Thursday, January 5, 2023

ರಾಜಕಾರಣಿಗಳ ನಾಯಿ ಜಗಳ; ಕುಸಿದ ಬಿದ್ದ ಸಾರ್ವಜನಿಕ ಬದುಕಿನ ಸನ್ನಡತೆ..

 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಆ ಮಾತು. ಅದು ತೀವ್ರರೂಪದ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ. ರಾಜಕೀಯ ಟೀಕೆಗಳಿಗೆ ಬಹುತೇಕ ಪ್ರಾಣಿಗಳ ಬಳಕೆ ಯಾಗಿದೆ,, ನಾಯಿಯಿಂದ ಪ್ರಾರಂಭವಾಗಿ ಹಂದಿಯವರೆಗೆ ಇದು ಬಂದು ತಲುಪಿದೆ...

ಸಿದ್ದರಾಮಯ್ಯ ಹೇಳಿದ್ದು; ಮುಖ್ಯಮಂತ್ರಿಗಳು ಪ್ರಧಾನಿಯವರ ಮುಂದೆ ನಾಯಿ ಮರಿಯಂತೆ ಇರುತ್ತಾರೆ,, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ..

ಇದಕ್ಕೆ ಬಿಜೆಪಿಯ ಹಲವು ಸಚಿವರು ಮಾಜಿ ಸಚಿವರು ಇತರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮುಂದೆ ಹೇಗೆ ನಿಲ್ಲುತ್ತಿರಿ ? ರಾಹುಲ್ ಗಾಂಧಿ ನಿಮಗಿಂತ ಹಿರಿಯರಾ ? ಅವರ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ನಿಲ್ಲುತ್ತೀರಾ ? ಆ ಶಕ್ತಿ ನಿಮಗೆ ಇದೆಯಾ ? ಇದು ಬಿಜೆಪಿ ನಾಯಕರ ಪ್ರಶ್ನೆ,, ಈಶ್ವರಪ್ಪನಂತವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು.. ನಾವು ಅವರನ್ನೂ ಹಾಗೆ ಕರೆಯಬಹುದಿತ್ತು ಹಂದಿ ಎಂದೂ ಹೇಳಬಹುದಿತ್ತು ಎಂದಿದ್ದಾರೆ.. ಹಾಗೆ ತಮಗೆ ಸೌಜನ್ಯ, ಸ್ಥಾನ ಗೌರವ ಏನು ಎಂಬುದು ತಿಳಿದಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ, ಕಳೆದ ಎರಡೂ ದಿನಗಳಿಂದ ನಡೆಯುತ್ತಿರುವ ಈ ಫಿಶ್ ಮಾರ್ಕೆಟ್ ಜಗಳದ ನಂತರ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಹೇಳಿದ್ದು ಮುಖ್ಯಮಂತ್ರಿಗಳೂ ದೈರ್ಯ ಪ್ರದರ್ಶಿಸಬೇಕು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಪಡೆಯಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತು ಎಂಬ ಅರ್ಥದಲ್ಲಿ ಎಂದೂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಯ ಗುಣ ಧರ್ಮವನ್ನು ವಿವರಿಸಿದ್ದಾರೆ. ನಾಯಿ ನಿಷ್ಟೆಯ ಬಗ್ಗೆ ಮಾತನಾಡಿದ್ದಾರೆ. ತಾವು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಾಯಿ ಎಂದು ತಮ್ಮ ಬೆನ್ನನ್ನು ತಾವು ತಟ್ಟಿಕೊಂಡಿದ್ದಾರೆ

ಈ ಮಾತು ಮತ್ತು ಜಗಳ ಸಾರ್ವಜನಿಕ ಬದುಕು ಅವನತಿಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ,

ಸಿದ್ದರಾಮಯ್ಯ ಈ ಮಾತು ಆಡಿದ್ದು ಸರಿಯೆ ಎಂಬುದು ಮೊದಲ ಪ್ರಶ್ನೆ..ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮುಖ್ಯಮಂತ್ರಿಗಳು ತುಟಿ ಬಿಚ್ಚುತ್ತಿಲ್ಲ ಎಂದು ಅವರು ಹೇಳಬಹುದಾಗಿತ್ತು,. ಈ ಡಬಲ್ ಎಂಜಿನ್ ಸರ್ಕಾರದಲ್ಲಿ ದೆಹಲಿಯ ಎಂಜಿನ್ ಮುಂದೆ ರಾಜ್ಯದ ಎಂಜಿನ್ ನಿಷ್ಕಿಯವಾಗಿದೆ ಎಂದೂ ಟೀಕಿಸಬಹುದಾಗಿತ್ತು..ಆಗ ಅವರ ಮಾತು ಘನತೆಯನ್ನು ಉಳಿಸಿಕೊಳ್ಳುತ್ತಿತ್ತು. ಇದಕ್ಕೆ ಬದಲಾಗಿ ನಾಯಿ ಮರಿಯ ಬಗ್ಗೆ ಮಾತನಾಡಿದ ಅವರು ತಾವು ಗ್ರಾಮಾಂತರ ಪ್ರದೇಶದ ಭಾಷೆಯನ್ನು ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಸರಿಯಾದ ಸಮರ್ಥನೆ ಎಂದು ಹೇಳಲಾಗುವುದಿಲ್ಲ.

ಇನ್ನೂ ಬಿಜೆಪಿ ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸೋಣ.. ಮೊದಲನೇಯದಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯವರನ್ನು ನಾಯಿ ಮರಿ ಎಂದು ಕರೆದಿಲ್ಲ.. ನಾಯಿಮರಿಯಂತೆ ವರ್ತಿಸುತ್ತಿದ್ದೀರಿ ಎಂದಿದ್ದಾರೆ.. ನೀವು ನಾಯಿ ಮರಿ ಎನ್ನುವುದಕ್ಕೂ ನಾಯಿ ಮರಿಯಂತೆ ವರ್ತಿಸುತ್ತಿದ್ದೀರಿ ಎಂಬುದಕ್ಕೂ ವ್ಯತ್ಯಾಸವಿದೆ. ಹೀಗಿರುವಾಗ ಈ ಹೇಳಿಕೆ ಮುಖ್ಯಮಂತ್ರಿಗಳ ಸ್ಥಾನ ಗೌರವಕ್ಕೆ ಚ್ಯುತಿ ತಂದಿದೆ ಎಂಬ ಬಿಜೆಪಿ ಪ್ರತ್ಯಾರೋಪ ಬಾಲಿಶವಾದದ್ದು.. ಮುಖ್ಯಮಂತ್ರಿಗಳ ವರ್ತನೆಗೆ ಯಾವುದೋ ಪ್ರಾಣಿಗೆ ಹೋಲಿಸಿದರೆ ಅದು ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ಚ್ಯುತಿ ತಂದಂತೆ ಆಗುವುದಿಲ್ಲ..ಆದರೆ ಬೆಜೆಪಿಯ ಎಲ್ಲರೂ ಮುಖ್ಯಮಂತ್ರಿಗಳ ಸ್ಥಾನಗೌರವದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸ್ಥಾನ ಗೌರವದ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ತಮ್ಮನ್ನು ಟಗರು ಎಂದು ಕರೆಯುವುದು ಯಡಿಯೂರಪ್ಪ ಅವರನ್ನು ರಾಜಾ ಹುಲಿ ಎಂಬ ವಿಶೇಷಣದಿಂದ ಕರೆಯುವುದನ್ನು ನೆನಪಿಸಿದ್ದಾರೆ. ಇದೇನು ಅಸಂವಿಧಾನಿಕ ಶಬ್ದವೇ ಎಂದು ಕೇಳಿದ್ದಾರೆ. ಅದರಂತೆ ನಾಯಿ ಮರಿಯಂತೆ ಇರುತ್ತಾರೆ ಎಂದರೆ ಅದು ಅಸಂವಿಧಾನಿಕ ಶಬ್ದವಲ್ಲ ಎಂಬ ವಾದವನ್ನೂ ಸಿದ್ದರಾಮಯ್ಯ ಮಾಡಿದ್ದಾರೆ,

ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು, ಸಾಕಪ್ಪ ಎಂದು ಹೇಳುವಷ್ಟು ಪ್ರಚಾರ ದೊರಕಿದೆ, ಇನ್ನೂ ಕೆಲವು ದಿನ ಈ ಬಗ್ಗೆ ಚರ್ಚೆ ನಡೆಯಬಹುದು..

ಆದರೆ ಘಟನೆ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ, ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಚರ್ಚೆ ಮಾಡಬೇಕಾದ ಗಂಭೀರ ವಿಚಾರಗಳು ಕರೆಯಾಗುತ್ತಿವೆ. ಅದಕ್ಕೆ ಬದಲಾಗಿ ಜನರಿಗೆ ಮನರಂಜನೆ ನೀಡುವ ವಿಚಾರಗಳೇ ಮಹತ್ವ ಪಡೆಯುತ್ತಿವೆ.. ಹೇಳಬೇಕಾದ ವಿಚಾರಗಳನ್ನು ಲಘುವಾಗು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲಿ ರಾಜಕಾರಣಿಗಳು ನಿರತರಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕ ಬದುಕಿನಲ್ಲಿ ಚರ್ಚಿಸ ಬೇಕಾಗಿರುವ ಪ್ರಮುಖ ವಿಚಾರಗಳು ನೇಪಥ್ಯಕ್ಕೆ ಸರಿದು ಹೋಗುತ್ತಿವೆ..

ಅಧಿಕಾರರೂಡ ಬಿಜೆಪಿಗೆ ಇದರಿಂದ ಲಾಭವಾಗುತ್ತಿದೆ. ಬೆಲೆ ಏರಿಕೆ ನಿರುಧ್ಯೋಗ,,ಕೋಮುವಾದ ಮೊದಲಾದ ವಿಚಾರಗಳು ಚರ್ಚೆಗೆ ಬರದೇ, ಲಘು ಚರ್ಚೆಗಳು ಎಲ್ಲವನ್ನು ಕೊಚ್ಚಿಕೊಂಡು ಹೋಗಿ ಬಿಡುತ್ತಿದೆ..ಜನ ಯಾರು ನಾಯಿ, ಯಾರು ಹುಲಿ,, ಯಾರು ಹಂದಿ ಎನ್ನುವ ಬಗ್ಗೆ ಚರ್ಚಿಸುತ್ತ, ಕೆಲವೊಮ್ಮೆ ಎಂಜಾಯ್ ಮಾಡುತ್ತ ತಮ್ಮ ಸಮಸ್ಯೆಗಳನ್ನು ಮರೆತು ಬಿಡುತ್ತಾರೆ. ತಮಗೆ ಮನೆಯಿಲ್ಲ, ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ, ಬೆಲೆ ಏರಿಕೆಯಿಂದ ಬದುಕುವುದು ದುಸ್ತರವಾಗಿ ಎಂಬುದು ಅವರಿಗೆ ನೆನಪಾಗುವುದಿಲ್ಲ.. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಜನರಿಗೆ ಬೋಧನೆ ಮಾಡಿದ ವಿಚಾರಗಳ ಪ್ರಭಾವಕ್ಕೆ ಸಾಮಾನ್ಯ ಜನ ಒಳಗಾಗುತ್ತಾರೆ.. ನೀವು ರಸ್ತೆ ಚಿರಂಡಿಯಂತ ಸಣ್ಣ ಸಣ್ಣ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲು ಲವ್ ಜಿಹಾದ್ ಬಗ್ಗೆ ವಿಚಾರ ಮಾಡಿ ಇದನ್ನು ತಡೆಯುವುದು ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾತ್ರ ಸಾಧ್ಯ ಎಂಬ ಕಟೀಲ್ ಹೇಳಿಕೆ ಸಾಮಾನ್ಯರಿಗೆ ಆಕರ್ಶಿಕವಾಗಿ ಕಾಣುತ್ತದೆ. ಲವ್ ಜಿಹಾದ್ ಎಂಬ ಭ್ರಮೆ ಅವರನ್ನು ಆವರಿಸಿಕೊಂಡ ತಮ್ಮ ಬದುಕಿನ ನೈಜ ಸಮಸ್ಯೆಗಳನ್ನು ಅವರು ಮರೆತುಬಿಡುತ್ತಾರೆ,

ಬಿಜೆಪಿಗೆ ಬೇಕಾದ್ದು ಇದೇ.. ಇದೇ ಅವರ ತಂತ್ರ..ಅವರು ಹೆಣೆದ ಈ ಬಲೆಗೆ ಕಾಂಗ್ರೆಸ್ ಸಿಕ್ಕಿಕೊಳ್ಳುತ್ತದೆ.

ಈಗ ಬಿಜೆಪಿ ಧರ್ಮದ ಆಧಾರದ ಈ ಖೆಡ್ಡಾವನ್ನು ತೋಡಿಯಾಗಿದೆ. ಈ ಖೆಡ್ಡಾಕ್ಕೆ ಕಾಂಗ್ರೆಸ್ ನಾಯಕರನ್ನು ಕೆಡವಲು ಕಾಯುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ತಾವಾಗಿಯೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ,

Monday, December 26, 2022

ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗ ಜೋಷಿಯ ಬಗ್ಗೆ ಎನೆಂದುಕೊಳ್ಳುತ್ತಿದ್ದರು ?

 

ಮುಂಬರುವ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ. ಇದು ವಿವಾದಕ್ಕೆ ಕಾರಣವಾಗಿದೆ.. ಈ ವಿವಾದಕ್ಕೆ ಕಾರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಮಹೇಶ್ ಜೋಷಿ.. ಇವರು ತಮ್ಮನ್ನು ಶಿಶುನಾಳ್ ಶರೀಷ್ ಅವರ ಗುರು ಗೋಂವಿದ ಭಟ್ ಅವರ ವಂಶಜರು ಎಂದು ಹೇಳಿಕೊಳ್ಳುತ್ತಾರೆ.. ಅವರು ಗುರು ಗೋಂವಿದ ಭಟ್ಟರ ವಂಶಜರಾಗಿದ್ದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಕಾಗಿಲ್ಲ..ಅವರು ತಮ್ಮನ್ನು ಗುರು ಗೋಂವಿದ ಭಟ್ಟರ ವಂಶಜ ಎಂದೂ ಸಂತೋಷಪಡಬಹುದು.. ಆದರೆ ಇವರು ಯಾವ ದೃಷ್ಟಿಯಿಂದ ಗುರು ಗೋವಿಂದ ಭಟ್ಟರ ವಂಶಜ ಎಂದು ಪ್ರಶ್ನೆ ಮಾಡಲೇಬೇಕಾಗುತ್ತದೆ.

ಗುರು ಗೋವಿಂದ ಭಟ್ಟ  ರು ಮುಸ್ಲೀಮ್ ಹುಡುಗ ಶರೀಫರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.. ಆತನನ್ನು ಆಧ್ಯಾತ್ಮದ ದಾರಿಯಲ್ಲಿ ಕರೆದೊಯ್ಯದರು. ಎಲ್ಲ ಧರ್ಮಗಳೂ ಒಂದೇ. ಧರ್ಮಗಳ ನಡುವೆ ವ್ಯತ್ಯಾಸ ಇಲ್ಲ ಎಂದು ಕಲಿಸಿದರು. ಅಲ್ಲಾ ಈಶ್ವರ್ ತೇರೆ ನಾಮ ಎಂಬ ಸತ್ಯವನ್ನು ಅರುಹಿದರು. ಒಬ್ಬ ಮುಸ್ಲೀಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ ಗೋವಿಂದ ಭಟ್ಟರ ವಿರುದ್ಧ ಬ್ರಾಹ್ಮಣ ಸಮಾಜ್ ತಿರುಗಿ ಬಿತ್ತು. ಶರೀಫರನ್ನು ಬಿಟ್ಟು ಬಿಡುವಂತೆ ಒತ್ತಡ ಹೇರಿತು. ಗೋವಿಂದ ಭಟ್ಟರು ಈ ಬ್ರಾಹ್ಮಣ ಸಮಾಜವನ್ನೇ ತಿರಸ್ಕರಿಸಿ ತಮ್ಮ ಶಿಷ್ಯ ಷರೀಫನನ್ನು ಕರೆದುಕೊಂಡು ಆಧ್ಯಾತ್ಮವನ್ನು ಅರೆಸುತ್ತ ಹೊರಟು ಬಿಟ್ಟರು.

ಶಿಶುನಾಳ ಶರೀಫರು ಗುರುವನ್ನು ಒಪ್ಪಿಕೊಂಡರು. ಅಲ್ಲಾ ಮತ್ತು ಈಶ್ವರನ ನಡುವೆ ವ್ಯತ್ಯಾಸವಿಲ್ಲ ಎಂದು ಕಂಡುಕೊಂಡರು.. ಅವರು ಕೇವಲ ಆದ್ಯಾತ್ಮವಾದಿಯಾಗಿ ಉಳಿಯಲಿಲ್ಲ. ಅವರ ತತ್ವ ಪದಗಳು ಕನ್ನಡ ಸಾಹಿತ್ಯದಲ್ಲೇ ಅನನ್ಯವಾದವು.. ಸೋರುತಿಹುದು ಮನೆಯ ಮಾಳಿಗಿ ಎನ್ನುವ ತತ್ವ ಪದ ನನ್ನಗೆ ಈಗ ನೆನಪಾಗುತ್ತಿದೆ.

ಗುರು ಗೋವಿಂದ ಭಟ್ಟರನ್ನು ಸದಾ ನೆನಪು ಮಾಡಿಕೊಳ್ಳುವ ಮಹೇಶ್ ಜೋಷಿ ಸರ್ಕಾರಿ ನೌಕರರೆ ? ಪತ್ರಕರ್ತರೇ ಅಥವಾ ರಾಜಕಾರಣಿಯೆ ಅಥವಾ ಅವರೊಬ್ಬ ಸಾಹಿತಿಯೆ ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.. ಅವರು ರಾಜಕಾರಣಿಗಳ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ..  ದೂರದರ್ಶನ ಎಂಬ ಸರ್ಕಾರಿ ಮಾಧ್ಯಮದಲ್ಲಿ ಕೆಲಸ ಮಾಡುವ ಮೂಲಕ ಪತ್ರಕರ್ತರು ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.. ಅವರು ದೆಹಲಿ ದೂರದರ್ಶನದಲ್ಲಿ ಕೆಲಸ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸಂತೋಷ ಪಟ್ಟಿದ್ದಾರೆ..ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಎಲ್ಲರಿಗೂ ತೋರಿಸಿ ಸಂತೋಷಪಟ್ಟಿದ್ದಾರೆ.

ವಿಧಾನ ಪರಿಷತ್ ಸಭಾಪತಿಗಳಾಗಿದ್ದ ಡಿ. ಬಿ. ಕಲ್ಮಣಕರ್ ಅವರ ಆಪ್ತ ಕಾರ್ಯದರ್ಶಿಯಾಗಿ ವಿಧಾನ ಸೌಧದ ಮೊಗಸಾಲೆಯಲ್ಲಿ ಒಡಾಡಿಕೊಂಡಿದ್ದ ಅವರು ರಾಜಕಾರಣಿಗಳ ಆಪ್ತೀಷ್ಟರಾಗಿ ಹೇಗೆ ಇರಬೇಕು ಎಂಬುದನ್ನು ಅರಿತವರು..

ಜೋಶಿ ಕುಮಾರಸ್ವಾಮಿ ಅವರಂತೆ ಎಲ್ಲರನ್ನೂ ಬ್ರದರ್ ಎಂದು ಪ್ರೀತಿಯಿಂದ ಮಾತನಾಡುತ್ತ ಹೆಗಲ ಮೇಲೆ ಕೈ ಹಾಕುತ್ತಾರೆ.. ಅವರ ಸಾಧನೆಗಳ ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯುವುದಿಲ್ಲ..ಬೆಂಗಳೂರು ದೂರದರ್ಶನ ಕೇಂದ್ರದ ಮಂಜುಳ ಗಾನ ಕಾರ್ಯಕ್ರಮದಲ್ಲಿ ಮಂಜುಳವಾಗಿ ಹಾಡಿ ಎಲ್ಲರನ್ನೂ ಮುದಗೊಳಿಸಿದವರು. ಸದಾ ಒಂದು ಕ್ಯಾಮರಾ ತಮ್ಮ ಮೇಲೆ ಇರುವಂತೆ ನೋಡಿಕೊಂಡು ತಮ್ಮ ಭಾವ ಭಂಗಿಯನ್ನು ಜನರಿಗೆ ತಲುಪಿಸುತ್ತಾ ಬಂದವರು.. ಆಹ್ವಾನಿತ ಗಣ್ಯರ ಜೊತೆ ಎಂತಹ ಅತ್ಯುತ್ತಮ ಸಂಬಂಧವನ್ನು ಅವರು ಇಟ್ಟುಕೊಂಡು ಬಂದವರೆಂದರೆ ಅವರು ಹೇಗೆ ಹಾಡಲಿ, ಶ್ರುತಿ ಇರಲಿ ಶ್ರುತಿ ತಪ್ಪಿಲಿ ಈ ಗಣ್ಯರು ಚಪ್ಪಾಳೆ ಹೊಡೆದು ಹುರಿದುಂಬಿಸುವುದು ಎಲ್ಲರೂ ನೋಡಿರುವ ದೃಶ್ಯಗಳು. ಯಾರೇ ಹಾರಾಡಲಿ ಯಾರೇ ಕೂಗಾಡಲಿ ನಿನ್ ನೆಮ್ಮದಿಗೆ ಬಂಗವಿಲ್ಲ ಎಂಬ ಮನಸ್ಥಿತಿಯವರು ಜೋಷಿ.

ಜೋಷಿ ತಮ್ಮ ನಿವೃತ್ತಿಯ ನಂತರ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರು. ಅದಕ್ಕಾಗಿ ತಯಾರಿ ನಡೆಸಿದರು..ಸಾಹಿತ್ಯ ಪರಿಷತ್ತಿನ ಮೇಲೆ ಅಪ್ರತ್ಯಕ್ಷವಾಗಿ ನಿಯಂತ್ರಣ ಹೊಂದಿದ್ದ ರಾಜಕಾರಣಿಗಳಿಗೆ ಕೆಂಪು ಹಾಸು ಹಾಕಿ ಕರೆದುಕೊಂಡು ಬಂದರು.. ಬಿಜೆಪಿ ಪಕ್ಷ ಜೋಷಿ ಅವರನ್ನು ಬೆಂಬಲಿಸಿತು.. ತಮ್ಮ ಕಾಲಾಳುಗಳಿಗೆ ಪತ್ರ ಬರೆದು ಅಧ್ಯಕ್ಷ ಚುನಾವಣೆಯಲ್ಲಿ ಜೋಷಿ ಅವರಿಗೆ ಬೆಂಬಲ ನೀಡುವಂತೆಯೂ ಕೆಲವು ಬಿಜೆಪಿ ನಾಯಕರ ಕರ ಪತ್ರ ಹೊರಡಿಸಿದರು..ಪ್ರಾಯಶಃ ರಾಜಕೀಯ ಪಕ್ಷವೊಂದು ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ನೇರೆವಾಗಿ ಪ್ರವೇಶಿಸಿದ ಮೊದಲ ಚುನಾವಣೆ ಇದು. ಹೀಗೆ ಸಾಹಿತ್ಯ ಪರಿಷತ್ತನ್ನು ರಾಜಕಾರಣದ ಅಂಗಳವನ್ನಾಗಿ ಮಾಡಿದ ಕೀರ್ತಿ ಮಹೇಶ್ ಜೋಷಿ ಅವರಿಗೆ ಸಲ್ಲಬೇಕು.

ಜೋಶಿಯವರಿಗೆ ಹೆಸರನ್ನು ಬದಲಿಸುವ ಬಿಜೆಪಿ ಗುಣ ಅಂತರ್ಗತವಾಗಿದೆ. ಚಾಮರಾಜಪೇಟೆಯಲ್ಲಿ ಸಾಹಿತ್ಯ ಪರಿಷತ್ ಎದುರಿನ ರಸ್ತೆಯ ಹೆಸರನ್ನೂ ಬದಲಿಸಲು ಹೊರಟಿದ್ದರು.. ಪಂಪನ ಹೆಸರನ್ನು ಬದಲಿಸಲು ಅವರು ಮುಂದಾಗಿದ್ದರು.. ಮನುಷ್ಯ ಕುಲ ತಾನೊಂದೇ ವಲಂ ಎಂದ ಪಂಪನನ್ನು ಒಪ್ಪಿಕೊಳ್ಳುವುದು ಇವರಿಗೆ ಹೇಗೆ ತಾನೇ ಸಾಧ್ಯವಾದೀತು ?

ಈಗ ಹಾವೇರಿ ಸಾಹಿತ್ಯ ಸಮ್ಮೇಳನವನ್ನೂ ವಿವಾದದ ಅಂಗಳವನ್ನಾಗಿ ಅವರು ಮಾಡಿದ್ದಾರೆ. ಮುಸ್ಲೀಂ ಬರಹಗಾರರನ್ನು ಕವಿಗಳನ್ನು ಸಾಹಿತಿಗಳನ್ನು ಅವರು ದೂರವಿಟ್ಟಿದ್ದಾರೆ. ತಮ್ಮ ರಾಜಕೀಯ ಸಂಪರ್ಕದಿಂದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನಕ್ಕೆ ಸಚಿವರ ಸ್ಥಾನವನ್ನು ಪಡೆದಿಕೊಂಡು ಬಿಜೆಪಿ ಎಜೆಂಡಾವನ್ನು ಅನುಷ್ಠಾನಗೊಳಿಸುವಲ್ಲಿ ನಿರತರಾಗಿದ್ದಾರೆ.

ಹಾವೇರಿ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಪಟ್ಟಿಯನ್ನು ನೋಡಿದಾಗ ಆಘಾತವಾಗುತ್ತದೆ. ಆದರೆ ಆಶ್ಚರ್ಯವಾಗುವುದಿಲ್ಲ. ಈ ವ್ಯಕ್ತಿಯಿಂದ ಇನ್ನೇನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ.. 

ಈ ಸಾಹಿತ್ಯ ಸಮ್ಮೇಳನ ರಾಜಕೀಯ ಸಮಾವೇಶದಂತೆ ಕಾಣುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಮೇಲೆ ಇರುವ ಬಹುತೇಕ ಜನರು ರಾಜಕಾರಣಿಗಳು ಮತ್ತು ಅಧಿಕಾರ ವರ್ಗ..ಹಾಗೆ ಸ್ವಾಗತ ಸಮೀತಿ ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಕಾರಿಗಳಿಂದ ತುಂಬಿ ಹೋಗಿದೆ. ಈ ಬಗ್ಗೆ ಪ್ರತಿಭಟನೆಯ ಕೂಗು ಕೇಳಿ ಬರುತ್ತಿದೆ. ಪರ್ಯಾಯ ಸಾಹಿತ್ಯ ಸಮ್ಮೇಳದ ಮಾತೂ ಕೇಳಿ ಬರುತ್ತಿದೆ..ಆದರೆ ಪ್ರತಿಭಟನೆಗೆ ಸೊಪ್ಪು ಹಾಕದೇ ತಮ್ಮ ಎಜೆಂಡಾವನ್ನು ಜೋಷಿ ಅನುಷ್ಟಾನಗೊಳಿಸಲಿದ್ದಾರೆ. ಸಾಹಿತ್ಯ ಸಮ್ಮೇಳನ ಬಿಜೆಪಿ ಪಕ್ಷದ ಸಾಹಿತ್ಯಿಕ  ಸಮ್ಮೇಳನವಾಗಿ ಸಂಪನ್ನಗೊಳ್ಳಲಿದೆ. ಈ ಬಗ್ಗೆ ಯಾವ ಅನುಮಾನವೂ ಬೇಡ,

ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗನ ಬಗ್ಗೆ ಎನೆಂದುಕೊಳ್ಳುತ್ತಿದ್ದರು ? ತಮ್ಮ ಸಂತಾನ ಈ ಹಂತಕ್ಕೆ ಬಂತಲ್ಲ ಎಂದು ಕೊರಗುತ್ತಿದ್ದರೆ ? ಬ್ರಾಹ್ಮಣ ಸಮುದಾಯವನ್ನೇ ಬಹಿಶ್ಕರಿಸಿದ್ದ ಅವರು ತಮ್ಮ ಈ ಮರಿ ಮರಿ ಮರಿ ಮೊಮ್ಮಗನನ್ನೇ ಒದ್ದು ಹೊರಹಾಕುತ್ತಿದ್ದರೆ ? ಗೊತ್ತಿಲ್ಲ.

ಅವರ ಆತ್ಮ ಎನ್ನುವುದಿದ್ದರೆ ಅದು ಈಗ ಪರಿತಪಿಸುತ್ತಾ ಇರುಬಹುದಲ್ಲವೆ ?


Sunday, December 25, 2022

ಪ್ರೀತಿಯ ಅಂಗಡಿ ತೆರೆಯುವ ಮಾತನಾಡುವಾಗಲೇ ಇಲ್ಲಿ ಈ ಘಟನೆ ನಡೆದೇ ಹೋಯಿತಲ್ಲ !

 


ಈ ಕೊಲೆ ಮತ್ತು ರಕ್ತ ಪಾತ ನಿಲ್ಲುವುದೇ ಇಲ್ಲವೆ ?


ನಿನ್ನೆ ಈ ಘಟನೆ ನಡೆದುಹೋಯಿತು. ತನ್ನ ಅಂಗಡಿಯಲ್ಲಿದ್ದ ಮಧ್ಯ ವಯಸ್ಸಿನ ವ್ಯಕ್ತಿ ತಾನು ಈ ರೀತಿ ದಾಳಿಗೆ ಒಳಗಾಗಬಹುದು ಎಂದು ಅಂದುಕೊಂಡಿರಲಿಕ್ಕಿಲ್ಲ.   ತನ್ನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಅವನ ಮೇಲೆ ಮೂವರು ಮುಸುಕುದಾರಿಗಳು ದಾಳಿ ಮಾಡಿದರು. ಚಾಕುವಿನಿಂದ ಇರಿದರು. ಗಾಯಗೊಂಡ ಈ ಮಧ್ಯ ವಯಸ್ಸಿನ ವ್ಯಕ್ತಿಯನ್ನು ಅಕ್ಕಪಕ್ಕದ ಜನ ಆಸ್ಪತ್ರೆಗೆ ಸೇರಿಸಿದರು... ಆಗ ಅವನ ಸ್ಥಿತಿ ಗಂಭೀರವಾಗಿತ್ತು.. ಜೀವ ಮರಣದ ನಡುವಿನ ಹೋರಾಟ..

ಇದು ವೈಯಕ್ತಿಕ ಧ್ವೇಷದಿಂದ ನಡೆದ ಘಟನೆಯೇ ಅಥವಾ ಇದರ ಹಿಂದೆ ಕೋಮು ದ್ವೇಷದ ನೆರಳು ಇದೆಯೇ ?

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ..

ಆದರೆ ಸರತ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ..ಪೊಲೀಸರು ಈ ಪ್ರದೇಶಗಳಲ್ಲಿ ನಿಶೇಧಾಜ್ನೆಯನ್ನು ವಿಧಿಸಿದ್ದಾರೆ..

ಈ ಹತ್ಯೆ ಪ್ರಕರಣದ ಬಗ್ಗೆ ಯಾವ ಮಾಧ್ಯಮದಲ್ಲೂ ಗಂಭೀರ ಚರ್ಚೆ ನಡೆಯುತ್ತಿಲ್ಲ.. ರಾಜ್ಯದ ಜನ ಇಂತಹ ಘಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನೊಂದು ಕೊಲೆಯಾಯಿತಂತೆ ಎಂದು ಜನ ಸುಮ್ಮನಾಗುವ ಸ್ಥಿತಿ. ಯಾಕೆಂದರೆ ಹತ್ಯೆ ಎನ್ನುವುದು ಯಾರನ್ನೂ ತಲ್ಲಣಗೊಳಿಸುತ್ತಿಲ್ಲ.. ಈತ ಅಮಾಯಕನೋ ಅಲ್ಲವೂ ಎಂಬುದು ಕೂಡ ಮುಖ್ಯವಾಗುತ್ತಿಲ್ಲ.

ಸತ್ತವರು ಯಾವ ಕೋಮಿನವರು ಎಂಬುದನ್ನು ನೋಡಿಕೊಂಡು ಜನ ಮತ್ತು ರಾಜಕಾರಣಿಗಳು ಪ್ರತಿಕ್ರಿಯೆ ನೀಡಬೇಕೋ ಬೇಡವೋ ಎಂದು ತೀರ್ಮಾನಿಸುತ್ತಾರೆ.. ಇಂತಹ ಹತ್ಯೆ ಮತ್ತು ಕೊಲೆ ಯತ್ನದ ನಂತರ ರಾಜಕಾರಣ ಪ್ರಾರಂಭವಾಗುತ್ತದೆ.. ಸತ್ತವನು ಬಹುಸಂಖ್ಯಾತನಾಗಿದ್ದರೆ ಮಂತ್ರಿಗಳು ಮತ್ತು ಶಾಸಕರು ಅವನ ಮನೆಗೆ ಭೇಟಿ ನೀಡುತ್ತಾರೆ. ಸರ್ಕಾರ ಸಹಾಯ ನೀಡಲು ಮುಂದಾಗುತ್ತದೆ. ಸಾರ್ವಜನಿಕರು ಅವರ ಮನೆಗೆ ಹೋಗಿ ಸಂತಾಪ ಹೇಳಿ ವಾಪಸ್ ಬರುತ್ತಾರೆ. ನಂತರ ಸಾರ್ವಜನಿಕ ಭಾಷಣಗಳಿಗೆ ಹೊಸ ಸರಕು ದೊರಕುತ್ತದೆ.. ಬಹುಸಂಖ್ಯಾತನ ಹತ್ಯೆ ಮಾಡಿದವನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ತನಿಖೆ ನಡೆಸಿ ಅರೋಪಿತನ ಬಾಯಿ ಬಿಡೀಸುವ ಮೊದಲು ಮಾಧ್ಯಮಗಳು ಈ ಆರೋಪಿತನಿಗೆ ಉಗ್ರಗಾಮಿ ಸಂಘಟನೆಗಳ ಸಂಪರ್ಕ ಇದೆ ಎಂದು ವಿವರಗಳನ್ನು ನೀಡಲು ಪ್ರಾರಂಬಿಸುತ್ತಾರೆ. ಆತನಿಗೆ ವಿದೇಶಗಳಿಂದ ಹಣ ಬಂದಿತ್ತು ಎಂದೂ ಮಾಧ್ಯಮಗಳೇ ಪ್ರಕರಣದ ತೀರ್ಪು ನೀಡಿಬಿಡುತ್ತಾರೆ,

ದಕ್ಷಿಣ ಕನ್ನಡ ಜಿಲ್ಲೆ ಈಗ ಕೋಮು ರಾಜಕಾರಣದ ಕುಲುಮೆಯಾಗಿದೆ.. ಇಂತಹ ಹತ್ಯೆ ನಡೆಯುವುದು ಸಾಮಾನ್ಯವಾಗಿದೆ.. ಹಾಗೆ ರಾಜಕಾರಣಿಗಳು ಮತ್ತು ಜನ ನೀಡುವ ಪ್ರತಿಕ್ರಿಯೆಗಳೂ ಏಕರೂಪವಾಗಿರುತ್ತದೆ.

ಒಬ್ಬ ಹಿಂದೂ ಹತ್ಯೆಯಾದರೆ ಆತ ಹಿಂದೂ ಧರ್ಮಕ್ಕಾಗಿ ಪ್ರಾಣ ನೀಡಿದ ಹುತಾತ್ಮನಾಗುತ್ತಾನೆ.. ಒಬ್ಬ ಮುಸ್ಲೀಂ ಹತ್ಯೆಯಾದರೆ ಆತ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿರುವ ದೇಶದ್ರೋಹಿಯಾಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪೋಲಿಸರು ಆಳುವ ಸರ್ಕಾರ ಅನುಕೂಲವಾಗುವ ರೀತಿಯಲ್ಲಿ ಮಾಧ್ಯಮಗಳಿಗೆ ಸುದ್ದಿಯನ್ನು ಪ್ಲಾಂಟ್ ಮಾಡುತ್ತಾರೆ.. ನಮ್ಮ ಮಾಧ್ಯಮ ದೇಶಭಕ್ತರ ಪಡೆಯ ಭಾಗವಾಗಿ ಈ ಸುದ್ದಿಯನ್ನು ಮಾರಾಟ ಮಾಡಲು ಪ್ರಾರಂಭಿಸುತ್ತವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಹತ್ಯೆ ಪ್ರಕರಣಗಳು ಇದೇ ಮಾದರಿಯಲ್ಲಿ ನಡೆಯುತ್ತವೆ.. ಹಾಗೆ ಪೋಲಿಸರು ಮತ್ತು ರಾಜಕಾರಣಿಗಳು ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ..

ಪ್ರವೀಣ್ ನಿಟ್ಟಾರು ಆಗಲೀ ಶಿವಮೊಗ್ಗದ ಆ ಯುವಕನಾಗಲಿ ಹತ್ಯೆಯಾಗಬಾರದಿತ್ತು.. ಆದರೆ ಈ ಹತ್ಯೆ ಪ್ರಕರಣ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಜಕೀಯ ಲಾಭವನ್ನು ತಂದುಕೊಟ್ಟಿತು.. ದೇಶಭಕ್ತಿ ಮತ್ತು ದೇಶದ್ರೋಹದ ಭ್ರಮಾತ್ಮಕ ಬಂದೀಖಾನೆಯಿಂದ ಹೊರ ಬರುತ್ತಿದ್ದ ಸಂದರ್ಭದಲ್ಲೇ ಈ ಹತ್ಯೆ ಪ್ರಕರಣಗಳು ನಡೆದವು.. ಹೀಗಾಗಿ ಜನ ಮತ್ತೆ ಈ ಭ್ರಮಾತ್ಮಕ ಜಗತ್ತಿನಲ್ಲಿ ಬಂದಿಯಾದರು.. ಸರ್ಕಾರದ ವೈಫಲ್ಯವನ್ನು, ಸರ್ಕಾರದ ಮೇಲಿನ ಆರೋಪಗಳನ್ನು ಜನ ಮರೆತು ಧರ್ಮ ರಾಜಕಾರಣಕ್ಕೆ ಬಲಿಯಾದರು.. ಇದು ಸಾಮಾನ್ಯ ಜನರಿಗೆ ಅರ್ಥವಾಗಲೇ ಇಲ್ಲ. ಅರ್ಥವಾಗುವುದೂ ಇಲ್ಲ..

ಈ ಹಿಂದೂ ರಕ್ಷಣೆಯ ಹೊಸ್ ನೆರೆಟೀವ್ ಹೇಗಿದೆ ಎಂದರೆ ಸರ್ಕಾರ ಕೂಡ ಹತ್ಯಾ ಪ್ರಕರಣಗಳಲ್ಲಿ ವಿಭಿನ್ನ ಮಾನದಂಡಗಳನ್ನು ಬಳಸುತ್ತದೆ.. ಹಿಂದೂ ಹತ್ಯೆ ಪ್ರಕರಣಗಳನ್ನು ನೋಡುವ ರೀತಿ ಒಂದು ರೀತಿ ಇದ್ದರೆ ಮುಸ್ಲೀಂ ಹತ್ಯೆ ಪ್ರಕರಣಗಳ ಮಾನದಂಡ ಬೇರೆಯಾಗಿರುತ್ತದೆ.. ಹತ್ಯೆಯಾದ ಹಿಂದೂ ಮನೆಗೆ ದೌಡಾಯಿಸುವ ಸರ್ಕಾರ ಮತ್ತು ಬಿಜೆಪಿ ಸಚಿವ ಶಾಸಕರು ಮುಸ್ಲೀಂ ಹತ್ಯೆಯಾದರೆ ಅವನ ಮನೆಯ ಕಡೆ ಮೂಸಿ ಕೂಡ ನೋಡುವುದಿಲ್ಲ್ಲ.. ಆತ ಕೇವಲ ಅನಾಥ ಹೆಣದಂತಾಗಿಬಿಡುತ್ತಾನೆ.. ಈ ರೀತಿ ತಾರ ತಮ್ಯ ನೀತಿಯನ್ನು ಅನುಸರಿಸುವ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ಮಾತ್ರವಲ್ಲ ತನ್ನ ಆತ್ಮವನ್ನೇ ಮಾರಿಕೊಂಡಂತೆ ಕಾಣುತ್ತದೆ..

ಕಳೆದ ಎರಡು ದಶಕಗಳ ಈಚೇಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಗಳ ಅಂಕಿಅಂಶಗಳನ್ನು ಗಮನಿಸಿದರೆ ಬಹುಸಂಖ್ಯಾಕ ರಾಜಕಾರಣ ಹೇಗೆ ಸಮಾನತೆ ಮತ್ತು ಸಮಾನ ಹಕ್ಕುಗಳ ತತ್ವಕ್ಕೆ ವಿರೋಧವಾಗಿದೆ ಎಂಬುದನ್ನು ಗಮನಿಸಬಹುದು.. ಹಿಂದೂ ಹತ್ಯಾ ಪ್ರಕರಣಗಳು ಕೇವಲ ರಾಜಕೀಯ ಅಸ್ತ್ರವಾಗಿ ಮಾತ್ರ ಬಳಕೆಯಾಗಿವೆ.. ಬಹುಸಂಖ್ಯಾಕ ಹಿಂದೂಗಳ ಮನಸ್ಸಿನಲ್ಲಿ ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯಲ್ಲಿ ಗಟ್ಟಿಗೊಳಿಸುವಲ್ಲಿ ಸಫಲವಾಗಿವೆ. ಹಾಗೂ ಹಿಂದೂ ಮತ್ತು ಮುಸ್ಲೀಮ್ ಪ್ರತ್ಯೇಕವಾದವನ್ನು ಬಲಪಡಿಸಿವೆ.. ಜೊತೆಗೆ ಹಲವು ಪ್ರಕರಣಗಳಲ್ಲಿ ರಆಜಕೀಯ  ಲಾಭ ಪಡೆದುಕೊಂಡ ಮೇಲೆ ಪ್ರಕರಣದ ಹಿಂದಿನ ನಿಗೂಢ ಸತ್ಯ ಬಯಲಾಗಿದೆ. ಇದಕ್ಕೆ ಉದಾಹರಣೆಯಾಗಿ ಪರೇರಾಜಕೀಯ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೇ ನೋಡಬಹುದು.. ಮುಸ್ಲೀಂ ಅಲ್ಪಸಂಖ್ಯಾತರು ಮೇಸ್ತಾನನ್ನು ಕೊಲೆ ಮಾಡಿದ್ದಾರೆ ಎಂಬಾ ಆರೋಪ ಸುಳ್ಳಾಯಿತು.. ಆದರೆ ಈ ಸತ್ಯ ಹೊರಬರುವುದಕ್ಕೆ ಮೊದಲೇ ಬಿಜೆಪಿಗೆ ಬಯಸಿದ್ದ ಲಾಭ ದೊರಕಿಯಾಗಿತ್ತು..

ನಿನ್ನೆ ಮುಸ್ಲೀಮ್ ಒಬ್ಬನ ಹತ್ಯ ಪ್ರಕರಣ ನಡೆಯಿತು.. ಇದರ ರಾಜಕೀಯ ಲಾಭ ಯಾರಿಗೆ ದೊರಕುತ್ತದೆ ? ಸತ್ಯ ವ್ಯಕ್ತಿ ಬಡಪಾಯಿ ಆಗಿರಬಹುದು ಅಥವಾ ವೈಯಕ್ತಿಕ ಕಾರಣದಿಂದಲೂ ಈ ಪ್ರಕರಣ ನಡೆದಿರಬಹುದು.. ಆದರೆ ಇದು ಬಹುಸಂಖ್ಯಾಕರನ್ನು ಒಗ್ಗೂಡೀಸಲು ಬಿಜೆಪಿ ಸಹಾಯ ಮಾಡುವುದು ಸತ್ಯ..

ಚುನಾವಣೆ ಬರುವ ಹೊತ್ತಿಗೆ ಇನ್ನಷ್ಟು ಹತ್ಯೆಗಳು ನಡೆಯದಿರಲಿ ಎಂದು ಮಾತ್ರ ನಾವು ಆಶಿಸಬಹುದು.. ಆದರೆ ಇಂದಿನ ಕೋಮುವಾದಿ ರಾಜಕಾರಣದಲ್ಲಿ ಹೀಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ..

ಕೊನೆಯದಾಗಿ ರಾಹುಲ್ ಗಾಂಧಿ ಹೇಳಿದ ಮಾತು ಮತ್ತೆ ಮತ್ತೇ ನೆನಪಾಗುತ್ತದೆ.

ಇದು ದ್ವೇಷದ ಮಾರುಕಟ್ಟೆ. ಇಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಾಗಿದೆ.




Saturday, December 24, 2022

ದ್ವೇಷದ ಮಾರುಕಟ್ಟೆಯಲ್ಲಿ ನಾವೆಲ್ಲ ಪ್ರೀತಿಯ ಅಂಗಡಿ ತೆರೆಯೋಣ

 




ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ.. ಈಗಾಗಲೇ ನೂರು ದಿನ ಪೂರೈಸಿದೆ..ಈ ನೂರು ದಿನಗಳಲ್ಲಿ ಈ ಯಾತ್ರೆಯ ಫಲಶ್ರುತಿ ಏನು ಎಂಬುದನ್ನು ಚರ್ಚಿಸಬೇಕಾದ ಸಮಯ,, ಇವತ್ತು ಯಾತ್ರೆ ರಾಷ್ಟ್ರದ ರಾಜಧಾನಿ ದೇಹಲಿಯನ್ನು ಪ್ರವೇಶಿಸಿತು.. ದೆಹಲಿಯ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು,,

ಈ ತಿಂಗಳ ೧೬ ರಂದು ೧೦೦ ದಿನ ಪೂರೈಸಿದ ಈ ಯಾತ್ರೆಗೆ ಒಂದು ವಾರದ ಬಿಡುವು.. ದೆಹಲಿಯಿಂದ ಜನವರಿ ಮೂರರಿಂದ ಹೊರಡುವ ಯಾತ್ರೆಯ ಲಕ್ಷ್ಯ ಜಮ್ಮು ಮತ್ತು ಕಾಶ್ಮೀರದ ಕಡೆಗೆ...

ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಹೊರಟ ಯಾತ್ರೆ..ಆಗ ಪ್ರಾಯಶಃ ಇದು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತದೆ ಎಂದು ಬಹಳಷ್ಟು ಜನ ಅಂದುಕೊಂಡಿರಲಿಲ್ಲ... ಕೆಲವು ದಿನ ಯಾತ್ರೆ ಮಾಡಿ ಕೈಬಿಡಬಹುದು ಎಂದು ಬಿಜೆಪಿಯ ಪ್ರಮುಖರು ಅಂದುಕೊಂಡಿದ್ದಹೀರು.. ಯಾಕೆಂದರೆ ಆಗಲೇ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ನಾಶಪಡಿಸಿಯಾಗಿತ್ತು.. ಪಪ್ಪು ರಜಾಕಾಲದ ರಾಜಕಾರಣಿ ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಅಪಪ್ರಚಾರ ಮಾಡಿ ಬಿಜೆಪಿ ಯಶಸ್ವಿಯೂ ಆಗಿತ್ತು. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟವರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಿಯಾಯಿತು ಎಂಬ ಭ್ರಮೆಯಲ್ಲಿದ್ದರು. ಆದರೆ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಯಾತ್ರೆ ಬಿಜೆಪಿಯ ಭ್ರಮೆಯನ್ನು ಕಳಚುವ ಕೆಲಸವನ್ನು ಮಾಡತೊಡಗಿತ್ತು..

ಯಾತ್ರೆ ತಮಿಳು ನಾಡಿನಿಂದ ಕೇರಳಕ್ಕೆ ಬಂದಾಗ ಆಯ್ಯೋ ಅದು ಕಮ್ಯುನಿಸ್ಟರ ಆಡಳಿತವಿರುವ ರಾಜ್ಯ ಜನ ಬೆಂಬಲ ದೊರಕಿದ್ದರಲ್ಲಿ ಆಶ್ಚರ್ಯವಿಲ್ಲ ಎಂಬು ಬಿಜೆಪಿ ಬೆಂಬಲಿಗರು ಹೇಳತೊಡಗಿದ್ದರು.. ಯಾತ್ರೆ ತಮಿಳು ನಾಡು ಮತ್ತು ಕೇರಳವನ್ನು ಮುಗಿಸಿ ಕರ್ನಾಟಕ್ಕೆ ಬಂದಾಗ ಬಿಜೆಪಿ ಅಧಿಕಾರದಲ್ಲಿರುವ ಈ ರಾಜ್ಯದಲ್ಲೂ ಜನ ಬೆಂಬಲ ದೊರಕಿತು..  ದಕ್ಷಿಣ ರಾಜ್ಯಗಳನ್ನು ಪೂರೈಸಿ ಮಹಾರಾಷ್ಟ್ರವನ್ನು ಪ್ರವೇಶಿಸುವ ಹೊತ್ತಿಗೆ ಒಂದು ಅಂಶ ಸ್ಪಷ್ಟವಾಗಿತ್ತು..ಈ ಯಾತ್ರೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಆದರೆ ಜನ ಬೆಂಬಲ ಮಾತ್ರ ಈ ಯಾತ್ರೆ ಯಶಸ್ವಿ ಎಂದು ಪರಿಗಣಿಸುವಂತೆ ಮಾಡಿರಲಿಲ್ಲ.. ಅದಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ತಾವೊಬ್ಬ ಪ್ರಬುದ್ಧ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿ ಬಿಟ್ಟಿದ್ದರು. ಈ ಯಾತ್ರೆಯ ಸಂದರ್ಭದಲ್ಲಿ ಾವರು ಕ್ಷುಲ್ಲಕ ರಾಜಕೀಯ ಭಾಷಣವನ್ನು ಮಾಡಲಿಲ್ಲ. ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಾರಣಕ್ಕಾಗಿ ಟೀಕಿಸಲಿಲ್ಲ..ಅವರು ದೇಶದ ಮುಂದೆ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಎಜೆಂಡಾವನ್ನು ದೇಶದ ಜನರ ಮುಂದಿಟ್ಟರು.. ಈ ದೇಶದಲ್ಲಿ ಯಾವ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕೋ ಆ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿದರು..

ನಿರುದ್ಯೋಗ ಬೆಲೆ ಏರಿಕೆ, ಧರ್ಮ ರಾಜಕಾರಣದ ಅಪಾಯ, ಇವತ್ತಿನ ಯುವಕರು, ರೈತರು, ಸಣ್ಣ ಪುಟ್ಟ ಉದ್ಯಮಿಗಳು ಎದುರಿಸುತ್ತಿರುವ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸತೊಡಗಿದರು.. ಯುವಕರು ಮಕ್ಕಳ ಜೊತೆ ಸಾಮಾನ್ಯರಂತೆ ಬೆರತರು,ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವಿಚಾರಗಳ ಬಗ್ಗೆ ಚರ್ಚೆಯೇ ನಿಂತು ಹೋಗಿತ್ತು. ಪಾಕಿಸ್ಥಾನ, ಭಯೋತ್ಪಾದನೆ, ಬುರ್ಖ್ಝಾ, ಮುಸ್ಲೀಂ ವ್ಯಾಪಾರ ನಿಷೇಧ ಇಂತಹ ವಿಚಾರಗಳನ್ನು ಬಿಟ್ಟು ಬೇರೇ ಮಾತೇ ಇರಲಿಲ್ಲ..ಹೀಗಾಗಿ ರಾಹುಲ್ ಅವರ ಮಾತುಗಳು ಹೊಸದಾಗಿದ್ದವು.. ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಹೊಸ ಅನುಭವ ನೀಡತೊಡಗಿತ್ತು.

ಈ ಯಾತ್ರೆ ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು.. ರಾಹುಲ್ ಎಂಬ ನೆಹರೂ ಕುಟುಂಬದ ಕುಡಿ ನಿಜ ಭಾರತವನ್ನು ಅರ್ಥ ಮಾಡಿಕೊಳ್ಳತೊಡಗಿದ್ದರು.. ಹಾಗೆ ಪಪ್ಪು ಎಂಬ ಇಮೇಜ್ ನಲ್ಲಿದ್ದ ರಾಹುಲ್ ಅವರನ್ನು ಈ ದೇಶದ ಜನ ಸಾಮಾನ್ಯರೂ ಅರ್ಥ ಮಾಡಿಕೊಳ್ಳತೊಡಗಿದ್ದರು.. ನಾವು ಅಂದುಕೊಂಡಂತೆ ರಾಹುಲ್ ಪಪ್ಪು ಅಲ್ಲ ಎಂದು ಜನರು ಅಂದುಕೊಳ್ಳತೊಡಗಿದ್ದರು. ರಾಹುಲ್ ಸಾಮಾನ್ಯ ಜನರಿಗೆ ಹತ್ತಿರವಾಗತೊಡಗಿದ್ದರು.

ಈ ಯಾತ್ರೆ ದೆಹಲಿ ಪ್ರವೇಶಿಸುವ ಸಮಯ ಬಂದಾಗ ಬಿಜೆಪಿಗೆ ನಿಜವಾಗಿ ಭಯ ಪ್ರಾರಂಭವಾಗಿತ್ತು.. ಹೀಗೆ ಮುಂದುವರಿದರೆ ಇದು ಬಿಜೆಪಿಯ ಯಶಸ್ಸಿನ ನಾಗಾಲೋಟಕ್ಕೆ ತಡೆ ಉಂಟಾಗಬಹುದು ಎಂಬ ಆತಂಕ.. ಅಷ್ಟ್ರರಲ್ಲಿ ಅವರ ಸಹಾಯಕ್ಕೆ ಬಂದಿದ್ದು ವಿಶ್ವದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಕೊರೋನಾದ ಬಿಎಫ್ ೭ ತಳಿ..

ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಡಿಸೆಂಬರ್ ೨೨ ರಂದು ರಾಹುಲ್ ಗಾಂಧಿ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರಿಗೆ ಪತ್ರವೊಂದನ್ನು ಬರೆದರು. ಕೊರೋನಾ ಮಾರ್ಗದರ್ಶಿ ಸೂತ್ರವನ್ನು ಪಾಲಿಸಿ ಇಲ್ಲವೇ ಯಾತ್ರೆಯನ್ನು ನಿಲ್ಲಿಸಿಬಿಡಿ ಎಂದರು . ಆದರೆ ಕಾಂಗ್ರೆಸ್ ಗೆ ಈ ಪತ್ರ ಬರೆದ ಸಚಿವರು ಸದಾ ಯಾತ್ರೆಗಳನ್ನು ನಡೆಸುತ್ತಲೇ ಇರುವ ಬಿಜೆಪಿಗೆ ಯಾವ ಸೂಚನೆಯನ್ನೂ ನೀಡಲಿಲ್ಲ... ಜೊತೆಗೆ ಕೊರೋನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಎಂಬ ಸೂಚನೆ ನೀಡುವ ಅಧಿಕಾರ ಅವರಿಗಿದೆ..ಆದರೆ ಯಾತ್ರೆಯನ್ನು ನಿಲ್ಲಿಸಿ ಎಂಬ ಸೂಚನೆಯನ್ನು ನೀಡುವ ಅಧಿಕಾರ ಆರೋಗ್ಯ ಸಚಿವರಿಗೆ ಇದೆಯೆ ಎಂಬ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ..

ಏನೇ ಇರಲಿ ಸಚಿವರ ಈ ಸೂಚನೆ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಸರ್ಕಾರ ಭಾರತ್ ಜೋಡೋ ಯಾತ್ರೆಯಿಂದ ಭಯಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ..

ರಾಹುಲ್ ಗಾಂಧಿ ಅವರ ಈ ನೂರು ದಿನಗಳ ಪೂರೈಸಿದ ಯಾತ್ರೆಯಲ್ಲಿ ಅವರು ಆಡಿದ ಒಂದು ಮಾತು  ಬಹಳ ಮುಖ್ಯವಾದುದು..

ದ್ವೇಷದ ಮಾರುಕಟ್ಟೆಯಲ್ಲಿ ನಾನು ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಈ ಮಾತು ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಬಹಳ ಮುಖ್ಯವಾದುದು ಎಂದು ನನಗೆ ಅನ್ನಿಸುತ್ತದೆ..ಇವತ್ತು ದ್ವೇಷದ ಮಾರುಕಟ್ಟೆ ತುಂಬಾ ಪ್ರಬಲವಾಗಿದೆ.. ಈ ದ್ವೇಷ ವಿಶ್ವರೂಪ ತಾಳಿ ಭಾರತವನ್ನು ಆಕ್ರಮಿಸಿದೆ. ಭಾರತದ ರಾಜಕಾರಣವನ್ನು ತನ್ನ ವಶ ಮಾಡಿಕೊಂಡಿದೆ..ಪ್ರತಿ ದಿನ ರಾಜಕಾರಣಿಗಳು ವಿಷ ಬೀಜ ಬಿತ್ತ ಅಧಿಕಾರದ ಬೆಳೆ ತೆಗೆಯುತ್ತಿದ್ದಾರೆ..ಬಹುಸಂಖ್ಯಾತರು, ಅಲ್ಪ ಸಂಖ್ಯಾತರಲ್ಲಿ ಭಯವನ್ನು ಹರಡಲಾಗುತ್ತಿದೆ..ದೇಶ ಪ್ರೇಮ ಮತ್ತು ದೇಶದ್ರೋಹದ ವ್ಯಾಖ್ಯೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ,,

ಇಂತಹ ಸಂದರ್ಭದಲ್ಲಿ ಇರುವುದೆಂದರೆ ಪ್ರೀತಿಯ ಅಂಗಡಿಯನ್ನು ತೆರೆಯುವುದೇ ಆಗಿದೆ,, ದ್ವೇಷದ ಮಾರುಕಟ್ಟೆ ತೆರೆದವರು ಈ ಬಗ್ಗೆ ಯೋಚಿಸಲಿ.. ಭಾರತೀಯರೆಲ್ಲ ಪ್ರೀತಿಯ ಅಂಗಡಿ ತೆರೆಯಲು ಮುಂದಾಗಲಿ


Saturday, October 29, 2022

ಕವಲು ದಾರಿಯಲ್ಲಿ ಪತ್ರಿಕೋದ್ಯಮ. ಮಾಧ್ಯಮಗಳು ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗಿದೆ,,,


 ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ.. ಇದು ಅಧಿಕಾರಸ್ಥರು ಮಾಧ್ಯಮ ಪ್ರತಿನಿಧಿಗಳಿಗೆ ದೀಪಾವಳಿ ಸಿಹಿ ಕೊಟ್ಟಿದ್ದು.. ಕೇವಲ ಸಿಹಿ ಕೊಟ್ಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ಹೀಗಿ ಸಿಹಿ ಕೊಟ್ಟಿದ್ದು ಹೊಸದಲ್ಲ.. ಆದರೆ ಸಿಹಿಯ ಜೊತೆಗೆ ಲಕ್ಷಾಂತರ ರೂಪಾಯಿ ನಗದು ಕೊಟ್ಟಿದ್ದಾರೆ ಎಂಬುದು ಹೊಸದು.. ಇದೇ ವಿವಾದಕ್ಕೆ ಕಾರಣವಾಯಿತು..ಕೆಲವು ಪತ್ರಿಕೆಗಳ ಸಂಪಾದಕರು ಈ ಕೊಡುಗೆಯನ್ನು ನಿರಾಕರಿಸಿದರು. ಹೀಗೆ ನಿರಾಕರಿಸಿದವರ ಹೆಸರು ಬಹಿರ್ಂಗವಾಯಿತು. ಆದರೆ ಇಯರು ಯಾರು ಈ ನಗದು ಹಣವನ್ನು ತೆಗೆದುಕೊಂಡರು ಎಂಬ ವಿವರ ಪ್ರಕಟವಾಗಲಿಲ್ಲ.

ಇದರೊಂದಿಗೆ ಮಾಧ್ಯಮದ ಪ್ರಾಮಾಣಿಕತೆ ಚರ್ಚೆಗೆ ಗ್ರಾಸವನ್ನು ಒದಗಿಸಿತು,, ಸಾಮಾಜಿಕ ಜಾಲ ತಾಣಗಳಲ್ಲಿ ಜನ ಮಾಧ್ಯಮವನ್ನು ಉಗಿದು ಉಪ್ಪಿನ ಕಾಯಿ ಹಾಕಿದರು.. ಆಡಳಿತಾರೂಢ ಪಕ್ಷ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದಂತೆ ಮಾಧ್ಯಮವನ್ನು ಖರೀದಿ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂತು,, ಮಾಧ್ಯಮದ ಮೇಲೆ ಇಂತಹ ದಾಳಿ ನಡೆಯುತ್ತಿರುವಾಗಲೂ ಮಾಧ್ಯಮವನ್ನು ಪ್ರತಿನಿಧಿಸುವ ಸಂಘಟನೆಗಳು ತುಟಿ ಪಿಟಕ್ ಎನ್ನಲಿಲ್ಲ. ಹಾಗೆ ಬಿಜೆಪಿಯಿಂದಲಾಗಲೀ ಮುಖ್ಯಮಂತ್ರಿ ಕಚೇರಿಯಿಂದಾಗಲಿ ಯಾವುದೇ ಸ್ಪಷ್ಟೀಕರಣ ಬರಲಿಲ್ಲ. ಯಾರೂ ಈ ಘಟನೆಯನ್ನು ಖಂಡಿಸಲಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ. ನನ್ನ ಕಚೇರಿ ಈ ಕೆಲಸ ಮಾಡಿದ್ದು ತಪ್ಪು ಎಂದು ಹೇಳುತ್ತಾರೆ  ಎಂಬುದು ನನ್ನ ನಿರೀಕ್ಷೆ..ಆದರೆ ಮಾಹಿತಿಗಳ ಪ್ರಕಾರ ನಗುದು ಬಹುಮಾನವನ್ನು ತಿರಸ್ಕರಿಸಿದ ಪತ್ರಿಕಾ ಸಂಪಾದಕರಿಗೆ ಫೋನ್ ಮಾಡಿ ಸಾರಿ ಕೇಳಿದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಏನೂ ಹೇಳಲಿಲ್ಲ.

ಮಾಧ್ಯಮ ಕ್ಷೇತ್ರ ಮತ್ತು ರಾಜಕೀಯ ವಲಯದ ನಿಗೂಢ ಮೌನ ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ.. ಜೊತೆಗೆ ಹಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿದೆ..ಈ ನಗುದು ಬಹುಮಾನ ನೀಡಿರುವುದರಲ್ಲಿ ಯಾವ ವಿಶೇಷವೂ ಇಲ್ಲ ಎಂಬುದು ಈ ಮೌನದ ಹಿಂದಿರುವ ಕಾರಣವಾಗಿರಬಹುದೆ ? ಕೆಲವು ದಿನ ಚರ್ಚೆ ನಡೆಯುತ್ತಾರೆ, ನಂತರ ಎಲ್ಲರೂ ಸುಮ್ಮನಾಗುತ್ತಾರೆ ಎಂಬುದೂ ಈ ನಿಗೂಢ ಮೌನದ ಹಿಂದಿನ ಗುಟ್ಟಾಗಿರಬಹುದೆ ?

ಇರಬಹುದು,, ಆದರೆ ಮಾಧ್ಯಮ ಮತ್ತು ರಾಜಕೀಯ ವ್ಯವಸ್ಥೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು..ಇದು ಸಾಮಾನ್ಯ ಇದು ನಡೆಯುತ್ತಲೇ ಬಂದಿದೆ ನಡೆಯುತ್ತಲೇ ಇರುತ್ತದೆ ಎಂಬ ಸಿನಿಕತ ಒಳ್ಳೆಯದಲ್ಲ..

ಬೊಮ್ಮಾಯಿಯವರಿಗೆ ಹಬ್ಬದ ಸಂದರ್ಭದಲ್ಲಿ ಸಿಹಿ ಕೊಡಬೇಕು ಎಂದು ಅನ್ನಿಸಿದರೆ ಅದು ತಪ್ಪಲ್ಲ..ಸಿಹಿ ಹಂಚುವುದು ಸಂಪ್ರದಾಯ. ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಿಹಿ ಹಂಚಬಹುದು. ಆದರೆ ಈ ನಿಲುವಿನ ಹಿಂದೆಯೂ ಪ್ರಶ್ನೆಗಳಿವೆ...

ಸಾಧಾರಣವಾಗಿ ಊರಿಗೆಲ್ಲ ಸಿಹಿ ಹಂಚುವುದು ಸಾಧ್ಯವಿಲ್ಲ. ಯಾರೇ ಆಗಲಿ ತಮಗೆ ಬೇಕಾದವರಿಗೆ ಆಪ್ತರಾದವರೆ ಸಿಹಿ ಹಂಚುವುದು ಸಾಮಾನ್ಯ..ಹಾಗಿದ್ದರೆ ಪತ್ರಕರ್ತರು ರಾಜಕಾರಣಿಗಳಿಗೆ ಬೇಕಾದವರೂ ಆಪ್ತರು ಆಗಲು ಸಾಧ್ಯವಿಲ್ಲ.. ಮಾಧ್ಯಮ ಪ್ರತಿ ಪಕ್ಷವಾಗಿ ಕೆಲಸ ಮಾಡಬೇಕು ಎನ್ನುವುದು ಪತ್ರಿಕೋದ್ಯಮದ ಧರ್ಮ..ಈ ಧರ್ಮವನ್ನು ಮಾಧ್ಯಮ ಪಾಲಿಸಿದರೆ ಆಪ್ತರಾಗುವುದು ಬೇಕಾದವರೂ ಆಗುವುದು ಸಾಧ್ಯವೇ ಇಲ್ಲ. ಜೊತೆಗೆ ರಾಜಕಾರಣಿಗಳಿಗೆ ಮಾಧ್ಯಮಗಳ ಮೇಲೆ ಭಯ ಮಿಶ್ರಿತವಾದ ಗೌರವ ಇರಬೇಕು.. ಆದರೆ ಇಲ್ಲಿ ಮಾಧ್ಯಮಗಳ ಬಗ್ಗೆ ಬೊಮ್ಮಾಯಿಯವರಿಗೆ ಮತ್ತು ಅವರ ಸರ್ಕಾರಕ್ಕೆ ಭಯ ಮಿಶ್ರಿತ ಗೌರವ ಇಲ್ಲ. ಅವರಿಗೆ ಮಾಧ್ಯಮ ಅವರ ಆಪ್ತ ವಲಯಕ್ಕೆ ಸೇರಿದೆ ಎಂಬುದು ಅವರ ವರ್ತನೆ ತೋರಿಸಿಕೊಡುತ್ತದೆ.. ಈ ಆಪ್ತತೆ ಬರುವುದು ನೀವು ಅವರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ,,ಹೀಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ನಗದು ಬಹುಮಾನ ಕೂಡುವಷ್ಟು ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಗಳ ಕಚೇರಿ ತೆಗೆದುಕೊಂಡಿದೆ..ಹೀಗೆ ಸ್ವಾತಂತ್ರ್ಯ ತೆಗೆದುಕೊಂಡು ನಗದು ಬಹುಮಾನ ಕೊಡುವುದಕ್ಕೆ ಮೊದಲು ಇದು  ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ ಎಂಬುದನ್ನು ನಂಬುವುದು ಕಷ್ಟ. ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಅವರ ಸಿಬ್ಬಂದಿಗಳು ಮಾಧ್ಯಮಗಳಿಗೆ ನಗದು ಬಹುಮಾನ ನೀಡುವ ತೀರ್ಮಾನ ತೆಗೆದುಕೊಂಡಿದ್ದರೆ ತಮ್ಮ ಸಿಬ್ಬಂದಿಗಳ ಮೇಲೆ ಮುಖ್ಯಮಂತ್ರಿಗಳಿಗೆ ನಿಯಂತ್ರಣ ಇಲ್ಲ ಎಂದುಕೊಳ್ಳಬೇಕಾಗುತ್ತದೆ.. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಗದು ಹಂಚುವ ಕೆಲಸ ಮಾಡಿದ್ದರೆ ಇದಕ್ಕೆ ಮುಖ್ಯಮಂತ್ರಿಗಳೇ ಸಂಪೂರ್ಣ ಜವಾಬ್ದಾರರಾಗಬೇಕಾಗುತ್ತದೆ,

ಇನ್ನು ಮಾಧ್ಯಮಗಳ ವಿಚಾರಕ್ಕೆ ಬರೋಣ. ಕೆಲವು ಪತ್ರಿಕಾ ಸಂಪಾದಕರು ಈ ನಗದು ಬಹುಮಾನವನ್ನು ತಿರಸ್ಕರಿಸುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಒಂದೊಮ್ಮೆ ಇವರೂ ಸಹ ಸುಮ್ಮನಿದ್ದು ಬಿಟ್ಟಿದ್ದರೆ ? ಸತ್ಯ ಹೊರಕ್ಕೆ ಬರುತ್ತಲೇ ಇರುತ್ತಿರಲಿಲ್ಲ.. ಇದಕ್ಕಾಗಿ ನಗದು ಬಹುಮಾನವನ್ನು ತಿರಸ್ಕರಿಸಿದ ಸಂಪಾದಕರನ್ನು ಶ್ಲಾಘಿಸಲೇ ಬೇಕು..

ಇವತ್ತು ಮಾಧ್ಯಮ ಸ್ವತಂತ್ರವಾಗಿಲ್ಲ.. ಪ್ರತಿ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಬದಲಾಗಿ ಬಹುಫರಾಕ್ ಪತ್ರಿಕೋದ್ಯಮ ವಿಜೃಂಭಿಸುತ್ತಿದೆ.. ಮಾಧ್ಯಮದಲ್ಲಿ ಭಟ್ಟಿಂಗಿ ಪತ್ರಿಕೋದ್ಯಮಿಗಳು ಹೆಚ್ಚುತ್ತಿದ್ದಾರೆ..ಬಿಜೆಪಿ ಮತ್ತು ಸಂಘಪರಿವಾರದ ಎಜೆಂಡಾವನ್ನು ಅನುಷ್ಠಾನಕ್ಕೆ ತರುವ ಕಾಯಕದಲ್ಲಿ ಮಾಧ್ಯಮ ನಿರತವಾಗಿದೆ. ಇದಕ್ಕಾಗಿ ಕೇವಲ ಪತ್ರಿಕೋದ್ಯಮಿಗಳನ್ನು ಮಾತ್ರ ದೂಷಿಸಿ ಪ್ರಯೋಜನ ಇಲ್ಲ..ಯಾವುದೇ ಬದ್ಧತೆ ಇಲ್ಲದ ಮಾಧ್ಯಮಗಳ ಮಾಲೀಕರೂ ಇದರ ಹೊಣೆ ಹೊರಬೇಕು..ಈ ಸಂದರ್ಭದಲ್ಲಿ ಪ್ರಜಾವಾಣಿ ಮಾಲಿಕರನ್ನು ನಾವು ನೆನಪು ಮಾಡಿಕೊಳ್ಳಬೇಕು..ಸಾಮಾಜಿಕ ಬದ್ಧತೆಯ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದವರು ಈ ಪತ್ರಿಕೆಯ ಮಾಲಿಕರು.. ಕರ್ನಾಟಕದ ಎಲ್ಲ ಜನಪರ ಮನುಷ್ಯಪರ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಬಂದವರು. ಹೀಗಾಗಿ ಪ್ರಜಾವಣಿ ಉಳಿದ ಪತ್ರಿಕೆ ಮತ್ತು ಪತ್ರಕರ್ತರಷ್ಟು ಕೆಟ್ಟು ಹೋಗಿಲ್ಲ. ಇನ್ನೂ ಕೂಡ ಸಾಮಾಜಿಕ ಬದ್ಧತೆ ಇರುವುದು ಪ್ರಜಾವಾಣಿ ಮಾತ್ರ..


Thursday, October 27, 2022

ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..


 ಜಾತ್ಯಾತೀತ ಜನತಾ ದಳ ತನ್ನ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದೆ. ನಿನ್ನೆ ಜೆಡಿಎಸ್ ನ ರಾಷ್ಟೀಯ ಕಾರ್ಯಕಾರಿಣಿ ಸಭೆ ನಡೆದ ಸಂದರ್ಭದಲ್ಲಿ ಯಾತ್ರೆಗೆ ಚಾಲನೆ ನೀಡುವ ಕೆಲಸವೂ ನಡೆಯಿತು. ೧೩ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಕಾರ್ಯಕಾರಿಣಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಷ್ಟೀಯ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು,

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜಕೀಯ ನಿಲುವು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಪಂಚರತ್ನ ಯಾತ್ರೆಗೆ ಪಂಚರತ್ನ ರಥಯಾತ್ರೆ ಎಂದು ಕರೆಯಲಾಗಿದೆ.. ಹಾಗೆ ಮುಳಬಾಗಿಲಿನ ಕುರುಡುಮಲೆ ದೇವಾಲಯದಿಂದ ಪಂಚರತ್ನ ಯಾತ್ರೆ ನಡೆಯಲಿದೆ. ಅಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು ೩೫ ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಹಾಗೆ ಈ ರಥ ಯಾತ್ರೆಯ ಜೊತೆಗೆ ಕುಮಾರಸ್ವಾಮಿಯವರ ಯಶಸ್ವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೂಡ ನಡೆಯಲಿದೆ. ಕುಮಾರಸ್ವಾಮಿ ಅವರ ಪ್ರಕಾರ ಈ ಯಾತ್ರೆ ಜೆಡಿಎಸ್ ಪಕ್ಷಕ್ಕೆ ಒಂದು ಸವಾಲು ಈ ಮಾತನ್ನು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಈ ಬಗ್ಗೆ ಯಾವ ಸಂಶಯವೂ ಬೇಕಾಗಿಲ್ಲ. ಇದು ಜೆಡಿಎಸ್ ಪಕ್ಷಕ್ಕೆ ಸವಾಲಿನ ದಿನಗಳೇ.  ಮುಂದಿನ ೬ ತಿಂಗಳಿನಲ್ಲಿ ಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಶಕ್ತಿಯಿಂದ ಸರ್ಕಾರ ರಚಿಸುವ ಮಾತನ್ನು ಅವರು ಹೇಳಿದ್ದರೂ ಅದು ಸುಲಭವಂತೂ ಅಲ್ಲ.  ಯಾಕೆಂದರೆ ಅವರು ಎದುರಿಸುತ್ತಿರುವ ಸವಾಲಿನ ಸ್ವರೂಪವೇ ಹಾಗಿದೆ.. ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಜನಮನ ಗೆಲ್ಲಲು ತಮ್ಮದೇ ಚುನಾವಣೆ ತಂತ್ರವನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ರಾಜ್ಯ ಬಿಜೆಪಿ ಹಿಂದುತ್ವದ ಅಜೆಂಡಾದೊಂದಿಗೆ ಮುನ್ನುಗ್ಗುತ್ತಿದೆ. ಪ್ರತಿ ಹಂತದಲ್ಲೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸತೊಡಗಿದೆ. ಹಿಜಾಬ್ ಮತ್ತು ಮುಸ್ಲೀಂ ವ್ಯಾಪಾರಿಗಳ ನಿಷೇಧದಂತಹ ವಿಚಾರಗಳನ್ನು ತಂದು ಮತದಾರರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.. ಹಾಗೆ ಈಗ ಅರೇಬಿಕ್ ಶಾಲೆಗಳಲ್ಲಿ ಪರಿಶೀಲಿಸುವುದು, ಮದ್ರಾಸ್ ಗಳ ಮೇಲೆ ನಿಯಂತ್ರಣ ಹೇರುವ ವಿಚಾರವನ್ನು ಜನರ ಮುಂದಿಟ್ಟಿದೆ. ಈ ನಡುವೆ ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುವ ನಾಟಕ ಮಾಡುತ್ತಿದೆ.  ಮೀಸಲಾತಿ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ, ಆ ಮೂಲಕ ದಲಿತರಲ್ಲಿ ವಾಲ್ಮೀಕಿ ಜನಾಂಗದ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ, ಹಿಂದುತ್ವ ಮತ್ತು ಅಭಿವೃದ್ಧಿ ಮೀಸಲಾತಿಯ ವಿಚಾರಗಳು ಭಾರತೀಯ ಜನತಾ ಪಕ್ಷದ ಟ್ರಂಪ್ ಕಾರ್ಡ್ ಆಗಿವೆ.

ಕಾಂಗ್ರೆಸ್ ತನ್ನ ಯಾತ್ರೆಗಳ ಮೂಲಕ ಸಂಘಟನೆಯನ್ನು ಬಲಪಡಿಸುವ ಮತ್ತು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಿದೆ.. ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯವರ ಇಮೇಜ್ ಬದಲಿಸುವ ಕೆಲಸವನ್ನು ಮಾಡಿದೆ. ಅವರು ಗಂಭೀರ ರಾಜಕಾರಣಿ ಅಲ್ಲ ರಜಾ ಕಾಲದ ಪಪ್ಪೂ ಎಂಬ ಬಿಜೆಪಿ ಮತ್ತು ಸಂಘಪರಿವಾರದ ಅಪಪ್ರಚಾರವನ್ನು  ಹಿಮ್ಮೆಟ್ಟಿಸುವ ಕೆಲಸವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ತಾವು ಈ ದೇಶ ಒಪ್ಪುವ ನಾಯಕ ಎಂದು ಪ್ರತಿಬಿಂಬಿಸುವ ಕೆಲಸವನ್ನೂ ರಾಹುಲ್ ಮಾಡುತ್ತಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಸಾಮಾನ್ಯ ಜನರ ಜೊತೆ ಅವರು ಬೆರೆಯುತ್ತಿರುವ ರೀತಿ ಅವರಲ್ಲಿ ಬದಲಾಗುತ್ತಿರುವ ನಾಯಕನ ಲಕ್ಷಣಗಳು ಕಾಣತೊಡಗಿದೆ.  ಪಾತಾಳಕ್ಕೆ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ತಡೆದು ನಿಲ್ಲಿಸುವ ಕೆಲಸವನ್ನು ಈ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.

ಇನ್ನೂ ರಾಜ್ಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಮೇಕೆದಾಟೃ ಯಾತ್ರೆಯ ನಂತರ ಪಕ್ಷಕ್ಕೆ ಬಲ ತುಂಬುವ ಸಂಘಟನೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದ ಇಬ್ಬರು ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ.ಶಿವಕುಮಾರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಗೆ ಕಾರಣವಾಗಿದ್ದು ನಿಜ. ಆದರೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಇದಕ್ಕೆ ತೇಪೆ ಹಾಕುವ ತಾತ್ಕಾಲಿಕವಾಗಿಯಾದರು ಯುದ್ಧ ವಿರಾಮ ಘೋಷಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಷ್ಟೀಯ ಅಧ್ಯಕ್ಷರಾಗಿರುವುದು ರಾಜ್ಯದ ದಲಿತ ಮತದಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು. ಸ್ವಲ್ಪ ಮಟ್ಟಿಗೆ ಸೀಮಿತ ಪರಿಣಾಮವನ್ನು ಇದು ಬೀರಬಹುದು.

ಇಂತಹ ಸ್ಥಿತಿಯಲ್ಲಿ ಜೆಡಿಎಸ್ ಸ್ಥಿತಿ ಏನು ? ಜಿಏದಿಎಸ್ ಪಕ್ಷದ ಮತ ಬ್ಯಾಂಕ್ ಯಾವುದು ? ನಿಜ ಹಳೇ ಮೈಸೂರು ಪ್ರದೇಶದಲ್ಲಿ ಈ ಪಕ್ಷ ಬಲವಾಗಿದೆ. ಆದರೆ ಇದು ಮಾತ್ರ ಸಾಕೆ ?  ೧೦೦ ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಜೆಡಿಎಸ್ ಗುರಿ ತಲುಪಲು ಇಷ್ಟೆ ಸಾಕೆ ? ಇಲ್ಲ. ಇದು ಸಾಲದು.. ಉತ್ತರ ಕರ್ನಾಟಕ ಪ್ರದೇಶದಲ್ಲಿ  ಪಕ್ಷವನ್ನು ಬಲಪಡಿಸದ ಹೊರತೂ ಈ ಗುರಿ ಗಗನ ಕುಸುಮವಾಗಿಯೇ ಉಳಿಯುತ್ತದೆ.

ಹೀಗಾಗಿ ಜೆಡಿಎಸ್ ಮೊದಲ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಸ್ಪಷ್ಟಪಡಿಸಬೇಕು.. ತಾವು ಯಾವುದರ ಪರ ಯಾವುದಕ್ಕೆ ವಿರೋಧ ಎಂಬುದು ಸ್ಪಷ್ಟವಾಗದಿದ್ದರೆ ಜನರನ್ನು ಆಕರ್ಶಿಸುವುದು ಕಷ್ಟ. ಅವರಾದರೂ ಸರಿ, ಇವರಾದರೂ ಸರಿ ಎಂಬ ಸಮಯಸಾಧಕ ರಾಜಕಾರಣ ನಿರೀಕ್ಷಿತ ಫಲವನ್ನು ನೀಡಲಾರದು.. ಇದಕ್ಕಿರುವ ದಾರಿ ಎಂದರೆ ಜನತಾ ಪರಿವಾರದ ಲೀಗಸಿಯನ್ನು ಮುಂದುವರಿಸುವುದೇ ಆಗಿದೆ.

ಆದರೆ ಜೆಡಿಎಸ್ ನ ಈ ಯಾತ್ರೆಯ ಹೆಸರು ಮತ್ತು ಅದು ಪ್ರತಿನಿಧಿಸುವ ತಾತ್ವಿಕತೆ ಯಾಕೋ ಅನುಮಾನಕ್ಕೆ ಕಾರಣವಾಗಿದೆ.. ರಥ ಯಾತ್ರೆ ಎನ್ನುವುದೇ ಬಿಜೆಪಿಯ ಪರಿಕಲ್ಪನೆ.. ಇದು ಎಲ್, ಕೆ. ಅಡ್ವಾಣಿಯವರ ರಥ ಯಾತ್ರೆಯನ್ನು ನೆನಪಿಸುತ್ತದೆ. ಹಾಗೆ ರಥ ಯಾತ್ರೆ ಸಾಮಾನ್ಯರ ಯಾತ್ರೆಯಲ್ಲ. ರಥದಲ್ಲಿ ಕುಳಿತುಕೊಳ್ಳುವವನು ಮಹಾರಾಜ. ಸಾಮಾನ್ಯ ರಸ್ತೆಯಲ್ಲಿರುತ್ತಾನೆ. ಆಥನಿಗೆ ರಥ ಎನ್ನುವುದೇ ಭಯವನ್ನು ಉಂಟು ಮಾಡುತ್ತದೆ.. ಇದು ಸಾಮಾನ್ಯ ಜನರನ್ನು ಕನೆಕ್ಟ್ ಮಾಡುವುದಿಲ್ಲ..

ಒಂದಂತೂ ನಿಜ..ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?


 ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?

ನೆಲದ ಮೇಲೆ ಬಿದ್ದ ಅನ್ನವನ್ನೇ ತಿನ್ನುವಂತೆ ಒತ್ತಡ ಹೇರಲಾಯಿತಾ ?

ಈ ಬಗ್ಗೆ ಮಠವೇ ವಿವರಣೆ ನೀಡಬೇಕು,, ಮಠದ ಭಕ್ತರೊಬ್ಬರು ಕಳುಹಿಸಿದ ವಿವರ ಇಲ್ಲಿದೆ...


ಇಂದು ಶ್ರೀಕೃಷ್ಣ ಮಠದ ಭೋಜನಾ ಶಾಲೆಯಲ್ಲಿ ಮಾನವ ಕುಲಕ್ಕೆ ಆದ ಹೀನ ಘಟನೆ,(ದಿನಾಂಕ 

24-10-2022 ಸಮಯ 2.00PM).


ನಾನು ಸುರೇಶ್ ,ಉಡುಪಿ ಜಿಲ್ಲೆಯ ಹೆಬ್ರಿಯಿಂದ.

ಈ ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯಕ್ಕೆ ನಾನು ,ನನ್ನ ಹೆಂಡತಿ,ಇಬ್ಬರು ಮಕ್ಕಳು ,ತಮ್ಮ               ಶ್ರೀ ಕ್ಷೇತ್ರದ ಭೋಜನಾ ಶಾಲೆಗೆ ಊಟ ಮಾಡಲೆಂದು ಹೋಗಿದ್ದೆವು.

ಆ ಸಮಯದಲ್ಲಿ ನನ್ನ ಮಗಳು (10 age) ಅನ್ನಕ್ಕೆ ತಟ್ಟೆ ಹಿಡಿಯುವಾಗ ಅಕಸ್ಮಾತ್ತಾಗಿ ಅನ್ನದ ಬಿಸಿ ತಡೆಯಲಾರದೆ  ಅನ್ನದ ಬಟ್ಟಲು ಕೆಳಗೆ ಬಿದ್ದು ಅನ್ನ ಪೂರ್ತಿ ಚೆಲ್ಲಿ ಹೋಯಿತು.

ಇಬ್ಬರು ಅನ್ನ ಬಡಿಸುತ್ತಿದ್ದರು.ಅದರಲ್ಲಿ ಅನ್ನ ಬಡಿಸುತ್ತಿದ್ದ ಒಬ್ಬ  ವ್ಯಕ್ತಿ(ಎತ್ತರದ ವ್ಯಕ್ತಿ,ಕೈಯಲ್ಲಿ ಶಂಖದ ಮುದ್ರೆ ಹೊಂದಿದ್ದಾನೆ).ಅವನು  ಆ ಸಮಯದಲ್ಲಿ  ನನ್ನ ಮಗಳಿಗೆ ಅನ್ನವನ್ನು ಹಾಕದೆ, ಬಿದ್ದ ಅನ್ನವನ್ನು ತಟ್ಟೆಗೆ  ಹಾಕಿಕೊಂಡು ಊಟ ಮಾಡಲು ತಾಕೀತು ಮಾಡಿದ.ನಂತರ ಸಾರು ಬಡಿಸುತ್ತಾ ಬಂದ ಸರಿಸುಮಾರು 75 age ಹಿರಿಯರು ನನ್ನ ಮಗಳ ತಟ್ಟೆ ಖಾಲಿ ಇರುವುದನ್ನು ನೋಡಿ ತಟ್ಟೆ ಹಿಡಿಕೊಂಡು ಆತ ಇರುವಲ್ಲಿ ಅನ್ನ ಹಾಕಿ ಕೊಡಲು ಹೇಳಿದ್ದಾರೆ .ಆದರೆ ಅವನು ಅನ್ನವನ್ನು ಹಾಕದೆ ಅವರ ಬಳಿಯೂ ಕೆಳಗೆ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದಾನೆ.ಆ ಹಿರಿಯರು ವಿಧಿ ಇಲ್ಲದೆ ಖಾಲಿ ತಟ್ಟೆಯೊಂದಿಗೆ ಬಂದಿದ್ದಾರೆ.ನಂತರ ಎರಡನೇ ಬಾರಿ ಅವನೇ ಅನ್ನ ತಂದಾಗ ಖಾಲಿ ತಟ್ಟೆ ನೋಡಿ ಅವನು ಅನ್ನ ಹಾಕುವ ರೀತಿ ಇರಲಿಲ್ಲ ನಾವು ಹೇಳಿದ್ದಕ್ಕೆ ಅನ್ನ ಹಾಕಿದ್ದಾನೆ.

ನಂತರ ಅವನ ಬಳಿ ನಿನಗೆ ಮನುಷ್ಯತ್ವ ಇಲ್ವ,ಒಂದು ಮಗುವಿಗೆ ಬಿದ್ದ ಅನ್ನ ತಿನ್ನಲು ಹೇಳುತಿಯಲ್ಲ  ಮತ್ತು ಆ ಹಿರಿಯರು ಅಷ್ಟು  ದೂರ ನಿನ್ನ ಹತ್ತಿರ ಬಂದು ಅನ್ನ ಹಾಕು ಅಂತ ತಟ್ಟೆ ಕೊಟ್ಟರೂ ನೀನು ಅನ್ನ ಹಾಕದೆ ಅವರನ್ನು ವಾಪಾಸು ಕಳುಸಿದಿಯಲ್ಲ  ಅಂತ ನಾವು ಕೇಳಿದಾಗ ಅವನು ನಮಗೂ ಮಾತಾಡೋಕು ಬರುತ್ತೆ ಆ ಮೇಲೆ ಸಿಗಿ ನಿಮ್ಮ ಹತ್ತಿರ ಮಾತಾಡುತ್ತೇನೆ ಅಂತ ಗದರಿಸಿದ್ದಾನೆ.

ನಮಗೆ ತುಂಬಾ ಬೇಜಾರು ಆಗಿ ಭೋಜನಾ ಶಾಲೆಯ ಆಡಳಿತ ಮಂಡಳಿಯಲ್ಲಿ ನಡೆದ ವಿಷಯದ ಬಗ್ಗೆ ಹೇಳಿದ್ದೇವೆ.ಅವರು ವಿಚಾರಿಸುತ್ತೇವೆ ಎಂದು ಹೇಳಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನನ್ನ ಮಗಳೆ ಅನ್ನವನ್ನು ಬೀಳಿಸಿಕೊಂಡು ಕೆಳಗೆ ಹಾಕಿ ಕೊಂಡಿದ್ದಾಳೆ ಅಂದ್ರುನು ನಾನು ಒಪ್ಪಿಕೊಳ್ಳುತ್ತೇನೆ.ಆದರೆ ನನಗೆ ಬೇಜಾರು ಆಗಿದ್ದು ಎಲ್ಲಿ ಎಂದರೆ ಸಾವಿರಾರು ಜನ ಓಡಾಡುವ ಜಾಗದಲ್ಲಿ ಬಿದ್ದ ಅನ್ನವನ್ನು ಬಾಚಿಕೊಂಡು ತಟ್ಟೆಗೆ ಹಾಕಿಕೊಂಡು ತಿನ್ನಲು ಹೇಳಿದ್ದು ಮತ್ತು ಆ ಹಿರಿಯರು ಅಷ್ಟು ದೂರ ಹೋಗಿ ತಟ್ಟೆಗೆ ಅನ್ನ ಹಾಕು ಅಂತ ಹೇಳಿದರೂ ಅವನು ಅನ್ನ ಹಾಕದೇ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದು. ಆ ಸಮಯದಲ್ಲಿ ಎಲ್ಲರೂ ಊಟ ಮಾಡುತ್ತಿದ್ದಳು.ಆದರೆ ನನ್ನ ಮಗಳಿಗೆ ಊಟ ಇಲ್ಲದೇ ಸುಮ್ಮನೆ ಕುಳಿತ್ತಿದ್ದಳು.ಅವನೇ ನನ್ನ ಮಗಳ ಸ್ಥಾನದಲ್ಲಿ ಇದ್ದಿದ್ದರೆ ಅವನು ಸಾವಿರಾರು ಜನರು ಓಡಾಡುವ ಜಾಗದಲ್ಲಿ ಬಿದ್ದ ಅನ್ನವನು ಬಾಚಿ ಹಾಕಿಕೊಂಡು ತಿನ್ನುತ್ತಿದ್ದನೇ? .ಯಾರಿಗೂ ಕೂಡ ಈ ರೀತಿ ಆಗಬಾರದು.ಮನಸ್ಸಿಗೆ ತುಂಬಾ ಬೇಜಾರಾಯಿತು.ಅವನಿಗೆ ಮನುಷ್ಯತ್ವವೇ ಇಲ್ಲ ಅಂತ ಅನಿಸುತ್ತೆ.ಮಠದವರು ಭಕ್ತಾದಿಗಳಿಗೆ ಉತ್ತಮ ಭೋಜನವನ್ನು ನೀಡುತ್ತಿದ್ದಾರೆ ಆದರೆ ಇಂತ ನೀಚ ಮನಸ್ತಿತಿ ಇರುವ ಇವನಿಗೆ ಅನ್ನ ಬಡಿಸುವ ವಿಚಾರದಲ್ಲಿ ಅಹಂಕಾರ ದರ್ಪ.ಇವನ ವರ್ತನೆ ನೋಡಿದರೆ ಇವನ ಮನೆಯ ಊಟ ನಮಗೆ ಬಡಿಸಿದ ಹಾಗೆ ಇದೆ.ಊಟ ಹಾಕುವ ವಿಚಾರದಲ್ಲಿ ಅವನು ನಡೆದುಕೊಂಡಿದ್ದು ತುಂಬಾ ಬೇಜಾರಾಯಿತು.ಅವನ ರೀತಿಯಲ್ಲಿ ನೋಡಿದರೆ ಇದೊಂದು ಪನಿಶ್ಮೆಂಟ್ ರೀತಿ ಇತ್ತು.ಅವನ ಜಾಗದಲ್ಲಿ ಬೇರೆ ಯಾರೂ ಇದ್ದರೂ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ.ಅಲ್ಲಿದ್ದ ಕೆಲವರು ಈ ವಿಷಯ ನೋಡಿದ ಬಳಿಕ ರಾಜ್ಯಸರಕಾರಕ್ಕೆ ,ಪ್ರಧಾನಿಗೆ,ಡಿಸಿ ಗೆ,ಹೈಕೋರ್ಟ್ ಜಡ್ಜ್ ಗೆ ಪತ್ರ ಬರೆಯಿರಿ ಎಂದು ಸಲಹೆ ಕೊಟ್ಟಿದ್ದಾರೆ  .ಆದರೆ ನನ್ನ ಮನಸ್ಸಿಗೆ ಆದ ನೋವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೇನೆ.ನನ್ನ  ಮಗಳಿಗೆ ಆದ ರೀತಿ ಬೇರೆ ಯಾರಿಗೂ ಆಗೋದು ಬೇಡ.ಅಂತಹ ದುಷ್ಟವ್ಯಕ್ತಿಯನ್ನು  ಶ್ರೀಕೃಷ್ಣ ಪರಮಾತ್ಮ ಮತ್ತು ಮುಖ್ಯಪ್ರಾಣ ನೋಡಿಕೊಳ್ಳಲಿ...............

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...