪಕ್ಷದ ಸ್ಥಾಪನೆಯ ಸಂದರ್ಭದಲ್ಲಿ ಮಹತ್ವದ ಪಾತ್ರ ಒಹಿಸಿದ ಸಂಘ ಮತ್ತು ಜನಸಂಘ ರಾಜಕೀಯ ಶಕ್ತಿಯಾಗಿ ಬೆಳೆಯಲು ತುರ್ತು ಪರಿಸ್ಥಿತಿ ಮತ್ತು ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಗುಣವನ್ನ ಜನತ ಪಕ್ಷದ ಹುಟ್ಟಿನ ಚಾರಿತ್ರಿಕ ಸಂದರ್ಭವನ್ನು ಯಶಸ್ವಿಯಾಗಿ ಬಳಸಿಕೊಂಡರು...ದೇಶದ ರಾಜಕೀಯ ಭೂಪಟದ ಮೇಲೆ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಲು ಅದ್ಭುತ ಅವಕಾಶ ಅವರಿಗೆ ದೊರಕಿತು..ಹೀಗಾಗಿ ಇಂದಿನ ಬಿಜೆಪಿಯ ಬೀಜ ಮೊಳಕೆ ಒಡೆಯುವುದಕ್ಕೆ ಕಾರಣರಾದವರು ಶ್ರೀಮತಿ ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷ. ಜನತಾ ಪಕ್ಷ ದ್ವಿಸದಸ್ಯತ್ವದ ಕಾರಣದಿಂದ ಒಡೆದಾಗ ಹುಟ್ಟಿಕೊಂಡ ಭಾರತೀಯ ಜನತಾ ಪಾರ್ಟಿ ಆಗಲೇ ತನ್ನ ಅಖಾಡಾವನ್ನು ಸಿದ್ಧಪಡಿಸಿಕೊಂಡಾಗಿತ್ತು. ಕಾಂಗ್ರೆಸ್ ವಿರೋಧಿ ಶಕ್ತಿಗಳು ಬಹುಕಾಲ ಒಂದಾಗಿ ಇರುವುದು ಸಾಧ್ಯವಿಲ್ಲ ಎಂಬ ಅರಿವು, ಪ್ರಾದೇಶಿಕ ಪಕ್ಷಗಳ ಹೆಚ್ಚುತ್ತಿದ್ದ ಪ್ರಾಭಲ್ಯ ಬಿಜೆಪಿಗೆ ಪರ್ಯಾಯ ಪಕ್ಷವಾಗಿ ಬೆಳೆಯಲು ಸೂಕ್ತ ವೇದಿಕೆಯನ್ನು ಕಲ್ಪಿಸಿಬಿಟ್ಟಿತ್ತು. ಜೊತೆಗೆ ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ಬದಲಾಗಿದ್ದು ಕೂಡ ಬಿಜೆಪಿಗೆ ವರದಾನವಾಯಿತು. ರಾಜಕಾರಣ ಮತ್ತು ಧರ್ಮ ಕಾರಣವನ್ನು ಒಂದು ಮಾಡಿ ಭಾರತದ ಹಿಂದೂಗಳನ್ನು ಪ್ರತಿನಿಧಿಸುವ ಏಕ ಮೇವ ಪಕ್ಷ ಬಿಜೆಪಿ ಎಂದು ವ್ಯವಸ್ಥಿತವಾಗಿ ಬಿಂಬಿಸುವ ಕೆಲಸ ಕೂಡ ಪ್ರಾರಂಭವಾಯಿತು. ಆಗಲೇ ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಒಳಗೇ ಇದ್ದ ಸಾಫ್ಟ್ ಹಿಂದುತ್ವ ಬದಲಾಗ ತೊಡಗಿತ್ತು, ಇಂದಿರಾ ತಾವು ಪಕ್ಷಕ್ಕಿಂತ ದೊಡ್ದವರು ಎಂದು ಪ್ರತಿಪಾದಿಸುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರನ್ನು ದೂರ ಮಾಡಿದ್ದರು. ನಾನೇ ಗಾಂಧಿ ಎಂದು ಹೇಳುತ್ತ ಭಾರತೀಯ ಜನ ಮಾನಸದಿಂದ ಮೋಹನ್ ದಾಸ್ ಕರಮಚಂದ್ ಗಾಂಧಿ ದೂರವಾಗುವಂತೆ ಮಾಡಿದರು. ಬಿಜೆಪಿಗೆ ಬೇಕಾದ್ದು ಇದೇ ಆಗಿತ್ತು. ಮಹಾತ್ಮಾ ಗಾಂಧಿಯನ್ನು ಮರೆತಿದ್ದು ಡುಪ್ಲಿಕೇಟ್ ಗಾಂಧಿಗಳು ದೇಶದ ರಾಜಕಾರಣದಲ್ಲಿ ಮುಖ್ಯರಾಗತೊಡಗಿದ್ದು ಬಿಜೆಪಿಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಬಿಟ್ಟಿತು.೯೦ ರ ದಶಕ ಬಿಜೆಪಿ ಪಾಲಿಗೆ ಅತಿ ಮಹತ್ವದ ದಶಕ,.ಬಾಬ್ರಿ ಮಸೀದಿಯನ್ನು ಕೆಡವಿದ್ದು, ಆಡ್ವಾಣಿ ಅವರ ರಥಯಾತ್ರೆ ಕಾಂಗ್ರೆಸ್ ಗೆ ಬಿಜೆಪಿ ಪರ್ಯಾಯ ಪಕ್ಷವಾಗಿ ಬಲ ಪಡಯಲು ಕಾರಣವಾಯಿತು..ಆಗಲೇ ಕಾಂಗ್ರೆಸ್ ತನ್ನ ವೈರುದ್ಧ್ಯಗಳಿಂದ ಶಿಥಿಲಗೊಳ್ಳಲು ಪ್ರಾರಂಭವಾಗಿತ್ತು. ಪಕ್ಷದ ಪ್ರಾದೇಶಿಕ ನಾಯಕತ್ವ ಬೆಳಯಲೇ ಇಲ್ಲ. ಗಾಂಧಿ ಕುಟುಂಬ ಪ್ರಬಲ ನಾಯಕರನ್ನು ಹತ್ತಿಕ್ಕಲು ಪ್ರಾರಂಭಿಸಿತ್ತು. ಸೋನಿಯಾ ಮನೆ ಮುಂದೆ ಕಾಯುವವರು ಜೈ ಹುಜೂರ್ ಎನ್ನುವವರು ಮಾತ್ರ ನಾಯಕರು ಅನ್ನಿಸಿಕೊಂಡರು. ಸ್ವಾಭಿಮಾನ ಇರುವ ನಾಯಕರು ಜನರ ನಡುವೆ ಇರುವವರು ಕಾಂಗ್ರೆಸ್ ಪಕ್ಷದಲ್ಲಿ ಅನಾಥರಾದರು. ಆದರೆ ಕಾಂಗ್ರೆಸ್ ನಾಯಕತ್ವಕ್ಕೆ ಇದು ಅರ್ಥವಾಗಲೇ ಇಲ್ಲ...ಕಾಂಗ್ರೆಸ್ ಹೇಗೆ ಆತ್ಮಹತ್ಯೆ ಮಾದಿಕೊಳ್ಳಲು ಪ್ರಾರಂಭಿಸಿತು ? ಬಿಜೆಪಿ ಹೇಗೆ ಈ ಸ್ಥಿತಿಯನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿತು ಎಂಬುದನ್ನು ಮುಂದಿನ ಭಾಗದಲ್ಲಿ ಹೇಳುತ್ತೇನೆ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...