Thursday, October 27, 2022

ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..


 ಜಾತ್ಯಾತೀತ ಜನತಾ ದಳ ತನ್ನ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದೆ. ನಿನ್ನೆ ಜೆಡಿಎಸ್ ನ ರಾಷ್ಟೀಯ ಕಾರ್ಯಕಾರಿಣಿ ಸಭೆ ನಡೆದ ಸಂದರ್ಭದಲ್ಲಿ ಯಾತ್ರೆಗೆ ಚಾಲನೆ ನೀಡುವ ಕೆಲಸವೂ ನಡೆಯಿತು. ೧೩ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಕಾರ್ಯಕಾರಿಣಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಷ್ಟೀಯ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು,

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜಕೀಯ ನಿಲುವು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಪಂಚರತ್ನ ಯಾತ್ರೆಗೆ ಪಂಚರತ್ನ ರಥಯಾತ್ರೆ ಎಂದು ಕರೆಯಲಾಗಿದೆ.. ಹಾಗೆ ಮುಳಬಾಗಿಲಿನ ಕುರುಡುಮಲೆ ದೇವಾಲಯದಿಂದ ಪಂಚರತ್ನ ಯಾತ್ರೆ ನಡೆಯಲಿದೆ. ಅಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು ೩೫ ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಹಾಗೆ ಈ ರಥ ಯಾತ್ರೆಯ ಜೊತೆಗೆ ಕುಮಾರಸ್ವಾಮಿಯವರ ಯಶಸ್ವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೂಡ ನಡೆಯಲಿದೆ. ಕುಮಾರಸ್ವಾಮಿ ಅವರ ಪ್ರಕಾರ ಈ ಯಾತ್ರೆ ಜೆಡಿಎಸ್ ಪಕ್ಷಕ್ಕೆ ಒಂದು ಸವಾಲು ಈ ಮಾತನ್ನು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಈ ಬಗ್ಗೆ ಯಾವ ಸಂಶಯವೂ ಬೇಕಾಗಿಲ್ಲ. ಇದು ಜೆಡಿಎಸ್ ಪಕ್ಷಕ್ಕೆ ಸವಾಲಿನ ದಿನಗಳೇ.  ಮುಂದಿನ ೬ ತಿಂಗಳಿನಲ್ಲಿ ಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಶಕ್ತಿಯಿಂದ ಸರ್ಕಾರ ರಚಿಸುವ ಮಾತನ್ನು ಅವರು ಹೇಳಿದ್ದರೂ ಅದು ಸುಲಭವಂತೂ ಅಲ್ಲ.  ಯಾಕೆಂದರೆ ಅವರು ಎದುರಿಸುತ್ತಿರುವ ಸವಾಲಿನ ಸ್ವರೂಪವೇ ಹಾಗಿದೆ.. ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಜನಮನ ಗೆಲ್ಲಲು ತಮ್ಮದೇ ಚುನಾವಣೆ ತಂತ್ರವನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ರಾಜ್ಯ ಬಿಜೆಪಿ ಹಿಂದುತ್ವದ ಅಜೆಂಡಾದೊಂದಿಗೆ ಮುನ್ನುಗ್ಗುತ್ತಿದೆ. ಪ್ರತಿ ಹಂತದಲ್ಲೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸತೊಡಗಿದೆ. ಹಿಜಾಬ್ ಮತ್ತು ಮುಸ್ಲೀಂ ವ್ಯಾಪಾರಿಗಳ ನಿಷೇಧದಂತಹ ವಿಚಾರಗಳನ್ನು ತಂದು ಮತದಾರರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.. ಹಾಗೆ ಈಗ ಅರೇಬಿಕ್ ಶಾಲೆಗಳಲ್ಲಿ ಪರಿಶೀಲಿಸುವುದು, ಮದ್ರಾಸ್ ಗಳ ಮೇಲೆ ನಿಯಂತ್ರಣ ಹೇರುವ ವಿಚಾರವನ್ನು ಜನರ ಮುಂದಿಟ್ಟಿದೆ. ಈ ನಡುವೆ ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುವ ನಾಟಕ ಮಾಡುತ್ತಿದೆ.  ಮೀಸಲಾತಿ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ, ಆ ಮೂಲಕ ದಲಿತರಲ್ಲಿ ವಾಲ್ಮೀಕಿ ಜನಾಂಗದ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ, ಹಿಂದುತ್ವ ಮತ್ತು ಅಭಿವೃದ್ಧಿ ಮೀಸಲಾತಿಯ ವಿಚಾರಗಳು ಭಾರತೀಯ ಜನತಾ ಪಕ್ಷದ ಟ್ರಂಪ್ ಕಾರ್ಡ್ ಆಗಿವೆ.

ಕಾಂಗ್ರೆಸ್ ತನ್ನ ಯಾತ್ರೆಗಳ ಮೂಲಕ ಸಂಘಟನೆಯನ್ನು ಬಲಪಡಿಸುವ ಮತ್ತು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಿದೆ.. ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯವರ ಇಮೇಜ್ ಬದಲಿಸುವ ಕೆಲಸವನ್ನು ಮಾಡಿದೆ. ಅವರು ಗಂಭೀರ ರಾಜಕಾರಣಿ ಅಲ್ಲ ರಜಾ ಕಾಲದ ಪಪ್ಪೂ ಎಂಬ ಬಿಜೆಪಿ ಮತ್ತು ಸಂಘಪರಿವಾರದ ಅಪಪ್ರಚಾರವನ್ನು  ಹಿಮ್ಮೆಟ್ಟಿಸುವ ಕೆಲಸವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ತಾವು ಈ ದೇಶ ಒಪ್ಪುವ ನಾಯಕ ಎಂದು ಪ್ರತಿಬಿಂಬಿಸುವ ಕೆಲಸವನ್ನೂ ರಾಹುಲ್ ಮಾಡುತ್ತಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಸಾಮಾನ್ಯ ಜನರ ಜೊತೆ ಅವರು ಬೆರೆಯುತ್ತಿರುವ ರೀತಿ ಅವರಲ್ಲಿ ಬದಲಾಗುತ್ತಿರುವ ನಾಯಕನ ಲಕ್ಷಣಗಳು ಕಾಣತೊಡಗಿದೆ.  ಪಾತಾಳಕ್ಕೆ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ತಡೆದು ನಿಲ್ಲಿಸುವ ಕೆಲಸವನ್ನು ಈ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.

ಇನ್ನೂ ರಾಜ್ಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಮೇಕೆದಾಟೃ ಯಾತ್ರೆಯ ನಂತರ ಪಕ್ಷಕ್ಕೆ ಬಲ ತುಂಬುವ ಸಂಘಟನೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದ ಇಬ್ಬರು ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ.ಶಿವಕುಮಾರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಗೆ ಕಾರಣವಾಗಿದ್ದು ನಿಜ. ಆದರೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಇದಕ್ಕೆ ತೇಪೆ ಹಾಕುವ ತಾತ್ಕಾಲಿಕವಾಗಿಯಾದರು ಯುದ್ಧ ವಿರಾಮ ಘೋಷಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಷ್ಟೀಯ ಅಧ್ಯಕ್ಷರಾಗಿರುವುದು ರಾಜ್ಯದ ದಲಿತ ಮತದಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು. ಸ್ವಲ್ಪ ಮಟ್ಟಿಗೆ ಸೀಮಿತ ಪರಿಣಾಮವನ್ನು ಇದು ಬೀರಬಹುದು.

ಇಂತಹ ಸ್ಥಿತಿಯಲ್ಲಿ ಜೆಡಿಎಸ್ ಸ್ಥಿತಿ ಏನು ? ಜಿಏದಿಎಸ್ ಪಕ್ಷದ ಮತ ಬ್ಯಾಂಕ್ ಯಾವುದು ? ನಿಜ ಹಳೇ ಮೈಸೂರು ಪ್ರದೇಶದಲ್ಲಿ ಈ ಪಕ್ಷ ಬಲವಾಗಿದೆ. ಆದರೆ ಇದು ಮಾತ್ರ ಸಾಕೆ ?  ೧೦೦ ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಜೆಡಿಎಸ್ ಗುರಿ ತಲುಪಲು ಇಷ್ಟೆ ಸಾಕೆ ? ಇಲ್ಲ. ಇದು ಸಾಲದು.. ಉತ್ತರ ಕರ್ನಾಟಕ ಪ್ರದೇಶದಲ್ಲಿ  ಪಕ್ಷವನ್ನು ಬಲಪಡಿಸದ ಹೊರತೂ ಈ ಗುರಿ ಗಗನ ಕುಸುಮವಾಗಿಯೇ ಉಳಿಯುತ್ತದೆ.

ಹೀಗಾಗಿ ಜೆಡಿಎಸ್ ಮೊದಲ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಸ್ಪಷ್ಟಪಡಿಸಬೇಕು.. ತಾವು ಯಾವುದರ ಪರ ಯಾವುದಕ್ಕೆ ವಿರೋಧ ಎಂಬುದು ಸ್ಪಷ್ಟವಾಗದಿದ್ದರೆ ಜನರನ್ನು ಆಕರ್ಶಿಸುವುದು ಕಷ್ಟ. ಅವರಾದರೂ ಸರಿ, ಇವರಾದರೂ ಸರಿ ಎಂಬ ಸಮಯಸಾಧಕ ರಾಜಕಾರಣ ನಿರೀಕ್ಷಿತ ಫಲವನ್ನು ನೀಡಲಾರದು.. ಇದಕ್ಕಿರುವ ದಾರಿ ಎಂದರೆ ಜನತಾ ಪರಿವಾರದ ಲೀಗಸಿಯನ್ನು ಮುಂದುವರಿಸುವುದೇ ಆಗಿದೆ.

ಆದರೆ ಜೆಡಿಎಸ್ ನ ಈ ಯಾತ್ರೆಯ ಹೆಸರು ಮತ್ತು ಅದು ಪ್ರತಿನಿಧಿಸುವ ತಾತ್ವಿಕತೆ ಯಾಕೋ ಅನುಮಾನಕ್ಕೆ ಕಾರಣವಾಗಿದೆ.. ರಥ ಯಾತ್ರೆ ಎನ್ನುವುದೇ ಬಿಜೆಪಿಯ ಪರಿಕಲ್ಪನೆ.. ಇದು ಎಲ್, ಕೆ. ಅಡ್ವಾಣಿಯವರ ರಥ ಯಾತ್ರೆಯನ್ನು ನೆನಪಿಸುತ್ತದೆ. ಹಾಗೆ ರಥ ಯಾತ್ರೆ ಸಾಮಾನ್ಯರ ಯಾತ್ರೆಯಲ್ಲ. ರಥದಲ್ಲಿ ಕುಳಿತುಕೊಳ್ಳುವವನು ಮಹಾರಾಜ. ಸಾಮಾನ್ಯ ರಸ್ತೆಯಲ್ಲಿರುತ್ತಾನೆ. ಆಥನಿಗೆ ರಥ ಎನ್ನುವುದೇ ಭಯವನ್ನು ಉಂಟು ಮಾಡುತ್ತದೆ.. ಇದು ಸಾಮಾನ್ಯ ಜನರನ್ನು ಕನೆಕ್ಟ್ ಮಾಡುವುದಿಲ್ಲ..

ಒಂದಂತೂ ನಿಜ..ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...