Wednesday, July 5, 2023

ಕುಮಾರಣ್ಣ ನ ಸಿಟ್ಟು ಆಕ್ರೋಶ ಮತ್ತು ಭ್ರಷ್ಟಾಚಾರದ ಆರೋಪ,,

 ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ ಅವರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ,, ಕಾಂಗ್ರೆಸ್ ಸರ್ಕಾರದ ಮೇಲೆ ಸತತವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಒಬ್ಬ ಪ್ರತಿ ಪಕ್ಷದ ರಾಜಕಾರಣಿಯಾಗಿ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡಬೇಕು.. ಅವರ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಅದು ಅವರ ಕೆಲಸ, ಸಂವಿಧಾನ ನೀಡಿದ ಜವಾಬ್ದಾರಿ.. ಆದರೆ ಮಾಡುವ ಆರೋಪ ಯಾವ ರೀತಿಯದು ? ಆರೋಪ ಮಾಡುವ ಸಂದರ್ಭದಲ್ಲಿ ಬಳಸುವ ಭಾಷೆ ಯಾವುದು ? ಬಳಸಿದ ಭಾಷೆ ಸುಸಂಸ್ಕೃತವಾದದ್ದೇ ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ..

ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ, ಅದು ಕಾಂಗ್ರೆಸ್ ಪಕ್ಷದ ಮೇಲಿನ ಸಿಟ್ಟೇ ಅಥವಾ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಮೇಲಿನ ಸಿಟ್ಟೇ ? ಒಂದೊಮ್ಮೆ ಕೆಲವು ನಾಯಕರ ಮೇಲೆ ಅವರಿಗೆ ಸಿಟ್ಟಿದ್ದರೆ ಆ ಸಿಟ್ಟಿಗೆ ಕಾರಣಗಳೇನು ?

ಕಳೆದ ಒಂದು ವಾರದಿಂದ ಕುಮಾರಸ್ವಾಮಿ ಅವರ ಸಿಟ್ಟು ಹೆಚ್ಚಾಗಿದೆ,, ಅದು ಆಕ್ರೋಶದ ರೂಪ ತಾಳಿದೆ. ಅವರು ನಾಡಿನ ಹಿರಿಯ ರಾಜಕಾರಣಿಗಳೂ ಮಾಜಿ ಮುಖ್ಯಮಂತ್ರಿಗಳೂ ಆಗಿರುವುದರಿಂದ ಏನೋ ಸಿಟ್ಟಿನ ಭರದಲ್ಲಿ ಮಾತನಾಡಿಬಿಟ್ಟರು ಎಂದು ಸುಮ್ಮನಾಗುವಂತೆಯೂ ಇಲ್ಲ. ಅಂತೂ ಅವರು ಮಾತನಾಡಿ ಆಗಿದೆ. ಆರೋಪ ಮಾಡಿಯಾಗಿದೆ..

ಕಳೆದ ಎರಡು ದಿನಗಳ ಹಿಂದೆ ಅವರು ಮುಖ್ಯಮಂತ್ರಿ ಕಚೇರಿಯಲ್ಲಿನ ಭ್ರಷ್ಠಾಚಾರದ ಆರೋಪ ಮಾಡಿದರು. ಮುಖ್ಯಮಂತ್ರಿಗಳ ಸುತ್ತ ಮುತ್ತ ಇರುವವರು ೩೦ ಲಕ್ಷ ರೂಪಾಯಿ ಲಂಚ ಕೇಳಿದರು ಎಂಬುದು ಅವರ ಆರೋಪವಾಗಿತ್ತು. ಈ ಆರೋಪಕ್ಕೆ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡೀಯೂರಪ್ಪ ಅವರೂ ಬೆಂಬಲ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ನ ಕೆಲವು ನಾಯಕರು, ಸಚಿವರು ಖಾರವಾಗಿ ಪ್ರತಿಕ್ರಿಯಿಸಿದರು.. ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಗಳಿದ್ದರೆ ಅವುಗಳನ್ನು ಲೋಕಾಯುಕ್ತಕ್ಕೆ ನೀಡಿ.. ದೂರು ದಾಖಲಿಸಿ ಎಂದರು.. ಇದಾದ ಬೆನ್ನಲ್ಲೆ ಇನ್ನೋಮ್ದು ಆರೋಪ..

ರಾಜ್ಯ ಇಂಧನ ಇಲಾಖೆಯಲ್ಲಿ ವರ್ಗಾವಣೆ ನಡೆಯುತ್ತಿದೆ. ಇಲ್ಲಿ ಕೆಲವು ಮಹತ್ವದ ಹುದ್ದೆಗಳ ವರ್ಗಾವಣೆಗೆ ೧೦ ಕೋಟಿ ಲಂಚ ಪಡೆಯಲಾಗಿದೆ ಎಂಬುದು ಈ ಹೊಸ ಆರೋಪ.. ಈ ಹುದ್ದೆಗಳ ಪ್ರತಿದಿನದ ಕಮಾಯಿ ಎಂದೂ ಕುಮಾರಸ್ವಾಮಿ ಹೇಳಿದರು. ಇದಕ್ಕೆ ಸಂಬಂಧಿಸಿದ ಹಾಗೆ ತಮ್ಮ ಬಳಿ ಇರುವ ಪೆನ್ ಡ್ರೈವ್ ಅನ್ನು ಅವರು ಮಾಧ್ಯಮದ ಮುಂದೆ ಪ್ರದರ್ಶಿಸಿದರು.. ಇದರಲ್ಲಿ ಎಲ್ಲ ಇದೆ, ತೋರಿಸ್ತೀನಿ ಎಂದರು ಕುಮಾರಸ್ವಾಮಿ..

ಇದರ ಜೊತೆಗೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದರು..ಆದರೆ ಅವರ ಹೆಸರನ್ನು ಹೇಳಲಿಲ್ಲ. ಬದಲಾಗಿ ಡಿ. ಕೆ. ಶಿವಕುಮಾರ್ ರಾಜಕಾರಣಕ್ಕೆ ಬರುವುದಕ್ಕೆ ಮೊದಲು ಏನಾಗಿದ್ದರು ಎಂಬುದನ್ನು ವ್ಯಂಗ್ಯವಾಗಿ ಹೇಳುತ್ತ ನಾನು ಹಾಗಲ್ಲ, ಕಷ್ಟ ಪಟ್ಟು ಮೇಲೆ ಬಂದವನು. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದೂ ಎಚ್ಚರಿಕೆ ನೀಡಿದರು..

ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಮೊದಲ ಆರೋಪದತ್ತ ನೋಡೋಣ.. ಇಂಧನ ಇಲಾಖೆಯಲ್ಲಿ ವರ್ಗಾವಣೆಯಲ್ಲಿ ಹಣದ ದಂಧೆ ನಡೆಯುತ್ತಿದೆ ಎಂಬುದು ಈ ಆರೋಪ. ಇದು ಸುಳ್ಳು ಎಂದು ಹೇಳುವುದಕ್ಕಾಗಲಿ ಸತ್ಯ ಎಂದು ಹೇಳುವುದಕ್ಕಾಗಲಿ ನಮ್ಮಂಥ ಸಾರ್ವಜನಿಕರ ಬಳಿ ಯಾವ ದಾಖಲೆಯೂ ಇಲ್ಲ. ಸಾಧಾರಣವಾಗಿ ಇಂತಹ ಆರೋಪ ಬಂದಾಗ ಇರಬಹುದು ಎಂದು ಸಾಮಾನ್ಯ ಜನ ಭಾವಿಸುತ್ತಾರೆ. ಯಾಕೆಂದರೆ ಇವತ್ತು ಭ್ರಷ್ಟಾಚಾರ ಯಾವ ಹಂತವನ್ನು ತಲುಪಿದೆ ಎಂದರೆ ಯಾವುದೋ ಒಂದು ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲ ಎಂದರೆ ಜನರಿಗೆ ಆಶ್ಚರ್ಯವಾಗುತ್ತದೆ. ಜನ ಪ್ರಮಾಣಿಕತೆಯ ಮಾತನ್ನು ನಂಬುವುದಿಲ್ಲ. ಭ್ರಷ್ಟಾಚಾರ ನಡೆದಿದೆ ಎಂದರೆ ನಂಬುತ್ತಾರೆ. ಆದ್ದರಿಂದ ಆರೋಪಕ್ಕೆ ಸಿಗುವ ಪ್ರಚಾರ ಬೇರೆ ಯಾವುದಕ್ಕೂ ಸಿಗುವುದಿಲ್ಲ.

ಒಂದೊಮ್ಮೆ ಮಾಡಿದ ಆರೋಪ ಸುಳ್ಳಾಗಿದ್ದರೆ ? ಆರೋಪಕ್ಕೆ ಒಳಗಾದ ವ್ಯಕ್ತಿಯ ಗೌರವ ಪ್ರತಿಷ್ಟೆಯ ಗತಿ ಏನು ಎಂದು ಪ್ರಶ್ನಿಸಬಹುದು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅರೋಪ ಮಾಡಿದವರಾಗಲೀ ಆರೋಪಕ್ಕೆ ಒಳಾಗಾದವರಾಗಲಿ ಈ ವಿಚಾರವನ್ನು ಅಶ್ಃಟು ಗಂಬೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ..

ಈಗ ಕುಮಾರಸ್ವಾಮಿಯವರ ಟಾರ್ಗೆಟ್ ಕಾಂಗ್ರೆಸ್ ಸರ್ಕಾರ ಎನ್ನುವುದಕ್ಕಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗುರಿ , ಇದಕ್ಕೂ ಕಾರಣಗಳಿವೆ, ಸಿದ್ದರಾಮಯ್ಯ ಅವರ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಸಿಟ್ಟು ಧ್ವೇಷ ಇದೆ.. ಅದಕ್ಕೆ ಅವರಿಗೆ ಅವರದೇ ಆದ ಕಾರಣಗಳಿವೆ,, ಸಿದ್ದರಾಮಯ್ಯನವರಿಗೂ ದೇವೇಗೌಡರ ಕುಟುಂಬದ ಒಳ್ಳೇ ಅಭಿಪ್ರಾಯ ಇಲ್ಲ. ಇದು ಸೈದ್ದಾಂತಿಕ ಸಿಟ್ಟಲ್ಲ. ವೈಯಕ್ತಿಕ ಸಿಟ್ಟು. ಇನ್ನೂ ಡಿ. ಕೆ.ಶಿವಕುಮಾರ್ ಒಕ್ಕಲಿಗರ ನಾಯಕರಾಗಿರುವುದರಿಂದ ಅವರ ನಾಯಕತ್ವಕ್ಕೆ ಸವಾಲು ಹಾಕುವುದು ರಾಜಕೀಯವಾಗಿ ಅವರಿಗೆ ಅನಿವಾರ್ಯ ಎನ್ನಿಸಿದೆ. ಯಾಕೆಂದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸಾಮ್ರಾಜ್ಯ ಹಳೇ ಮೈಸೂರು ಪ್ರದೇಶದಲ್ಲಿ ಕುಸಿಯುತ್ತಿದೆ, ಅವರಿಗೆ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಹೀಗಾಗಿ ಅವರಿಗೆ ಡಿ. ಕೆ.ಶಿವಕುಮಾರ್ ಅವರನ್ನು ದುರ್ಬಲಗೊಳಿಸಬೇಕಾಗಿದೆ,,

ಇನ್ನೂ ಬ್ರಷ್ಟಾಚಾರದ ವಿಚಾರಕ್ಕೆ ಬಂದರೆ ಮೊದಲು ಮುಖ್ಯಮಂತ್ರಿಗಳ ಕಚೇರಿಯನ್ನು ಟಾರ್ಗೆಟ್ ಮಾಡಿಕೊಂಡ ಕುಮಾರಸ್ವಾಮಿ ನಂತರ ಇಂಧನ ಇಲಾಖೆಯನ್ನು ಟಾರ್ಗೆಟ್ ಮಾಡಿದರು. ಇಂಧನ ಇಲಾಖೆಯ ಜವಾಬ್ದಾರಿ ಹೊತ್ತ ಕೆ.ಜೆ. ಜಾರ್ಜ್ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರು. ಇವರಿಗೆ ಕಲ್ಲು ಹೊಡೆಯುವ ಮೂಲಕ ಸಿದ್ದರಾಮಯ್ಯನವರನ್ನು ಗುರಿಯಾಗಿಸುವುದು ಅವರ ಉದ್ದೇಶ ಇದ್ದಂತಿದೆ,

ಈಗಿರುವ ಪ್ರಶ್ನೆ ಎಂದರೆ ಕಾಂಗ್ರೆಸ್ ಸರ್ಕಾರ ಈ ಆರೋಪಗಳಿಗೆ ಸಂಬಂಧಿಸಿದಂತೆ ಏನು ಮಾಡುತ್ತದೆ ಎಂಬುದು. ಕುಮಾರಸ್ವಾಮಿ ಅವರಿಗೆ ಉತ್ತರ ಕೊಡುವ ಕೆಲಸವನ್ನು ಕಾಂಗ್ರೆಸ್ ಸಚಿವರು ಮಾಡುತ್ತಿದ್ದಾರೆ. ಇಷ್ಟೇ ಸಾಕೆ ? ಸಾರ್ವಜನಿಕ ಬದುಕಿನ ಗೌರವ ಕುಸಿದ ಇಂದಿನ ಸಂದರ್ಭದಲ್ಲಿ ಈ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತದೆಯೆ ? ಇಲ್ಲ ಎಂದೇ ಹೇಳಬೇಕು.. ಬಿಜೆಪಿ ಕಾಲದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆಗೆ ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಲಕ್ಷ್ಯ ಕೊಡುವ ಸಾಧ್ಯತೆ ಕಡಿಮೆ. ಓಟ್ಟಿನಲ್ಲಿ ನಮ್ಮ ರಾಜಕಾರಣ ಇಂತಹ ದುರಂತ ಸ್ಥಿತಿಗೆ ಬಂದು ತಲುಪಿದೆ ಎಂಬುದೇ ಬೇಸರದ ವಿಷಯ.


No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...