ಗುರು ಗೋವಿಂದ ಭಟ್ಟ ರು ಮುಸ್ಲೀಮ್ ಹುಡುಗ ಶರೀಫರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.. ಆತನನ್ನು ಆಧ್ಯಾತ್ಮದ ದಾರಿಯಲ್ಲಿ ಕರೆದೊಯ್ಯದರು. ಎಲ್ಲ ಧರ್ಮಗಳೂ ಒಂದೇ. ಧರ್ಮಗಳ ನಡುವೆ ವ್ಯತ್ಯಾಸ ಇಲ್ಲ ಎಂದು ಕಲಿಸಿದರು. ಅಲ್ಲಾ ಈಶ್ವರ್ ತೇರೆ ನಾಮ ಎಂಬ ಸತ್ಯವನ್ನು ಅರುಹಿದರು. ಒಬ್ಬ ಮುಸ್ಲೀಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ ಗೋವಿಂದ ಭಟ್ಟರ ವಿರುದ್ಧ ಬ್ರಾಹ್ಮಣ ಸಮಾಜ್ ತಿರುಗಿ ಬಿತ್ತು. ಶರೀಫರನ್ನು ಬಿಟ್ಟು ಬಿಡುವಂತೆ ಒತ್ತಡ ಹೇರಿತು. ಗೋವಿಂದ ಭಟ್ಟರು ಈ ಬ್ರಾಹ್ಮಣ ಸಮಾಜವನ್ನೇ ತಿರಸ್ಕರಿಸಿ ತಮ್ಮ ಶಿಷ್ಯ ಷರೀಫನನ್ನು ಕರೆದುಕೊಂಡು ಆಧ್ಯಾತ್ಮವನ್ನು ಅರೆಸುತ್ತ ಹೊರಟು ಬಿಟ್ಟರು.
ಶಿಶುನಾಳ ಶರೀಫರು ಗುರುವನ್ನು ಒಪ್ಪಿಕೊಂಡರು. ಅಲ್ಲಾ ಮತ್ತು ಈಶ್ವರನ ನಡುವೆ ವ್ಯತ್ಯಾಸವಿಲ್ಲ ಎಂದು ಕಂಡುಕೊಂಡರು.. ಅವರು ಕೇವಲ ಆದ್ಯಾತ್ಮವಾದಿಯಾಗಿ ಉಳಿಯಲಿಲ್ಲ. ಅವರ ತತ್ವ ಪದಗಳು ಕನ್ನಡ ಸಾಹಿತ್ಯದಲ್ಲೇ ಅನನ್ಯವಾದವು.. ಸೋರುತಿಹುದು ಮನೆಯ ಮಾಳಿಗಿ ಎನ್ನುವ ತತ್ವ ಪದ ನನ್ನಗೆ ಈಗ ನೆನಪಾಗುತ್ತಿದೆ.
ಗುರು ಗೋವಿಂದ ಭಟ್ಟರನ್ನು ಸದಾ ನೆನಪು ಮಾಡಿಕೊಳ್ಳುವ ಮಹೇಶ್ ಜೋಷಿ ಸರ್ಕಾರಿ ನೌಕರರೆ ? ಪತ್ರಕರ್ತರೇ ಅಥವಾ ರಾಜಕಾರಣಿಯೆ ಅಥವಾ ಅವರೊಬ್ಬ ಸಾಹಿತಿಯೆ ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ.. ಅವರು ರಾಜಕಾರಣಿಗಳ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.. ದೂರದರ್ಶನ ಎಂಬ ಸರ್ಕಾರಿ ಮಾಧ್ಯಮದಲ್ಲಿ ಕೆಲಸ ಮಾಡುವ ಮೂಲಕ ಪತ್ರಕರ್ತರು ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.. ಅವರು ದೆಹಲಿ ದೂರದರ್ಶನದಲ್ಲಿ ಕೆಲಸ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸಂತೋಷ ಪಟ್ಟಿದ್ದಾರೆ..ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಎಲ್ಲರಿಗೂ ತೋರಿಸಿ ಸಂತೋಷಪಟ್ಟಿದ್ದಾರೆ.
ವಿಧಾನ ಪರಿಷತ್ ಸಭಾಪತಿಗಳಾಗಿದ್ದ ಡಿ. ಬಿ. ಕಲ್ಮಣಕರ್ ಅವರ ಆಪ್ತ ಕಾರ್ಯದರ್ಶಿಯಾಗಿ ವಿಧಾನ ಸೌಧದ ಮೊಗಸಾಲೆಯಲ್ಲಿ ಒಡಾಡಿಕೊಂಡಿದ್ದ ಅವರು ರಾಜಕಾರಣಿಗಳ ಆಪ್ತೀಷ್ಟರಾಗಿ ಹೇಗೆ ಇರಬೇಕು ಎಂಬುದನ್ನು ಅರಿತವರು..
ಜೋಶಿ ಕುಮಾರಸ್ವಾಮಿ ಅವರಂತೆ ಎಲ್ಲರನ್ನೂ ಬ್ರದರ್ ಎಂದು ಪ್ರೀತಿಯಿಂದ ಮಾತನಾಡುತ್ತ ಹೆಗಲ ಮೇಲೆ ಕೈ ಹಾಕುತ್ತಾರೆ.. ಅವರ ಸಾಧನೆಗಳ ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯುವುದಿಲ್ಲ..ಬೆಂಗಳೂರು ದೂರದರ್ಶನ ಕೇಂದ್ರದ ಮಂಜುಳ ಗಾನ ಕಾರ್ಯಕ್ರಮದಲ್ಲಿ ಮಂಜುಳವಾಗಿ ಹಾಡಿ ಎಲ್ಲರನ್ನೂ ಮುದಗೊಳಿಸಿದವರು. ಸದಾ ಒಂದು ಕ್ಯಾಮರಾ ತಮ್ಮ ಮೇಲೆ ಇರುವಂತೆ ನೋಡಿಕೊಂಡು ತಮ್ಮ ಭಾವ ಭಂಗಿಯನ್ನು ಜನರಿಗೆ ತಲುಪಿಸುತ್ತಾ ಬಂದವರು.. ಆಹ್ವಾನಿತ ಗಣ್ಯರ ಜೊತೆ ಎಂತಹ ಅತ್ಯುತ್ತಮ ಸಂಬಂಧವನ್ನು ಅವರು ಇಟ್ಟುಕೊಂಡು ಬಂದವರೆಂದರೆ ಅವರು ಹೇಗೆ ಹಾಡಲಿ, ಶ್ರುತಿ ಇರಲಿ ಶ್ರುತಿ ತಪ್ಪಿಲಿ ಈ ಗಣ್ಯರು ಚಪ್ಪಾಳೆ ಹೊಡೆದು ಹುರಿದುಂಬಿಸುವುದು ಎಲ್ಲರೂ ನೋಡಿರುವ ದೃಶ್ಯಗಳು. ಯಾರೇ ಹಾರಾಡಲಿ ಯಾರೇ ಕೂಗಾಡಲಿ ನಿನ್ ನೆಮ್ಮದಿಗೆ ಬಂಗವಿಲ್ಲ ಎಂಬ ಮನಸ್ಥಿತಿಯವರು ಜೋಷಿ.
ಜೋಷಿ ತಮ್ಮ ನಿವೃತ್ತಿಯ ನಂತರ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರು. ಅದಕ್ಕಾಗಿ ತಯಾರಿ ನಡೆಸಿದರು..ಸಾಹಿತ್ಯ ಪರಿಷತ್ತಿನ ಮೇಲೆ ಅಪ್ರತ್ಯಕ್ಷವಾಗಿ ನಿಯಂತ್ರಣ ಹೊಂದಿದ್ದ ರಾಜಕಾರಣಿಗಳಿಗೆ ಕೆಂಪು ಹಾಸು ಹಾಕಿ ಕರೆದುಕೊಂಡು ಬಂದರು.. ಬಿಜೆಪಿ ಪಕ್ಷ ಜೋಷಿ ಅವರನ್ನು ಬೆಂಬಲಿಸಿತು.. ತಮ್ಮ ಕಾಲಾಳುಗಳಿಗೆ ಪತ್ರ ಬರೆದು ಅಧ್ಯಕ್ಷ ಚುನಾವಣೆಯಲ್ಲಿ ಜೋಷಿ ಅವರಿಗೆ ಬೆಂಬಲ ನೀಡುವಂತೆಯೂ ಕೆಲವು ಬಿಜೆಪಿ ನಾಯಕರ ಕರ ಪತ್ರ ಹೊರಡಿಸಿದರು..ಪ್ರಾಯಶಃ ರಾಜಕೀಯ ಪಕ್ಷವೊಂದು ಪರಿಷತ್ ಅಧ್ಯಕ್ಷ ಚುನಾವಣೆಯಲ್ಲಿ ನೇರೆವಾಗಿ ಪ್ರವೇಶಿಸಿದ ಮೊದಲ ಚುನಾವಣೆ ಇದು. ಹೀಗೆ ಸಾಹಿತ್ಯ ಪರಿಷತ್ತನ್ನು ರಾಜಕಾರಣದ ಅಂಗಳವನ್ನಾಗಿ ಮಾಡಿದ ಕೀರ್ತಿ ಮಹೇಶ್ ಜೋಷಿ ಅವರಿಗೆ ಸಲ್ಲಬೇಕು.
ಜೋಶಿಯವರಿಗೆ ಹೆಸರನ್ನು ಬದಲಿಸುವ ಬಿಜೆಪಿ ಗುಣ ಅಂತರ್ಗತವಾಗಿದೆ. ಚಾಮರಾಜಪೇಟೆಯಲ್ಲಿ ಸಾಹಿತ್ಯ ಪರಿಷತ್ ಎದುರಿನ ರಸ್ತೆಯ ಹೆಸರನ್ನೂ ಬದಲಿಸಲು ಹೊರಟಿದ್ದರು.. ಪಂಪನ ಹೆಸರನ್ನು ಬದಲಿಸಲು ಅವರು ಮುಂದಾಗಿದ್ದರು.. ಮನುಷ್ಯ ಕುಲ ತಾನೊಂದೇ ವಲಂ ಎಂದ ಪಂಪನನ್ನು ಒಪ್ಪಿಕೊಳ್ಳುವುದು ಇವರಿಗೆ ಹೇಗೆ ತಾನೇ ಸಾಧ್ಯವಾದೀತು ?
ಈಗ ಹಾವೇರಿ ಸಾಹಿತ್ಯ ಸಮ್ಮೇಳನವನ್ನೂ ವಿವಾದದ ಅಂಗಳವನ್ನಾಗಿ ಅವರು ಮಾಡಿದ್ದಾರೆ. ಮುಸ್ಲೀಂ ಬರಹಗಾರರನ್ನು ಕವಿಗಳನ್ನು ಸಾಹಿತಿಗಳನ್ನು ಅವರು ದೂರವಿಟ್ಟಿದ್ದಾರೆ. ತಮ್ಮ ರಾಜಕೀಯ ಸಂಪರ್ಕದಿಂದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನಕ್ಕೆ ಸಚಿವರ ಸ್ಥಾನವನ್ನು ಪಡೆದಿಕೊಂಡು ಬಿಜೆಪಿ ಎಜೆಂಡಾವನ್ನು ಅನುಷ್ಠಾನಗೊಳಿಸುವಲ್ಲಿ ನಿರತರಾಗಿದ್ದಾರೆ.
ಹಾವೇರಿ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಪಟ್ಟಿಯನ್ನು ನೋಡಿದಾಗ ಆಘಾತವಾಗುತ್ತದೆ. ಆದರೆ ಆಶ್ಚರ್ಯವಾಗುವುದಿಲ್ಲ. ಈ ವ್ಯಕ್ತಿಯಿಂದ ಇನ್ನೇನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ..
ಈ ಸಾಹಿತ್ಯ ಸಮ್ಮೇಳನ ರಾಜಕೀಯ ಸಮಾವೇಶದಂತೆ ಕಾಣುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯ ಮೇಲೆ ಇರುವ ಬಹುತೇಕ ಜನರು ರಾಜಕಾರಣಿಗಳು ಮತ್ತು ಅಧಿಕಾರ ವರ್ಗ..ಹಾಗೆ ಸ್ವಾಗತ ಸಮೀತಿ ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಕಾರಿಗಳಿಂದ ತುಂಬಿ ಹೋಗಿದೆ. ಈ ಬಗ್ಗೆ ಪ್ರತಿಭಟನೆಯ ಕೂಗು ಕೇಳಿ ಬರುತ್ತಿದೆ. ಪರ್ಯಾಯ ಸಾಹಿತ್ಯ ಸಮ್ಮೇಳದ ಮಾತೂ ಕೇಳಿ ಬರುತ್ತಿದೆ..ಆದರೆ ಪ್ರತಿಭಟನೆಗೆ ಸೊಪ್ಪು ಹಾಕದೇ ತಮ್ಮ ಎಜೆಂಡಾವನ್ನು ಜೋಷಿ ಅನುಷ್ಟಾನಗೊಳಿಸಲಿದ್ದಾರೆ. ಸಾಹಿತ್ಯ ಸಮ್ಮೇಳನ ಬಿಜೆಪಿ ಪಕ್ಷದ ಸಾಹಿತ್ಯಿಕ ಸಮ್ಮೇಳನವಾಗಿ ಸಂಪನ್ನಗೊಳ್ಳಲಿದೆ. ಈ ಬಗ್ಗೆ ಯಾವ ಅನುಮಾನವೂ ಬೇಡ,
ಗುರು ಗೋವಿಂದ ಭಟ್ಟರು ಈಗ ಬದುಕಿದಿದ್ದರೆ ? ತಮ್ಮ ಈ ಮರಿ ಮರಿ ಮೊಮ್ಮಗನ ಬಗ್ಗೆ ಎನೆಂದುಕೊಳ್ಳುತ್ತಿದ್ದರು ? ತಮ್ಮ ಸಂತಾನ ಈ ಹಂತಕ್ಕೆ ಬಂತಲ್ಲ ಎಂದು ಕೊರಗುತ್ತಿದ್ದರೆ ? ಬ್ರಾಹ್ಮಣ ಸಮುದಾಯವನ್ನೇ ಬಹಿಶ್ಕರಿಸಿದ್ದ ಅವರು ತಮ್ಮ ಈ ಮರಿ ಮರಿ ಮರಿ ಮೊಮ್ಮಗನನ್ನೇ ಒದ್ದು ಹೊರಹಾಕುತ್ತಿದ್ದರೆ ? ಗೊತ್ತಿಲ್ಲ.
ಅವರ ಆತ್ಮ ಎನ್ನುವುದಿದ್ದರೆ ಅದು ಈಗ ಪರಿತಪಿಸುತ್ತಾ ಇರುಬಹುದಲ್ಲವೆ ?