Saturday, October 29, 2022

ಕವಲು ದಾರಿಯಲ್ಲಿ ಪತ್ರಿಕೋದ್ಯಮ. ಮಾಧ್ಯಮಗಳು ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕಾಗಿದೆ,,,


 ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ.. ಇದು ಅಧಿಕಾರಸ್ಥರು ಮಾಧ್ಯಮ ಪ್ರತಿನಿಧಿಗಳಿಗೆ ದೀಪಾವಳಿ ಸಿಹಿ ಕೊಟ್ಟಿದ್ದು.. ಕೇವಲ ಸಿಹಿ ಕೊಟ್ಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ಹೀಗಿ ಸಿಹಿ ಕೊಟ್ಟಿದ್ದು ಹೊಸದಲ್ಲ.. ಆದರೆ ಸಿಹಿಯ ಜೊತೆಗೆ ಲಕ್ಷಾಂತರ ರೂಪಾಯಿ ನಗದು ಕೊಟ್ಟಿದ್ದಾರೆ ಎಂಬುದು ಹೊಸದು.. ಇದೇ ವಿವಾದಕ್ಕೆ ಕಾರಣವಾಯಿತು..ಕೆಲವು ಪತ್ರಿಕೆಗಳ ಸಂಪಾದಕರು ಈ ಕೊಡುಗೆಯನ್ನು ನಿರಾಕರಿಸಿದರು. ಹೀಗೆ ನಿರಾಕರಿಸಿದವರ ಹೆಸರು ಬಹಿರ್ಂಗವಾಯಿತು. ಆದರೆ ಇಯರು ಯಾರು ಈ ನಗದು ಹಣವನ್ನು ತೆಗೆದುಕೊಂಡರು ಎಂಬ ವಿವರ ಪ್ರಕಟವಾಗಲಿಲ್ಲ.

ಇದರೊಂದಿಗೆ ಮಾಧ್ಯಮದ ಪ್ರಾಮಾಣಿಕತೆ ಚರ್ಚೆಗೆ ಗ್ರಾಸವನ್ನು ಒದಗಿಸಿತು,, ಸಾಮಾಜಿಕ ಜಾಲ ತಾಣಗಳಲ್ಲಿ ಜನ ಮಾಧ್ಯಮವನ್ನು ಉಗಿದು ಉಪ್ಪಿನ ಕಾಯಿ ಹಾಕಿದರು.. ಆಡಳಿತಾರೂಢ ಪಕ್ಷ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದಂತೆ ಮಾಧ್ಯಮವನ್ನು ಖರೀದಿ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂತು,, ಮಾಧ್ಯಮದ ಮೇಲೆ ಇಂತಹ ದಾಳಿ ನಡೆಯುತ್ತಿರುವಾಗಲೂ ಮಾಧ್ಯಮವನ್ನು ಪ್ರತಿನಿಧಿಸುವ ಸಂಘಟನೆಗಳು ತುಟಿ ಪಿಟಕ್ ಎನ್ನಲಿಲ್ಲ. ಹಾಗೆ ಬಿಜೆಪಿಯಿಂದಲಾಗಲೀ ಮುಖ್ಯಮಂತ್ರಿ ಕಚೇರಿಯಿಂದಾಗಲಿ ಯಾವುದೇ ಸ್ಪಷ್ಟೀಕರಣ ಬರಲಿಲ್ಲ. ಯಾರೂ ಈ ಘಟನೆಯನ್ನು ಖಂಡಿಸಲಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ಹೇಳಿಕೆ ನೀಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ. ನನ್ನ ಕಚೇರಿ ಈ ಕೆಲಸ ಮಾಡಿದ್ದು ತಪ್ಪು ಎಂದು ಹೇಳುತ್ತಾರೆ  ಎಂಬುದು ನನ್ನ ನಿರೀಕ್ಷೆ..ಆದರೆ ಮಾಹಿತಿಗಳ ಪ್ರಕಾರ ನಗುದು ಬಹುಮಾನವನ್ನು ತಿರಸ್ಕರಿಸಿದ ಪತ್ರಿಕಾ ಸಂಪಾದಕರಿಗೆ ಫೋನ್ ಮಾಡಿ ಸಾರಿ ಕೇಳಿದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಏನೂ ಹೇಳಲಿಲ್ಲ.

ಮಾಧ್ಯಮ ಕ್ಷೇತ್ರ ಮತ್ತು ರಾಜಕೀಯ ವಲಯದ ನಿಗೂಢ ಮೌನ ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ.. ಜೊತೆಗೆ ಹಲವು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡಿದೆ..ಈ ನಗುದು ಬಹುಮಾನ ನೀಡಿರುವುದರಲ್ಲಿ ಯಾವ ವಿಶೇಷವೂ ಇಲ್ಲ ಎಂಬುದು ಈ ಮೌನದ ಹಿಂದಿರುವ ಕಾರಣವಾಗಿರಬಹುದೆ ? ಕೆಲವು ದಿನ ಚರ್ಚೆ ನಡೆಯುತ್ತಾರೆ, ನಂತರ ಎಲ್ಲರೂ ಸುಮ್ಮನಾಗುತ್ತಾರೆ ಎಂಬುದೂ ಈ ನಿಗೂಢ ಮೌನದ ಹಿಂದಿನ ಗುಟ್ಟಾಗಿರಬಹುದೆ ?

ಇರಬಹುದು,, ಆದರೆ ಮಾಧ್ಯಮ ಮತ್ತು ರಾಜಕೀಯ ವ್ಯವಸ್ಥೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು..ಇದು ಸಾಮಾನ್ಯ ಇದು ನಡೆಯುತ್ತಲೇ ಬಂದಿದೆ ನಡೆಯುತ್ತಲೇ ಇರುತ್ತದೆ ಎಂಬ ಸಿನಿಕತ ಒಳ್ಳೆಯದಲ್ಲ..

ಬೊಮ್ಮಾಯಿಯವರಿಗೆ ಹಬ್ಬದ ಸಂದರ್ಭದಲ್ಲಿ ಸಿಹಿ ಕೊಡಬೇಕು ಎಂದು ಅನ್ನಿಸಿದರೆ ಅದು ತಪ್ಪಲ್ಲ..ಸಿಹಿ ಹಂಚುವುದು ಸಂಪ್ರದಾಯ. ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಿಹಿ ಹಂಚಬಹುದು. ಆದರೆ ಈ ನಿಲುವಿನ ಹಿಂದೆಯೂ ಪ್ರಶ್ನೆಗಳಿವೆ...

ಸಾಧಾರಣವಾಗಿ ಊರಿಗೆಲ್ಲ ಸಿಹಿ ಹಂಚುವುದು ಸಾಧ್ಯವಿಲ್ಲ. ಯಾರೇ ಆಗಲಿ ತಮಗೆ ಬೇಕಾದವರಿಗೆ ಆಪ್ತರಾದವರೆ ಸಿಹಿ ಹಂಚುವುದು ಸಾಮಾನ್ಯ..ಹಾಗಿದ್ದರೆ ಪತ್ರಕರ್ತರು ರಾಜಕಾರಣಿಗಳಿಗೆ ಬೇಕಾದವರೂ ಆಪ್ತರು ಆಗಲು ಸಾಧ್ಯವಿಲ್ಲ.. ಮಾಧ್ಯಮ ಪ್ರತಿ ಪಕ್ಷವಾಗಿ ಕೆಲಸ ಮಾಡಬೇಕು ಎನ್ನುವುದು ಪತ್ರಿಕೋದ್ಯಮದ ಧರ್ಮ..ಈ ಧರ್ಮವನ್ನು ಮಾಧ್ಯಮ ಪಾಲಿಸಿದರೆ ಆಪ್ತರಾಗುವುದು ಬೇಕಾದವರೂ ಆಗುವುದು ಸಾಧ್ಯವೇ ಇಲ್ಲ. ಜೊತೆಗೆ ರಾಜಕಾರಣಿಗಳಿಗೆ ಮಾಧ್ಯಮಗಳ ಮೇಲೆ ಭಯ ಮಿಶ್ರಿತವಾದ ಗೌರವ ಇರಬೇಕು.. ಆದರೆ ಇಲ್ಲಿ ಮಾಧ್ಯಮಗಳ ಬಗ್ಗೆ ಬೊಮ್ಮಾಯಿಯವರಿಗೆ ಮತ್ತು ಅವರ ಸರ್ಕಾರಕ್ಕೆ ಭಯ ಮಿಶ್ರಿತ ಗೌರವ ಇಲ್ಲ. ಅವರಿಗೆ ಮಾಧ್ಯಮ ಅವರ ಆಪ್ತ ವಲಯಕ್ಕೆ ಸೇರಿದೆ ಎಂಬುದು ಅವರ ವರ್ತನೆ ತೋರಿಸಿಕೊಡುತ್ತದೆ.. ಈ ಆಪ್ತತೆ ಬರುವುದು ನೀವು ಅವರ ಪರವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ,,ಹೀಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ ನಗದು ಬಹುಮಾನ ಕೂಡುವಷ್ಟು ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಗಳ ಕಚೇರಿ ತೆಗೆದುಕೊಂಡಿದೆ..ಹೀಗೆ ಸ್ವಾತಂತ್ರ್ಯ ತೆಗೆದುಕೊಂಡು ನಗದು ಬಹುಮಾನ ಕೊಡುವುದಕ್ಕೆ ಮೊದಲು ಇದು  ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ ಎಂಬುದನ್ನು ನಂಬುವುದು ಕಷ್ಟ. ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಅವರ ಸಿಬ್ಬಂದಿಗಳು ಮಾಧ್ಯಮಗಳಿಗೆ ನಗದು ಬಹುಮಾನ ನೀಡುವ ತೀರ್ಮಾನ ತೆಗೆದುಕೊಂಡಿದ್ದರೆ ತಮ್ಮ ಸಿಬ್ಬಂದಿಗಳ ಮೇಲೆ ಮುಖ್ಯಮಂತ್ರಿಗಳಿಗೆ ನಿಯಂತ್ರಣ ಇಲ್ಲ ಎಂದುಕೊಳ್ಳಬೇಕಾಗುತ್ತದೆ.. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಗದು ಹಂಚುವ ಕೆಲಸ ಮಾಡಿದ್ದರೆ ಇದಕ್ಕೆ ಮುಖ್ಯಮಂತ್ರಿಗಳೇ ಸಂಪೂರ್ಣ ಜವಾಬ್ದಾರರಾಗಬೇಕಾಗುತ್ತದೆ,

ಇನ್ನು ಮಾಧ್ಯಮಗಳ ವಿಚಾರಕ್ಕೆ ಬರೋಣ. ಕೆಲವು ಪತ್ರಿಕಾ ಸಂಪಾದಕರು ಈ ನಗದು ಬಹುಮಾನವನ್ನು ತಿರಸ್ಕರಿಸುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಒಂದೊಮ್ಮೆ ಇವರೂ ಸಹ ಸುಮ್ಮನಿದ್ದು ಬಿಟ್ಟಿದ್ದರೆ ? ಸತ್ಯ ಹೊರಕ್ಕೆ ಬರುತ್ತಲೇ ಇರುತ್ತಿರಲಿಲ್ಲ.. ಇದಕ್ಕಾಗಿ ನಗದು ಬಹುಮಾನವನ್ನು ತಿರಸ್ಕರಿಸಿದ ಸಂಪಾದಕರನ್ನು ಶ್ಲಾಘಿಸಲೇ ಬೇಕು..

ಇವತ್ತು ಮಾಧ್ಯಮ ಸ್ವತಂತ್ರವಾಗಿಲ್ಲ.. ಪ್ರತಿ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಬದಲಾಗಿ ಬಹುಫರಾಕ್ ಪತ್ರಿಕೋದ್ಯಮ ವಿಜೃಂಭಿಸುತ್ತಿದೆ.. ಮಾಧ್ಯಮದಲ್ಲಿ ಭಟ್ಟಿಂಗಿ ಪತ್ರಿಕೋದ್ಯಮಿಗಳು ಹೆಚ್ಚುತ್ತಿದ್ದಾರೆ..ಬಿಜೆಪಿ ಮತ್ತು ಸಂಘಪರಿವಾರದ ಎಜೆಂಡಾವನ್ನು ಅನುಷ್ಠಾನಕ್ಕೆ ತರುವ ಕಾಯಕದಲ್ಲಿ ಮಾಧ್ಯಮ ನಿರತವಾಗಿದೆ. ಇದಕ್ಕಾಗಿ ಕೇವಲ ಪತ್ರಿಕೋದ್ಯಮಿಗಳನ್ನು ಮಾತ್ರ ದೂಷಿಸಿ ಪ್ರಯೋಜನ ಇಲ್ಲ..ಯಾವುದೇ ಬದ್ಧತೆ ಇಲ್ಲದ ಮಾಧ್ಯಮಗಳ ಮಾಲೀಕರೂ ಇದರ ಹೊಣೆ ಹೊರಬೇಕು..ಈ ಸಂದರ್ಭದಲ್ಲಿ ಪ್ರಜಾವಾಣಿ ಮಾಲಿಕರನ್ನು ನಾವು ನೆನಪು ಮಾಡಿಕೊಳ್ಳಬೇಕು..ಸಾಮಾಜಿಕ ಬದ್ಧತೆಯ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದವರು ಈ ಪತ್ರಿಕೆಯ ಮಾಲಿಕರು.. ಕರ್ನಾಟಕದ ಎಲ್ಲ ಜನಪರ ಮನುಷ್ಯಪರ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಬಂದವರು. ಹೀಗಾಗಿ ಪ್ರಜಾವಣಿ ಉಳಿದ ಪತ್ರಿಕೆ ಮತ್ತು ಪತ್ರಕರ್ತರಷ್ಟು ಕೆಟ್ಟು ಹೋಗಿಲ್ಲ. ಇನ್ನೂ ಕೂಡ ಸಾಮಾಜಿಕ ಬದ್ಧತೆ ಇರುವುದು ಪ್ರಜಾವಾಣಿ ಮಾತ್ರ..


Thursday, October 27, 2022

ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..


 ಜಾತ್ಯಾತೀತ ಜನತಾ ದಳ ತನ್ನ ಪಂಚರತ್ನ ಯಾತ್ರೆಗೆ ಚಾಲನೆ ನೀಡಿದೆ. ನಿನ್ನೆ ಜೆಡಿಎಸ್ ನ ರಾಷ್ಟೀಯ ಕಾರ್ಯಕಾರಿಣಿ ಸಭೆ ನಡೆದ ಸಂದರ್ಭದಲ್ಲಿ ಯಾತ್ರೆಗೆ ಚಾಲನೆ ನೀಡುವ ಕೆಲಸವೂ ನಡೆಯಿತು. ೧೩ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಕಾರ್ಯಕಾರಿಣಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಷ್ಟೀಯ ಅಧ್ಯಕ್ಷರನ್ನಾಗಿ ಮುಂದುವರಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು,

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜಕೀಯ ನಿಲುವು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಪಂಚರತ್ನ ಯಾತ್ರೆಗೆ ಪಂಚರತ್ನ ರಥಯಾತ್ರೆ ಎಂದು ಕರೆಯಲಾಗಿದೆ.. ಹಾಗೆ ಮುಳಬಾಗಿಲಿನ ಕುರುಡುಮಲೆ ದೇವಾಲಯದಿಂದ ಪಂಚರತ್ನ ಯಾತ್ರೆ ನಡೆಯಲಿದೆ. ಅಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು ೩೫ ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಹಾಗೆ ಈ ರಥ ಯಾತ್ರೆಯ ಜೊತೆಗೆ ಕುಮಾರಸ್ವಾಮಿಯವರ ಯಶಸ್ವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೂಡ ನಡೆಯಲಿದೆ. ಕುಮಾರಸ್ವಾಮಿ ಅವರ ಪ್ರಕಾರ ಈ ಯಾತ್ರೆ ಜೆಡಿಎಸ್ ಪಕ್ಷಕ್ಕೆ ಒಂದು ಸವಾಲು ಈ ಮಾತನ್ನು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಈ ಬಗ್ಗೆ ಯಾವ ಸಂಶಯವೂ ಬೇಕಾಗಿಲ್ಲ. ಇದು ಜೆಡಿಎಸ್ ಪಕ್ಷಕ್ಕೆ ಸವಾಲಿನ ದಿನಗಳೇ.  ಮುಂದಿನ ೬ ತಿಂಗಳಿನಲ್ಲಿ ಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಶಕ್ತಿಯಿಂದ ಸರ್ಕಾರ ರಚಿಸುವ ಮಾತನ್ನು ಅವರು ಹೇಳಿದ್ದರೂ ಅದು ಸುಲಭವಂತೂ ಅಲ್ಲ.  ಯಾಕೆಂದರೆ ಅವರು ಎದುರಿಸುತ್ತಿರುವ ಸವಾಲಿನ ಸ್ವರೂಪವೇ ಹಾಗಿದೆ.. ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಜನಮನ ಗೆಲ್ಲಲು ತಮ್ಮದೇ ಚುನಾವಣೆ ತಂತ್ರವನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ರಾಜ್ಯ ಬಿಜೆಪಿ ಹಿಂದುತ್ವದ ಅಜೆಂಡಾದೊಂದಿಗೆ ಮುನ್ನುಗ್ಗುತ್ತಿದೆ. ಪ್ರತಿ ಹಂತದಲ್ಲೂ ಬಹುಸಂಖ್ಯಾತ ಮತಗಳನ್ನು ಕ್ರೋಡೀಕರಿಸತೊಡಗಿದೆ. ಹಿಜಾಬ್ ಮತ್ತು ಮುಸ್ಲೀಂ ವ್ಯಾಪಾರಿಗಳ ನಿಷೇಧದಂತಹ ವಿಚಾರಗಳನ್ನು ತಂದು ಮತದಾರರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.. ಹಾಗೆ ಈಗ ಅರೇಬಿಕ್ ಶಾಲೆಗಳಲ್ಲಿ ಪರಿಶೀಲಿಸುವುದು, ಮದ್ರಾಸ್ ಗಳ ಮೇಲೆ ನಿಯಂತ್ರಣ ಹೇರುವ ವಿಚಾರವನ್ನು ಜನರ ಮುಂದಿಟ್ಟಿದೆ. ಈ ನಡುವೆ ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುವ ನಾಟಕ ಮಾಡುತ್ತಿದೆ.  ಮೀಸಲಾತಿ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ, ಆ ಮೂಲಕ ದಲಿತರಲ್ಲಿ ವಾಲ್ಮೀಕಿ ಜನಾಂಗದ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ, ಹಿಂದುತ್ವ ಮತ್ತು ಅಭಿವೃದ್ಧಿ ಮೀಸಲಾತಿಯ ವಿಚಾರಗಳು ಭಾರತೀಯ ಜನತಾ ಪಕ್ಷದ ಟ್ರಂಪ್ ಕಾರ್ಡ್ ಆಗಿವೆ.

ಕಾಂಗ್ರೆಸ್ ತನ್ನ ಯಾತ್ರೆಗಳ ಮೂಲಕ ಸಂಘಟನೆಯನ್ನು ಬಲಪಡಿಸುವ ಮತ್ತು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಿದೆ.. ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯವರ ಇಮೇಜ್ ಬದಲಿಸುವ ಕೆಲಸವನ್ನು ಮಾಡಿದೆ. ಅವರು ಗಂಭೀರ ರಾಜಕಾರಣಿ ಅಲ್ಲ ರಜಾ ಕಾಲದ ಪಪ್ಪೂ ಎಂಬ ಬಿಜೆಪಿ ಮತ್ತು ಸಂಘಪರಿವಾರದ ಅಪಪ್ರಚಾರವನ್ನು  ಹಿಮ್ಮೆಟ್ಟಿಸುವ ಕೆಲಸವನ್ನೂ ರಾಹುಲ್ ಗಾಂಧಿ ಮಾಡಿದ್ದಾರೆ. ತಾವು ಈ ದೇಶ ಒಪ್ಪುವ ನಾಯಕ ಎಂದು ಪ್ರತಿಬಿಂಬಿಸುವ ಕೆಲಸವನ್ನೂ ರಾಹುಲ್ ಮಾಡುತ್ತಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಸಾಮಾನ್ಯ ಜನರ ಜೊತೆ ಅವರು ಬೆರೆಯುತ್ತಿರುವ ರೀತಿ ಅವರಲ್ಲಿ ಬದಲಾಗುತ್ತಿರುವ ನಾಯಕನ ಲಕ್ಷಣಗಳು ಕಾಣತೊಡಗಿದೆ.  ಪಾತಾಳಕ್ಕೆ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ತಡೆದು ನಿಲ್ಲಿಸುವ ಕೆಲಸವನ್ನು ಈ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ.

ಇನ್ನೂ ರಾಜ್ಯ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಮೇಕೆದಾಟೃ ಯಾತ್ರೆಯ ನಂತರ ಪಕ್ಷಕ್ಕೆ ಬಲ ತುಂಬುವ ಸಂಘಟನೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ರಾಜ್ಯದ ಇಬ್ಬರು ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ.ಶಿವಕುಮಾರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆಗೆ ಕಾರಣವಾಗಿದ್ದು ನಿಜ. ಆದರೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಇದಕ್ಕೆ ತೇಪೆ ಹಾಕುವ ತಾತ್ಕಾಲಿಕವಾಗಿಯಾದರು ಯುದ್ಧ ವಿರಾಮ ಘೋಷಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಷ್ಟೀಯ ಅಧ್ಯಕ್ಷರಾಗಿರುವುದು ರಾಜ್ಯದ ದಲಿತ ಮತದಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು. ಸ್ವಲ್ಪ ಮಟ್ಟಿಗೆ ಸೀಮಿತ ಪರಿಣಾಮವನ್ನು ಇದು ಬೀರಬಹುದು.

ಇಂತಹ ಸ್ಥಿತಿಯಲ್ಲಿ ಜೆಡಿಎಸ್ ಸ್ಥಿತಿ ಏನು ? ಜಿಏದಿಎಸ್ ಪಕ್ಷದ ಮತ ಬ್ಯಾಂಕ್ ಯಾವುದು ? ನಿಜ ಹಳೇ ಮೈಸೂರು ಪ್ರದೇಶದಲ್ಲಿ ಈ ಪಕ್ಷ ಬಲವಾಗಿದೆ. ಆದರೆ ಇದು ಮಾತ್ರ ಸಾಕೆ ?  ೧೦೦ ಕ್ಕಿಂತ ಹೆಚ್ಚು ಸ್ಥಾನ ಪಡೆಯುವ ಜೆಡಿಎಸ್ ಗುರಿ ತಲುಪಲು ಇಷ್ಟೆ ಸಾಕೆ ? ಇಲ್ಲ. ಇದು ಸಾಲದು.. ಉತ್ತರ ಕರ್ನಾಟಕ ಪ್ರದೇಶದಲ್ಲಿ  ಪಕ್ಷವನ್ನು ಬಲಪಡಿಸದ ಹೊರತೂ ಈ ಗುರಿ ಗಗನ ಕುಸುಮವಾಗಿಯೇ ಉಳಿಯುತ್ತದೆ.

ಹೀಗಾಗಿ ಜೆಡಿಎಸ್ ಮೊದಲ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ಸ್ಪಷ್ಟಪಡಿಸಬೇಕು.. ತಾವು ಯಾವುದರ ಪರ ಯಾವುದಕ್ಕೆ ವಿರೋಧ ಎಂಬುದು ಸ್ಪಷ್ಟವಾಗದಿದ್ದರೆ ಜನರನ್ನು ಆಕರ್ಶಿಸುವುದು ಕಷ್ಟ. ಅವರಾದರೂ ಸರಿ, ಇವರಾದರೂ ಸರಿ ಎಂಬ ಸಮಯಸಾಧಕ ರಾಜಕಾರಣ ನಿರೀಕ್ಷಿತ ಫಲವನ್ನು ನೀಡಲಾರದು.. ಇದಕ್ಕಿರುವ ದಾರಿ ಎಂದರೆ ಜನತಾ ಪರಿವಾರದ ಲೀಗಸಿಯನ್ನು ಮುಂದುವರಿಸುವುದೇ ಆಗಿದೆ.

ಆದರೆ ಜೆಡಿಎಸ್ ನ ಈ ಯಾತ್ರೆಯ ಹೆಸರು ಮತ್ತು ಅದು ಪ್ರತಿನಿಧಿಸುವ ತಾತ್ವಿಕತೆ ಯಾಕೋ ಅನುಮಾನಕ್ಕೆ ಕಾರಣವಾಗಿದೆ.. ರಥ ಯಾತ್ರೆ ಎನ್ನುವುದೇ ಬಿಜೆಪಿಯ ಪರಿಕಲ್ಪನೆ.. ಇದು ಎಲ್, ಕೆ. ಅಡ್ವಾಣಿಯವರ ರಥ ಯಾತ್ರೆಯನ್ನು ನೆನಪಿಸುತ್ತದೆ. ಹಾಗೆ ರಥ ಯಾತ್ರೆ ಸಾಮಾನ್ಯರ ಯಾತ್ರೆಯಲ್ಲ. ರಥದಲ್ಲಿ ಕುಳಿತುಕೊಳ್ಳುವವನು ಮಹಾರಾಜ. ಸಾಮಾನ್ಯ ರಸ್ತೆಯಲ್ಲಿರುತ್ತಾನೆ. ಆಥನಿಗೆ ರಥ ಎನ್ನುವುದೇ ಭಯವನ್ನು ಉಂಟು ಮಾಡುತ್ತದೆ.. ಇದು ಸಾಮಾನ್ಯ ಜನರನ್ನು ಕನೆಕ್ಟ್ ಮಾಡುವುದಿಲ್ಲ..

ಒಂದಂತೂ ನಿಜ..ಜೆಡಿಎಸ್ ಮುಂದಿನ ದಾರಿ ಸುಲಭವಾಗಿಲ್ಲ..

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?


 ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಿತಾ ಈ ಅಮಾನವೀಯ ಘಟನೆ ?

ನೆಲದ ಮೇಲೆ ಬಿದ್ದ ಅನ್ನವನ್ನೇ ತಿನ್ನುವಂತೆ ಒತ್ತಡ ಹೇರಲಾಯಿತಾ ?

ಈ ಬಗ್ಗೆ ಮಠವೇ ವಿವರಣೆ ನೀಡಬೇಕು,, ಮಠದ ಭಕ್ತರೊಬ್ಬರು ಕಳುಹಿಸಿದ ವಿವರ ಇಲ್ಲಿದೆ...


ಇಂದು ಶ್ರೀಕೃಷ್ಣ ಮಠದ ಭೋಜನಾ ಶಾಲೆಯಲ್ಲಿ ಮಾನವ ಕುಲಕ್ಕೆ ಆದ ಹೀನ ಘಟನೆ,(ದಿನಾಂಕ 

24-10-2022 ಸಮಯ 2.00PM).


ನಾನು ಸುರೇಶ್ ,ಉಡುಪಿ ಜಿಲ್ಲೆಯ ಹೆಬ್ರಿಯಿಂದ.

ಈ ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯಕ್ಕೆ ನಾನು ,ನನ್ನ ಹೆಂಡತಿ,ಇಬ್ಬರು ಮಕ್ಕಳು ,ತಮ್ಮ               ಶ್ರೀ ಕ್ಷೇತ್ರದ ಭೋಜನಾ ಶಾಲೆಗೆ ಊಟ ಮಾಡಲೆಂದು ಹೋಗಿದ್ದೆವು.

ಆ ಸಮಯದಲ್ಲಿ ನನ್ನ ಮಗಳು (10 age) ಅನ್ನಕ್ಕೆ ತಟ್ಟೆ ಹಿಡಿಯುವಾಗ ಅಕಸ್ಮಾತ್ತಾಗಿ ಅನ್ನದ ಬಿಸಿ ತಡೆಯಲಾರದೆ  ಅನ್ನದ ಬಟ್ಟಲು ಕೆಳಗೆ ಬಿದ್ದು ಅನ್ನ ಪೂರ್ತಿ ಚೆಲ್ಲಿ ಹೋಯಿತು.

ಇಬ್ಬರು ಅನ್ನ ಬಡಿಸುತ್ತಿದ್ದರು.ಅದರಲ್ಲಿ ಅನ್ನ ಬಡಿಸುತ್ತಿದ್ದ ಒಬ್ಬ  ವ್ಯಕ್ತಿ(ಎತ್ತರದ ವ್ಯಕ್ತಿ,ಕೈಯಲ್ಲಿ ಶಂಖದ ಮುದ್ರೆ ಹೊಂದಿದ್ದಾನೆ).ಅವನು  ಆ ಸಮಯದಲ್ಲಿ  ನನ್ನ ಮಗಳಿಗೆ ಅನ್ನವನ್ನು ಹಾಕದೆ, ಬಿದ್ದ ಅನ್ನವನ್ನು ತಟ್ಟೆಗೆ  ಹಾಕಿಕೊಂಡು ಊಟ ಮಾಡಲು ತಾಕೀತು ಮಾಡಿದ.ನಂತರ ಸಾರು ಬಡಿಸುತ್ತಾ ಬಂದ ಸರಿಸುಮಾರು 75 age ಹಿರಿಯರು ನನ್ನ ಮಗಳ ತಟ್ಟೆ ಖಾಲಿ ಇರುವುದನ್ನು ನೋಡಿ ತಟ್ಟೆ ಹಿಡಿಕೊಂಡು ಆತ ಇರುವಲ್ಲಿ ಅನ್ನ ಹಾಕಿ ಕೊಡಲು ಹೇಳಿದ್ದಾರೆ .ಆದರೆ ಅವನು ಅನ್ನವನ್ನು ಹಾಕದೆ ಅವರ ಬಳಿಯೂ ಕೆಳಗೆ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದಾನೆ.ಆ ಹಿರಿಯರು ವಿಧಿ ಇಲ್ಲದೆ ಖಾಲಿ ತಟ್ಟೆಯೊಂದಿಗೆ ಬಂದಿದ್ದಾರೆ.ನಂತರ ಎರಡನೇ ಬಾರಿ ಅವನೇ ಅನ್ನ ತಂದಾಗ ಖಾಲಿ ತಟ್ಟೆ ನೋಡಿ ಅವನು ಅನ್ನ ಹಾಕುವ ರೀತಿ ಇರಲಿಲ್ಲ ನಾವು ಹೇಳಿದ್ದಕ್ಕೆ ಅನ್ನ ಹಾಕಿದ್ದಾನೆ.

ನಂತರ ಅವನ ಬಳಿ ನಿನಗೆ ಮನುಷ್ಯತ್ವ ಇಲ್ವ,ಒಂದು ಮಗುವಿಗೆ ಬಿದ್ದ ಅನ್ನ ತಿನ್ನಲು ಹೇಳುತಿಯಲ್ಲ  ಮತ್ತು ಆ ಹಿರಿಯರು ಅಷ್ಟು  ದೂರ ನಿನ್ನ ಹತ್ತಿರ ಬಂದು ಅನ್ನ ಹಾಕು ಅಂತ ತಟ್ಟೆ ಕೊಟ್ಟರೂ ನೀನು ಅನ್ನ ಹಾಕದೆ ಅವರನ್ನು ವಾಪಾಸು ಕಳುಸಿದಿಯಲ್ಲ  ಅಂತ ನಾವು ಕೇಳಿದಾಗ ಅವನು ನಮಗೂ ಮಾತಾಡೋಕು ಬರುತ್ತೆ ಆ ಮೇಲೆ ಸಿಗಿ ನಿಮ್ಮ ಹತ್ತಿರ ಮಾತಾಡುತ್ತೇನೆ ಅಂತ ಗದರಿಸಿದ್ದಾನೆ.

ನಮಗೆ ತುಂಬಾ ಬೇಜಾರು ಆಗಿ ಭೋಜನಾ ಶಾಲೆಯ ಆಡಳಿತ ಮಂಡಳಿಯಲ್ಲಿ ನಡೆದ ವಿಷಯದ ಬಗ್ಗೆ ಹೇಳಿದ್ದೇವೆ.ಅವರು ವಿಚಾರಿಸುತ್ತೇವೆ ಎಂದು ಹೇಳಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನನ್ನ ಮಗಳೆ ಅನ್ನವನ್ನು ಬೀಳಿಸಿಕೊಂಡು ಕೆಳಗೆ ಹಾಕಿ ಕೊಂಡಿದ್ದಾಳೆ ಅಂದ್ರುನು ನಾನು ಒಪ್ಪಿಕೊಳ್ಳುತ್ತೇನೆ.ಆದರೆ ನನಗೆ ಬೇಜಾರು ಆಗಿದ್ದು ಎಲ್ಲಿ ಎಂದರೆ ಸಾವಿರಾರು ಜನ ಓಡಾಡುವ ಜಾಗದಲ್ಲಿ ಬಿದ್ದ ಅನ್ನವನ್ನು ಬಾಚಿಕೊಂಡು ತಟ್ಟೆಗೆ ಹಾಕಿಕೊಂಡು ತಿನ್ನಲು ಹೇಳಿದ್ದು ಮತ್ತು ಆ ಹಿರಿಯರು ಅಷ್ಟು ದೂರ ಹೋಗಿ ತಟ್ಟೆಗೆ ಅನ್ನ ಹಾಕು ಅಂತ ಹೇಳಿದರೂ ಅವನು ಅನ್ನ ಹಾಕದೇ ಬಿದ್ದ ಅನ್ನವನ್ನು ಹಾಕಿಕೊಂಡು ತಿನ್ನಲು ಹೇಳಿದ್ದು. ಆ ಸಮಯದಲ್ಲಿ ಎಲ್ಲರೂ ಊಟ ಮಾಡುತ್ತಿದ್ದಳು.ಆದರೆ ನನ್ನ ಮಗಳಿಗೆ ಊಟ ಇಲ್ಲದೇ ಸುಮ್ಮನೆ ಕುಳಿತ್ತಿದ್ದಳು.ಅವನೇ ನನ್ನ ಮಗಳ ಸ್ಥಾನದಲ್ಲಿ ಇದ್ದಿದ್ದರೆ ಅವನು ಸಾವಿರಾರು ಜನರು ಓಡಾಡುವ ಜಾಗದಲ್ಲಿ ಬಿದ್ದ ಅನ್ನವನು ಬಾಚಿ ಹಾಕಿಕೊಂಡು ತಿನ್ನುತ್ತಿದ್ದನೇ? .ಯಾರಿಗೂ ಕೂಡ ಈ ರೀತಿ ಆಗಬಾರದು.ಮನಸ್ಸಿಗೆ ತುಂಬಾ ಬೇಜಾರಾಯಿತು.ಅವನಿಗೆ ಮನುಷ್ಯತ್ವವೇ ಇಲ್ಲ ಅಂತ ಅನಿಸುತ್ತೆ.ಮಠದವರು ಭಕ್ತಾದಿಗಳಿಗೆ ಉತ್ತಮ ಭೋಜನವನ್ನು ನೀಡುತ್ತಿದ್ದಾರೆ ಆದರೆ ಇಂತ ನೀಚ ಮನಸ್ತಿತಿ ಇರುವ ಇವನಿಗೆ ಅನ್ನ ಬಡಿಸುವ ವಿಚಾರದಲ್ಲಿ ಅಹಂಕಾರ ದರ್ಪ.ಇವನ ವರ್ತನೆ ನೋಡಿದರೆ ಇವನ ಮನೆಯ ಊಟ ನಮಗೆ ಬಡಿಸಿದ ಹಾಗೆ ಇದೆ.ಊಟ ಹಾಕುವ ವಿಚಾರದಲ್ಲಿ ಅವನು ನಡೆದುಕೊಂಡಿದ್ದು ತುಂಬಾ ಬೇಜಾರಾಯಿತು.ಅವನ ರೀತಿಯಲ್ಲಿ ನೋಡಿದರೆ ಇದೊಂದು ಪನಿಶ್ಮೆಂಟ್ ರೀತಿ ಇತ್ತು.ಅವನ ಜಾಗದಲ್ಲಿ ಬೇರೆ ಯಾರೂ ಇದ್ದರೂ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ.ಅಲ್ಲಿದ್ದ ಕೆಲವರು ಈ ವಿಷಯ ನೋಡಿದ ಬಳಿಕ ರಾಜ್ಯಸರಕಾರಕ್ಕೆ ,ಪ್ರಧಾನಿಗೆ,ಡಿಸಿ ಗೆ,ಹೈಕೋರ್ಟ್ ಜಡ್ಜ್ ಗೆ ಪತ್ರ ಬರೆಯಿರಿ ಎಂದು ಸಲಹೆ ಕೊಟ್ಟಿದ್ದಾರೆ  .ಆದರೆ ನನ್ನ ಮನಸ್ಸಿಗೆ ಆದ ನೋವನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೇನೆ.ನನ್ನ  ಮಗಳಿಗೆ ಆದ ರೀತಿ ಬೇರೆ ಯಾರಿಗೂ ಆಗೋದು ಬೇಡ.ಅಂತಹ ದುಷ್ಟವ್ಯಕ್ತಿಯನ್ನು  ಶ್ರೀಕೃಷ್ಣ ಪರಮಾತ್ಮ ಮತ್ತು ಮುಖ್ಯಪ್ರಾಣ ನೋಡಿಕೊಳ್ಳಲಿ...............

ಕೇಜ್ರಿವಾಲ್. ಬಿಜೆಪಿ ಬುಡಕ್ಕೆ ಹಿಂದುತ್ವದ ಬಾಂಬ್..!


 ಅರವಿಂದ್ ಕೇಜ್ರಿವಾಲ್...

ಸರ್ಕಾರಿ ನೌಕರಿಯನ್ನು ಬಿಟ್ಟು ಸಾಮಾಜಿಕ ಬದುಕಿಗೆ ಕಾಲಿಟ್ಟವರು.. ಅಣ್ಣಾ ಹಜಾರೆಯ ಜೊತೆ ಕೈಜೋಡಿಸಿ ಅವರ ಜೊತೆ ಹೋರಾಟದ ಹಾದಿಯಲ್ಲಿ ಮುನ್ನಡೆದವರು.. ಆ ಅ ಸಮಯದಲ್ಲಿ ಅವರು ದೆಹಲಿಯ ಮುಖ್ಯಮಂತ್ರಿಯಾಗಬಹುದು ಎಂದು ಯಾರೂ ನಿರೀಕ್ಷಿಸರಲಿಲ್ಲ. ಹಾಗೆ ಪಂಜಾಬ್ ರಾಜ್ಯದ ಅಧಿಕಾರವನ್ನು ಆಮ್ ಆದ್ಮಿ ಪಾರ್ಟಿ ಪಡೆದಾಗ ಹಲವರಿಗೆ ಆಶ್ಚರ್ಯವಾಗಿತ್ತು,, ಬುಶ್ ಶರ್ಟ್ ಧರಿಸಿ ಆಗಾಗ ಕೆಮ್ಮುತ್ತ ಗಂಟಲು ಸರಿಮಾಡಿಕೊಂಡು ಮಾತನಾಡುವ ಕೇಜ್ರಿವಾಲ್ ಅಂತಹ ಜನಪ್ರಿಯ ನಾಯಕ ಎಂದೂ ಅನ್ನಿಸಿರಲಿಲ್ಲ.

ಆದರೆ ದೆಹಲಿಯಲ್ಲಿ ಅವರು ನೀಡಿದ ಆಡಳಿತ ಮತ್ತು ಅವರ ಆದ್ಯತೆಗಳು ಸಾಂಪ್ರದಾಯಿಕ ರಾಜಕಾರಣಕ್ಕೆ ಸಡ್ದು ಹೊಡೆದಂತೆ ಇತ್ತು. ಅವರು ಭಾರತದ ರಾಜಕಾರಣದ ವ್ಯಾಖ್ಯೆಯನ್ನು ಬದಲಿಸುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು.. ಪ್ರಾಯಶಃ ದೆಹಲಿಯ ಜನ ಕೂಡ ಹಾಗೆ ಅಂದುಕೊಂಡಿದ್ದರು. ಶಿಕ್ಷಣ ಆರೋಗ್ಯದಂತಹ ಜನರ ಮೂಲಭೂತ ಅವಶ್ಯಕತೆಗಳತ್ತ ಅವರು ನೀಡುತ್ತಿದ್ದ ಲಕ್ಷ್ಯ ಮತ್ತು ಆದ್ಯತೆ ಬೆರಗು ಮೂಡಿಸುವಂತೆ ಇತ್ತು.. ಆದರೆ ಅವರ ಒಳಗೆ ಒಬ್ಬ ರಾಜಕಾರಣಿ ಇದ್ದ. ಅವನಲ್ಲಿ ರಾಜಕೀಯ ಚಾಕಚಕ್ಯತೆ ಇತ್ತು. ಬದ್ಧತೆಗಿಂತ ರಾಜಕೀಯ ಗೆಲವು ಅವನಿಗೆ ಮುಖ್ಯವಾಗಿತ್ತು..

ಹಾಗೆ ನೋಡಿದರೆ ಅಣ್ಣಾ ಹಜಾರೆ ಕೂಡ ಮುಖವಾಡ ಧರಿಸಿದ್ದರು. ಆ ಮುಖವಾಡದ ಹಿಂದಿದ್ದ ನೈಜ ಮುಖ ಹಿಂದುತ್ವದ ಮುಖವಾಗಿತ್ತು.. ಬೆಜೆಪಿಗೆ ಸಹಾಯ ಮಾಡುವ ಹೋರಾಟ ಅವರದಾಗಿತ್ತು.. ಅವರು ನಡೆಸಿದ ಎಲ್ಲ ಹೋರಾಟಗಳ ಹಿಂದೆ ಬಿಜೆಪಿಯ ವರದ ಹಸ್ತ, ಲೋಕಪಾಲ್ ವ್ಯವಸ್ಥೆಗಾಗಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ವ್ಯವಸ್ಥೆಯ ಹಿಂದೆ ಬಿಜೆಪಿಯ ಉದ್ಯಮಪತಿಗಳ ಬೆಂಬಲವಿತ್ತು.. ಆದರೆ ಇದಕ್ಕೆ ಹೆಚ್ಚಿನ ಮಹತ್ವವವನ್ನು ಯಾರೂ ನೀಡಲೇ ಇಲ್ಲ. ಆಣ್ಣಾ ಹಜಾರೆ ಮಹಾತ್ಮಾ ಗಾಂಧಿಯವರ ನಂತರದ ಮಹತ್ವದ ಹೋರಾಟಗಾರ ಎಂಬಂತೆ ಮಾಧ್ಯಮಗಳು ಬಿಂಬಿಸಿದವು.. ಇದರ ಹಿಂದೆಯೂ ಬಿಜೆಪಿಯ ಕೈವಾಡವಿತ್ತು.

ಈ ಎಲ್ಲ ಸಂದರ್ಭಗಳಲ್ಲಿ ಅರವಿಂದ್ ಕೇಜ್ರಿವಾಲ್ ರಾಮನ ಮುಂದೆ ಹನುಮಂತ ತಲೆ ಬಗ್ಗಿಸಿ ಕುಳಿತ ಹಾಗೆ ಕೇಜ್ರಿವಾಲ್ ಕುಳಿತಿದ್ದರು..ಅಣ್ಣಾ ಹಜಾರೆಯ ಈ ಮುಖವಾಡದ ಹೋರಾಟ ತಿಳಿಯದಷ್ಟು ಕೇಜ್ರಿವಾಲ್ ಮೂರ್ಖರಾಗಿರಲಿಲ್ಲ. ಅವರು ತಮ್ಮ ಸಮಯಕ್ಕಾಗಿ ಕಾಯುತ್ತಿದ್ದರು. ಯಾಕೆಂದರೆ ಅವರೂ ಸಹ ಮುಖವಾಡದ ವ್ಯಕ್ತಿಯಾಗಿದ್ದರು.

ಅವರು ದೆಹಲಿ ಮುಖ್ಯಮಂತ್ರಿಯಾಗುವ ಹೊತ್ತಿಗೆ ಅವರ ಜೊತೆಗಿದ್ದ ಹಲವರು ಅವರನ್ನು ತೊರೆದರು. ಯೋಗೇಂದ್ರ ಯಾದವ್ ಅವರಂತವರು ಕೇಜ್ರಿವಾಲ್ ಅವರನ್ನು ಬಹುಬೇಗ ಅರ್ಥಮಾಡಿಕೊಂಡಿದ್ದರು.. ಆದರೆ ಅಷ್ಟರಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದರು.. ದೆಹಲಿಯ ಸರ್ಕಾರಿ ಶಾಲೆಗಳು ತಮ್ಮ ರೂಪ ಬಣ್ಣವನ್ನು ಬದಲಿಸಿದ್ದವು.. ಖಾಸಗಿ ಶಾಲೆಗಳ ಜೊತೆ ಪೈಪೋಟಿ ನೀಡುವಷ್ಟು ಸರ್ಕಾರಿ ಶಾಲೆಗಳು ಬದಲಾದವು. ಸರ್ಕಾರಿ ಆಸ್ಪತ್ರೆಗಳು ಸುಧಾರಿಸಿದವು.. ದೇಶದ ಸಾಮಾನ್ಯ ಜನ ಅರವಿಂದ್ ಕೇಜ್ರಿವಾಲ್ ಅವರತ್ತ ಆಸೆ ಗಣ್ಣುಗಳಿಂ ನೋಡತೊಡಗಿದರು.. ದೇಹಲಿಗೆ ಭೇಟಿ ನೀಡುವ ರಾಜಕಾರಣಿಗಳು ಸಾಮಾನ್ಯ ಜನ ಅಲ್ಲಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಯಿತು.

ಕೇಜ್ರಿವಾಲ್ ತಮ್ಮ ವ್ಯಕ್ತಿತ್ವಕ್ಕಿಂತ ದೊಡ್ಡದಾಗಿ ಬೆಳೆಯತೊಡಗಿದರು...ಆದರೆ ಆಗಲೇ ಅವರು ಸಾಫ್ಟ್ ಹಿಂದುತ್ವದ ಆರಾಧಕರಾಗಿದ್ದರು. ದೆಹಲಿಯಲ್ಲಿ ಹಿಂಸೆ ತಾಂಡವಾಡುತ್ತಿದ್ದಾಗ ಅವರು ಹಿಂಸಾಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಹಿಂಸೆಯಿಂದ ನಲುಗಿದ ಜನರಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಲಿಲ್ಲ...ಪ್ರತಿಷ್ಟಿತ ಜವಾಹರ್ ನೆಹರೂ ವಿಶ್ವಾವಿದ್ಯಾಲಯವನ್ನು ಕೇಸರಿಕರಣ ಮಾಡುವ ಪ್ರಕ್ರಿಯೆಗಳು ನಡೆಯುವಾಗ ಅವರ ಬಾಯಿಯಿಂದ ಯಾವ ಮಾತೂ  ಬರಲಿಲ್ಲ. ಜೊತೆಗೆ ಅವರು ಬಿಜೆಪಿಯ ಎಜೆಂಡಾವನ್ನು ಅನುಷ್ಠಾನಗೊಳಿಸುವುದರಲ್ಲಿ ನಿರತರಾದರು..

ಕೇಂದ್ರ ಪ್ರಭುತ್ವ ದೇವಾಲಯಗಳನ್ನು ನಿರ್ಮಿಸಲು ಆದ್ಯತೆ ನೀಡಿದರೆ, ಕೇಜ್ರೀವಾಲ್ ಈ ದೇವಾಲಯಗಳಿಗೆ ಭಕ್ತರನ್ನು ಸರಬರಾಜು ಮಾಡುವ ಯೋಜನೆಗಳನ್ನು ರೂಪಿಸತೊಡಗಿದರು, ವಯಸ್ಕರಿಗೆ ಉಚಿತ ತೀರ್ಥಯಾತ್ರೆ ಮಾಡಿಸತೊಡಗಿದರು..

ಕೇಜ್ರಿವಾಲ್ ಬದಲಾಗಿರಲಿಲ್ಲ. ಅವರು ಇದ್ದುದೇ ಹಾಗಾಗಿತ್ತು.

ಅವರ ಸಂಪುಟ ಸದಸ್ಯರ ಮೇಲೆ ಬಂದ ಭ್ರಷ್ಟಾಚಾರದ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಅದು ರಾಜಕೀಯ ಪ್ರೇರಿತ ಆರೋಪಗಳು ಇರಬಹುದು.. ಆದರೆ ಅಷ್ಟರಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷದ ಅಪಾಯ ಅರಿವಾಗಿತ್ತು.. ಅಭಿವೃದ್ಧಿಯ ಮಾತನಾಡುತ್ತ ಹಿಂದು ಮತಗಳನ್ನು ಅವರು ಕ್ರೋಡಿಕರಿಸುತ್ತಿರುವ ರೀತಿಯಿಂದ ಬಿಜೆಪಿ ಎಚ್ಚರಗೊಂಡಿತು..ಅಷ್ಟರಲ್ಲಿ ದೆಹಲಿ ಪಂಜಾಬ್ ನಂತರ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ ಗೂ ಕಾಲಿಟ್ಟಾಗಿತ್ತು.. ಅಲ್ಲಿಯೂ ಜನ ಆಮ್ ಆದ್ಮಿ ಪಕ್ಷದತ್ತ ನೋಡತೊಡಗಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಹಿಂದೂ ಮತ ಬ್ಯಾಂಕ್ ಅನ್ನು ಕೇಜ್ರಿವಾಲ್ ಪಕ್ಷ ಒಡೆಯಬಹುದು ಎಂಬ ಆತಂಕ ಬಿಜೆಪಿಯದು..

ಅರವಿಂದ್ ಕೇಜ್ರಿವಾಲ್ ತಮ್ಮ ಮೃದು ಹಿಂದುತ್ವದ ಅಜೆಂಡಾವನ್ನು ಪರಿಣಾಮಕಾರಿಯಾಗಿ ಜಾರಿಗೆ ತರತೊಡಗಿದರು..ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ ಎಂಬ ಘೋಷಣೆಯನ್ನು ಕೂಗಿದರು. ರಾಮ ರಾಜ್ಯದ ಮಾತನಾಡತೊಡಗಿದರು. ಕೃಷ್ಣನನ್ನೂ ನೆನಪು ಮಾಡಿಕೊಳ್ಳತೊಡಗಿದರು..

ಬಿಜೆಪಿ ಕೇಜ್ರಿವಾಲ್ ಮೇಲೆ ಸತತ ದಾಳಿಯನ್ನು ಮುಂದುವರಿಸಿತು. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅವರ ಬಾಯಿ ಮುಚ್ಚಿಸಲು ಯತ್ನ ನಡೆಸಾಲಾಯಿತು.. ಆದರೆ ಇದೆಲ್ಲ ನಿರೀಕ್ಷಿತ ಪರಿಣಾಮ ನೀಡಲಿಲ್ಲ. ಸಚಿವ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸುವ ಯತ್ನವನ್ನೂ ಮುಂದುವರಿಸಲಾಯಿತು..

ಈಗ ಅರವಿಂದ್ ಕೇಜ್ರಿವಾಲ್ ಹಿಂದೂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟಿದ್ದಾರೆ. ಅದಕಾಗ್ಗಿ ಅವರು ಯಾವ ಹಂತವನ್ನು ತಲುಪಿದ್ದಾರೆ ಎಂದರೆ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಮ್ಮ ಸಹೋದ್ಯೋಗಿ ಗೌತಮ್ ಅವರನ್ನು ಸಂಪುಟದಿಂದ ಹೊರಹಾಕಿದ್ದಾರೆ.. ಹಿಂದೂಗಳ ಮನವೊಲಿಕೆಗೆ ಏನನ್ನಾದರೂ ಮಾಡಲು ಅವರು ಸಿದ್ದರಾಗಿದ್ದಾರೆ..

ಅವರು ಇತ್ತೀಚಿಗೆ ನೀಡಿದ ಒಂದು ಹೇಳಿಕೆಯನ್ನೇ ಗಮನಿಸಿ.. ನಮ್ಮ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರವನ್ನು ಮುದ್ರಿಸಬೇಕು ಎಂಬ ಅವರ ಹೇಳಿಕೆ ಬಿಜೆಪಿ ಒಳಗೆ ತಲ್ಲಣವನ್ನು ಸೃಷ್ಟಿಸಿದೆ..ಬಿಜೆಪಿಯ ವಕ್ತಾರರು ಕೇಜ್ರಿವಾಲ್ ಅವರನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಆದರೆ ಕೇಜ್ರಿವಾಲ್ ಬಿಜೆಪಿಯ ಬಾಣವನ್ನು ಅವರ ಮೇಲೆ ತಿರುಗಿಸಿಬಿಟ್ಟಿದ್ದಾರೆ..ಭಾರತದ ನೋಟುಗಳ ಮೇಲೆ ಹಿಂದೂ ದೇವರ ಚಿತ್ರ ಹಾಕಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಮತ್ತು ಕೇಂದ್ರ ಪ್ರಭುತ್ವ ತಿರಸ್ಕರಿಸುವಂತೆಯೂ ಇಲ್ಲ, ಒಪ್ಪಿಕೊಳ್ಳುವಂತೆಯೂ ಇಲ್ಲ. ಒಂದೊಮ್ಮೆ ಒಪ್ಪಿಕೊಂಡರೆ ಕೇಜ್ರಿವಾಲ್ ಹಿಂದೂಗಳ ಹೃದಯ ಸಾಮ್ರಾಟನಾಗುವತ್ತ ಇನ್ನೊಂದು ಹೆಜ್ಜೆಯನ್ನು ಇಟ್ಟುಬಿಡುತ್ತಾರೆ. ಹೀಗಾಗಿ ಬಿಜೆಪಿ ಅಡಗತ್ತರಿಯಲ್ಲಿ ಸಿಲುಕಿಕೊಂಡ ಅಡಕೆಯಂತಾಗಿದೆ..

ಈ ಮೃದು ಹಿಂದುತ್ವ ಗುಜರಾತ್ ಚುನಾವಣೆಯಲ್ಲಿ ಕೇಜ್ರಿವಾಲ್ ಅವರಿಗೆ ಲಾಭವನ್ನು ತಂದುಕೊಡಬಲ್ಲದೇ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಬಿಜೆಪಿಗೆ ದೊಡ್ಡ ತೊಡರುಗಾಲು ಎಂಬುದು ಮಾತ್ರ ನಿಜ..

ಈ ಬೆಳವಣಿಗೆ ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಿದೆ.. ಕೇಜ್ರಿವಾಲ್ ಬಿಜೆಪಿಯ ಇನ್ನೊಂದು ಮುಖ.. ಅವರ ಅಜೆಂಡಾ ಸಂಘ ಪರಿವಾರ ಮತ್ತು ಬಿಜ್ರ್ಪಿಯ ಅಜೆಂಡಾಗಿಂತ ಭಿನ್ನವಾಗಿಲ್ಲ ಎಂಬುದು

Wednesday, October 26, 2022

ಬಸವಲಿಂಗ್ ಸ್ವಾಮಿ ಹನಿಟ್ರಾಪ್ ?

 


ಬಸವಲಿಂಗ್ ಸ್ವಾಮಿ ಹನಿಟ್ರಾಪ್ ?  

ಆಸ್ತಿಗಾಗಿ ನಡೆಯಿತೇ ? ಷಡ್ಯಂತ್ರ ?

ಡೆತ್ ನೋಟ್...ನಲ್ಲಿ ಏನಿದೆ ?

ಒಳಗಿನವರೇ ಶತ್ರುಗಳು...

ಮರ್ಯಾದೆಗೆ ಹೆದರಿ ಆತ್ಮಹತ್ಯೆ,,

Saturday, October 22, 2022

ಬಲಿಯಿಂದ್ರ ಬಂದು ಬಾಗ್ಲಾಗೆ ನಿಂದಾಗ ಹೊನ್ನಂಥ ಮಳೆಯೇ ಸುರಿದಾವೂ,,,





ದೀಪಾವಳಿ ದೊಡ್ಡ ಹಬ್ಬ..ಇದನ್ನು ಕರೆಯುವುದೇ ಹಾಗೆ.. ಮೂರು ದಿನಗಳ ಈ ಹಬ್ಬದಲ್ಲಿ ಸಂಭ್ರಮ.. ನರಕ ಚತುರ್ದಶಿಯಿಂದ ಬಲಿ ಪಾಡ್ಯದವರೆಗೆ.. ಈ ಮೂರು ದಿನಗಳಲ್ಲಿ ಮೊದಲ ದಿನ ದೀಪ ಹಚ್ಚುವುದು ಮುಖ್ಯ.. ದೀಪದ ದೊಂದಿಯನ್ನು ಹಿಡಿದು ತೋಟಕ್ಕೆ ಹೋಗಿ ಹಬ್ಬವನ್ನು ಕಳಿಸುವುದು ಮೂರನೆಯ ದಿನ.. ಅಂದೇ ಗೋಪೂಜೆ ಮತ್ತು ಗೋಗಳನ್ನು ಸಿಂಗಾರ ಮಾಡಿ ಊರ ಹೊರಗೆ ಕರೆದೊಯ್ಯಲಾಗುತ್ತದೆ.. ಅಡಿಕೆ ಸರಗಳಿಂದ ಶ್ರಂಗಾರ ಮಾಡಿದ ಎಲ್ಲರ ಮನೆಯ ಗೋವುಗಳು ಊರ ಹೊರಗಿನ ಮೈದಾನಕ್ಕೆ ಬರುತ್ತವೆ. ಅಲ್ಲಿ ಗೋ ಬೆಚ್ಚುವ ಕಾರ್ಯಕ್ರಮ ನಡೆಯುತ್ತದೆ.
ನಾನು ಹೇಳಲು ಹೊರಟಿದ್ದು ಇದನ್ನಲ್ಲ.. ಬಲಿ ಬಲಿಯಾದ ಕಥೆ ಮತ್ತು ಬಿಂಗಿ ಪದ ನನ್ನನ್ನು ಹೆಚ್ಚು ಹೆಚ್ಚು ಕಾಡುತ್ತಿದೆ. ಬಾಲ್ಯದಲ್ಲಿ ದೊಡ್ಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಾಗ ಏನೂ ಅನ್ನಿಸುತ್ತಿರಲಿಲ್ಲ. ಆಗ ಕೊಟ್ಟಿಗೆಯಲ್ಲಿರುವ ದನ ಎಮ್ಮೆ ಎತ್ತುಗಳಿಗೆ ಮೈತೊಳೆಯುವುದು ಶ್ರಂಗಾರ ಮಾಡುವುದು ಅತಿ ಸಂತೋಷದ ಕೆಲಸವಾಗಿತ್ತು.. ಜೊತೆಗೆ ವಾರಾಂತ್ಯದಲ್ಲಿ ದನ ಕಾಯುವವರು ಬರದಿದ್ದಾಗ ದನ ಕಾಯಲು ಹೋಗುತ್ತಿದ್ದೆ. ಹೀಗಾಗಿ ಕೊಟ್ಟೆಗೆಯಲ್ಲಿರುವ ದನ ಎಮ್ಮೆ ಎತ್ತುಗಳ ಜೊತೆ ಆತ್ಮೀಯ ಸಂಬಂಧ ಬೆಳೆದಿರುತ್ತಿತ್ತು. ಹೀಗಾಗಿ  ಅವುಗಳ ಮೈ ತೊಳೆಯಲು ಕೊಟ್ಟಿಗೆಯಿಂದ ಹೊರಕ್ಕೆ ಕರೆದುಕೊಂಡು ಬಂದಾಗ ಅವುಗಳಿಗೂ ಸಂಭ್ರಮ.. ಮೈತೊಳೆಯುವಾಗ ಈ ಮೂಕ ಪ್ರಾಣಿಗಳು ಸಂಭ್ರಮಿಸುವ ರೀತಿ ನನಗೂ ಸಂತೋಷವನ್ನು ನೀಡುತ್ತಿತ್ತು.
ಈ ದೊಡ್ಡ ಹಬ್ಬವನ್ನು ದೊಡ್ಡ ಹಬ್ಬ ಎಂದು ಯಾಕೆ ಕರೆಯಲಾಗುತ್ತಿದೆ ? ಮೂರು ದಿನಗಳ ಕಾಲ ನಡೆಯುತ್ತಿರುವುದರಿಂದ ಇದು ದೊಡ್ಡ ಹಬ್ಬವಾಯಿತೇ ? ಅಥವಾ ಬಲಿಯಿಂದ್ರನನ್ನ್ನು ವಾಮನ ಭೂಮಿಯ ಒಳಗೆ ತುಳಿದಿದ್ದರಿಂದ ಇದನ್ನು ದೊಡ್ಡ ಹಬ್ಬ ಎಂದು kಅರೆಯಲಾಯಿತೆ ? ಈ ಪುರಾಣದಲ್ಲಿ ಇರುವ ಪ್ರಮುಖ ಪಾತ್ರ ಎರಡೇ.. ಒಬ್ಬ ವಾಮನ ಇನ್ನೊಬ್ಬ ಬಲಿಯಿಂದ್ರ.. ವಾಮನ ವಿಶ್ಣುವಿನ ಅವತಾರ.. ಆತ ಬಲಿಯಿಂದ್ರನನ್ನು ಭೂಮಿಯ ಒಳಗೆ ತಳ್ಳಲು ಬ್ರಾಹ್ಮಣವೇಶಧಾರಿಯಾಗಿ ಬರುತ್ತಾನೆ. ನೆಲ ಸಂಸ್ಕೃತಿಯನ್ನು ಪ್ರತಿನಿಧಿಸುವ ಬಲಿಯನ್ನು ಸನಾತನ ಧರ್ಮದ ಪರಿಪಾಲಕರಾದ ಬ್ರಾಹ್ಮಣ ವೇಷಧಾರಿ ವಿಷ್ಣು ನೆಲಕ್ಕೆ ಕುಸಿಯುವಂತೆ ಮಾಡುವ ಮೂಲಕ ನೆಲ ಸಂಸ್ಕೃತಿಯ ವಿರುದ್ಧ ಬ್ರಾಹ್ಮಣ ಸಂಸ್ಕೃತಿ ಜಯಿಸುವಂತೆ ಮಾಡುತ್ತಾನೆ.. ಹೀಗಾಗಿ ನೆಲ ಸಂಸ್ಕೃತಿ ಕುಸಿದಿದ್ದು ಸನಾತನ ಧರ್ಮ ಜಯಿಸಿದ್ದು ದೊಡ್ಡ ಹಬ್ಬವಾಯಿತೆ..? ನನಗೆ ಹಾಗೇ ಅನಿಸುತ್ತದೆ..
ಹೀಗೆ ನೆಲಕ್ಕೆ ತಳ್ಳಲ್ಪಟ್ಟ ಬಲಿ ವರ್ಷಕ್ಕೆ ಮೂರು ದಿನ ಭೂಮಿಗೆ ಬರಲು ವಿಷ್ಣು ಅವಕಾಶ ನೀಡುತ್ತಾನೆ..ಅಂದರೆ ಸನಾತನ ಧರ್ಮ ನೆಲ ಸಂಸ್ಕೃತಿಗೆ ವರ್ಷಕ್ಕೆ ಮೂರು ದಿನದ ವರ ನೀಡುತ್ತದೆ.. ಪ್ರಾಯಶಃ ಈ ಹಬ್ಬಕ್ಕೆ ನೆಲದ ಜೊತೆ ನೇರವಾದ ಸಂಬಂಧವಿದೆ.. ಮನೆಯಲ್ಲಿರುವ ಜಾನುವಾರುಗಳ ಪೂಜೆಯಿಂದ ಕೃಷಿ ಉಪಕರಣಗಳ ಪೂಜೆಯವರೆಗೆ...
ಬಲಿಯಿಂದ್ರನ ಮೂಲ ಹೆಸರು ಬಲಿ ಎಂದು ಇರಲಿಕ್ಕಿಲ್ಲ. ಆತ ವಾಮನನಿಗೆ ಬಲಿಯಾದ್ದರಿಂದ ಬಲಿ ಎಂಬ ಹೆಸರು ಬಂದಿರಲಿಕ್ಕೂ ಸಾಕು.. ವಿಷ್ಣು ಕುಬ್ಜ ರೂಪದಲ್ಲಿ ಬಂದು ಬಾಹುಬಲಿಯನ್ನು ಬಲಿ ಹಾಕಿದ... ಬಲಿ ನಿಜವಾದ ಅರ್ಥದಲ್ಲಿ ಬಾಹುಬಲಿಯೇ.. ಆತ ಶಕ್ತಿ ಸಂಪನ್ನನಾಗಿದ್ದ. ದೈವ ಭಕ್ತನಾಗಿದ್ದ,, ಆದರೂ ಆತ ಬಲಿಯಾದ. ಅದೂ ಬ್ರಾಹ್ಮಣ ರೂಪದಲ್ಲಿ.. ಇದನ್ನು ಇನ್ನೂ ವಿಶದೀಕರಿಸುವುದಾದರೆ ಬ್ರಾಹ್ಮಣರು ಬಲಿಯಿಂದ್ರನನ್ನು ಬಲಿ ಹಾಕಿದರು ಎಂದೂ ಹೇಳಬಹುದಲ್ಲವೆ ?  ಸನಾತನ ಧರ್ಮ ನೆಲ ಧರ್ಮದ ಮೇಲೆ ವಿಜಯ ಸಾಧಿಸುವಂತೆ ಮಾಡಲಾಯಿತು ಎಂದೂ ವ್ಯಾಖ್ಯಾನಿಸಬಹುದು ಅಲ್ಲವೆ ?
ಈ ದೇಶದ ಬಹುತೇಕ ಹಬ್ಬ ಹರಿದಿನಗಳು ನೆಲ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯ ನಡುವಿನ ಸಂಘರ್ಷವೇ ಆಗಿದೆ.  ರಾಕ್ಷಸರು ನೆಲದ ಜೊತೆ ಸಂಬಂಧ ಹೊಂದಿದವರಾದರೇ ದೇವತೆಗಳು ದೇವಲೋಕದಿಂದ ಬಂದವರಾಗಿದ್ದಾರೆ.. ಅವರು ದೇವಲೋಕದಿಂಡ ಕೆಳಗಿಳಿದು ಬಂದು ಸನಾತನ ಧರ್ಮಕ್ಕೆ ಜಯ ತ್ಂದುಕೊಟ್ಟು ತಮ್ಮ ಲೋಕಕ್ಕೆ ವಾಪಸ್ಸಾಗಿದ್ದಾರೆ..
ನಾನು ಲೇಖನದ ಪ್ರಾರಂಭದಲ್ಲಿ ಹೇಳಿದ್ದು ಬಿಂಗಿ ಕುರಿತು.. ಬಿಂಗಿ ಪದ ಹೇಳುವವರು, ಬಲಿಯನ್ನು ಇಂದ್ರ ಎಂದು ಕರೆಯುವವರು ಹಸಲರು.. ಸಮಾಜದ ಅತಿ ಕೆಳ ಹ್ಂತದಲ್ಲಿ ಇರುವ ಪರಿಶಿಷ್ಟರು..ಪರಿಶಿಷ್ಟ ಜನಾಂಗದ ಇವರಿಗೆ ತಮ್ಮ ಮನೆಯಲ್ಲಿ ಮಾಡಿದ ವಿಶೇಷ ಆದುಗೆಯನ್ನು ನೀಡುವವರು ಬ್ರಾಹ್ಮಣರು.. ಈ ಬ್ರಾಹ್ಮಣರು ಮಾಡುವ ದೊಡ್ಡ ಹಬ್ಬಕ್ಕೆ ವಿಶೇಷ ಮಂತ್ರಗಳಿಲ್ಲ.. ಬಲಿಯಿಂದ್ರನ ಸ್ತುತಿಸುವ ಮಂತ್ರಗಳೂ ಇಲ್ಲ. ಅಂದರೆ ಬಲಿ ಬಲಿಯಾದ ಬಗ್ಗೆ ಇವರಿಗೆ ಸಂತೋಷವಿದೆ. ಆತ ನೆಲ ಸಂಸ್ಖೃತಿಯನ್ನು ಪ್ರತಿನಿಧಿಸುವ ವ್ಯಕ್ತಿ ನೆಲದ ಒಳಗೆ ಸೇರಿಸಿದ್ದಿ ಅವರಿಗೆ ಸಂಭ್ರಮದ ದಿನ.
ಭಾರತಿಯಾ ಹಬ್ಬಗಳಲ್ಲಿ ಸಂಭ್ರಮವಿದೆ. ಈ ಸಂಭ್ರಮದ ಆಚರಣೆಯ ಹಿಂದೆ ಸತ್ಯ ಅಡಗಿ ಕುಳಿತಿದೆ..ಆ ಸತ್ಯ ಸನಾತನ ಧರ್ಮ ಮತ್ತು ನೆಲ ಸಂಸ್ಕೃತಿಯ ನಡುವಿನ ಸಂಘರ್ಷವೇ ಆಗಿದೆ.. ನಿಜ ಹಬ್ಬವನ್ನು ಆಚರಿಸುವ ಸಾಮಾನ್ಯ ಜನ ಇದನ್ನೆಲ್ಲ ಯೋಚಿಸುವುದಿಲ್ಲ. ಅವರಿಗೆ ಹಬ್ಬ ಮಾತ್ರ ಮುಖ್ಯ..ಆಚರಣೆ ಮಾತ್ರ ಮುಖ್ಯ.. ಆದರೆ ಪುರಾಣಗಳನ್ನು ಅರ್ಥೈಸುವ ಅದರ ಹಿಂದಿನ ಸತ್ಯವನ್ನು ತೆರೆದಿಡುವ ಕೆಲಸವೂ ಆಗಬೇಕು.. ಸತ್ಯವನ್ನು ಅನಾವರಣಗೊಳಿಸಿದ ಮೇಲೆ ಸಂಭ್ರಮಪಡುವುದು ಸರಿಯೇ ತಪ್ಪೇ ಎಂದು ತೀರ್ಮಾನಿಸಬೇಕು

ಮುಂಬರುವ ವಿಧಾನ ಸಭಾ ಚುನಾವಣೆ; ಬಿಜೆಪಿ ಗೇಮ್ ಪ್ಲಾನ್ ಬದಲು; ಗುಪ್ತ ಹಿಂದುತ್ವ ಬಹಿರಂಗ ಮೀಸಲಾತಿ ಅಸ್ತ್ರ...


 ಇನ್ನು ಆರು ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬರಲಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ರಂಗಸ್ಥಳಕ್ಕೆ ಇಳಿದಿವೆ.. ನಾಟಕ ಪ್ರಾರಂಭವಾಗಬೇಕು,, ಅಂಕದ ಪರದೆ ಮೇಲೇಳಬೇಕು.

ಇಂತಹ ಸ್ಥಿತಿಯಲ್ಲಿ ಬಿಜೆಪಿಯಲ್ಲಿ ಆತಂಕ ಪ್ರಾರಂಭವಾಗಿದೆ. ಯಾವ ವಿಚಾರವನ್ನು ಜನರ ಮುಂದೆ ತೆಗೆದುಕೊಂಡು ಹೋಗಬೇಕು,, ಯಾವುದು ಚುನಾವಣಾ ವಿಚಾರವಾಗಿ ಹೊರಹೊಮ್ಮಬಹುದು ? ಯಾವ ವಿಚಾರವನ್ನು ಜನರ ಮುಂದಿಟ್ಟು ಅವರ ಮನವೊಲಿಸಿ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿಗೆ ಸಾವಿರ ಡಾಲರ್ ಪ್ರಶ್ನೆ,, ಈ ಹಿಂದಿನ ಚುನಾವಣೆಗಳಲ್ಲಿ  ಬಿಜೆಪಿಗೆ ಇಂತಹ ಸಮಸ್ಯೆ ಇರಲಿಲ್ಲ.. ಹಿಂದುತ್ವ ಪ್ಲಸ್ ಅಭಿವೄದ್ಧಿ ಅವರ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು,, ಆದರೆ ಈಗ ಪರಿಸ್ಥಿತಿ ಇಷ್ಟು ಸುಲಭವಾಗಿಲ್ಲ..

ಹಿಂದುತ್ವದ ಅಸ್ತ್ರವನ್ನು ಬಳಸುವಷ್ಟು ಬಳಸಿ ಆಗಿದೆ. ಅದೂ ಗರಿಷ್ಠ ಫಲವನ್ನು ನೀಡಿದೆ. ಕರಾವಳಿ ಕರ್ನಾಟಕ ಮತ್ತು ಮಲೇನಾಡಿನ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಕಟ್ಟಾಳುಗಳಿದ್ದಾರೆ. ಅಲ್ಲಿ ಸಣ್ಣ ಪುಟ್ಟ ಗಲಭೆ ಎದ್ದರೆ ಸಾಕು ಆ ಮತ ಬ್ಯಾಂಕ್ ಬಲವಾಗಿ ಉಳಿಯುತ್ತದೆ,, ಹಾಗೂ ಉತ್ತರ ಕರ್ನಾಟಕದಲ್ಲೂ ಬಿಜೆಪಿ ತನ್ನ ಬಲವನ್ನು ಉಳಿಸಿಕೊಂಡಿದೆ, ಇನ್ನೂ ಉಳಿದ ಪ್ರದೇಶ ಎಂದರೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳು.. ಆದರೆ ಈ ಪ್ರದೇಶಗಳಲ್ಲಿ ಹಿಂದುತ್ವ ಪ್ರಭಾವ ಮತ್ತು ಪರಿಣಾಮ ಸೀಮಿತ,,

ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಮುಂದಿರುವ ಸಮಸ್ಯೆ ದೊಡ್ಡದು  ಮತ್ತು ಮುಂದಿನ ದಾರಿ ಕಠಿಣ, ಕರ್ನಾಟಕದಲ್ಲಿ ಬಿಜೆಪಿ ಈ ವರೆಗೆ ಅಧಿಕಾರಕ್ಕೆ ಬಂದಿದ್ದು ಅನ್ಯ ದಾರಿಗಳನ್ನು ಅನುಸರಿಸುವ ಮೂಲಕ ಎಂಬುದನ್ನು ಗಮನಿಸಬೇಕಾಗಿದೆ,, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವರ್ಚಸ್ಸು ಎಲ್ಲೆಡೆಗೆ ಪಸರಿಸಿದಾಗಲೂ ಅವರು ಸರ್ಕಾರ ನಡೆಸುವಷ್ಟು ಸಂಖ್ಯಾ ಬಲವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಯಡಿಯೂರಪ್ಪನವರ ವರ್ಚಸ್ಸು ಕುಂದಿದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇಲ್ಲ. ಇದರಿಂದಾಗಿ ಮತಗಳನ್ನು ತರುವ ಅವರ ಶಕ್ತಿ ಕುಂದಿದೆ. ಇನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪ ಅವರಂತೆ ಜನ ನಾಯಕರಲ್ಲ. ಸ್ವಂತ ಶಕ್ತಿಯ ಮೇಲೆ ಮತ ತರುವ ಶಕ್ತಿ ಇಲ್ಲ. ಇನ್ನೂ ಪಕ್ಷ ರಾಜ್ಯ ಘಟಕದ  ಅಧ್ಯಕ್ಶ ನಳೀನ್ ಕುಮಾರ್ ಕಟೀಲ್ ಯಕ್ಷಗಾನದ ಹಾಸ್ಯ ಪಾತ್ರಧಾರಿಯಂತೆ ಕಾಣುತ್ತಾರೆ. ಅವರು ಮತ ತಾರುವುದು ಇರಲಿ, ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು.

ಜೊತೆಗೆ ಸರ್ಕಾರಕ್ಕೆ ಒಳ್ಲೆಯ ಹೆಸರಿಲ್ಲ. ಭ್ರಷ್ಟಾಚಾರದ ಆರೋಪಗಳಿಂದ ಸರ್ಕಾರದ ಇಮೇಜ್ ನಾಶವಾಗುತ್ತಲೇ ಇದೆ,,ಇಂತಹ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಗೆ ಮತ ತರುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ.. ಆದ್ರೆ ೨೦೧೪ರಿಂದ ೨೦೧೮ ರ ಸಮಯದಲ್ಲಿ ಮೋದಿಯವರನ್ನು ಪ್ರಶ್ನಿಸುವವರೇ ಇರಲಿಲ್ಲ,, ಅವರನ್ನು ದೇವಧೂತ ಎನ್ನುವ ಮಟ್ಟಿಗೆ ದೇಶದ ಜನ ನಂಬಿದ್ದರು..ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ನರೇಂದ್ರ ಮೋದಿ ಅವರ ವರ್ಚಸ್ಸು ಕುಂದುತ್ತಿದೆ.. ಮೋದಿ ಅವರ ಬಗ್ಗೆ ಭಾರತದ ಜನರಿಗೆ ಭ್ರಮನಿರಸನವಾಗುತ್ತಿದೆ..

ಈಗ ಮತ್ತೆ ಕರ್ನಾಟಕದತ್ತ ಬರೋಣ. ಕರ್ನಾಟಕದಲ್ಲಿ ಯಾವ ವಿಚಾರಗಳು ಆ ಪಕ್ಷಕ್ಕೆ ಮತಗಳನ್ನು ತರುತ್ತವೆ ? ಯಾವ ನಾಯಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾನೆ ?

ಈ ಪ್ರಶ್ನೆಗಳಿಗೆ ಉತ್ತರ ಪಡೆಯುವ ಭರಾಟೆಯಲ್ಲಿ ಬಿಜೆಪಿ ತನ್ನ ಗೇಮ್ ಪ್ಲಾನ್ ಬದಲಿಸಿದೆ.. ಹಿಂದುತ್ವ ಅಜೆಂಡಾವನ್ನು ಗುಪ್ತವಾಗಿ ಜಾರಿಗೆ ತರಬೇಕು, ಹಿಂದುತ್ವದ ವಿಚಾರ, ಸಮಾಜವನ್ನು ಒಡೆಯುವ ಕೆಲಸವನ್ನು ಕಾಲಾಳುಗಳಿಗೆ ಬಿಟ್ಟು ಬಿಡಬೇಕು.. ನಾಯಕರು ಅಭಿವೄದ್ಧಿಯ ಬಗ್ಗೆ ಮಾತನಾಡಬೇಕು, ಮೀಸಲಾತಿ ವಿಚಾರವನ್ನು ಮುಂಡಿಟ್ಟುಕೊಂಡು ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಬೇಕು.. ಇದು ಬಿಜೆಪಿಯ ಗೇಮ್ ಪ್ಲಾನ್.

ಈ ಸೂತ್ರದಂತೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ.

ಇದು ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆಗೆ ಏರಿಸಬಹುದೇ ? ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದು ಕಷ್ಟ,,


BJP NEW GAME PLAN#Shashidharbhat#Sudditv#Karnatakapolitics

ಬಿಜೆಪಿ ಹೊಸ ಗೇಮ್ ಪ್ಲಾನ್.. ಚುನಾವಣೆ ಗೆಲ್ಲಲು ಹೂಸ ಕಾರ್ಯತಂತ್ರ
ಹಿಂದುತ್ವ ಹಿನ್ನೆಲೆಗೆ. ದಲಿತ ಹಿಂದುಳಿದ ವರ್ಗಗಳ ಮೇಲೆ ಕಣ್ಣು..
ಮೀಸಲಾತಿ ಹೊಸ ಅಸ್ತ್ರ; ಜೆಡಿಎಸ್ ಜೊತೆ ಆಪ್ಷನ್ ಓಪನ್,,,,
ಈ ಕಾರ್ಯತಂತ್ರ ಬಿಜೆಪಿಗೆ ಯಶಸ್ಸು ತರಬಹುದಾ ?
ಪ್ರೈಮ್ ನ್ಯೂಸ್ ನಲ್ಲಿ ಶಶಿಧರ್ ಭಟ್ ವಿಶ್ಲೇಷಣೆ

ಸಾಮಾಜಿಕ ಜಾಲತಾಣಗಳು ಮತ್ತು ಬೇಜವಾಬ್ದಾರಿ ನಡವಳಿಕೆ,,


 ಇದು ಸಾಮಾಜಿಕ ಜಾಲತಾಣಗಳ ಯುಗ,,,ಸುದ್ದಿ ಮನರಂಜನೆ, ಎಲ್ಲವೂ ಬೆರಳ ತುದಿಯಲ್ಲಿ ಲಭ್ಯ,,,ನಿಮಗೆ ಏನು ಬೇಕು ಅದೆಲ್ಲ ಸಿಗುತ್ತದೆ. ಏನು ಬೇಕಾದರೂ ಗೂಗಲ್ ಮಾಡಿ ಮಾಹಿತಿ ಪಡೆಯಬಹುದು,,ಇದು ಒಂದು ರೀತಿಯಲ್ಲಿ ಮಾಹಿತಿಗಳ ಕಣಜ..

ಇಷ್ಟೇ ಹೇಳಿದರೆ ಎಲ್ಲವನ್ನೂ ಹೇಳಿದಂತೆ ಆಗುವುದಿಲ್ಲ.. ಇದು ಎರಡು ಅಲುಗಿನ ಕತ್ತಿ. ಬಳಸುವಾಗ ಜವಾಬ್ದಾರಿ ಬೇಕು.. ಇಲ್ಲದಿದ್ದರೆ ಇದು ಏನುಬೇಕಾದರೂ ಕೊರೆದು ಬಿಡಬಹುದು. ಕೊರೆಯುವಾಗ ಗೊತ್ತಾಗುವುದಿಲ್ಲ. ರಕ್ತಸ್ರಾವವಾಗುವಾಗ ಗೊತ್ತಾಗುತ್ತದೆ,, ನಾನು ಈ ಮಾತುಗಳನ್ನು ಸಾಮಾಜಿಕ ಜಾಲತಾಣಗಳ ಪಾಲುದಾರನಾಗಿ ಹೇಳುತ್ತೇನೆ,, ನೀವು ಯಾವುದೇ ಸ್ಟೇಟಸ್ ಅಪ್ ಡೇಟ್ ಮಾಡಿದರೆ ತಕ್ಷಣ ಪ್ರತಿಕ್ರಿಯೆಗಳ ಸುರಿಮಳೆ ಪ್ರಾರಂಭ,, ಬರುವವರು ಯಾರೋ ? ಅವರದು ನಿಜವಾದ ಖಾತೆ ಹೌದೋ ಅಲ್ಲವೋ ಯಾವುದೂ ಗೊತ್ತಿರುವುದಿಲ್ಲ,, ಬೇರೆಯವರ ಖಾತೆಗೆ ಬಂದು ತಮ್ಮ ಮನಸ್ಸಿನಲ್ಲಿ ಇರುವ ಹೊಲಸನ್ನು ಹೊರಹಾಕಿ ಓಡಿ ಹೋಗುವುದು ಸಾಮಾನ್ಯ,, ನೀವು ಅವರ ಬೆನ್ನು ಹತ್ತಿ ಹೋಗಬೇಕು, ಇಲ್ಲವೇ ಅವರನ್ನು ಬ್ಲಾಕ್ ಮಾಡಬೇಕು ಅಷ್ಟೇ,,

ಆದರೆ ಸಾಮಾಜಿಕ ಜಾಲತಾಣ ಬಳಸುವವರು ತಮ್ಮ ನಡವಳಿಕೆಯ ಬಗ್ಗೆ ಜಾಗರೂಕರಾಗಿರಬೇಕು,, ಇದು ಒಂದು ರೀತಿಯಲ್ಲಿ ಸಾರ್ವಜನಿಕ ಶೌಚ ಗೃಹ ಇದ್ದಂತೆ,, ಸಾರ್ವಜನಿಕ ಶೌಚ ಗೃಹವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಅದರಲ್ಲಿಯೂ ಶೌಚಗೃಹವನ್ನು ಬಳಸುವವರು ಸ್ವಚ್ಚವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಬೇಕು..

ಆದರೆ ವಿಕೃತ ಮನಸ್ಥಿತಿಯವರು ತಮ್ಮ ವಿಕೃತಿಯನ್ನು ಹೊರಹಾಕುತ್ತಾರೆ. ವಿಕೃತ ಕಾಮಿಗಳು ಅಮ್ಮ ಅಕ್ಕ ಎಂದು ಮಾತನಾಡಲು ಪ್ರಾರಂಭಿಸುತ್ತಾರೆ. ಆ ಮೂಲಕ ಒಂದು ವಿಕೃತ ಮತ್ತು ಅತೃಪ್ತ ಸಮಾಜವನ್ನು ನಿರ್ಮಿಸಿಬಿಡುತ್ತಾರೆ..

ಒಬ್ಬ ಇಂತಹ ವಿಕೃತಿಯನ್ನು ಪ್ರಾರಂಭಿಸಿದರೆ ಉಳಿದವರೂ ಅದನ್ನು ಅನುಸರಿಸುತ್ತಾರೆ,, ಹಾಗಿದ್ದರೆ ಇದನ್ನೆಲ್ಲ ತಡೆಯುವುದು ಸಾಧ್ಯವಿಲ್ಲವೆ ? ಸಾಧ್ಯವಿದೆ.. ಅದು ನಮ್ಮ ಯುವ ಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಮಾಡುವುದರ ಮೂಲಕ.. ಈ ಮಾರ್ಗದರ್ಶನ ಅವರ ಶೈಕ್ಷಣಿಕ ಅವಧಿಯಲ್ಲೇ ಪ್ರಾರಂಭವಾಗಬೇಕು.. ಆದರೆ ಇಂದಿನ ಶಿಕ್ಷಣ ಬದುಕಿನ ಜೊತೆಗಿನ ಸಂಬಂಧವನ್ನೇ ಕಡಿದುಕೊಂಡಿದೆ.. ಎರಡನೆಯ ದರ್ಜೆಯ ಗುಮಾಸ್ತರನ್ನೋ ಐಟಿ ಬಿಟಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ತಯಾರು ಮಾಡುವ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ.. ಇದರ ಜೊತೆಗೆ ಬದುಕಿನ ಮೌಲ್ಯಗಳ ಬಗ್ಗೆ ತರಬೇತಿ ನೀಡುವ ಕೆಲಸ ಆಗಬೇಕು.. ನಮ್ಮ ಸಂವಿಧಾನದ ಪಾಠ ಆಗಬೇಕು.. ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಒಬ್ಬ ವ್ಯಕ್ತಿಗೆ ನಮ್ಮ ಸಂವಿಧಾನದಲ್ಲಿ ಏನಿದೆ ಎಂಬ ಅರಿವು ಇರಬೇಕು.. ಅರಿವು ಇದ್ದರಷ್ಟೆ ಸಾಲದು.. ಸಂವಧಾನದ ಆಶಯದಂತೆ ನಡೆದುಕೊಳ್ಳುವ ಬದ್ಧತೆ ಬೇಕು.

ಆದರೆ ಇಂದು ಸಿನಿಮಾಗಳು ಪ್ರತಿಪಾದಿಸುವ ಮನುಷ್ಯ ವಿರೋಧಿ ಅಂಶಗಳು, ಅವು ಪ್ರತಿಪಾದಿಸುವ ಹಿಂಸೆ, ಕೋಮುವಾದಗಳು ಯುವಕರ ಮನಸ್ಸನ್ನು ಆಕ್ರಮಿಸಿಕೊಂಡಿವೆ, ಭೂಗತ ಜಗತ್ತಿನ ವೈಭವೀಕರಣ, ಅಂಡರ್ ವರ್ಲ್ಡ್ ಡಾನ್ ಆಗಬೇಕು ಎಂಬ ಕನಸನ್ನು ಯುವಕರಲ್ಲಿ ಬಿತ್ತುತ್ತಿದೆ,, ಮೋಹನ್ ದಾಸ್ ಕರಮಚಂದ್ ಗಾಂಧಿಯ ಈ ನಾಡಿನಲ್ಲಿ ಈಗ ಗಾಂಧಿಯ ಬದಲು ಗೋಡ್ಸೆಯನ್ನು ಪ್ರತಿಷ್ಠಾಪಿಸುವ ಕೆಲಸ ನಡೆಯುತ್ತಿದೆ,,,ಇತಿಹಾಸವನ್ನು ತಿರುಚುತ್ತ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಅದನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ,, ಅದರ ಜೊತೆಗೆ ಪ್ರತೊಯೊಂದು ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ತಂಡವನ್ನು ಹೊಂದಿವೆ.. ಇವರು ಸುಳ್ಳು ಸುದ್ದಿ ಹರಡುವುದರಲ್ಲಿ, ಸತ್ಯವನ್ನು ಅಸತ್ಯ ಎಂದು ತಿರುಚುವುದರಲ್ಲಿ ಅಗ್ರಗಣ್ಯರು,,,ಇವರೆಲ್ಲ ಸೇರಿ ಸಾಮಾಜಿಕ ಜಾಲತಾಣಗಳನ್ನು ಸುಳ್ಳಿನ ಮಾರುಕಟ್ಟೆಯನ್ನಾಗಿ ಬದಲಿಸಿದ್ದಾರೆ.. ಇಲ್ಲಿ ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸ ಮರೆಯಾಗಿದೆ,

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ರಾಜಕಾರಣಿ ತಮ್ಮ ಹೆಸರಿನ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದಾರೆ. ಇವರು ಎಂದು ಯಾರು ಹುಟ್ಟಿದರು ಯಾರು ಸತ್ತರು ಎಂಬ ಅಂಕಿ ಅಂಶಗಳನ್ನು ಇಟ್ಟುಕೊಂಡು ಪ್ರತ್ರಿದಿನ ಸ್ಟೇಟಸ್ ಅಪಡೆಟ್ ಮಾಡುತ್ತಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ತಮ್ಮ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಹೇಳಿಕೆಗಳು ಅವರಿಗೇ ತಿಳಿದಿರುವುದಿಲ್ಲ...

?

ಧ್ವೇಷ ಭಾಷಣಕ್ಕೆ ಸುಪ್ರೀಂ ಕಡಿವಾಣ

 ಧ್ವೇಷ ಭಾಷಣಕ್ಕೆ ಸರ್ವೋಚ್ಚ ನ್ಯಾಯಾಲಯ ಕಡಿವಾಣ ಹಾಕಿದೆ.. ಧ್ವೇಷ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆಯೂ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ..

ಈ ಸೂಚನೆಯ ನಂತರವಾದರೂ ದೇಶದಲ್ಲಿ ಹೊತ್ತಿ ಉರಿಯುತ್ತಿರುವ ಧ್ವೇಷದ ಬೆಂಕಿ ಕಡಿಮೆಯಾಗಬಹುದೆ ?

ಇಂತಹ ನಿರೀಕ್ಷೆ ಇರಲೇ ಬೇಕು,,ಆದರೆ ? ಗೊತ್ತಿಲ್ಲ..

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...