ಅಂದು ನಾನು ಆ ಪ್ರದೇಶವನ್ನು ತಲುಪಿದಾಗ ರಾತ್ರಿ ಬಹಳ ಹೊತ್ತಾಗಿತ್ತು. ಸಮಯದ ಸರಿಯಾದ ಅಂದಾಜು ನನಗೆ ಇರಲಿಲ್ಲ. ಹಾಗೆ ನೋಡಿದರೆ ದಿನವನ್ನು ಮರೆತು ಎಷ್ಟೋ ದಿನಗಳಾಗಿದ್ದವು. ನಾನು ಆ ಕಾಡಿನಂತಹ ಕಾಡಿನಲ್ಲಿ ಸುತ್ತುತ್ತಿದ್ದೆ. ಕಂಡ ಕಂಡವರನ್ನೆಲ್ಲ ನೋಡುತ್ತ ಈತ ನಿಜವಾದ ಸಾಧಕನಿರಬಹುದೇ ? ಎಂದು ನನ್ನನ್ನೆ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ. ನಾನು ಯಾರನ್ನೇ ನೋಡಿದರೂ ನೋಡುವುದು ಅವರ ಕಣ್ಣುಗಳನ್ನು. ಯಾಕೆಂದರೆ ಮನುಷ್ಯನ ಎಲ್ಲ ಅಂಗಗಳು ಸುಳ್ಳುಗಳನ್ನು ಹೇಳಿದರೂ ಕಣ್ನು ಮಾತ್ರ ಸುಳ್ಳು ಹೇಳುವುದಿಲ್ಲ. ಕಣ್ಣು ಅತ್ಯಂತ ಪ್ರಾಮಾಣಿಕ.
ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದವನು ಒಬ್ಬ ಶೇರ್ಪಾ. ನಾನು ಆತನನ್ನು ಕರೆಯುತ್ತಿದ್ದುದು ಬಹದೂರ್ ಅಂತ. ಆತ ನನಗೆ ಒಬ್ಬ ನಿಗೂಢ ವ್ಯಕ್ತಿಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದ. ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಆತ ನನಗೆ ಹೇಳಿರಲಿಲ್ಲ. ನಾವು ಆ ಚಳಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಮುಂದಿನ ದಾರಿ ಕಾಣುತ್ತಿರಲಿಲ್ಲ. ನಾವು ಸಾಗಿ ಬಂದ ದಾರಿಯ ಹೆಜ್ಜೆ ಗುರುತುಗಳು ಇರಲಿಲ್ಲ. ನಾವು ಹಿಂದೆಯೂ ಇರಲಿಲ್ಲ. ಮುಂದೇನು ಗೊತ್ತಿರಲಿಲ್ಲ. ಹಾಗೆ ಸಾಗುತ್ತಿದ್ದ ನಮಗೆ ಸಮಯ ಎಲ್ಲವನ್ನೂ ಬಿಟ್ಟು ಚಾದರ ಹೊದ್ದು ಮಲಗಿದಂತೆ ಅನ್ನಿಸುತ್ತಿತ್ತು.
ಸುಮಾರು ನಾಲ್ಕು ಗಂಟೆಗಳ ನಂತರ ನಾವು ತಲುಪಿದ್ದು ಒಂದು ಪ್ರಪಾತದಂತಿದ್ದ ಪ್ರದೇಶದ ಸಮೀಪ. ಆ ಪ್ರಪಾತದ ಪಕ್ಕದಲ್ಲಿ ಸಣ್ಣ ಕಾಲುದಾರಿಯಿತ್ತು. ಆ ಕಾಲುದಾರಿಯಲ್ಲಿ ಸಾಗಿದಾಗ ಮುಂದೆ ಕಂಡಿದ್ದು ಒಂದು ಗುಹೆ. ಹೊರಗಿನಿಂದ ನೋಡಿದರೆ ಅಲ್ಲಿ ಗುಹೆ ಇದ್ದುದು ಕಾಣುತ್ತಿರಲಿಲ್ಲ. ಆತ ಒಳ ಪ್ರವೇಶಿಸುವುದಕ್ಕೆ ಮೊದಲು ಬಹಾದೂರ್ ನನಗೆ ಕೊನೆಯ ಮಾತನ್ನು ಹೇಳುವಂತೆ ಹೇಳಿದ.
"ನೋಡಿ ನೀವು ಒಳಗೆ ಹೋದವರು ಸುಮ್ಮನೆ ನೋಡಿ. ಆದರೆ ನೀವು ಅಲ್ಲಿ ಏನನ್ನೂ ನೋಡುವುದಿಲ್ಲ. ಅಲ್ಲಿನ ಮಾತನ್ನು ಕೇಳಿಸಿಕೊಳ್ಳಿ. ಆದರೆ ಅಲ್ಲಿ ಏನೂ ಕೇಳಿಸದಂತೆ ಇದ್ದುಬಿಡಿ"
ಹಲವು ಹುಚ್ಚರನ್ನು, ವಿಚಿತ್ರವಾಗಿ ವರ್ತಿಸುವವರನ್ನು, ಅರ್ಥವಾಗದಂತೆ ಮಾತನಾಡುವವರನ್ನು ಸಾಕಷ್ಟು ನೋಡಿದ್ದರಿಂದ ಈತನ ಮಾತನ್ನು ನಾನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಒಪ್ಪಿಗೆ ಸೂಚಿಸುವವನಂತೆ ತಲೆ ಹಾಕಿದೆ. ಆತಗುಹೆಯ ಒಳಗೆ ಹೆಜ್ಜೆಹಾಕಿದ. ನಾನು ಆತನನ್ನು ಹಿಂಬಾಲಿಸಿದೆ.
ಒಳಗಡೆ ಕಪ್ಪು ಕತ್ತಲೆ. ಸ್ವಲ್ಪ ಸಮಯದ ನಂತರ ನನ್ನ ಕಣ್ಣುಗಳು ಆ ಕತ್ತಲೆಗೆ ಹೊಂದಿಕೊಳ್ಳತೊಡಗಿದವು. ನಾನು ಆ ಗುಹೆಯ ಒಳಗೆ ಕಣ್ಣು ಹಾಯಿಸಿದೆ. ತುಂಬಾ ಶುಭ್ರವಾದ ಗುಹೆ. ನೆಲವನ್ನು ಆಗತಾನೆ ನೀರು ಹಾಕಿ ಸಾರಿಸಿದಂತೆ. ಹಾಗೆ ಜೊತೆಗೆ ಅಲ್ಲಿ ವಾತಾವರಣ. ಸ್ವಲ್ಪ ಸಮಯದಲ್ಲಿ ಮನಸ್ಸು ಹೂವಿನಂತೆ ಅನ್ನಿಸತೊಡಗಿತ್ತು. ತುಂಬಾ ಹಗುರ. ಏನೋ ಅರ್ಥವಾಗದ ಸಂತಸ, ಸಂಭ್ರಮ. ಸುಮ್ಮನೆ ಎದ್ದು ಕುಣಿಯೋಣ ಅನ್ನಿಸುವ ಹಾಗೆ. ನಮ್ಮ ಸುತ್ತಮುತ್ತಲಿನ ವಾತಾವರಣ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನಾನು ಅರಿಯದವನಲ್ಲ. ಸದಾ ನಗು ನಗುತ್ತ ಇರುವವರ ಮಧ್ಯೆ ಇದ್ದರೆ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಹಾಗೆ ಸದಾ ಆಳುವವರ ನಡುವೆ ಇದ್ದರೆ ನಾವು ಅಳತೊಡಗುತ್ತೇವೆ. ಆದ್ದರಿಂದಲೇ ನಾವು ಎಂತಹ ಜನರ ನಡುವೆ ಇರುತ್ತೇವೆ ಎಂಬುದು ಬಹಳ ಮುಖ್ಯ.
ಆದರೆ ಅಲ್ಲಿ ನನಗಾಗುತ್ತಿದ್ದ ಅನುಭವ ನನ್ನ ಆವರೆಗಿನ ಅನುಭವಕ್ಕಿಂತ ತುಂಬಾ ಭಿನ್ನವಾಗಿತ್ತು. ನಾನು ಒಂದು ರೀತಿಯಲ್ಲಿ ಭಾವ ರಹಿತನಾಗಿದ್ದೆ. ಅಥವಾ ನನ್ನ ಮನಸ್ಸಿನಲ್ಲಿ ಒಡಮೂಡಿದ ಸಂಭ್ರಮ, ಸಂತೋಷ ಸ್ಥಾಯಿ ಭಾವ ವಾಗಿತ್ತು. ಅದನ್ನು ಬಿಟ್ಟು ಬೇರೆ ಭಾವವೇ ನನಗೆ ಬರುತ್ತಿರಲಿಲ್ಲ. ಮೊದಲ ಬಾರಿಗೆ ಬದುಕು ಏಷ್ಟೊಂದು ಸುಂದರ ಎಂದು ಅನ್ನಿಸತೊಡಗಿತ್ತು.
ನಾನು ನನ್ನ ಪಕ್ಕದಲ್ಲಿದ್ದ ಬಹದೂರ್ ನತ್ತ ನೋಡತೊಡಗಿದೆ. ಆತನಲ್ಲಿ ಯಾವ ಬದಲಾವಣೆಯಾದಂತೆ ಕಂಡು ಬರಲಿಲ್ಲ. ಆತ ಆ ಗುಹೆಯ ಮೂಲೆಯಡೆಗೆ ತದೇಕ ಚಿತ್ತದಿಂದ ನೋಡುತ್ತಿದ್ದ. ನಾನು ಅವನ ದೃಷ್ಟಿಯನ್ನು ಅನುಸರಿಸಿ ನೋಡತೊಡಗಿದೆ. ನಾನು ಏನನ್ನೋ ಹೇಳುವುದಕ್ಕೆ ಬಹದೂರ್ ನತ್ತ ನೋಡಿದೆ. ಆದರೆ ಆತ ಈ ಜಗತ್ತನ್ನೇ ಮರೆತವನಂತೆ ಇದ್ದ. ಈ ಮನಸ್ಥಿತಿಯಲ್ಲಿ, ಪರಿಸ್ಥಿತಿಯಲ್ಲಿ ಎಷ್ಟು ಹೊತ್ತು ಕಳೆದೆವೋ ತಿಳಿಯದು. ಒಮ್ಮೆಲೆ ಕತ್ತಲೆಯನ್ನು ಹೊಡೆದೊಡಿಸುವಂತೆ ಒಂದು ಆಕೃತಿ ನಮ್ಮತ್ತ ನಡೆದು ಬಂತು. ಬಹದೂರ್ ನೋಡುತ್ತಿದ್ದ ಗುಹೆಯ ಮೂಲೆಯಿಂದ ನಡೆದು ಬಂದ ಈ ಆಕೃತಿ ನಮ್ಮ ಹತ್ತಿರ ಬರುತ್ತಿದ್ದಂತೆ ನನಗೆ ಶಾಕ್.
ಆಕೆ ಒಬ್ಬ ೨೫ರ ಯುವತಿ. ನೀಳಕಾಯ. ಕಾಲಿನ ಮಧ್ಯಭಾಗದವರೆಗೆ ಇಳಿಬಿಟ್ಟ ಕೂದಲು. ನನಗೆ ತಕ್ಷಣ ಮನಸ್ಸಿನಲ್ಲಿ ಬಂದಿದ್ದು, ನಾನು ಸಣ್ಣಿಂದಲೂ ನೋಡುತ್ತ ಬಂದ ಅಕ್ಕಮಹಾದೇವಿಯ ಕ್ಯಾಲೆಂಡರು. ಹೌದು, ಈಕೆಯೂ ಸಂಪೂರ್ಣವಾಗಿ ನಗ್ನಳಾಗಿದ್ದಳು !ಮುಖದಲ್ಲಿ ಇದ್ದ ಸಣ್ಣ ನಗೆ. ಆ ನಗೆಯಲ್ಲಿ ವಿಚಿತ್ರ ಸೆಳೆತ. ಎಲ್ಲವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಹಾಗೆ.
ನನ್ನ ಬದುಕಿನಲ್ಲಿ ಅಲ್ಲಿಯವರೆಗೆ ನಗ್ನ ವ್ಯಕ್ತಿಗಳನ್ನೇ ನೋಡದಿದ್ದವ ನಾನು. ಆದರೆ ನನಗೆ ಶಾಕ್ ಆಗುವ ಹಾಗೆ ನನ್ನಲ್ಲಿ ಬೇರೆ ರೀತಿಯ ಭಾವನೆಗಳು ಬರುತ್ತಲೇ ಇರಲಿಲ್ಲ. ಅಮ್ಮನ ಬಳಿಗೆ ಒಡುವ ಮಗುವಿನ ಭಾವ ನನ್ನಲ್ಲಿ ತುಂಬಿಕೊಂಡಿತ್ತು. ಇದನ್ನು ಬಿಟ್ಟರೆ ಬೇರೆ ಭಾವವೇ ಇಲ್ಲ ! ತಾಯಿಯ ಮಡಿಲಿನಲ್ಲಿ ಆಶ್ರಯ ಪಡೆಯುವ ಶಿಶುವಿನ ಮನಸ್ಥಿತಿ ನನ್ನದಾಗಿಬಿಟ್ಟಿತ್ತು.
ಆಕೆ ಮಾತನಾಡತೊಡಗಿದಳು.
"ನಾನು ಬದುಕುತ್ತಿದ್ದೇನೆ ಎಂದರೆ ಅದು ಸುಳ್ಳು. ನೀನು ಬದುಕುತ್ತಿದ್ದಿ ಎಂದುಕೊಂಡರೆ ಅದು ಭ್ರಮೆ. ನಾನು ಎಂದರೆ ನನ್ನ ಭಾವನೆ. ನೀನು ಎಂದರೆ ನಿನ್ನ ಭಾವನೆ. ಭಾವನೆ ಇದ್ದಹಾಗೆ ಬದುಕಿರುತ್ತದೆ. ಇದನ್ನು ಬಿಟ್ಟು ಬೇರೆ ಇಲ್ಲ. ನಿನಗೆ ಇಲ್ಲಿ, ನೀನು ಗಂಡಸು ಎಂಬ ಭಾವನೆ ಬರುತ್ತಿಲ್ಲ. ನಿನಗೆ ಶಿಶುವಿನ ಭಾವನೆ ಮಾತ್ರ. ಆದ್ದರಿಂದ ನಿನಗೆ ನಗ್ನ ದೇಹವನ್ನು ನೋಡಿದರೂ ಕಾಮನೆಗಳು ಜಾಗೃತವಾಗುತ್ತಿಲ್ಲ. ನಿನಗೆ ನೀನು ಗಂಡಸು ಎಂದುಕೊಂಡಾಗ ಮಾತೃ ನಿನ್ನ ಕಾಮನೆಗಳು ಜಾಗೃತವಾಗುತ್ತದೆ. ಆದರೆ ನಾನು ನಿನಗೆ ತಾಯಿ. ನಿನ್ನ ಮನಸ್ಸು ಬೇರೆ ರೀತಿ ಯೋಚಿಸುವುದು ಸಾಧ್ಯವೇ ಇಲ್ಲ. "
ನಾನು ಅವಳನ್ನೇ ನೋಡುತ್ತಿದ್ದೆ. ಅವಳು ಹೇಳುತ್ತಿದ್ದುದು ನೂರಕ್ಕೆ ನೂರರಷ್ಟು ಸತ್ಯವಾಗಿತ್ತು. ನನಗೆ ನನ್ನ ಅಮ್ಮ ನೆನಪಾಗುತ್ತಿದ್ದಳು. ಅಮ್ಮ ನನ್ನನ್ನು ಎತ್ತಿಕೊಂಡು ಮುದ್ದಾಡುತ್ತಿದ್ದುದು, ನಾನು ಅವಳ ಜೊತೆ ಹಠ ಮಾಡುತ್ತಿದ್ದುದು ಎಲ್ಲವೂ ಕಣ್ಣು ಮುಂದೆ ಬರುತ್ತಿತ್ತು.
"ಮನುಷ್ಯ ಎಂದರೆ ಆತನ ಮನಸ್ಸು. ಮನಸ್ಸು ಬಿಟ್ಟರೆ ಬೇರೆನೂ ಇಲ್ಲ. ಈಗ ನೀನು ಪುಟ್ಟ ಬಾಲಕ. ನೀನಿನ್ನೂ ಗಂಡಸಾಗಿಲ್ಲ. ನಿನಗೆ ಯೌವನ ಬಂದಿಲ್ಲ. ನೀನು ಯಾವ ಸ್ತ್ರೀಯನ್ನು ಮಾತೃತ್ವದ ಭಾವನೆಯನ್ನು ಬಿಟ್ಟು ಬೇರೆ ರೀತಿ ನೋಡಲಾರೆ."
ಅವಳ ಮಾತಿನಲ್ಲಿ ಎಂತಹ ಆಕರ್ಷಣೆ ಇತ್ತೆಂದರೆ, ಅವಳು ಹೇಳಿದ್ದನ್ನು ಬಿಟ್ಟು ಬೇರೆ ಯೋಚನೆಗಳು ಮನಸ್ಸಿನಲ್ಲಿ ಬರುತ್ತಲೇ ಇರಲಿಲ್ಲ. ನಾನು ಆಗಲೂ ಆಸ್ಥಿತಿಯಲ್ಲಿ ಬೇರೆ ರೀತಿ ನೋಡುವುದಕ್ಕೆ ಯತ್ನಿಸತೊಡಗಿದೆ. ಆಕೆಯ ಸೌಂದರ್ಯ ಎಷ್ಟು ಅದ್ಭುತ ಎಂದು ಯೋಚಿಸಲು ಯತ್ನಿಸಿದೆ. ಹಾಗೆ ಅವಳ ಜೊತೆ ನಾನಿದ್ದಂತೆ ಕಲ್ಪಿಸಿಕೊಳ್ಳಲು ನೋಡಿದೆ. ಆದರೆ ನಾನಾಗ ನಿಸ್ಸಹಾಯಕನಾಗಿದ್ದೆ. ನನ್ನ ಮನಸ್ಸು ಬಾಲ್ಯಕ್ಕೆ ಒಡಿ ಹೋಗಿತ್ತು. ನನ್ನ ಊರಿನ ರಸ್ತೆಗಳಲ್ಲಿ ಗೋಲಿ ಆಡುತ್ತಿದ್ದಂತೆ ಅನ್ನಿಸತೊಡಗಿತು. ತಟ್ಟನೆ ಬಹಾದೂರನತ್ತ ತಿರುಗಿ ಕೇಳಿದೆ.
"ನಾನು ನೀನು ಗೋಲಿ ಆಡೋಣವಾ ?"
ಆಕೆ ನಗುತ್ತಿದ್ದಳು. ನಾನು ಗೋಲಿ ಆಡಲು ರಸ್ತೆ ಹುಡುಕುತ್ತಿದ್ದೆ. ಮುಂದೇನಾಯಿತು ಅನ್ನೋದು ಇನ್ನೊಂದು ಸ್ಟೋರಿ. ಅದನ್ನ ಬಿಡುವಾದಾಗ ಇನ್ನೊಮ್ಮೆ ಹೇಳ್ತೀನಿ.