Thursday, January 12, 2012

ಬೆಳಗಿನ ವಾಕಿಂಗ್ ಧ್ಯಾನ; ಎಂದೂ ಬದಲಾಗದವರು......!

ಮಲ್ಲೇಶ್ವರಂ ಮತ್ತು ಲಾಲಬಾಗ್

ಬೆಂಗಳೂರಿನಲ್ಲಿ ಮೈ ನಡುಗಿಸುವ ಚಳಿ ಇಲ್ಲ. ಚಳಿ ಕಡಿಮೆಯಾಗಿ ಬೇಸಿಗೆ ಉರಿ ಬಿಸಿಲಿಗೆ ಸಿದ್ಧವಾಗು ಎಂಬ ಸೂಚನೆ ಈಗಲೇ ಬರುತ್ತಿರುವಂತಿದೆ.
ಬೆಳಿಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಾಕಿಂಗ್ ಮಾಡುವಾಗ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಬೆಂಗಳೂರು ನೆನಪಾಯಿತು. ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬೆಳಗಿನ ವಾಕಿಂಗ್ ಮಾಡಲು ಸಾಧ್ಯವಾಗದಷ್ಟು ಚಳಿ. ಜನ ಮನೆಯ ಹೊರಗೆ ಬರುವುದಕ್ಕೆ ಮನಸ್ಸು ಮಾಡುತ್ತಲೇ ಇರಲಿಲ್ಲ. ಬ್ಲಾಂಕೆಟ್ ನ ಒಳಗೆ ಹಾಗೆ ನುಸುಳಿಕೊಂಡು ಇನ್ನಷ್ಟು ಸಮಯ ಮಲಗುವ ವಾಂಛೆ. ಇವತ್ತು ಬೇಡ, ನಾಳೆ ವಾಕಿಂಗ್ ಮಾಡೋಣ ಎಂದು ಅನ್ನಿಸುತ್ತಿತ್ತು.
ಹಾಗೆ ಮನೆಯ ಒಳಗೆ ನಡೆಯುವಾಗಲೂ ಕಾಲನ್ನು ಐಸ್ ಮೇಲೆ ಇಟ್ತ ಅನುಭವ. ಮನೆಯ ಒಳಗೆ ಸ್ಲೀಪರುಗಳು ಅನಿವಾರ್ಯವಾದ ಸ್ಥಿತಿ.
ಆಗ ನಾನು ಇದ್ದುದು ಬೆಂಗಳೂರಿನ ಜಯನಗರ ಐದನೆಯ ಬ್ಲಾಕಿನಲ್ಲಿ. ಬೆಳಿಗ್ಗೆ ಐದಕ್ಕೆ ಎದ್ದು ಓಡಲು ಪ್ರಾರಂಭಿಸಿದರೆ ಬಂದು ನಿಲ್ಲುತ್ತಿದ್ದುದು ಲಾಲ್ ಬಾಗ್ ನಲ್ಲಿ. ಆಗಲೇ ಅಲ್ಲಿ ಡಾ. ಎಚ್. ನರಸಿಂಹಯ್ಯ ಅವರಂತಹ ನಿಲಯದ ಕಲಾವಿದರು ಹಾಜರಿರುತ್ತಿದ್ದರು. ಅಲ್ಲಿ ಅವರೆಲ್ಲರ ಚರ್ಚೆ ಕಾಲ ದೇಶಗಳನ್ನು ಮೀರಿ ಎಲ್ಲೆಲ್ಲೋ ಹಾದು ಕೊನೆಗೆ ಲಾಲಬಾಗಿಗೆ ಬಂದು ನಿಲ್ಲುತ್ತಿತ್ತು. ಬದಲಾಗುತ್ತಿದ್ದ ಲಾಲಬಾಗ್ ಆಗಲೇ ಈ ಹಿರಿಯರನ್ನು ಕಂಗೆಡಿಸಿತ್ತು.
ನಾನು ನಮಸ್ಕಾರ ಸಾರ್ ಎಂದು ನರಸಿಂಹಯ್ಯ ಅವರಿಗೆ ಒಂದು ಸೆಲ್ಯೂಟ್ ಹೊಡೆದು, ಓಡುತ್ತಲೇ ಅಲ್ಲಿನ ಮರಗಳ ನಡುವೆ ಮಾಯವಾಗುತ್ತಿದ್ದೆ. ಬೆಳಗಿನ ಗಾಳಿ ಸೇವನೆಗೆ ಬರುತ್ತಿದ್ದ ಕೆಲವರು ನಾಯಿಗಳನ್ನು ಹಿಡಿದು ಬರುತ್ತಿದ್ದರು. ಇವರನ್ನು ನೋಡಿದಾಗ ನನಗೆ ಒಂದು ಜೋಕು ನೆನಪಗುತ್ತಿತ್ತು.
ಬಹಳಷ್ಟು ಹೆಂಗಸರು ತಮ್ಮ ಗಂಡಂದಿರ ಜೊತೆಗೆ ವಾಕಿಂಗ್ ಗೆ ಬರುತ್ತಾರೆ. ಗಂಡ ಬರದಿದ್ದರೆ ಅವರ ಜೊತೆ ಮನೆಯ ನಾಯಿ ಇರುತ್ತದೆ..!
ನಾನೇ ಸೃಷ್ಟಿಸಿದ ಈ ಜೋಕನ್ನು ಒಬ್ಬಿಬ್ಬರ ಬಳಿ ಹೇಳಿ ಸಂತೋಷ ಪಡುತ್ತಿದ್ದೆ. ವಾಕಿಂಗ್ ಹೋಗುವವರ ಜಗತ್ತಿನಲ್ಲಿ ನಾಯಿ ಅನಿವಾರ್ಯ ಭಾಗವಾದ ಬಗೆ ನನಗೆ ಕುತೂಹಲವನ್ನು ಹುಟ್ಟಿಸುತ್ತಿತ್ತು. ಲಾಲಬಾಗಿನ ಮರಗಳ ನಡುವೆ ಓಡಾಡುವ ಚಂದವೇ ಬೇರೆಯಾಗಿತ್ತು. ಅಲ್ಲಿ ಬರುತ್ತಿದ್ದ ಪ್ರತಿಯೊಬ್ಬರೂ ತಮ್ಮ ಕಷ್ಟ ಸುಖವನ್ನು ಹೊತ್ತು ತರುತ್ತಿದ್ದರು. ಅದನ್ನು ಆ ಮರಗಳ ನಡುವೆ ಹಂಚಿ, ಸಮಾಧಾನದಿಂದ ಮನೆಗೆ ಹಿಂತಿರುಗುತ್ತಿದ್ದರು. ಹೋಗುವಾಗ ಹತ್ತಿರದಲ್ಲೇ ಇದ್ದ ಪೈ ಹೋಟೇಲಿನಲ್ಲಿ ಒಂದು ಕಫ್ ಕಾಫಿ ಕುಡಿದು ತಮ್ಮ ಬದುಕಿನ ಇನ್ನೊಂದು ದಿನಕ್ಕೆ ರೆಡಿಯಾಗುತ್ತಿದ್ದರು.
ಆದರೆ ಈಗ ನಾನು ವಾಕಿಂಗ್ ಗೆ ಹೋಗುವ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಹಾಗಿಲ್ಲ. ಕ್ಯಾಂಪಿಸ್ ನ ಹಸಿರು ಕಡಿಮೆಯಾಗಿ ಕಟ್ಟಡಗಳೂ ಮೇಲೇರತೊಡಗಿವೆ. ಇಲ್ಲಿ ಆಗಾಗ ಚಿರತೆ ಕಾಣಿಸಿಕೊಂಡು ವಾಕಿಂಗ್ ಗೆ ಬರುವ ಜನರಲ್ಲಿ ವಿಚಿತ್ರ ಭಯವನ್ನು ಉಂಟು ಮಾಡಿದೆ. ಹೀಗಾಗಿ ಆರು ಗಂಟೆಗಿಂತ ಮೊದಲು ಇಲ್ಲಿಗೆ ವಾಕಿಂಗ್ ಗೆ ಬರುವವರ ಸಂಖ್ಯೆ.ಇಲ್ಲಿ ಬರುವ ಜನರಿಗೂ, ಲಾಲಬಾಗ್ ಗೆ ಬರುವ ಜನರಿಗೂ ತುಂಬಾ ವ್ಯತ್ಯಾಸ.
ನಾನು ಮಲ್ಲೇಶ್ವರಂ ವೃತ್ತದ ಬಳಿ ರೂಂ ಮಾಡಿಕೊಂಡು ಇದ್ದ ಕಾಲದಲ್ಲಿ ಸಂಪಿಗೆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದೆ. ಆದರೆ ಈ ಮಲ್ಲೇಶ್ವರಂ ಬೆಳಿಗಿಗಿಂತ ಸಂಜೆಯೇ ಮೈ ಮುರಿದುಕೊಂಡು ಎದ್ದು ಬಿಡುತ್ತದೆ. ಆದರೆ ಮಲ್ಲೇಶ್ವರಂ ನಲ್ಲಿನ ಸಂಭ್ರಮಕ್ಕೂ ಜಯನಗರದಲ್ಲಿನ ಸಂಭ್ರಮಕ್ಕೂ ತುಂಬಾ ವ್ಯತ್ಯಾಸ. ಮಲ್ಲೇಶ್ವರಂನಲ್ಲಿ ಕಾಣುವುದು ಒಂದು ರೀತಿಯ ಮದುವೆ ಮನೆಯ ಸಂಭ್ರಮ. ಅದೂ ಸಂಜೆಯ ಹೊತ್ತಿನಲ್ಲಿ ಕೆಲಸವಿಲ್ಲದಿದ್ದರೂ ಅಲ್ಲಿಂದ ಇಲ್ಲಿಗೆ ಓಡಾಡುತ್ತಿದ್ದ ಹುಡುಗ ಹುಡುಗಿಯರು ಮದುವೆ ಮನೆಯ ಸಂಭ್ರಮವನ್ನು ನೆನಪಿಸುತ್ತಿದ್ದರು. ಅಲ್ಲಿದ್ದುದು ಸಾಂಪ್ರದಾಯಿಕ ಸೌಂದರ್ಯ. ಆದರೆ ಲಾಲ ಬಾಗ್ ಮತ್ತು ಜಯನಗರ ಹಾಗಲ್ಲ.
ನಾನೂ ಸಹ ಲಾಲಬಾಗ್ ಗೆ ಐದಕ್ಕೆ ಹೋಗುತ್ತಿದ್ದವನು, ಈಗ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ವಾಕಿಂಗ್ ಗೆ ಹೋಗುವುದು ೭ ಗಂಟೆಗೆ.
ಹೌದು ಎಲ್ಲವೂ ಬದಲಾಗುತ್ತಿದೆ, ನನ್ನನ್ನೂ ಸೇರಿದಂತೆ.
ನಾನು ವಾಕಿಂಗ್ ಗೆ ಹೋಗುವಾಗ ಚಿತ್ರ ವಿಚಿತ್ರ ಜನ ಸಿಗುತ್ತಾರೆ. ನಮಸ್ಕಾರ ಹೇಳಿದವರು ಏನ್ ಸಾರ್ ಈಗ ಯಾವ ಚಾನಲ್ ನಲ್ಲೂ ನೀವು ಕಾಣುವುದಿಲ್ಲ ಎಂದು ಹೇಳುವವರು ಕೆಲವರು.
ಸಾರ್ ನಿಮ್ಮ ಕಾರ್ಯಕ್ರಮ ನಾನು ಬಿಡದೇ ನೋಡ್ತೀನಿ. ತುಂಬಾ ಚೆನ್ನಾಗಿ ಪ್ರಶ್ನೆ ಕೇಳ್ತೀರಿ ಎಂದು ಹೇಳುವವರು ಇನ್ನೂ ಕೆಲವರು. ಸುಮ್ಮನೆ ಹೊಗಳುವ ಈ ಸಾಲಿನ ಜನರಿಗೆ ನಾನು ಈಗ ಯಾವ ಚಾನಲ್ ನಲ್ಲೂ ಇಲ್ಲ ಎಂಬುದು ಗೊತ್ತಿರುವುದಿಲ್ಲ. ನಿಮ್ಮ ಕಾರ್ಯಕ್ರವನ್ನು ನೋಡದೇ ನಾನು ಮಲುಗುವುದಿಲ್ಲ ಎಂದೂ ಪೂಸಿ ಹೊಡೆಯುವವರು ಸಿಗುತ್ತಾರೆ. ಸಾಧಾರಣವಾಗಿ ಇಂತವರು ಸಿಕ್ಕಾಗ ಬೆಳಿಗ್ಗೆನೇ ಯಾಕಯ್ಯ ಸುಳ್ಳು ಹೇಳ್ತೀಯಾ ಎಂದು ಕೇಳ ಬೇಕು ಎಂದು ಅನ್ನಿಸಿದರೂ ಕೇಳದೇ ಥ್ಯಾಂಕ್ಸ್ ಹೇಳಿ ಅವರಿಂದ ಕಳಚಿಕೊಳ್ಳುತ್ತೇನೆ.
ಕೆಲವರು ಮಾತನಾಡುವುದಕ್ಕಾಗಿಯೇ ವಾಕಿಂಗ್ ಗೆ ಬಂದವರಂತೆ ಮಾತನಾಡುತ್ತಿರುತ್ತಾರೆ. ಮನೆ ಎಂಬ ಜೈಲಿನಿಂದ, ಹೆಂಡತಿ ಎಂಬ ಕಠೋರ ನಿಷ್ಟೆಯ ಹೆಂಡತಿಯಿಂದ ಪರೋಲ್ ಮೇಲೆ ಬಿಡುಗಡೆಯಾಗಿ ಬಂದವರಂತೆ ಕಾಣುವ ಜನ.
ಆದರೆ ವಾಕಿಂಗ್ ಮಾಡುವಾಗ ಆದಷ್ಟು ಮಾತನಾಡದೇ ಇರುವುದು ಹೆಚ್ಚು ಒಳ್ಳೆಯದು. ನಾವು ಹುಟ್ಟಿದ್ದೇ ನಡೆಯುವುದಕ್ಕಗಿ ಎಂಬಂತೆ ನಡೆಯುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ. ಹೀಗಾಗಿ ನಾನು ಒಬ್ಬನೆ ವಾಕಿಂಗ್ ಮಾಡುತ್ತೇನೆ. ವಾಕಿಂಗ್ ಮಾಡುವಾಗ ಮಾತನಾಡುವುದಿಲ್ಲ.
ಇಂದು ಬೆಳಿಗ್ಗೆ ವಾಕಿಂಗ್ ಮಾಡುವಾಗ ಒಬ್ಬರು ಸಿಕ್ಕಿದ್ದರು. ಅಷ್ಟು ಚಳಿ ಇಲ್ಲದಿದ್ದರೂ ಅವರು ತಮ್ಮ ಸರ್ವಾಂಗವನ್ನು ಮುಚ್ಚಿಕೊಂಡು, ಎಲ್ಲಿಗೋ ಪಾರ್ಸಲ್ ಮಾಡಲು ಸಿದ್ಧವಾಗ ಮೂಟೆಯಂತೆ ಅವರು ಕಾಣುತ್ತಿದ್ದರು. ಮೈ ತುಂಬಾ ಉಣ್ಣೆಯ ಜರ್ಕಿನ್, ಕೈಗೆ ಗ್ಲೌಸ್, ತಲೆಗೆ ಮಂಗನ ಟೋಪಿ ಹಾಕಿಕೊಂಡಿದ್ದ ಅವರ ದೇಹದ ಯಾವ ಭಾಗವೂ ತೆರೆದುಕೊಂಡಿರಲಿಲ್ಲ. ಕಣ್ಣುಗಳೆರಡು ಮಾತ್ರ ಹೊರಕ್ಕೆ ಕಾಣಿಸುತ್ತಿದ್ದವು. ಸಾವಕಾಶವಾಗಿ ನಡೆದು ಬರುತ್ತಿದ್ದ ಅವರು ಒಮ್ದು ಬದಿಯಲ್ಲಿ ನಡೆದು ಹೋಗುತ್ತಿದ್ದ ನನ್ನನ್ನ ಅಡ್ಡ ಗಟ್ಟಿದರು. ನಾನು ಇದೇನಪ್ಪ ಎಂದು ಚಕಿತನಾಗುವಷ್ಟರಲ್ಲಿ ಅವರಿಂದ ಪ್ರಶ್ನೆಯೊಂದು ತೂರಿ ಬಂತು.
ಸಾರ್, ಸದಾನಂದಗೌಡರು ಇರ್ತಾರಾ ಅಥವಾ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ ?
ಅ ಸುಂದರ ಬೆಳಗಿನಲ್ಲಿ ರಾಜಕಾರಣಿಗಳನ್ನು ನೆನಪು ಮಾಡಿಕೊಳ್ಳಲು ನನಗೆ ಇಷ್ಟ ಇರಲಿಲ್ಲ. ಜೊತೆಗೆ ರಾಜಕೀಯದ ಬಗ್ಗೆ ಚರ್ಚೆ ಮಾಡುವ ಸಮಯ ಕೂಡ ಅದಾಗಿರಲಿಲ್ಲ.
ಗೊತ್ತಿಲ್ಲ ಸಾರ್ ಎಂಬ ನನ್ನ ಉತ್ತರದಿಂದ ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದು ಬಿಟ್ಟಿತ್ತು.
]ಏನ್ ಸಾರ್ ನಾಟಕ ಆಡ್ತೀರಾ ? ನಿಮಗೆ ಗೊತ್ತಿಲ್ಲವಾ ? ಆ ರೀತಿ ರಾಜಕೀಯ ಮಾತನಾಡ್ತೀರಿ. ಈಗ ನಾನು ಕೇಳಿದರೆ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತೀರಿ. ಯಾಕೆ ಸಾಮಾನ್ಯ ಜನರ ಬಗ್ಗೆ ಗೌರವ ಇರಬೇಕು. ನಾವು ಟೀವಿ ನೋಡಿದರೆ ಮಾತ್ರ ನೀವು ಕಾರ್ಯಕ್ರಮ ಮಾಡಲು ಸಾಧ್ಯ ಎಂಬುದನ್ನು ಮರೆಯಬೇಡಿ.
ಅವರ ಈ ಬರ ಸಿಡಿಲಿನಂತಹ ಮಾತಿನಿಂದ ನನಗೆ ಕೋಪ ಬರುವುದಕ್ಕೆ ಬದಲಾಗಿ ಪಾಪ ಅನ್ನಿಸಿತು. ಇವರಂತವರು ನನ್ನಂಥವರ ಬಗ್ಗೆ ತಪ್ಪುತಿಳಿದುಕೊಂಡಿರುತ್ತಾರೆ. ಯಡಿಯೂರಪ್ಪ ಸದಾನಂದಗೌಡ ಮೊದಲಾದ ರಾಜಕಾರಣಿಗಳು ಏನು ಮಾಡುತ್ತಾರೆ ಎಂಬುದು ನಮಗೆ ಮೊದಲೇ ತಿಳಿದಿರುತ್ತದೆ ಎಂಬ ನಂಬಿಕೆ ಅವರದು. ಒಂದೊಮ್ಮೆ ತಿಳಿದಿದ್ದರೂ ಬೆಳಿಗ್ಗೆ ಬೆಡ್ ಕಾಫಿಯನ್ನೂ ಕುಡಿಯದೇ ಗಾಳಿ ಸೇವನೆಗೆ ಹೊರಟ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಮಾತನಾಡಲು ನಮಗೆ ಇಷ್ಟ ಇರುವುದಿಲ್ಲ ಎಂಬುದು ಕೂಡ ಅವರಿಗೆ ಅರ್ಥವಾಗುವುದಿಲ್ಲ.
ಸಾರ್ ಹೇಳಿ ಏನಾಗುತ್ತೆ ? ಅವರು ಮತ್ತೆ ಪ್ರಶ್ನಿಸಿದರು.
ನನಗೆ ಅವರಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ಅದಕ್ಕೆ ನಾನು ಹೇಳಿದೆ.
ಏನು ಬೇಕಾದರೂ ಆಗಬಹುದು. ನೀವು ಕೇಳಿದ ಪ್ರಶ್ನೆಯಲ್ಲೇ ಉತ್ತರವೂ ಅಡಗಿದೆ. ಅಂದರೆ ಪ್ರಶ್ನೆ ಕೇಳಿದ ನಿಮ್ಮ ಬಳಿ ಉತ್ತರವಿದೆ. ನೀವು ತುಂಬಾ ತಿಳಿದುಕೊಂಡಿದ್ದೀರಿ. ನನ್ನನ್ನು ಪರೀಕ್ಷೆ ಮಾಡಲು ಪ್ರಶ್ನೆ ಕೇಳುತ್ತಿದ್ದೀರಿ ಎಂಬುದು ನನಗೆ ಗೊತ್ತು.
ಈ ಮಾತು ಹೇಳಿದ ನಾನು ಸಾರ್ ಬರ್ತೀನಿ ಎಂದು ಅಲ್ಲಿಂದ ಜಾಗ್ ಮಾಡಲು ಪ್ರಾರಂಭಿಸಿದೆ. ಅವರು ಅಲ್ಲಿಯೇ ನಿಂತು ನನ್ನನ್ನೇ ನೋಡುತ್ತಿದ್ದರು.

No comments: