ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳನ್ನು ಪೂರೈಸಿದ್ದಾರೆ. ಅವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅವಧಿಯನ್ನು ಮುಗಿಸಿದೆ. ಈಗ ಮತ್ತೊಮ್ಮೆ ಮೋದಿ ಎಂಬ ಘೋಷ ವಾಕ್ಯದೊಂದಿಗೆ ಅವರು ಜನರ ಮುಂದೆ ಬಂದಿದ್ದಾರೆ. ದೇಶದ ಜನರ ಮುಂದಿರುವ ಈಗಿನ ಪ್ರಶ್ನೆ ಮೋದಿ ಅವರನ್ನು ಮತ್ತೆ ಯಾಕೆ ಆಯ್ಕೆ ಮಾಡಬೇಕು ? ಇನ್ನೊಂದು ಅವಧಿಗೆ ಅವರು ಯಾಕೆ ಪ್ರಧಾನಿಯಾಗಬೇಕು ? ಅವರು ಮತ್ತೆ ಪ್ರಧಾನಿಯಾಗಬಾರದು ಎಂದಾದರೆ ಅದು ಯಾಕೆ ?
೨೦೧೪ ರ ಚುನಾವಣೆಯನ್ನು ನೆನಪು ಮಾಡಿಕೊಳ್ಳೋಣ. ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು ೧೫ ವರ್ಷ ಆಡಳಿತ ನಡೆಸಿದ ಮೋದಿಯವರನ್ನು ಸಂಘ ಪರಿವಾರ ದೆಹಲಿಗೆ ರಫ್ತು ಮಾಡಿತ್ತು. ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಹುದ್ದೆಗೆ ಮೋದಿ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಪಕ್ಷದ ಹಿರಿಯ ನಾಯಕರಾದ ಲಾಲಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಮೊದಲಾದವರ ವಿರೋಧವಿದ್ದರೂ ಬಹಿರಂಗವಾಗಿ ವಿರೋಧಿಸುವ ಶಕ್ತಿ ಈ ನಾಯಕರಿಗೆ ಇರಲಿಲ್ಲ. ಅಂತೂ ಗುಜರಾತ್ ರಾಜಕಾರಣದ ಮಾಧರಿಯನ್ನು ದೇಶದ ರಾಜಕಾರಣದಲ್ಲಿ ಅನುಷ್ಠಾನಗೊಳಿಸಲು ಸಂಘ ಪರಿವಾರ ಮುಂದಾಗಿತ್ತು.ಸಂಘ ಉರುಳಿಸಿದ ಈ ದಾಳ ಹಲವು ಹಿರಿಯ ನಾಯಕರಿಗೆ ಪಥ್ಯವಾಗಿರಲಿಲ್ಲ.
ನರೇಂದ್ರ ದಾಮೋಧರ ಮೋದಿ ಸಂಘದ ಕಾರ್ಯಕರ್ತರಾಗಿಯೇ ತಮ್ಮ ಸಾಮಾಜಿಕ ಬದುಕನ್ನು ಪ್ರಾರಂಭಿಸಿದವರು. ಸಂಘದ ಸಿದ್ಧಾಂತ ಮತ್ತು ರಾಜಕಾರಣವನ್ನು ಮೈಗೂಡಿಸಿಕೊಂಡವರು. ಇದನ್ನು ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಸಾಬೀತು ಪಡಿಸಿದವರು. ಆದರೆ ಸಂಘದಲ್ಲಿಯೂ ಅವರ ವಿರೋಧಿಗಳು ಗಣನೀಯವಾಗಿಯೇ ಇದ್ದರು, ಇದ್ದಾರೆ. ಈ ವಿರೋಧ ಕೂಡ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲು ಅಡ್ದಿಯಾಗಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಅವರು "ಯಶಸ್ವಿಯಾಗಿ" ಜಾರಿಗೆ ತಂದ ಗುಜರಾತ್ ಮಾಧರಿ. ಈ ಮಾಧರಿಯ ಬಗ್ಗೆ ಅವರು ಸೃಷ್ಟಿಸಿದ ಭ್ರಮೆ. ಹದಿನೈದು ವರ್ಷಗಳ ಕಾಲ ಆಡಳಿತ ನಡೆಸಿದ್ದ ಅವರು ಅಲ್ಲಿ ಬಹುಸಂಖ್ಯಾತರ ಮತಗಳ ಕ್ರೋಡೀಕರಣಕ್ಕಾಗಿ ನಡೆಸಿದ ರಾಜಕಾರಣ ಸಂಘಕ್ಕೆ ಅಪ್ಯಾಯಮಾನವಾಗಿತ್ತು. ಉಗ್ರ ಹಿಂದುತ್ವದ ರಾಜಕಾರಣ ಮಾಡುತ್ತಲೇ ಅದಕ್ಕೆ ಅಭಿವೃದ್ದಿಯ ಸುಳ್ಳಿನ ಕವಚವನ್ನು ತೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ದೆಹಲಿಯಲ್ಲಿ ಅಧಿಕಾರ ಹಿಡಿಯಲು ಇದು ಅತ್ಯುತ್ತಮ ಮಾಧರಿ ಎಂಬ ತೀರ್ಮಾನಕ್ಕೆ ಸಂಘಪರಿವಾರವೂ ಬಂದಿತ್ತು.
ವಾಜಪೇಯಿ ಮತ್ತು ಆಡ್ವಾಣಿ ಅವರ ಯುಗ ಬಿಜೆಪಿಗೆ ಯಶಸ್ಸು ತಂದುಕೊಟ್ಟಿದ್ದರೂ ಸಂಘ ಪರಿವಾರದ ಗುಪ್ತ ಎಜೆಂಡಾವನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಈ ವಯೋವೃದ್ಧ ನಾಯಕರಿಗೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದ ಸಂಘ ಪಎರಿವಾರ ಈ ಹೊಸ ಯುದ್ಧದ ಕುದುರೆಯನ್ನು ಚುನಾವಣಾ ಅಖಾಡಾಕ್ಕೆ ಇಳಿಸಿ ಬಿಟ್ಟಿತು.
ಗುಜರಾತ್ ಮಾಧರಿಯಲ್ಲಿ ಹಲವು ಮುಖ್ಯ ಅಂಶಗಳಿವೆ. ಮೊದಲನೆಯದಾಗಿ ಬಿಜೆಪಿಗೆ ಮೊದಲಿನಿಂದಲೂ ಬೆನ್ನೆಲಬಾಗಿರುವ ಅದಾನಿ ಅಂಬಾನಿಯವರಂತಹ ದೊಡ್ಡ ಉದ್ಯಮಪತಿಗಳ ಪರವಾಗಿ ಕೆಲಸ ಮಾಡುವುದು. ಹಿಂದೂ ಮತ ಬ್ಯಾಂಕ್ ಅನ್ನು ಬಲಪಡಿಸುವುದಕ್ಕಾಗಿ ಮುಸ್ಲೀಂ ವಿರೋಧವನ್ನು ಕಾಪಾಡಿಕೊಂಡು ಬರುವುದು ಇದಕ್ಕೆ ಪೂರಕವಾಗಿ ಹಿಂಸೆಯ ಮಾರ್ಗವನ್ನು ಬಳಸುವುದು.ಎಲ್ಲ ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಏಕ ಸಂಸ್ಕೃತಿ ಭಾಷೆ ರಾಜಕೀಯ ವಿಚಾರಧಾರೆಯನ್ನು ಅನುಷ್ಠಾನಕ್ಕೆ ತರುವುದು. ಹಾಗೆ ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಹಿಂಸೆಯ ಮಾರ್ಗವೂ ಸೇರಿದಂತೆ ಎಲ್ಲ ಮಾರ್ಗಗಳನ್ನು ಬಳಸುವುದು. ಇವುಗಳ ನಡುವೆ ಸುಳ್ಳುಗಳ ಮೂಲಕ ಭ್ರಮೆಯನ್ನು ಸೃಷ್ಟಿಸುವುದು. ಇದಕ್ಕಾಗಿ ಧರ್ಮ ಮತ್ತು ದೇಶಪ್ರೇಮದ ಬಳಕೆ.
ಈ ಪ್ರಯೋಗವನ್ನು ಗುಜರಾತ್ ನಲ್ಲಿ ಯಶಸ್ವಿಯಾಗಿ ಮಾಡಿದ ಮೋದಿ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ದೆಹಲಿಯ ವಿಮಾನ ಏರಿದರು. ತಮ್ಮ ಜೊತೆ ಅಮಿತ್ ಷಾ ಅವರನ್ನು ಕರೆದುಕೊಂಡು ಬಂದರು. ಆಗಿನಿಂದಲೇ ಪ್ರಾರಂಭವಾಗಿದ್ದು ಅಮಿತ್ ಷಾ ಮತ್ತು ಮೋದಿಯವರ ಜೋಡಿರಾಜಕಾರಣ. ಇದು ಅಧಿಕಾರ ರಾಜಕಾರಣದ ಹೊಸ ರೂಪವಾಗಿತ್ತು. ಈ ರಾಜಕಾರಣದ ಹೆಜ್ಜೆ ಗುರುತು ಗುಜರಾತ್ ನಲ್ಲಿತ್ತು. ಇದಕ್ಕೆ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡ ಮೋದಿ ಅಮಿತ್ ಷಾ ಪಕ್ಷದ ಮೇಲೆ ನಿಯಂತ್ರಣ ಹೊಂದಲು ಕಾರ್ಯಾಚರಣೆ ಪ್ರಾರಂಭಿಸಿದರು. ಭಾರತೀಯ ಜನತಾ ಪಕ್ಷವನ್ನು ಮೋದಿ ಕೇಂದ್ರಿತ ರಾಜಕಾರಣವನ್ನಾಗಿ ಬದಲಿಸುವುದು ಮೊದಲ ಹೆಜ್ಜೆಯಾಗಿತ್ತು. ಪಕ್ಷಕ್ಕಿಂತ ಮೋದಿ ದೊದ್ದವರು ಎಂದು ಭ್ರಮೆಯನ್ನು ಸೃಷ್ಟಿಸುವುದು ಈ ಎಜೆಂಡಾದ ಭಾಗವಾಗಿತ್ತು. ಈ ಎಜೆಂಡಾದ ಭಾಗವಾಗಿಯೇ ಮೋದಿ ಬಿಜೆಪಿ ಪಕ್ಷಕ್ಕಿಂತ ದೊಡ್ಡವರಾಗಿ ಕಾಣುತ್ತಿದ್ದಾರೆ. ಅವರನ್ನೇ ಈ ದೇಶ ಮತ್ತು ದೇಶ ಭಕ್ತಿ ಎಂದು ಪ್ರತಿಬಿಂಬಿಸಲಾಗುತ್ತಿದೆ. ಮೋದಿಯವರ ಸುಳ್ಳಿನ ವ್ಯಕ್ತಿತ್ವನ್ನು ನಿಜವೆಂದು ನಂಬಿಸಲು ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದ ಮಾಧ್ಯಮಗಳನ್ನು ಅಂಬಾನಿ ಮೂಲಕ ನಿಯಂತ್ರಿಸಲಾಗುತ್ತಿದೆ.
೨೦೧೪ ರ ಚುನಾವಣೆಯ ಪ್ರಚಾರದ ಕಾರ್ಯವಿಧಾನ ಮತ್ತು ಕಾರ್ಯಸೂಚಿಯನ್ನು ಸಿದ್ಧಪಡಿಸುವಾಗ ಮೋದಿ ಕೇಂದ್ರಿತ ರಾಜಕಾರಣ ಪ್ರಾರಂಭವಾಗಿತ್ತು. ಆಗಲೇ ಬಿಜೆಪಿಯ ಹಿರಿಯ ನಾಯಕರೊಬ್ಬರು ನನ್ನ ಬಳಿ ಹೇಳಿದ್ದರು.
ಬಿಜೆಪಿ ಬದಲಾಗುತ್ತಿದೆ. ಇದು ವಾಜಪೇಯಿ ಮತ್ತು ಅಡ್ವಾಣಿಯವರ ಬಿಜೆಪಿಯಲ್ಲ. ಇದು ಮೋದಿ ಅವರ ಬಿಜೆಪಿ.
ಅವರು ಹೇಳಿದ ಈ ಮಾತಿನಲ್ಲಿ ಹೊಸ ಬಿಜೆಪಿಗೆ ಹೊಂದಿಕೊಳ್ಳುವುದು ಹೇಗೆ ಎಂಬ ಆತಂಕ ಒಂದೆಡೆ ಇದ್ದರೆ ಬಿಜೆಪಿಯ ಹಳೆಯ ತತ್ವ ಮತ್ತು ಸಿದ್ಧಾಂತಗಳು ಬದಲಾಗಿವೆ ಎಂಬ ಸೂಚನೆಯೂ ಇತ್ತು.
ಮೋದಿ ಸಾವಕಾಶವಾಗಿ ಬಿಜೆಪಿಯನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಚುನಾವಣೆಯ ಪ್ರಣಾಳಿಕೆ ಮತ್ತು ಕಾರ್ಯಸೂಚಿಯನ್ನು ಸಿದ್ಧಪಡಿಸುವಾಗಲೇ ಅವರು ಬಿಜೆಪಿ ಬದಲಾಗುತ್ತಿದೆ ಎಂಬ ಸೂಚನೆಯನ್ನು ನೀಡೀಬಿಟ್ಟಿದ್ದರು. ತಮ್ಮ ಪ್ರಚಾರದ ವೈಖರಿಯನ್ನು ಬದಲಿಸಿದ್ದರು. ಸಾಮಾಜಿಕ ಜಾಲ ತಾಣಗಳ ಯಶಸ್ವಿ ಬಳಕೆಯ ಅಗತ್ಯ ಕೂಡ ಮೋದಿ ಅವರಿಗೆ ಗೊತ್ತಿತ್ತು. ಹೀಗಾಗಿ ತುಂಬಾ ವಿಭಿನ್ನವಾದ ಇಮೇಜ್ ಅನ್ನು ಸೃಷ್ಟಿಸಿಕೊಳ್ಳಲು ಅವರು ಯತ್ನ ಪ್ರಾರಂಭಿಸಿದರು. ಯಾಕೆಂದರೆ ಗುಜರಾತ್ ಮಾಧರಿ ಅವರಿಗೆ ನೀಡಿದ ಇಮೇಜ್ ಎಲ್ಲರೂ ಒಪ್ಪಿಕೊಳ್ಳುವಂತದ್ದಾಗಿರಲಿಲ್ಲ. ಅವರು ಬಹುಸಂಖ್ಯಾತ ಹಿಂದೂ ಪರ ಮತ್ತು ಅಭಿವೃಧ್ದಿಯ ಹರಿಕಾರ ಮೋದಿ ಎಂಬ ಇಮೇಜ್ ಇದ್ದರೂ ಅವರ ಹಿಂಸಾ ರಾಜಕರಣದ ಕರಿ ನೆರಳು ಅವರಿಗೆ ಕಾಡುತ್ತಲೇ ಇತ್ತು. ಇದರಿಂದ ಹೊರಕ್ಕೆ ಬರಬೇಕಾದ್ದು ಪ್ರಧಾನಿ ಹುದ್ದೆ ಏರಲು ಹೊರಟ ಮೋದಿಯವರಿಗೆ ಅನಿವಾರ್ಯವಾಗಿತ್ತು.
ಹೀಗಾಗಿ ಮೋದಿ ೨೦೧೪ರ ಚುನಾವಣೆಯಲ್ಲಿ ಅಭಿವೃದ್ಧಿಯ ಮಂತ್ರವನ್ನು ಪಠಿಸತೊಡಗಿದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣಗಳಿಗೆ ಹೆಚ್ಚಿನ ಒತ್ತು ನೀಡುತ್ತ ಇಂತಹ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸತೊಡಗಿದರು. ಗುಜರಾತ್ ಮಾಧರಿಯ ಬಗ್ಗೆ ದೇಶದ ಬಹುಸಂಖ್ಯಾತರಲ್ಲಿ ಇದ್ದ ಭ್ರಮೆಯಸ್ನು ಹಾಗೇ ಉಳಿಸಿಕೊಂಡು ಇವರು ಪ್ರಧಾನಿಯಾದರೆ ದೇಶ ವಿಶ್ವಮಾನ್ಯವಾಗುತ್ತದೆ ಎಂಬ ಹೊಸ ಭ್ರಮೆಯನ್ನು ಯಶಸ್ವಿಯಾಗಿ ಸೃಷ್ಟಿಸಿದರು ನರೇಂದ್ರ ಮೋದಿ. ಸಾಮಾನ್ಯ ಜನರಲ್ಲಿ ದೇಶಪ್ರೇಮ ಮತ್ತು ಪಾಕಿಸ್ಥಾನದ ವಿರೋಧ ಯಾವಾಗಲೂ ಕೆಲಸ ಮಾಡುವ ಸರಕುಗಳು. ಇದನ್ನು ಅರಿತ ಮೋದಿ ದೇಶ ಪ್ರೇಮ ಮತ್ತು ಪಾಕಿಸ್ಥಾನ ವಿರೋಧದ ಭಾವನಾತ್ಮಕ ವಿಚಾರಗಳಿಗೆ ಒತ್ತು ನೀಡಿದರು. ಭಾರತದ ಸೈನಿಕರೆ ಒಂದು ತಲೆಗೆ ಪಾಕಿಸ್ಥಾನದ್ ಸೈನಿಕತ ಹತ್ತು ತಲೆ ತರುವ ಮಾತುಗಳು ಕೇಳಿಬರತೊಡಗಿತು.
ಅ ಸಂದರ್ಭದಲ್ಲಿ ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿನ ಹಲವಾರು ಭ್ರಷ್ಟಾಚಾರದ ಪ್ರಕರಣಗಳ ಆರೋಪ ಕೇಳಿಬಂದಿತ್ತು. ಗ್ರಾಮೀಣ ಆರ್ಥಿಕತೆ ಕುಸಿಯತೊಡಗಿದ್ದರಿಂದ ಗ್ರಾಮಾಂತರ ಪ್ರದೇಶದಲ್ಲಿ ಅಸಹನೆ ಹೆಚ್ಚುತ್ತಿತ್ತು. ಜನ ಬದಲಾವಣೆ ಬಯಸಿದ್ದರು. ಹೊಸ ಮಾತುಗಳನ್ನು ಕೇಳಲು ಈ ದೇಶದ ಜನ ಕಾತುರರಾಗಿದ್ದರು. ಮೋದಿ ಹೊಸ ಮಾತುಗಳನ್ನು ಆಡತೊಡಗಿದ್ದರು. ಅವರು ನೀಡಿದ ಹಲವಾರು ಆಶ್ವಾಸನೆಗಳು ಸಾಮಾನ್ಯ ಮನುಷ್ಯರಲ್ಲಿ ಹೊಸ ಕನಸುಗಳು ಬೀಜ ಬಿತ್ತಿತ್ತು. ಮೋದಿ ಅವರು ಭಾರತದ ಜನ ಸಮುದಾಯದ ಮುಂದೆ ಇಟ್ಟ ವಿಚಾರಗಳು ಹೆಚ್ಚು ಆಕರ್ಷಣೀಯವಾಗಿದ್ದವು. ತಾವೊಬ್ಬ ಇಂದ್ರಜಾಲ ಮಹೇಂದ್ರ ಜಾಲದ ಪರಿಣಿತ ಆಟಗಾರ ಎಂಬುದನ್ನು ಮೋದಿ ಆಗಲೇ ಪ್ರದರ್ಶಿಸತೊಡಗಿದ್ದರು. ಜನ ಮೋದಿಯವರ ಮೋಡಿಗೆ ಒಳಗಾಗತೊಡಗಿದ್ದರು. ಭವ್ಯ ಭಾರತದ ಕಲ್ಪನೆ ಸಾಮಾನ್ಯರನ್ನು ರೋಮಾಂಚಿತರನ್ನಾಗಿ ಮಾಡತೊಡಗಿತ್ತು.
ಮೋದಿ ಅವರನ್ನು ಮತ್ತೆ ಯಾಕೆ ಆರಿಸಬೇಕು ಎಂಬ ಮೂಲ ಪ್ರಶ್ನೆಗೆ ಬರೋಣ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮೊದಲು ಬಿಜೆಪಿ ಪಕ್ಷದ ೨೦೧೪ ರ ಚುನಾವಣೆಯ ಪ್ರಣಾಳಿಕೆಯನ್ನು ಮೊದಲು ನೋಡೋಣ. ಅವರ ಪ್ರಣಾಳಿಕೆಯ ಮೊದಲು ಸಾಲು ಏಕ್ ಭಾರತ್ ಶ್ರೇಷ್ಠ ಭಾರತ್. ಈ ಹೇಳಿಕೆ ಎಂತ ಅಪಾಯಕಾರಿಯಾದದ್ದು ಎಂಬುದು ಕಳೆದ ಐದು ವರ್ಷಗಳಲ್ಲಿ ಸಾಬೀತಾಗಿದೆ. ಬಿಜೆಪಿ ಈ ಅವಧಿಯಲ್ಲಿ ಜನತಾಂತ್ರಿಕ ಸಂಸ್ಥೆಗಳನ್ನು ಕತ್ತು ಹಿಸುಕುವ ಕೆಲಸ ಮಾಡಿತು. ಪುಣಾ ಫಿಲ್ಂ ಇನಸ್ಟಿಟ್ಯೂಟ್ ನಿಂದ ಪ್ರಾರಂಭವಾಗಿ ಜೆ ಎನ್ ಯು ಅಂತಹ ಸಂಸ್ಥೆಗಳನ್ನು ನಾಶಪಡಿಸಿತು. ಸಿಬಿಐ ಐಟಿ ಚುನಾವಣೀ ಆಯೋಗ ಮತ್ತು ನ್ಯಾಯಾಲಯಗಳ ಸ್ವಾಯತ್ತತೆ ನಾಶವಾಯಿತು. ಏಕ್ ಭಾರತ್ ಎಂದು ಬಿಜೆಪಿ ಹೇಳಿದ್ದರ ಹಿಂದೆ ಇಲ್ಲಿನ ಬಹುಮುಖಿ ಸಂಸ್ಕೃತಿಯನ್ನು ನಾಶಪಡಿಸಿ ಒಂದೇ ಭಾಷೆ, ಒಂದೇ ಧರ್ಮ ಒಂದೇ ಆಹಾರ ಪದ್ಧತಿ ಒಂದೇ ಊಡುಪು ಒಂದೇ ಧ್ವನಿಯ ಹುನ್ನಾರ ಅಡಗಿತ್ತು.
ಬ್ವಿಜೆಪಿ ಪ್ರಣಾಳಿಕೆಯ ಎರಡನೆಯ ಅಂಶ ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ಆದರೆ ಇಲ್ಲಿ ಆದದ್ದೇನು ? ಕೇವಲ ಆದೋನಿ, ಅಂಬಾನಿಗಳು ಮಾತ್ರ ಎಂಬಂತಾಯಿತು. ಬೃಹತ್ ಉದ್ಯಮಪತಿಗಳು ಎಲ್ಲವನ್ನೂ ನಿಯಂತ್ರಿಸತೊಡಗಿದರು. ಐತಿಹಾಸಿಕ ಮಹತ್ವದ ಮೈಸೂರು ಬ್ಯಾಂಕ್ ವಿಜಯಾ ಬ್ಯಾಂಕ್ ಗಳನ್ನು ವಿಲೀನ ಗೊಳಿಸಿ ಹಾನಿಯಲ್ಲಿರುವ ತಮಗೆ ಬೇಕಾದ ಬ್ಯಾಂಕುಗಳನ್ನು ಉಳಿಸಿಕೊಳ್ಳುವ ಯತ್ನ ನಡೆಯಿತು. ನೋಟುಗಳ ಅಪಮೌಲ್ಯೀಕರಣದಿಂದ ಜವಳೀ ಉದ್ಯಮ ಮುಚ್ಚುವಂತಾಯಿತು. ಕಪ್ಪು ಹಣ ವಾಪಸು ಬರಲಿಲ್ಲ. ಪ್ರತಿಯೊಬ್ಬರ ಖಾತೆಯಲ್ಲಿ ೧೫ ಲಕ್ಷ ರೂಪಾಯಿ ಜಮೆ ಮಾಡುವ ಆಶ್ವಾಸನೆ ಈಡೇರಲಿಲ್ಲ.
ಬಿಜೆಪಿ ನೀಡಿದ ಇನ್ನೊಂದು ಮಹತ್ವದ ಆಶ್ವಾಸನೆ ನಮ್ಮ ಸಂಸ್ಕೃತಿಯ ಆಧಾರದ ಮೇಲೆ ಹೊಸ ಭಾರತದ ನಿರ್ಮಾಣ. ಈ ಹೇಳಿಕೆಯೇ ಹೆಚ್ಚು ಅಪಾಯಕಾರಿ. ಭಾರತದ ಸಂಸ್ಕೃತಿ ಎಂದರೆ ಏನು ? ಅದು ಹಿಂದೂ ಸಂಸ್ಕೃತಿಯೇ ? ಅದು ವೈದಿಕ ಸಂಸ್ಕೃತಿಯೇ ? ಬಿಜೆಪಿಯ ನಮ್ಮ ಸಂಸ್ಕೃತಿ ಎನ್ನುವುದೇ ಸಂಘ ಪ್ರಣೀತ ಸಂಸ್ಕೃತಿ. ಅದು ಭಾರತದ ಬಹುಮುಖೀ ಸಂಸ್ಕೃತಿ ಅಲ್ಲ. ಕಳೆದ ಐದು ವರ್ಷದ ಅವಧಿಯಲ್ಲಿ ಉತ್ತರ ಪ್ರದೇಶದ ಹಲವು ನಗರ ಪಟ್ಟಣಗಳ ಹೆಸರು ಬದಲಾವಣೆ ಇತಿಹಾಸವನ್ನು ವರ್ತಮಾನದಲ್ಲಿ ಬದಲಿಸುವ ಯತ್ನ ನಡೆದವು. ಇವೆಲ್ಲ ಬಿಜೆಪಿ ಸಂಸ್ಕೃತಿಯ ಕರಾಳ ಮುಖದ ದರ್ಶನಗಳು. ಬಿಜೆಪಿಯ ನವ ನಿರ್ಮಾಣ ಭಾರತದ ಕಲ್ಪನೆ, ದೇಶವನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ಎಂಬುದು ಐದು ವರ್ಷಗಳಲ್ಲಿ ಸಾಬೀತಾಯಿತು.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಹೆಚ್ಚಿನ ಒತ್ತು ನೀಡಿತ್ತು. ಜನ ಸಹಭಾಗಿತ್ವದ ಜನತಂತ್ರ ಪ್ರಮುಖ ಘೋಷಣೆಯಾಗಿತ್ತು. ಆದರೆ ಇದಕ್ಕೆ ಬದಲಾಗಿ ಸರ್ವಾಧಿಕಾರಿ ಪ್ರಭುತ್ವದತ್ತ ದೇಶ ಸಾಗುತ್ತಿದೆ.ಬಿಜೆಪಿ ಪಕ್ಷದ ಒಳಗೇ ಜನತಾಂತ್ರಿಕ ಮೌಲ್ಯಗಳು ಉಳಿದಿಲ್ಲ ಪಕ್ಷದ ಒಳಗಿನ ಭಿನ್ನ ಧ್ವನಿಗಳನ್ನು ದಮನ ಮಾಡಲಾಗುತ್ತಿದೆ.. ತಮ್ಮ ರಾಜಕೀಯ ವಿರೋಧಿಗಳ ಬಾಯಿ ಮುಚ್ಚಿಸಲು ಸಿಬಿಐ ಐಟಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಸುಧಾರಣೆಯ ಕುರಿತೂ ಬಿಜೆಪಿ ಆಶ್ವಾಸನೇ ನೀಡಿತ್ತು. ಆದರೆ ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆ ಮಾಡಿಕೊಳ್ಳಲು ಸರ್ಕಾರ ಯತ್ನಿಸುತ್ತಿರುವುದಕ್ಕೆ ಹಲವು ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ.
ಗ್ರಾಮಾಂತರ ಪ್ರದೇಶ ಮತ್ತು ರೈತರಿಗೆ ಸಂಬಂಧಿಸಿದಂತೆ ಬಿಜೆಪಿ ಹೆಚ್ಚಿನ ಆಶ್ವಾಸನೆ ನೀಡೀರಲಿಲ್ಲ. ಆದರೆ ಅವರು ನೀಡಿದ ಕೆಲವೇ ಕೆಲವು ಆಶ್ವಾಸನೆಗಳೂ ಈಡೆರಲಿಲ್ಲ. ಅವರ ಹೇಳಿಕೆಗಳು ಈಗ ನಗೆಪಾಟಲಿಗೆ ಗುರಿಯಾಗಿವೆ, ಬಿಜೆಪಿ ನೀಡಿದ ಒಂದು ಆಶ್ವಾಸನೆ ಗ್ರಾಮಾಂತರ ಆರ್ಥಿಕತೆಯ ಫುನಶ್ಚೇತನ.. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಗ್ರಾಮಾಂತರ ಆರ್ಥಿಕತೆ ಕುಸಿಯುತ್ತಿದೆ. ರೈತರ ಅತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಣದ ಹರಿವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಗ್ರಾಮಾಂತರ ಪ್ರದೇಶ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಹೆಚ್ಚುತ್ತಿದೆ. ಹಳ್ಳಿಗಳಿಗೆ ಉತ್ತಮ ರಸ್ತೆ, ಕುಡಿಯುವ ನೀರು, ಆರೋಗ್ಯ ಶಿಕ್ಷಣ ವಿದ್ಯುತ್ ನೀಡುವ ಯಾವುದೇ ಭರವಸೆಯೂ ಈಡೇರಿಲ್ಲ.
ಬಿಜೆಪಿ ಮತ್ತು ಮೋದಿ ನೀಡಿದ ಈಡೆರದ ಆಶ್ವಾಸನೆಗಳ ಪಟ್ತಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಆದರೆ ಅದೆನ್ನೆಲ್ಲ ವಿವರಿಸುವುದಕ್ಕೆ ಇಲ್ಲಿ ಅವಕಾಶ ಇಲ್ಲದಿದ್ದರಿಂದ ಪ್ರಾತಿನಿಧಿಕವಾಗಿ ಕೆಲವೇ ಕೆಲವು ಅಂಶಗಳನ್ನು ಮಾತ್ರ ನಾನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಅನ್ನ ಬೆಂದಿದೆಯೇ ಎಂದು ನೋಡಲು ಒಂದು ಅಗುಳು ಸಾಕು ಎಂಬಂತೆ ಕೆಲವೇ ಕೆಲವು ಅಗುಳು ನೋಡಿ ಅನ್ನ ಬೆಂದಿದೆಯೇ ಎಂದು ನೋಡುವ ಯತ್ನ ಇದಾಗಿದೆ.
೨೦೧೪ ರಲ್ಲಿ ನೀಡಲಾದ ಬಹುತೇಕ ಆಶ್ವಾಸನೆಗಳು ಈಡೇರಿಲ್ಲ ಎಂಬುದು ಮೋದಿ ಅವರಿಗೂ ಗೊತ್ತಿದೆ. ಅಮಿತ್ ಷಾ ಅವರಿಗೂ ಗೊತ್ತಿದೆ. ಬಿಜೆಪಿಗೂ ಗೊತ್ತಿದೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಲಾದ ಆಶ್ವಾಸನೆಗಳನ್ನೂ ಈ ಬಾರಿ ನೀಡಲಾಗುತ್ತಿಲ್ಲ. ಇದಕ್ಕೆ ಬದಲಾಗಿ ದೇಶ ಪ್ರೇಮ, ದೇಶದ ಭದ್ರತೆಯ ಪ್ರಶ್ನೆಗಳನ್ನು ಇವರು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ. ದೇಶ ಪ್ರೇಮ ಮತ್ತು ದೇಶದ ಭದ್ರತೆಯಂತಹ ವಿಚಾರಗಳು ಭಾವನಾತ್ಮಕ ವಿಚಾರಗಳು. ಈ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಕಷ್ಟ. ಹಾಗೆ ದೇಶ ಎದುರಿಸುತ್ತಿರುವ ಪ್ರಮುಖ ಜ್ವಲಂತ ಸಮಸ್ಯೆಗಳ ಬಗ್ಗೆ ಯೋಚಿಸದಂತೆ ಇವು ಮಾಡುತ್ತವೆ. ಸೈನಿಕರು ಮತ್ತು ದೇಶ ಪ್ರೇಮದ ಮುಂದೆ ಉಳಿದ ಎಲ್ಲ ವಿಚಾರೆಗಳು ಮರೆಯಾಗಿ ಹೋಗುತ್ತವೆ> ಈಗ ಆಗುತ್ತಿರುವುದು ಅದೇ,ಈಗ ಮೊದಲ ಪ್ರಶ್ನೆಗೆ ಬರೋಣ. ಬಿಜೆಪಿ ಸರ್ಕಾರವನ್ನು ಮತ್ತೆ ಯಾಕೆ ಆಯ್ಕೆ ಮಾಡಬೇಕು ? ಮೋದಿ ಮತ್ತೆ ಪ್ರಧಾನಿಯಾಕಾಗಬೇಕು ?
ಈ ಪ್ರಶ್ನೆಗೆ ಮೋದಿ ಬೆಂಬಲಿಗರು ಸರಳ ಉತ್ತರ ನೀಡುತ್ತಾರೆ. ಈ ದೇಶವನ್ನು ಕಾಯುವುದಕ್ಕೆ ಮೋದಿ ಬೇಕು. ಅದು ಅವರಿಂದ ಮಾತ್ರ ಸಾಧ್ಯ. ಹಾಗಿದ್ದರೆ ದೇಶದ ಪ್ರಧಾನಿಯ ಕೆಲಸ ಕೇವಲ ಗಡಿ ಕಾಯುವುದು ಮಾತ್ರವೇ ? ಗಡಿ ಕಾಯುವ ಕೆಲಸ ಮಾಡುವವರು ಈ ದೇಶದ ಸೈನಿಕರೇ ಹೊರತೂ ಪ್ರಧಾನಿ ಅಲ್ಲ. ಚೌಕಿದಾರ ಬ್ಯಾಂಕ್ ಗಳ ಏ ಟಿ ಎಮ್ ಕೆಲಸ ಮಾಡಬೇಕು. ಅದು ಬ್ಯಾಂಕ್ ಮೆನೇಜರ್ ಕೆಲಸ ಅಲ್ಲ. ಬ್ಯಾಂಕ್ ಮೆನೇಜರ್ ಎ ಟಿ ಎಮ್ ಕಾಯಲು ಪ್ರಾರಂಭಿಸಿದರೆ ಬ್ಯಾಂಕ್ ಮುಚ್ಚಿ ಹೋಗುತ್ತದೆ.
ದೇಶದ ಚೌಕೀದಾರ್ ಕೆಲಸ ಪ್ರಧಾನಿಯದ್ದಲ್ಲ. ಅದು ಈ ದೇಶದ ಸಾಮಾನ್ಯ ಜನರ ಕೆಲಸ. ಅವರು ಈ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಅದಕ್ಕೆ ನಮಗೆ ಪ್ರಧಾನಿಯ ಅವಶ್ಯಕತೆ ಖಂಡಿತಾ ಇಲ್ಲ.